ಯುವ ಅಭ್ಯುದಯ ಉದ್ಧಾರದ ಅರುಣೋದಯ

blank

ಯುವ ಅಭ್ಯುದಯ ಉದ್ಧಾರದ ಅರುಣೋದಯ

ಮಾನವ ಸಮಾಜದಲ್ಲಿ ಜ್ವಲಂತವಾದ ನಿರೀಕ್ಷೆಯೊಂದು ಇದೆಯೆಂದರೆ ಅದು, ‘ಯುವಕರೇ ನಮ್ಮ ಭರವಸೆ, ಮುಂದೇನಾದರೂ ಮಹತ್ತರವಾದದ್ದು ಸಾಧಿಸಬೇಕಾದರೆ ಅದು ಯುವಕರಿಂದಷ್ಟೇ ಸಾಧ್ಯ’ ಎಂಬುದು. ಕುಟುಂಬ, ಸಮಾಜ ಮತ್ತು ರಾಷ್ಟ್ರಗಳು ಯುವಶಕ್ತಿಯನ್ನು ಶಕ್ತಿಯ ಖನಿಯಾಗಿ ಹಾಗೂ ಭರವಸೆಯ ನಿಧಿಯಾಗಿಸಿಕೊಂಡಿರುವುದು ಸುಳ್ಳಲ್ಲ. ಕುಟುಂಬ, ಸಮಾಜ ಮತ್ತು ರಾಷ್ಟ್ರದ ಮಾತಂತಿರಲಿ ಯಾವುದೇ ವ್ಯಕ್ತಿಯ ಜೀವಿತದ ಅವಧಿಯಲ್ಲಿ ಯೌವನದ ದಿನಗಳೇ ನಿಜಕ್ಕೂ ಸಕಲ ರೀತಿಯಲ್ಲಿ ಸಮೃದ್ಧಿಯನ್ನು ಸೂಸುವ ‘ವಸಂತಕಾಲ’ ಎಂದು ಪರಿಗಣಿಸಲ್ಪಟ್ಟಿದೆ. ರಾಷ್ಟ್ರದ ಆಗುಹೋಗುಗಳು ಅಲ್ಲಿನ ಪ್ರಜೆಗಳೆಲ್ಲರನ್ನೂ ಅವಲಂಬಿಸಿದ ವಿಷಯವಾದರೂ ಅಲ್ಲಿ ಯುವಜನರೇ ಶಕ್ತಿ, ಉತ್ಸಾಹ ಮತ್ತು ಭರವಸೆಯ ಪ್ರತಿನಿಧಿಗಳೆನಿಸುತ್ತಾರಲ್ಲವೇ?

ಸಮಾಜದ ಹಿರಿಯರು ಯುವಜನರ ಬದುಕಿಗೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಸಮ ಎಚ್ಚರವಹಿಸಬೇಕು. ಬೃಹತ್ ಕಾರ್ಯವನ್ನು ಸಾಧಿಸಿದಾಗ ಮಹತ್ತರವಾದ ಕೀರ್ತಿಗೆ ಪಾತ್ರರಾಗಲು ಸಾಧ್ಯ. ಆದರೆ ಯೌವನವಷ್ಟೇ ಇದನ್ನು ಸಾಧಿಸಲು ಸೂಕ್ತ ಕಾಲವೆಂಬ ವಿವೇಚನೆಯನ್ನು ಹಿರಿಯರೇ ಯುವಜನರಲ್ಲಿ ಮೂಡಿಸಬೇಕಾಗುತ್ತದೆ. ಇಚಠ್ಚಿಜ ಠಿಜಛಿಞ ಢಟ್ಠ್ಞ ಎಂಬ ಲೋಕೋಕ್ತಿ ಇದೆ.“My faith is in younger generation, the modern generation… out of them will come my children and they will implement my plans like lions!” ಎಂಬುದು ಸ್ವಾಮಿ ವಿವೇಕಾನಂದರ ಅದ್ಭುತ ನುಡಿ.

ಯುವಕನೆಂದರೆ ಯಾರು? ಯೌವನದ ಮಹತ್ವ ಎಂಥದ್ದು? ಎಂಬ ವಿಚಾರವಾಗಿ ಸಂಕ್ಷಿಪ್ತವಾಗಿ ಯೋಚಿಸೋಣ. ಯುವಕನು ಧೈರ್ಯ, ಸ್ಪೂರ್ತಿ ಹಾಗೂ ಉತ್ಸಾಹಗಳ ಪ್ರತೀಕ. ಕಷ್ಟಕರವಾದ ಕಾರ್ಯಗಳನ್ನು ಲೀಲಾಜಾಲವಾಗಿ ನಿರ್ವಹಿಸಿ ಹೆಮ್ಮೆಯಿಂದ ಬೀಗುವ ಸಾಮರ್ಥ್ಯ ಅವನದ್ದು, ಯಾವುದೇ ಕಠಿಣತರ ಕಾರ್ಯಗಳನ್ನು ನಿರ್ವಹಿಸುವಾಗ ಒಂದೊಮ್ಮೆ ಸೋಲಿಗೆ ತುತ್ತಾದರೂ ಧೃತಿಗೆಡದೆ ಸಾಹಸದಿಂದ ಮುನ್ನುಗ್ಗುವ ಹುಮ್ಮಸ್ಸು ಆತನದ್ದು. ಒಟ್ಟಾರೆ ಯಾವುದೇ ವಿಚಾರದಲ್ಲೂ ತರಬೇತಿ ಪಡೆದು ಕಾರ್ಯೋನ್ಮುಖನಾಗಿ ಅಪೂರ್ವ ಯಶಸ್ಸನ್ನು ತನ್ನದಾಗಿಸಿಕೊಳ್ಳಬೇಕೆಂಬ ಬಲಿಷ್ಠ ಬುದ್ಧಿಯ ಸರದಾರ ಅವನೇ! ಯುವಕನ ಬದುಕಿನಲ್ಲಿ ಅವಕಾಶಗಳು ಹಲವಷ್ಟು ಇದ್ದರೂ ಅವುಗಳನ್ನು ಸದುಪಯೋಗಪಡಿಸಿಕೊಳ್ಳಲು ಅತ್ಯವಶ್ಯಕವಾಗಿ ಬೇಕಾದ ‘ವಿವೇಕ’ವನ್ನಂತೂ ಅವನು ಗುರುಹಿರಿಯರಿಂದಲೇ ಪಡೆಯಬೇಕು, ವಾತಾವರಣ-ಸಂದರ್ಭಗಳಿಂದಷ್ಟೇ ಪಾಠ ಕಲಿಯಬೇಕು.

ಜೀವನದ ಮಹತ್ವ: ಜೀವನ ಎಂಬುದು ಕೇವಲ ನಮ್ಮ ಜೈವಿಕ ಅಸ್ತಿತ್ವವನ್ನು ಸೂಚಿಸುವಂಥದ್ದಲ್ಲ. ಇದೊಂದು ಸತ್ಯದ ಆವಿಷ್ಕಾರ ಕುರಿತಾದ ಪಯಣ. ನಮ್ಮ ಜೀವನದ ವಿಕಾಸ ಪ್ರಕ್ರಿಯೆಗೆ ನಿಷ್ಠೆಯ, ಪ್ರಯತ್ನಪೂರ್ವಕ ಆಂದೋಲನ! ಇದರ ಯೋಗ್ಯತೆಯನ್ನು ಸೂಕ್ತವಾಗಿ ಅರಿತಾಗ ನಾವು ಭೂತಕಾಲದಲ್ಲಿ ಕಳೆದುಕೊಂಡದ್ದನ್ನು ಕುರಿತು ಪರಿತಪಿಸುವುದಿಲ್ಲ, ವರ್ತಮಾನವನ್ನು ದೂರುವುದಿಲ್ಲ ಮತ್ತು ಭವಿಷ್ಯದ ಬಗ್ಗೆ ಭಯಗ್ರಸ್ಥರಾಗಬೇಕಿಲ್ಲ! ಜಗತ್ತು ಬದಲಾವಣೆಗಳನ್ನು ದ್ವೇಷಿಸುವುದು ಸರ್ವೆಸಾಮಾನ್ಯ ಸಂಗತಿಯಾದರೂ ಅದರ ಅಭಿವೃದ್ಧಿಗೆ ಬದಲಾವಣೆಗಳನ್ನು ಬಿಟ್ಟರೆ ಬೇರೆ ದಿಕ್ಕಿಲ್ಲ! ಆದ್ದರಿಂದಲೇ ಹಿರಿಯರು ಹೇಳಿದ್ದು: ‘ಜಗತ್ತು ಸದ್ಗುಣಿಯಲ್ಲ; ಆದರೆ ಸದ್ಗುಣವನ್ನು ಗೌರವಿಸದೆ ಅದಕ್ಕೆ ವಿಧಿಯಿಲ್ಲ!’ ಕತ್ತಲಿಗೆ ಹೆದರುವುದು ಮಗುವಿನ ಸ್ವಭಾವ; ಆದರೆ ಮಾನವನು ಬೆಳಕಿಗೆ ಹೆದರುವುದು ದುರಂತದ ಸಂಗತಿಯಿಲ್ಲವೇ?

ಯುವಕರೇ, ನೀವು ಸ್ವಾಮಿ ವಿವೇಕಾನಂದರನ್ನು ಅಧ್ಯಯನ ಮಾಡಲೇಬೇಕಾದ ಅನಿವಾರ್ಯತೆ ಇದೆ. ಅವರು ಜೀವನದ ಬಗ್ಗೆ ನೀಡಿದ ವ್ಯಾಖ್ಯಾನ ಸಮಗ್ರ ಮಾನವ ವಿಕಾಸದ ಸತ್ಯಪಯಣದ ಇಣುಕುನೋಟವೇ ಆಗಿದೆ. ಅವರೆನ್ನುತ್ತಾರೆ: ‘ತನ್ನನ್ನು ಕೆಳಕ್ಕೆ ಒತ್ತುತ್ತಿರುವ ಪರಿಸರ, ಪರಿಸ್ಥಿತಿಗಳಲ್ಲಿ ಜೀವಿಯ ವಿಕಸನ ಹಾಗೂ ಮುನ್ನಡೆಯೇ ಜೀವನ!’. ಈ ವಾಣಿಯು ನಮಗೆ ನಾಲ್ಕಾರು ವಿಚಾರಗಳನ್ನು ಅನಾವರಣಗೈಯ್ಯುತ್ತದೆ. ಜೀವನಾನುಭವವೆಂದರೆ ಬದುಕಿನ ಪಯಣದಲ್ಲಿ ನಮ್ಮ ತಪ್ಪನ್ನು ಪ್ರಾಮಾಣಿಕವಾಗಿ ಗುರ್ತಿಸುವುದು ಮತ್ತು ಅದು ಪುನರಾವರ್ತನೆಯಾಗದಂತೆ ಎಚ್ಚರವಹಿಸಿ ಕಾರ್ಯಶೀಲನಾಗುತ್ತ ಸಾಗುವುದು.

ಕಷ್ಟಗಳು ನಮ್ಮನ್ನು ರೂಪಿಸುತ್ತವೆಯೇ ಹೊರತು ತುಳಿದು ನಿರ್ನಾಮ ಮಾಡುವುದಿಲ್ಲ. ಬಡತನ ಅನನುಕೂಲಕರ, ಆದರೆ ಅವಮಾನಕರವಲ್ಲ! ಸಂದಿಗ್ಧ ಸನ್ನಿವೇಶಗಳನ್ನು ಎದುರಿಸುವುದರಿಂದ ಶ್ರೀಮಂತಿಕೆ ಲಭಿಸುತ್ತದೆಯೆಂದಲ್ಲ, ಅದು ನಮ್ಮ ಬುದ್ಧಿವಂತಿಕೆಯನ್ನು, ಜೀವನಾನುಭವವನ್ನು ಊರ್ಜಿತೊಳಿಸುತ್ತದೆ! ಅದೃಷ್ಟದ ಸಂಪತ್ತಿಗಿಂತ ಶ್ರಮ ದುಡಿಮೆಯ ಫಲ ಹೆಚ್ಚು ಮೌಲ್ಯಪೂರ್ಣ, ಶ್ರೇಯಸ್ಕರ. ಇದನ್ನೇ ಸ್ವಾಮಿ ವಿವೇಕಾನಂದರು ಹೇಳಿದ್ದು: ‘ಅನ್ಯಾಯದ ಮಾರ್ಗದಲ್ಲಿ ಗೆಲ್ಲುವುದಕ್ಕಿಂತ ನ್ಯಾಯ ಮಾರ್ಗದಲ್ಲಿ ಸೋಲುವುದು ಘನತೆಪೂರ್ಣ’ ಎಂದು.

ಜೀವನ ಸಾಹಸಮಯವಾಗಲಿ: ಯುವಕರಲ್ಲಿ ಪ್ರಪಂಚವನ್ನು ಬದಲಾಯಿಸಬೇಕೆಂಬ ಹುಮ್ಮಸ್ಸು ಸಾಗರದಷ್ಟಿದ್ದರೆ ವೃದ್ಧರಿಗೆ ಯುವಕರನ್ನು ಬದಲಾಯಿಸಲೇಬೇಕೆಂಬ ಆಕಾಂಕ್ಷೆ ಹಿಮಾಲಯದಷ್ಟು! ‘ಜೀವ’ ಎಂಬುದು ಜೈವಿಕ ಅಸ್ತಿತ್ವ ಸೂಚಕವಾದರೆ ‘ಜೀವನ’ ಆದರ್ಶಪೂರ್ಣ ಅಸ್ತಿತ್ವ! ಆದ್ದರಿಂದಲೇ ಬದುಕು ಸಾಗಿದಂತೆ ವರ್ಷಗಳಿಂದಷ್ಟೇ ಅದು ವೃದ್ಧಿಯಾದರೆ ಸಾಲದು, ವರ್ಷಗಳಿಗೆ ಜೀವಂತಿಕೆ ಸೇರ್ಪಡೆಯಾಗುತ್ತ ಸಾಗಬೇಕು! ವ್ಯಕ್ತಿಯು ಇತರರಿಗೆ ಹಂಚಬೇಕಾದದ್ದು ಹುಮ್ಮಸ್ಸು, ಧೈರ್ಯ, ಸಾಹಸಗಳನ್ನೇ ಹೊರತು ಭಯ, ಪುಕ್ಕಲುತನಗಳನ್ನಲ್ಲ. ಧೈರ್ಯದ ಸಹವಾಸ ಬಲುಕಷ್ಟ; ಆದರೆ ಅದರ ಫಲ ಅತಿಮಧುರ!

ಅನಿರೀಕ್ಷಿತವಾಗಿ ಬಂದೊದಗಿದ ಸನ್ನಿವೇಶದೊಂದಿಗೆ ಹೊಂದಿಕೊಂಡು ಬದುಕುವ ಜೀವನಕಲೆ ನಮ್ಮದಾಗಬೇಕು. ನಮ್ಮ ಶ್ರಮ ಹೆಚ್ಚಿದಂತೆಲ್ಲ ಅದೃಷ್ಟವೂ ವೃದ್ಧಿಸುತ್ತ ಸಾಗುತ್ತದೆ. ಏಕೆಂದರೆ ಅದೃಷ್ಟವು ಶ್ರಮಸಂಸ್ಕೃತಿಯ ಪಕ್ಷಪಾತಿ! ಶಿಕ್ಷಣವೆಂದರೆ ಮಕ್ಕಳನ್ನು ಪ್ರಾಮಾಣಿಕರನ್ನಾಗಿ ರೂಪಿಸುವ ಸಂಸ್ಕಾರ. ಆದರೆ ಇಂದು ಶಿಕ್ಷಣವು ಓದುವ ಯೋಗ್ಯತೆಯನ್ನೇನೋ ನೀಡುತ್ತಿದೆ; ಓದಲು ಯೋಗ್ಯವಾದುದ್ಯಾವುದು ಎಂಬುದರ ಕುರಿತಾದ ವಿವೇಕವನ್ನಲ್ಲ. ಹೀಗಾಗಿ ನಾವಿಂದು ಸಮಾಜದಲ್ಲಿ ಒಳ್ಳೆಯ ವ್ಯಕ್ತಿ ಹೇಗಿರಬೇಕೆಂದು ವಾದಿಸುವ ವಿಷಯಕ್ಕೆ ಸಮಯಹರಣ ಮಾಡುತ್ತಿದ್ದೇವೆಯೇ ಹೊರತು ‘ನಾನೇ ಒಳ್ಳೆಯವನಾಗುವುದು ಒಳಿತು’ ಎಂಬ ವಿಷಯಕ್ಕಲ್ಲ!

ಜೀವನಕ್ಕೆ ಸರಿದಾರಿ: ಜೀವನವೆಂಬುದೊಂದು ಸುದೀರ್ಘ ಸಮರ. ಮನುಸ್ಮೃತಿ ಹೇಳುತ್ತದೆ:

ಸರ್ವಂ ಪರವಶಂ ದುಃಖಂ ಸರ್ವಮಾತ್ಮವಶಂ ಸುಖಮ್

ಏತತ್ಪ್ರೋಕ್ತಂ ಸಮಾಸೇನ ಲಕ್ಷಣಂ ಸುಖದುಃಖಯೋಃ||

ಅಂದರೆ ಪರಾವಲಂಬಿ ಆಗುವುದೇ ದುಃಖ, ಆತ್ಮಾವಲಂಬಿ ಆಗುವುದೇ ಸುಖ. ಇದೇ ಸಂಕ್ಷಿಪ್ತವಾಗಿ ಸುಖ ಮತ್ತು ದುಃಖದ ಲಕ್ಷಣ. ನಮಗೆ ಒಂದೇ ಶಬ್ದದ ಎರಡು ಸನ್ನಿವೇಶಾರ್ಥಗಳು ತಿಳಿಯಬೇಕಾದ ಅವಶ್ಯಕತೆ ಇದೆ. Solitude ಮತ್ತು Loneliness.. ಏಕಾಂತವಾಸದಿಂದ ಜೀವನದಲ್ಲಿ ಅಭ್ಯುದಯ! ಒಂಟಿತನದಿಂದ ಮಾನಸಿಕ ಅಸ್ವಸ್ಥತೆ!

ಯುವಕರೇ, ಏಕಾಂತದ ಅನುಭವವೇ ನಿಮಗೆ ಇಲ್ಲದಿರುವುದರಿಂದಲೇ ನಿಮ್ಮ ದುರಾದೃಷ್ಟಗಳು ವೃದ್ಧಿಸುತ್ತ ಸಾಗುತ್ತವೆ! ಧೈರ್ಯದ ದೊಡ್ಡ ಪರೀಕ್ಷೆಯೆಂದರೆ ಸೋಲಿನಲ್ಲಿಯೂ ಮಾನಸಿಕವಾಗಿ ವಿಚಲಿತರಾಗದೇ ಹೋರಾಡುವುದು. ನಮ್ಮ ಬಹುತೇಕ ಮಾನಸಿಕ ಸಮಸ್ಯೆಗಳಿಗೆ ಆತ್ಮಪರಕೀಯತೆ ಅರ್ಥಾತ್ ನಮ್ಮಿಂದ ನಾವೇ ದೂರವಾಗುವುದು ಅತಿದೊಡ್ಡ ಕಾರಣವೆಂದಿದ್ದಾರೆ ಮನಃಶಾಸ್ತ್ರಜ್ಞರು. ಹಣ, ಅಧಿಕಾರ, ಲೈಂಗಿಕತೆಗಳೇ ಮೊದಲಾದ ತೀವ್ರ ಬಯಕೆಗಳನ್ನು ಮೂಡಿಸುವ ವಿಚಾರಗಳು ಅವುಗಳಲ್ಲಿ ಅನುರಕ್ತನಾದ ಮನುಷ್ಯನನ್ನು ತನ್ನತನದ ಕೇಂದ್ರಸ್ಥಾನದಿಂದಲೇ ದೂರಸರಿಸಿ ಮಾನಸಿಕ ಅಸಮತೋಲನವನ್ನುಂಟು ಮಾಡುತ್ತವೆ. ಇದರ ದುಷ್ಪರಿಣಾಮವೇ ಮನೋವ್ಯಾಧಿ!

ಆಲಸ್ಯ, ಅಲಕ್ಷ್ಯ ಮತ್ತು ಅವಿವೇಕಗಳ ಗೂಡಾಗಿರುವ ಯುವಕರೇ, ನಿಮ್ಮ ನಿಮ್ಮ ಉದ್ಧಾರದ ವಿಚಾರದಲ್ಲಿ ಪ್ರಿಯವಾದುದಕ್ಕೆ ಮಾರುಹೋಗುವುದಕ್ಕಿಂತ, ಅವುಗಳಿಂದ ಮಾರುದೂರ ನಿಂತು, ಹಿತವಾದುದನ್ನು ಪಡೆಯುವುದಕ್ಕೆ ಹೋರಾಡಬೇಕಾದ್ದೇ ನೈಜ, ಸಾಹಸಜೀವನದ ಲಕ್ಷಣ! ಯೌವನದಲ್ಲಿ ಯತ್ನಿಸದಿದ್ದರೆ ಮುಪ್ಪಿನಲ್ಲೂ ಮೂರ್ಖತನವು ಮುಂದುವರಿಯುತ್ತದೆ! ಆದ್ದರಿಂದ ಪ್ರತಿಯೊಬ್ಬ ಯುವಕನೂ ತನ್ನ ಶಾರೀರಿಕ, ಮಾನಸಿಕ, ಬೌದ್ಧಿಕ, ಕ್ರಿಯಾಶೀಲತೆಯೇ ಮೊದಲಾದ ಸಾಮರ್ಥ್ಯಗಳು ‘ವಿವೇಕ’ದಿಂದ ಮೇಳೈಸಿದಾಗಷ್ಟೇ ಸಫಲವಾಗಬಲ್ಲವೆಂಬ ಆದರ್ಶಕ್ಕೆ ತಲೆಬಾಗಲೇಬೇಕು.

ಜಗದ್ಗುರು ಶ್ರೀ ಶಂಕರಭಗವತ್ಪಾದರು ಮಾನವನನ್ನು ಎಚ್ಚರಿಸಿದ್ದು ಹೀಗೆ: ‘ದುರ್ಬಲಾನ್ ಅಜಿತೇಂದ್ರಿಯಾನ್ ಪ್ರಾಪ್ಯಂ ನಷ್ಟಂ ಯೋಗಂ’. ದುರ್ಬಲರೂ, ಇಂದ್ರಿಯನಿಗ್ರಹವಿಲ್ಲದವರ ಪಾಲಿಗೆ ಯೋಗವು ಅಥವಾ ಧರ್ಮವು ನಷ್ಟವಾಗುತ್ತದೆ! ಸ್ವಾಮಿ ವಿವೇಕಾನಂದರೆನ್ನುತ್ತಾರೆ: ‘ಕೇವಲ ಧನದಿಂದಾಗಲಿ, ಕೇವಲ ಹೆಸರು-ಕೀರ್ತಿಯಿಂದಾಗಲಿ, ಕೇವಲ ಓದುಬರಹದಿಂದಾಗಲಿ ಪ್ರಯೋಜನವಿಲ್ಲ; ಕಷ್ಟಕೋಟಲೆಗಳ ದುರ್ಭೆದ್ಯಕೋಟೆಗಳನ್ನು ಭೇದಿಸಿ ನಮ್ಮನ್ನು ಪಾರುಗಾಣಿಸಬಲ್ಲದ್ದು ಚಾರಿತ್ರ್ಯವೊಂದೇ! ಶೀಲದಲ್ಲಿ ಸ್ಥಿರವಾಗಿ ನೆಲೆಗೊಳ್ಳಬೇಕಾದರೆ ಸಾವಿರಾರು ಸಲ ಎಡವುತ್ತಲೇ ಸಾಗಬೇಕಾಗುತ್ತದೆ’.

ಬರ್ಟ್ರಂಡ್​ ರಸೆಲ್ ಹೇಳುತ್ತಾರೆ: ‘ಈ ಜಗತ್ತಿನಲ್ಲಿ ಮೂರು ಬಗೆಯ ಜನರು ದುಃಖವನ್ನು ಅನುಭವಿಸುತ್ತಾರೆ. ಮಾಡಿದ ತಪ್ಪುಗಳಿಗಾಗಿ ಪರಿತಪಿಸಿದರೂ ತಪ್ಪುಗಳ ಪುನರಾವರ್ತಿಸುವಿಕೆಯಿಂದ ತಪ್ಪಿಸಿಕೊಳ್ಳಲಾರದವರು ಮೊದಲನೆಯವರು. ತಮ್ಮದೇ ಪ್ರತಿಭೆ-ಸಾಮರ್ಥ್ಯಗಳ ಬಗ್ಗೆ ಉತ್ಪ್ರೇಕ್ಷಿತ ಕಲ್ಪನೆಗಳನ್ನಿರಿಸಿಕೊಂಡು, ಜನರು ತಮ್ಮ ನಿರೀಕ್ಷೆಗೆ ತಕ್ಕಂತೆ ಪುರಸ್ಕರಿಸದೇ ಹೋದಾಗ ದುಃಖಿಸುವವರು ಎರಡನೆಯವರು ಮತ್ತು ಇತರರು ತಮಗೆ ಆಜ್ಞಾಪಿಸಬಾರದೆಂದೂ ಹಾಗೂ ತಾವು ಇರುವುದೇ ಇತರರ ಮೇಲೆ ಅಧಿಕಾರ ಚಲಾಯಿಸಲೆಂಬ ಪಾರುಪತ್ಯಗಾರಿಕೆಯಲ್ಲಿ ದುಗುಡಗೊಳ್ಳುವವರು ಮೂರನೆಯವರು! ಅಧಿಕಾರಾಸಕ್ತಿ ಮತ್ತು ಭೋಗಾಸಕ್ತಿಗಳೆರಡೂ ಅರ್ಥಪೂರ್ಣ ಜೀವನದ ಅಸಮರ್ಥತೆಯ ಪರಿಣಾಮಗಳು ಎಂದಿದೆ ಮನಃಶಾಸ್ತ್ರ.

ಕೊನೆಯದಾಗಿ ಯುವ ಸಮುದಾಯ ಬ್ರಹ್ಮಚರ್ಯದ ಮಹತ್ವವನ್ನಂತೂ ಅರಿಯಲೇಬೇಕು. ಬ್ರಹ್ಮಚರ್ಯಕ್ಕೂ, ಬುದ್ಧಿಶಕ್ತಿಗೂ ನಿಕಟ ಸಂಬಂಧವಿದೆ. ಬುದ್ಧಿಶಕ್ತಿಗೂ ಏಕಾಗ್ರತೆಗೂ ಅವಿನಾ ಸಂಬಂಧವಿದೆ. ಏಕಾಗ್ರತೆಯಿಂದಷ್ಟೇ ಜ್ಞಾನ ಸಂಪಾದನೆ ಸಾಧ್ಯ. ಆದ್ದರಿಂದ ಜ್ಞಾನಸಂಪಾದನೆ ಅರ್ಥಪೂರ್ಣವಾಗಿ ಯಶಸ್ವಿಯಾಗುವುದು ಬ್ರಹ್ಮಚರ್ಯಪಾಲನೆಯಿಂದ!

ಸದ್ಗುಣ-ಸದಾಚಾರಗಳ ಅಭ್ಯಾಸಕ್ಕೆ ಸಜ್ಜನರ ಸಹವಾಸ ಬೇಕೇಬೇಕು. ಸಜ್ಜನರ ಒಡನಾಟ ದೊರೆಯಬೇಕಾದರೆ ಭಗವಂತನ ಕೃಪಾಶೀರ್ವಾದ ಬೇಕು.

ಯುವಕರು ಮನಗಾಣಲೇಬೇಕಾದ ಮತ್ತೊಂದು ಶ್ರೇಷ್ಠವೂ ಹಾಗೂ ಸಾರ್ವಕಾಲಿಕವೂ ಆದ ಸತ್ಯವೆಂದರೆ, ತೃಪ್ತಿಕರವಾದ ದಾಂಪತ್ಯ ಜೀವನದಿಂದ ಕೂಡಿದ ಯಶಸ್ವೀ ಗೃಹಸ್ಥಾಶ್ರಮಕ್ಕೆ ಬ್ರಹ್ಮಚರ್ಯಾಶ್ರಮವೇ ಭದ್ರಬುನಾದಿ. ಆದ್ದರಿಂದ ನಮ್ಮನ್ನು ರೂಪಿಸುವ ಮಾತಾಪಿತೃಗಳ, ಗುರುಹಿರಿಯರ, ಧರ್ಮಪರಂಪರೆಯ ಬಗ್ಗೆ ವಿಧೇಯತೆಯೂ ಮುಖ್ಯ. ಬದುಕಿನಲ್ಲಿ ಉತ್ಸಾಹ ಎಂಬ ಯಂತ್ರವನ್ನು ನಮ್ಮ ವಿವೇಕವೆಂಬುದೇ ಚಾಲನೆ ಮಾಡಬೇಕು. ಎಚ್ಚರ! ಎಂದಿಗೂ ಊರಿಗೆಲ್ಲ ನೀರುಣಿಸುವ ಬಾವಿಗೆ ಕಸವನ್ನು ಸುರಿಯಬಾರದು.

ಜೀವನದ ಏಣಿಯಲ್ಲಿ ವಿವಿಧ ಹಂತಗಳ ಸುಖಗಳನ್ನು ಬೌದ್ಧಸಂನ್ಯಾಸಿ ತಿಳಿಹೇಳಿದ್ದು ಹೀಗೆ: ‘ನಿಮಗೆ ಒಂದು ಗಂಟೆ ಸುಖ ಬೇಕಾದರೆ ನಸುನಿದ್ರೆ ಮಾಡಿ, ದಿನದ ಸುಖಕ್ಕೆ ಮಾರುಕಟ್ಟೆಯಿಂದ ಮನಬಂದಂತೆ ವಸ್ತುಗಳನ್ನು ಖರೀದಿಸಿ, ತಿಂಗಳು ಸುಖ ಬೇಕೆಂದರೆ ಮಧುಚಂದ್ರಕ್ಕೆ ಹೋಗಿ, ವರ್ಷಕ್ಕೆ ಸುಖ ಬೇಕೆನಿಸಿದರೆ ಪಿತ್ರಾರ್ಜಿತ ಆಸ್ತಿ ಪಡೆಯಿರಿ, ಆಜೀವ ಸುಖ ಅಪೇಕ್ಷಿಸಿದರೆ ಪರೋಪಕಾರ ಗುಣ ಬೆಳೆಸಿಕೊಳ್ಳಿ. ಶಾಶ್ವತ ಸುಖ ಬೇಕಾದರೆ ನಿಮ್ಮನ್ನು ನೀವು ಅರಿಯಿರಿ’.

ಯುವಜನತೆ ತಮ್ಮ ವಿದ್ಯಾರ್ಥಿದೆಸೆಯನ್ನು ಅರ್ಥಪೂರ್ಣವಾಗಿಸಿಕೊಂಡರಷ್ಟೇ ಜೀವನವಿಡೀ ಸುಖಸಂತಸಗಳಿಂದಿರಲು ಸಾಧ್ಯ. ಅದೇ ಕೌಟುಂಬಿಕ ಸುಖ, ಅದಲ್ಲವೇ ರಾಷ್ಟ್ರೋದ್ಧಾರದ ಅರುಣೋದಯ?

(ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

Share This Article

ಈ ನಕ್ಷತ್ರದಲ್ಲಿ ಹುಟ್ಟಿದ ಗಂಡಸರು ತಮ್ಮ ಪತ್ನಿಯರನ್ನು ರಾಜಕುಮಾರಿಯಂತೆ ನೋಡಿಕೊಳ್ಳುತ್ತಾರೆ! Birth of Stars

Birth of Stars : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ.…

ಕಲ್ಲಂಗಡಿ ಹಣ್ಣು ತಿಂದು ಸಿಪ್ಪೆ ಬಿಸಾಡ್ತೀರಾ? ಹಣ್ಣಿನ ಸಿಪ್ಪೆ ತಿಂದ್ರೆ ಪುರುಷರಿಗೆ ಆ ಸಾಮರ್ಥ್ಯ ಹೆಚ್ಚಾಗುವುದು! watermelon

watermelon: ಬೇಸಿಗೆ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು  ಕಲ್ಲಂಗಡಿ ಹಣ್ಣು. ನಾವು ಕಲ್ಲಂಗಡಿ ಹಣ್ಣುಗಳನ್ನು…

ಕುತ್ತಿಗೆ-ತಲೆ ನೋವನ್ನು ನಿರ್ಲಕ್ಷಿಸುತ್ತಿದ್ದೀರಾ?; ಎಚ್ಚರದಿಂದಿರಿ.. ಇದು ಅಪಾಯದ ಮುನ್ಸೂಚನೆ | Health Tips

ಕುತ್ತಿಗೆ ಮತ್ತು ಭುಜದ ಸುತ್ತಲಿನ ಪ್ರದೇಶದಲ್ಲಿನ ನೋವನ್ನು ನಿರ್ಲಕ್ಷಿಸುವ ತಪ್ಪನ್ನು ಮಾಡಬೇಡಿ. ಏಕೆಂದರೆ ಇದು ಸರ್ವಿಕಲ್…