ಉತ್ಸಾಹಿ ಯುವಕರಿಂದ ಸಾಧನೆ ಸಾಧ್ಯ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಸ್ವಾಮಿ ವಿವೇಕಾನಂದರು ಉತ್ಸಾಹದ ಗಣಿಯಾಗಿದ್ದರು. ಅವರಂತೆ ಉತ್ಸಾಹಿ ಯುವಕರಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಕರ್ನಾಟಕ ವಿಶ್ವ ವಿದ್ಯಾಲಯದ ಕುಲಸಚಿವ ಪ್ರೊ. ಕೆ.ಎಂ. ಹೊಸಮನಿ ಹೇಳಿದರು.

ವಿದ್ಯಾನಗರದ ಕನಕದಾಸ ಶಿಕ್ಷಣ ಸಮಿತಿ ವತಿಯಿಂದ ಶುಕ್ರವಾರ ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ ಕೋಶ, ಕೆಯುಡಿ, ಕೆಎಸ್​ಎಸ್ ಸಮಿತಿ ಗದಗ-ಹುಬ್ಬಳ್ಳಿ ಕೆಎಸ್​ಎಸ್ ಪದವಿ ಮತ್ತು ಬಿಎಸ್​ಡಬ್ಲೂ್ಯ ಎನ್​ಎಸ್​ಎಸ್ ಘಟಕಗಳು, ನರೇಂದ್ರ ಯುವಕ ಮಂಡಳ ಹುಬ್ಬಳ್ಳಿ, ಶೇರೆವಾಡದ ವಿನೂತನ ಯುವ ಮಂಡಳದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಾಮಿ ವಿವೇಕಾನಂದರ ಜನ್ಮ ದಿನ ಸಮಾರಂಭದಲ್ಲಿ ಅವರು ಮಾತನಾಡಿದರು.

ಆಧುನಿಕ ತಂತ್ರಜ್ಞಾನದಲ್ಲಿ ಮುಳುಗಿರುವ ಇಂದಿನ ಯುವ ಜನತೆಯಲ್ಲಿ ಉತ್ಸಾಹ ಕ್ಷೀಣಿಸುತ್ತಿದೆ. ಯುವಕರು ತಮ್ಮೊಳಗಿನ ದಿವ್ಯ ಶಕ್ತಿ ಗುರುತಿಸಿ, ಉತ್ಸಾಹದಿಂದ ಮುನ್ನುಗ್ಗಬೇಕು. ಸಾಧನೆಗೆ ಸಾವಿರ ಅಡತಡೆ, ಅವಮಾನಗಳು ಎದುರಾದರೂ ಜಗ್ಗದೆ ಕುಗ್ಗದೆ ಸಾಗಬೇಕು. ಸಾಧು, ಸಂತರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹಾರೈಸಿದರು.

ಹೈಸ್ಕೂಲ್​ನಿಂದಲೇ ನಾನು ವಿವೇಕಾನಂದರ ಅಭಿಮಾನಿಯಾಗಿದ್ದೇನೆ. ಬೆಳಗ್ಗೆ ಎದ್ದ ಕೂಡಲೇ ಅವರ ಫೋಟೊ ನೋಡುತ್ತಿದ್ದೆ. ಅವರ ಪುಸ್ತಕಗಳನ್ನು ಓದುತ್ತಿದ್ದೆ. ಅದನ್ನು ಗಮನಿಸಿದ ನನ್ನ ತಾಯಿ, ನಾನು ಸನ್ಯಾಸಿಯಾಗಬಹುದು ಎಂದು ಭಾವಿಸಿ ಮದುವೆ ಮಾಡಿಸಿಬಿಟ್ಟರು ಎಂದು ಕುಲಸಚಿವ ಹೊಸಮನಿ ನಗೆಚಟಾಕಿ ಹಾರಿಸಿದರು.

ಕನದಕದಾಸ ಶಿಕ್ಷಣ ಸಮಿತಿಯ ಕಾರ್ಯದರ್ಶಿ ರವಿ ದಂಡಿನ ಮಾತನಾಡಿ, ಜೀವನದಲ್ಲಿ ಶ್ರದ್ಧೆ, ನಿಷ್ಠೆ, ಆತ್ಮವಿಶ್ವಾಸ ಆಳವಡಿಸಿಕೊಳ್ಳುವುದರಿಂದ ಸಾಧನೆಯ ಫಲ ನಮಗೆ ದೊರೆಯುತ್ತದೆ. ವಿದ್ಯಾರ್ಥಿಗಳು ದುಶ್ಚಟಗಳಿಂದ ಮುಕ್ತರಾಗಿ, ಸದಾ ವಿದ್ಯೆಯನ್ನು ಸಂಪಾದಿಸುತ್ತ ನಿಶ್ಚಿತ ಗುರಿಯೆಡೆಗೆ ಸಾಗಬೇಕು ಎಂದರು.

ಉಪನ್ಯಾಸಕಿ ಡಾ. ಸುಜಾತಾ ಸೋಗೂರ ಮಾತನಾಡಿ, ಬಾಲ್ಯದಿಂದಲೇ ಭಗವದ್ಗೀತೆಯನ್ನು ಭೋಧಿಸುವ ವ್ಯವಸ್ಥೆಯನ್ನು ಪಾಲಕರು ರೂಢಿಸಬೇಕು. ಶಂಕರಾಚಾರ್ಯರ ಪ್ರೀತಿಯ ಶಿಶ್ಯ ವಿವೇಕಾನಂದರಂತೆ ಸದೃಢ ದೇಹ, ಸದೃಢ ಆರೋಗ್ಯ ಹೊಂದಬೇಕಾದರೆ ಮೊದಲು ಪುಟಬಾಲ್ ಆಟವಾಡಿ, ನಂತರ ಭಗವದ್ಗೀತೆ ಓದಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ, ಹುಬ್ಬಳ್ಳಿ ಎ.ಪಿ.ಎಂ.ಸಿ. ಅಧ್ಯಕ್ಷ ಜಗನ್ನಾಥ ಸಿದ್ದನಗೌಡ್ರ, ಕೆ.ಎಸ್.ಎಸ್ ಉಪಾಧ್ಯಕ್ಷರಾದ ಶಾಂತಣ್ಣ ಕಡಿವಾಲ, ಎಚ್. ವಿ. ಬೆಳಗಲಿ, ಎಮ್ ಬಿ, ದಳಪತಿ, ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಕೆ., ಬಸವರಾಜ ಗೋರವರ, ಬೀರೇಶ್ ತಿರಕಪ್ಪನವರ, ಮತ್ತಿತರರು ಉಪಸ್ಥಿತರಿದ್ದರು.

ಉಪನ್ಯಾಸಕ ಕೆ.ಬಿ. ಕುರಿಯವರ ನಿರೂಪಿಸಿದರು. ಪ್ರಾಚಾರ್ಯ ಪ್ರೊ. ಸಂದೀಪ ಬೂದಿಹಾಳ ಸ್ವಾಗತಿಸಿದರು. ಲಿಂಗರಾಜ ನಿಡವಣಿ ಪ್ರಾಸ್ತಾವಿಕ ನುಡಿದರು, ಬಿ.ಎಸ್.ಮಡ್ಲಿ ವಂದಿಸಿದರು.

ವಿವೇಕ ಬ್ಯಾಂಡ್ ಬಿಡುಗಡೆ:ಜನವರಿ 12 ರಿಂದ 26ರವರೆಗೆ ರಾಜ್ಯಾದ್ಯಂತ ವಿವೇಕ ಬ್ಯಾಂಡ್ ಅಭಿಯಾನ ನಡೆದಿದ್ದು, ಅದರ ಅಂಗವಾಗಿ ಕವಿವಿ ಕುಲಸಚಿವ ಪ್ರೊ. ಕೆ.ಎಂ. ಹೊಸಮನಿ ವಿವೇಕ ಬ್ಯಾಂಡ್ ಬಿಡುಗಡೆಗೊಳಿಸಿದರು.

Leave a Reply

Your email address will not be published. Required fields are marked *