More

    ಯುವಕರ ಆಲೋಚನೆ ಉತ್ತಮವಾಗಿರಲಿ

    ಚಿಕ್ಕಮಗಳೂರು: ಯುವ ಸಮುದಾಯವು ಉತ್ತಮ ಆಲೋಚನೆ ಬೆಳೆಸಿಕೊಂಡು ವಿವೇಕಾನಂದರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳುವ ಸಂಕಲ್ಪ ಮಾಡಬೇಕು ಎಂದು ಉಪವಿಭಾಗಾಧಿಕಾರಿ ನಾಗರಾಜ್ ಕಿವಿಮಾತು ಹೇಳಿದರು.

    ಸ್ವಾಮಿ ವಿವೇಕಾನಂದರ 157ನೇ ಜನ್ಮದಿನಾಚರಣೆ ಪ್ರಯುಕ್ತ ನಗರದ ಐಡಿಎಸ್​ಜಿ ಕಾಲೇಜಿನಲ್ಲಿ ಜಿಲ್ಲಾಡಳಿತ, ಕಾಲೇಜು ಶಿಕ್ಷಣ ಇಲಾಖೆ ಹಾಗೂ ಯುವಜನ ಸೇವಾ ಇಲಾಖೆ ಆಶ್ರಯದಲ್ಲಿ ಭಾನುವಾರ ನಡೆದ ಯುವ ದಿನಾಚರಣೆಯಲ್ಲಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

    ವಿದ್ಯಾರ್ಥಿಗಳು ಸತ್ಪ್ರಜೆಗಳಾಗಲು ರಚನಾತ್ಮಕ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಕೆಟ್ಟ ದಾರಿಗೆ ಎಳೆಯುವ ಶಕ್ತಿಗಳು ಇರುವುದು ಸಹಜ. ಆದರೆ ಅವುಗಳಿಂದ ಪಾರಾಗಿ ಸನ್ಮಾರ್ಗದಲ್ಲಿ ನಡೆಯಬೇಕೆಂದರೆ ವಿವೇಕಾನಂದರ ಸಂದೇಶಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.

    ವಿವೇಕಾನಂದರ ಸಂದೇಶ ಪಾಲಿಸಿದ್ದೇ ಆದಲ್ಲೆ ಕೆಟ್ಟ ದಾರಿಯ ಆಲೋಚನೆ ಸುಳಿಯದು. ಸ್ವಾರ್ಥಪರ ಚಿಂತನೆ ಇದ್ದರೆ ಸಮಾಜಕ್ಕೆ ಒಳಿತು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

    ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ಮಂಜುಳಾ ಹುಲ್ಲಹಳ್ಳಿ ಮಾತನಾಡಿ, ಜೀವನದಲ್ಲಿ ಸಾಕಷ್ಟು ಕಡೆಯಿಂದ ಒಳ್ಳೆಯ ಮಾತುಗಳು ಕೇಳಿಬರುತ್ತವೆ. ವಿದ್ಯಾರ್ಥಿಗಳು ಅವುಗಳನ್ನು ಕೇಳಿ ಹಾಗೆ ಬಿಡದೆ ಅಳವಡಿಸಿಕೊಳ್ಳುವ ಸಂಕಲ್ಪ ಮಾಡಬೇಕು. ಎದುರಾಗುವ ಸೋಲುಗಳನ್ನು ಅರಗಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರಪಂಚ ಗೆಲ್ಲುವ ಮುನ್ನ ತಮ್ಮನ್ನು ತಾವು ಮೊದಲು ಗೆಲ್ಲಿ ಎಂದು ಕಿವಿಮಾತು ಹೇಳಿದರು.

    ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಎಸ್.ಇ.ನಟರಾಜ್ ಮಾತನಾಡಿದರು. ಉಪನ್ಯಾಸಕ ಯೋಗೀಶ್ ಇತರರಿದ್ದರು.

    ಕಾರ್ಯಕ್ರಮಕ್ಕೆ ಮುನ್ನ ಐಡಿಎಸ್​ಜಿ ಕಾಲೇಜಿನಿಂದ ಹೊರಟ ವಿದ್ಯಾರ್ಥಿಗಳ ಜಾಗೃತಿ ಜಾಥಾ ದಂಟರಮಕ್ಕಿ ವೃತ್ತ, ಕುರುವಂಗಿ ವೃತ್ತದ ಮೂಲಕ ಸಾಗಿ ಮರಳಿ ಕಾಲೇಜಿಗೆ ಆಗಮಿಸಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts