More

    ಪರಿಪೂರ್ಣ ಜೀವನದ ಅನ್ವೇಷಣೆಯಲ್ಲಿ ತೊಡಗೋಣ

    (((ಸಾವಿರಾರು ವರ್ಷಗಳಿಂದ ಬಂದಿರುವ ಸಂಸ್ಕೃತಿ, ಜೀವನ ಪದ್ಧತಿಯ ಅರ್ಥ ಮತ್ತು ಅದರ ಪ್ರಸ್ತುತತೆಯನ್ನು ಈಗ ನಾವು ಮತ್ತೆ ಮಥಿಸಿ, ಪರಿಷ್ಕರಿಸಿ ಇಂದಿನ ಯುಗಧರ್ಮಕ್ಕೆ ಹೊಂದುವಂತೆ ಯುವಜನಾಂಗಕ್ಕೆ ನೀಡಬೇಕಾದಂಥ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ. ಮುಖ್ಯವಾಗಿ ಸಹಬಾಳ್ವೆಯ ಕಲೆಯನ್ನು ತಿಳಿಸಿಕೊಡಬೇಕಿದೆ.)))

    ಪರಿಪೂರ್ಣ ಜೀವನದ ಅನ್ವೇಷಣೆಯಲ್ಲಿ ತೊಡಗೋಣ

    ಯಾವ ರೀತಿಯ ಜೀವನ ನಡೆಸಿದರೆ ನಾವು ನಿಜವಾದ ಸಾರ್ಥಕತೆ ಪಡೆಯಬಹುದು? ವಿಸ್ಮಯದಿಂದ ತುಂಬಿದ ಭೂಮಿಯ ಮೇಲಿನ ಈ ಸೀಮಿತ ಬದುಕಿನ ವೈಶಿಷ್ಟ್ಯವೇನು? ನಾವು ಅನಿವಾರ್ಯವಾಗಿ ದಿನನಿತ್ಯ ಎದುರಿಸುತ್ತಿರುವ ಸುಖ-ದುಃಖ, ಹುಟ್ಟು-ಸಾವು ಹಾಗೂ ಕಷ್ಟಕಾರ್ಪಣ್ಯಗಳ ಅರ್ಥವೇನು? ಇವುಗಳನ್ನು ಎದುರಿಸಲು ಬೇಕಾದ ಶಕ್ತಿಯನ್ನು ಎಲ್ಲಿಂದ ಪಡೆಯಬಹುದು? ಹೇಗೆ ಬಾಳಿದರೆ ನಿಜವಾದ ಶಾಂತಿ, ಸಂತೋಷ ಮತ್ತು ಪರಿಪೂರ್ಣತೆ ಪಡೆಯಬಹುದು? ಈ ನಶ್ವರ ದೇಹವನ್ನು ಸವೆಸಿ ಜೀವನಯಾತ್ರೆ ಮುಗಿಸುವ ಮೊದಲು ನಾವು ನಮ್ಮ ಬಗ್ಗೆ ಅವಶ್ಯವಾಗಿ ತಿಳಿಯಬೇಕಾಗಿರುವುದು ಏನು? ಈ ರೀತಿಯ ಹಲವಾರು ಪ್ರಶ್ನೆಗಳು ಪ್ರತಿಯೊಬ್ಬ ಚಿಂತನಶೀಲ ವ್ಯಕ್ತಿಗೆ, ಸುಶಿಕ್ಷಿತ ಮನಸ್ಸಿಗೆ ಸಹಜವಾಗಿ ಕಾಡುವ ಮಾರ್ವಿುಕ ಮತ್ತು ಶಾಶ್ವತ ಸವಾಲುಗಳು. ತನ್ನ ದೈಹಿಕ ಅವಶ್ಯಕತೆಗಳನ್ನು ಪೂರೈಸಿಕೊಂಡ ಮಾನವನ ಬೌದ್ಧಿಕ, ಭಾವುಕ ಜೀವನದಲ್ಲಿ ಈ ರೀತಿಯ ಪ್ರಶ್ನೆಗಳು ಉದ್ಭವವಾಗುತ್ತಲೇ ಬಂದಿವೆ. ಇಂತಹ ಪ್ರಶ್ನೆಗಳ ಪರಿಹಾರದ ಅನ್ವೇಷಣೆಯಲ್ಲಿ ನಿಜವನ್ನು ಕಂಡುಕೊಳ್ಳುವ ಪ್ರಯತ್ನವೇ ಮನುಕುಲ ಗಳಿಸಿರುವ ಅಪಾರ ಜ್ಞಾನರಾಶಿಗೆ ಕಾರಣವಾಗಿದೆ.

    ನಮ್ಮ ಈ ಕ್ಷಣಿಕವಾದ ಬದುಕು ಸಾವಿರಾರು ವರ್ಷಗಳಿಂದ ಹರಿದು ಬಂದ ಜೀವನಪ್ರವಾಹದ ಒಂದು ಲೇಶಮಾತ್ರ. ಇತ್ತೀಚಿನ ದಶಕಗಳಲ್ಲಿ ಆರ್ಥಿಕ, ತಾಂತ್ರಿಕ ರಂಗಗಳಲ್ಲಿ ಆಗುತ್ತಿರುವ ಕ್ಷಿಪ್ರ ಬದಲಾವಣೆಗಳು ನಮ್ಮ ಕೌಟುಂಬಿಕ, ಸಾಮಾಜಿಕ ಬದುಕಿಗೆ ಹಿಂದೆಂದೂ ಕಾಣದ ಸವಾಲುಗಳನ್ನು ತಂದೊಡ್ಡಿವೆ. ಒಂದು ಕಡೆ ಕೈತುಂಬ ಹಣ ತರುವ ಉದ್ಯೋಗಗಳು, ಅಂತಸ್ತು, ಆಧುನಿಕ ಜೀವನಶೈಲಿ ಮುಂತಾದುವೇ ವ್ಯಕ್ತಿತ್ವದ ಬೆಳವಣಿಗೆ ಎಂಬ ಭ್ರಮೆಯನ್ನು ಹುಟ್ಟಿಸುತ್ತಿದ್ದರೆ, ಕೌಟುಂಬಿಕ ಸಂಬಂಧಗಳಲ್ಲಿ ವಿರಸ ಮೂಡಿ, ಮನುಷ್ಯ ಸಂಬಂಧಗಳು ಹದಗೆಡುತ್ತಿರುವುದು- ಇಷ್ಟೆಲ್ಲ ಬದಲಾವಣೆಗಳು ನಿಜವಾದ ಪ್ರಬುದ್ಧ ವ್ಯಕ್ತಿತ್ವವನ್ನು ಸಾಧಿಸಲು ನೆರವಾಗಿವೆಯೇ ಎಂಬ ಪ್ರಶ್ನೆಯನ್ನು ಮೂಡಿಸುತ್ತವೆ. ಸಹಬಾಳ್ವೆಯ ಅವಶ್ಯಕತೆಗಳಿಗೆ ಸ್ಪಂದಿಸಲು ಅಸಮರ್ಥನಾದ ವ್ಯಕ್ತಿ ತನ್ನ ಹಾಗೂ ಸಮಾಜದ ದೃಷ್ಟಿಯಲ್ಲಿ ಕುಬ್ಜನಾಗುತ್ತಿದ್ದಾನೆ. ಹೀಗೆ ತನ್ನನ್ನು ಕುಗ್ಗಿಸುತ್ತಲಿರುವ ಆಂತರಿಕ ನ್ಯೂನತೆಗಳ ವಿರುದ್ಧ, ದೌರ್ಬಲ್ಯಗಳ ವಿರುದ್ಧ ಸೆಣಸಾಡಲು ಅವನಿಗೆ ಬೇಕಾದ ಪ್ರೇರಣೆಗಳ ಅಭಾವವನ್ನು ನಾವಿಂದು ಕಾಣುತ್ತಿದ್ದೇವೆ.

    ಬದುಕಿನಲ್ಲಿ ನಾವೆಷ್ಟೇ ಧನಸಂಪಾದನೆ ಮಾಡಿದರೂ, ಸಂಪತ್ತನ್ನು ಗುಡ್ಡೆ ಹಾಕಿಕೊಂಡರೂ ಜೀವನದ ಬಗ್ಗೆ ನಮ್ಮ ಅರಿವಿನ ಮೇರೆಗಳು ವಿಸ್ತಾರಗೊಳ್ಳದೆ ಇರುವುದರಿಂದ, ನೆಮ್ಮದಿ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಬದುಕು ನಿರಂತರ ವೈಶಾಲ್ಯ ಪಡೆದಾಗ ಮಾತ್ರ ಅದು ಪರಿಪೂರ್ಣತೆಯತ್ತ ಸಾಗುತ್ತದೆ. ಇದಕ್ಕೆ ಮೊದಲ ಹೆಜ್ಜೆಯಾಗಿ ನಮ್ಮ ವೈಯಕ್ತಿಕ ಬದುಕಿನ ಸಮಸ್ಯೆಗಳನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತಿರುವ ಒಟ್ಟಾರೆ ವಾತಾವರಣವನ್ನು ವಸ್ತುನಿಷ್ಠವಾಗಿ ನೋಡಬೇಕು. ಆಧುನಿಕ ನಾಗರಿಕತೆಯ ದುಷ್ಪರಿಣಾಮಗಳು ಯುವಕರ ಮನಸ್ಸನ್ನು ಪೀಡಿಸುತ್ತಿರುವ ರೀತಿ ಶೋಚನೀಯವಾಗಿದೆ. ತಾತ್ಕಾಲಿಕ ಮನರಂಜನೆ ಮತ್ತು ಸ್ವೇಚ್ಛಾವೃತ್ತಿಯಲ್ಲಿ ತಮ್ಮನ್ನು ತಾವು ಮರೆಯಲು ಯತ್ನಿಸುತ್ತಿರುವ ಯುವಜನಾಂಗದ ನಡೆ ಅಂತರಂಗದಲ್ಲಿ ಅವರು ಅನುಭವಿಸುತ್ತಿರುವ ಶೂನ್ಯಕ್ಕೆ ಕನ್ನಡಿ ಹಿಡಿದಂತಿದೆ.

    ನಾವಿಂದು ಪ್ರತಿನಿತ್ಯ ನೋಡುತ್ತಿರುವ ವ್ಯಕ್ತಿಗಳ, ಕುಟುಂಬಗಳ, ಸಂಘಸಂಸ್ಥೆಗಳ, ಜಾತಿಗಳ ಹಾಗೂ ದೇಶ-ದೇಶಗಳ ನಡುವಣ ಭಿನ್ನಾಭಿಪ್ರಾಯ, ಮತ್ಸರ, ದ್ವೇಷ, ಕಲಹ, ಕದನ ಮತ್ತು ವಿವಿಧ ರೀತಿಯ ಹಿಂಸಾ ಪ್ರವೃತ್ತಿಯ ವಿಕೃತ ಪ್ರದರ್ಶನವೆಲ್ಲ ಇದರ ಪರಿಣಾಮವೇ. ಸಾಮಾನ್ಯ ಮನುಷ್ಯ ಇದರ ಬಗ್ಗೆ ಚಿಂತಿಸುತ್ತ, ಇದನ್ನು ನೋಡುತ್ತ ಅಸಹಾಯಕನಾಗಿ ಪರಿಹಾರ ಕಾಣದೆ ಬಳಲುತ್ತಿದ್ದಾನೆ.

    ನವಸಮಾಜದ ನಿರ್ಮಾಣ ಹೇಗೆ ಸಾಧ್ಯ?: ಈ ಪರಿಸ್ಥಿತಿಯಲ್ಲಿ ಹೊಸ ಪರಿವರ್ತನಶೀಲ ಮತ್ತು ಆದರ್ಶ ಸಮಾಜವನ್ನು ಹುಟ್ಟುಹಾಕುವುದು ಹೇಗೆ ಸಾಧ್ಯ? ವ್ಯಕ್ತಿ ಮತ್ತು ಸಮಾಜದ ಗತಿಯನ್ನು ಶ್ರೇಯಸ್ಸಿನ ಕಡೆ ತಿರುಗಿಸಲು ಸಾಧ್ಯವೇ? ಯಾರಿಗೆ, ಯಾವ ಶಕ್ತಿಗೆ ಇದು ಸಾಧ್ಯ? ಯಾವುದೇ ಪರಿಣಾಮಕಾರಿಯಾದ ಪರಿವರ್ತನೆಗೆ ಆರಂಭವು ವ್ಯಕ್ತಿಮಟ್ಟದಿಂದಲೇ ಆಗಬೇಕು. ವ್ಯಕ್ತಿ ತನ್ನಲ್ಲಿ ನೆಮ್ಮದಿ ಕಂಡುಕೊಳ್ಳುವ ಕಲೆಯನ್ನು ಕಂಡುಕೊಂಡರೆ ತನ್ನ ಸುತ್ತಮುತ್ತಲ ಪರಿಸರದಲ್ಲಿ ಆ ನೆಮ್ಮದಿಯ ಪ್ರಭಾವ ಬೀರುತ್ತಾನೆ, ಹಾಗೆ ಆ ನೆಮ್ಮದಿಯ ಪರಿಧಿ ವಿಸ್ತರಿಸುತ್ತ ಹೋಗುತ್ತದೆ. ವ್ಯಕ್ತಿಗೆ ನಿಜವಾದ ನೆಮ್ಮದಿ ತಂದುಕೊಡುವ ಸಾಮರಸ್ಯದ ಜೀವನ ಹೇಗೆ ಸಾಧ್ಯ? ಸಫಲ ಜೀವನದ ನಿಯಮಗಳಾವುವು? ಇದಕ್ಕೆ ಬೇಕಾದ ಶಿಕ್ಷಣ ಮತ್ತು ಜೀವನಕಲೆಯನ್ನು ಎಲ್ಲಿಂದ ಪಡೆಯಬಹುದು? ಇದು ಇಂದಿನ ಪ್ರತಿಯೊಬ್ಬ ಪ್ರಜ್ಞಾವಂತನನ್ನು ಕಾಡುತ್ತಿರುವ ಮೂಲಭೂತ ಪ್ರಶ್ನೆ. ಈ ಮೂಲಭೂತ ಪ್ರಶ್ನೆಗಳು ಮನುಕುಲದ ಇತಿಹಾಸದುದ್ದಕ್ಕೂ ಜಗತ್ತಿನ ಬೇರೆ-ಬೇರೆ ಭಾಗಗಳಲ್ಲಿರುವ ಪ್ರಜ್ಞಾವಂತರನ್ನು ಕಾಡುತ್ತಲೇ ಬಂದಿವೆ. ಈ ಪ್ರಶ್ನೆಗಳನ್ನು ನಮ್ಮ ಅಂತರಂಗದಲ್ಲಿ ಎದುರಿಸುವುದರಿಂದ ಮಾತ್ರವೇ ನಮ್ಮ ಅರಿವಿನ ಮೇರೆಗಳು ವಿಸ್ತಾರಗೊಳ್ಳುತ್ತವೆ.

    ಉತ್ತಮ ಶಿಕ್ಷಣ ಒದಗಿಸುವುದು: ಇಂಥ ಸನ್ನಿವೇಶಗಳಲ್ಲಿ ಬೆಳೆಯುತ್ತಿರುವ ಮಗುವಿಗೆ ಉತ್ತಮ ಆದರ್ಶಗಳು, ಜೀವನಾವಶ್ಯಕವಾದ ಜ್ಞಾನ, ವೈಚಾರಿಕ ಸಿದ್ಧತೆ, ಸಹಜೀವನದ ಸೂತ್ರ ಇವು ಎಲ್ಲಿಂದ ಲಭ್ಯವಾಗುವವು? ಮನೆಯಲ್ಲಿ ತಂದೆ-ತಾಯಿಗಳಿಂದಲೇ? ಶಾಲೆಯಲ್ಲಿ ಅಧ್ಯಾಪಕರು ಮತ್ತು ಮಿತ್ರವರ್ಗದಿಂದಲೇ? ಸಮಾಜ ಮತ್ತು ಮಾಧ್ಯಮಗಳ ಮೂಲಕವೇ? ಇಂದಿನ ಪರಿಸ್ಥಿತಿ ಹೇಗಿದೆಯೆಂದರೆ ಕೋಟ್ಯಂತರ ಜನರಲ್ಲಿ ಕೆಲವರು ಮಾತ್ರ ಪ್ರಜ್ಞಾವಂತರಾಗಿ ನಿಜವಾದ ಅರ್ಥದಲ್ಲಿ ಬೆಳವಣಿಗೆ ಹೊಂದಿದ್ದಾರೆ. ಕೆಲವರು ಧರ್ಮ, ಆಧ್ಯಾತ್ಮಿಕ ಮತ್ತು ನೈತಿಕ ಜೀವನದಲ್ಲಿ ಮುಂದುವರಿದಿರಬಹುದು; ಮತ್ತೆ ಕೆಲವರು ತಾಂತ್ರಿಕ ಜ್ಞಾನ, ಸಾಹಿತ್ಯ ಮತ್ತು ಕಲೆಯಲ್ಲಿ ಹೆಸರು ಮಾಡಿರಬಹುದು. ಆದರೆ ದೇಶದ ನಿಜವಾದ ಪ್ರಗತಿಯನ್ನು ಸೂಚಿಸುವ ಬಹುಸಂಖ್ಯೆಯ ಜನಸಾಮಾನ್ಯರ ಜೀವನ ಯಾವ ಗುಣಮಟ್ಟದಲ್ಲಿದೆ? ಅವರ ಮನೋಧರ್ಮದಲ್ಲಿ ಬದಲಾವಣೆ ತರಲು ಸಾಧ್ಯವಾಗಿದೆಯೇ? ಎಂಬುದನ್ನು ನಾವು ತುಲನಾತ್ಮಕವಾಗಿ ಗಮನಿಸಬೇಕಾದ ವಿಷಯ. ಮನುಕುಲದ ಇತಿಹಾಸದುದ್ದಕ್ಕೂ ಅನೇಕ ಪ್ರಜ್ಞಾವಂತರ ತಪಸ್ಸಿನಿಂದ ಲಭಿಸಿರುವ ಅರ್ನ್ಯಘ ಜ್ಞಾನರಾಶಿ ಅನೇಕ ವರ್ಷಗಳ ಕಾಲ ಕೆಲವೇ ಜನರ ಸ್ವತ್ತಾಗಿ ಉಳಿದು, ಜನಮಾನಸವನ್ನು ರೂಪಿಸಬೇಕಾದ ಪ್ರಮಾಣದಲ್ಲಿ ಅದು ಜನರನ್ನು ತಲುಪಲೇ ಇಲ್ಲ. ಶಿಕ್ಷಣದ ಮೂಲ ಉದ್ದೇಶವೇ ಈ ಜ್ಞಾನಸಂಜೀವಿನಿಯನ್ನು ಸಾಮಾನ್ಯ ಜನರತ್ತ ಕೊಂಡೊಯ್ಯುವುದು. ಆದರೆ ಶ್ರೇಯಸ್ಕರ ಜೀವನವನ್ನು ನಡೆಸಲು ಬೇಕಾದ ಈ ಜ್ಞಾನ, ಶಿಸ್ತು, ಆದರ್ಶ ಮತ್ತು ಮೌಲ್ಯಗಳನ್ನು ಈಗಿನ ಶಿಕ್ಷಣ ಪದ್ಧತಿಯಿಂದ ವಿತರಿಸಲಾಗದೆ ಇರುವುದರಿಂದ ಯುವಜನಾಂಗ ದಾರಿ ತಪ್ಪಿದಂತಾಗಿದೆ. ಈ ಜ್ಞಾನಸಂಜೀವಿನಿಯನ್ನು ನಮ್ಮ ಶಾಲಾ-ಕಾಲೇಜುಗಳ ಶಿಕ್ಷಣ ಪದ್ಧತಿಯಲ್ಲಿ ನಿರ್ಲಕ್ಷಿಸಿರುವುದೇ ನಮ್ಮನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆಗಳಿಗೆ ಕಾರಣವಾಗಿದೆ. ಇಂದು ಶಾಲಾ-ಕಾಲೇಜುಗಳಲ್ಲಿ ನೀಡಲಾಗುತ್ತಿರುವ ಶಿಕ್ಷಣ ಮೌಲ್ಯರಹಿತವಾಗಿದ್ದು, ಮನುಷ್ಯ ಸ್ವಭಾವವನ್ನು ಪರಸ್ಪರ ಅರಿತು, ಬದುಕಿನ ನೈಜ ಪಾಠವನ್ನು ಸರಿಯಾದ ರೀತಿಯಲ್ಲಿ ತಿಳಿಸಲು ಸಮರ್ಥವಾಗಿಲ್ಲ. ಹೀಗಾಗಿ ಎಲ್ಲ ಹಂತಗಳಲ್ಲೂ ಮನುಷ್ಯ ಸಂಬಂಧಗಳು ಕುಸಿಯುತ್ತಿವೆ. ಎಲ್ಲೆಲ್ಲೂ ಅತೃಪ್ತಿ ಹಾಗೂ ಹಿಂಸೆ ತಾಂಡವವಾಡುತ್ತಿವೆ.

    ಸಾವಿರಾರು ವರ್ಷಗಳಿಂದ ಬಂದಿರುವ ಸಂಸ್ಕೃತಿ, ಜೀವನ ಪದ್ಧತಿಯ ಅರ್ಥ ಮತ್ತು ಅದರ ಪ್ರಸ್ತುತತೆಯನ್ನು ಈಗ ನಾವು ಮತ್ತೆ ಮಥಿಸಿ, ಪರಿಷ್ಕರಿಸಿ ಇಂದಿನ ಯುಗಧರ್ಮಕ್ಕೆ ಹೊಂದುವಂತೆ ಯುವಜನಾಂಗಕ್ಕೆ ನೀಡಬೇಕಾದಂಥ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ. ಮುಖ್ಯವಾಗಿ ಸಹಬಾಳ್ವೆಯ ಕಲೆಯನ್ನು ತಿಳಿಸಿಕೊಡುವ ಮೌಲ್ಯಾಧಾರಿತ ಸಮಗ್ರ ಶಿಕ್ಷಣವನ್ನು ಸಂಯೋಜಿತ ವ್ಯವಸ್ಥೆ ಮೂಲಕ ವಿದ್ಯಾರ್ಥಿಗಳಿಗೆ ನೀಡಬೇಕಾಗಿದೆ. ನಾವು ಸಾಂಸ್ಕೃತಿಕ ಅಥವಾ ಸಾಮಾಜಿಕ ಸಂಸ್ಥೆಗಳ ಮೂಲಕ, ಅವಶ್ಯಕ ಜ್ಞಾನವನ್ನು ಒಳಗೊಂಡ ಪುಸ್ತಕಗಳ ಮೂಲಕ, ಖಾಸಗಿ ಸಂಘಸಂಸ್ಥೆಗಳ ಮೂಲಕ, ತರಬೇತಿ ಶಿಬಿರ, ಕಾರ್ಯಾಗಾರಗಳ ಮೂಲಕ, ನೀತಿ ಬೋಧಕ ಕತೆ, ಚರ್ಚೆ, ಸಂವಾದಗಳ ಮೂಲಕ ಒದಗಿಸಬೇಕು ಹಾಗೂ ಮಕ್ಕಳ ವ್ಯಕ್ತಿತ್ವದ ನಿಜವಾದ ಬೆಳವಣಿಗೆಗೆ ಸಹಕಾರಿಯಾಗುವ ಪರಿಸರವನ್ನು ನಿರ್ಮಾಣ ಮಾಡಬೇಕು. ಪರಿವರ್ತನೆಗೆ ಪೋಷಕವಾಗುವ ಇಂತಹ ಪೂರಕ ಶಿಕ್ಷಣ ಸಾಮಗ್ರಿಗಳನ್ನು ಮಕ್ಕಳಿಗೆ ಒದಗಿಸಬೇಕಾದದ್ದು ವಿಚಾರವಂತ ತಂದೆ-ತಾಯಿಗಳ ಮತ್ತು ಸಮಾಜದ ಕರ್ತವ್ಯ. ಒಂದು ಮಗು ‘ವ್ಯಕ್ತಿ’ಯಾಗಿ ಬೆಳೆಯುವ ಪ್ರಕ್ರಿಯೆಯಲ್ಲಿ ಮುಖ್ಯವಾದುದು ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು, ಸುತ್ತಮುತ್ತಲಿನವರ ಅವಶ್ಯಕತೆಗಳಿಗೆ ಸ್ಪಂದಿಸಿ ಪ್ರಾಜ್ಞವೂ, ಪ್ರಬುದ್ಧವೂ ಆದ ಜೀವನ ನಡೆಸುವುದು. ಹಾಗೆ ವ್ಯಕ್ತಿತ್ವ ವಿಕಸನಗೊಂಡಾಗ ಜ್ಞಾನದಾಹ, ಕರ್ಮ ಕೌಶಲ, ಧರ್ಮಶ್ರದ್ಧೆ, ಸಮಾಜಸೇವೆ, ದೇಶಭಕ್ತಿ, ಉತ್ತಮ ನಾಯಕತ್ವ ಮುಂತಾದ ಗುಣಗಳನ್ನು ಯುವಜನಾಂಗದಲ್ಲಿ ಕಾಣುವಂತಾಗುತ್ತದೆ. ಈ ಎಲ್ಲ ಆದರ್ಶಗಳನ್ನೊಳಗೊಂಡ ಮತ್ತು ಪ್ರಾಯೋಗಿಕವಾದ ನಿತ್ಯ-ಸತ್ಯಗಳ ಮೇಲೆ ನಿಂತ, ಸಮಸ್ತ ಮಾನವಕೋಟಿಯ ಹಿತವನ್ನು ಸಾಧಿಸುವ, ಉನ್ನತ ಸಮಾಜ ನಿರ್ವಣದ ಚಿಂತನೆಯನ್ನು ಸ್ವಾಮಿ ವಿವೇಕಾನಂದರ ಜೀವನ ಮತ್ತು ಕೃತಿಗಳಲ್ಲಿ ಯಥೇಚ್ಛವಾಗಿ ನಾವು ಕಾಣಬಹುದು.

    ಸಮಗ್ರ ಜೀವನದ ವೀಕ್ಷಣೆ: ಸಾವಿರಾರು ವರ್ಷಗಳಿಂದ ಹರಿದು ಬರುತ್ತಿರುವ ಸಾಮಾಜಿಕ ಜೀವನ ಪ್ರವಾಹದಲ್ಲಿ ನಮ್ಮ ಜೀವನ ಒಂದು ಅಲೆಯಂತೆ. ನಾವು ಅದರ ಒಂದು ಅವಿಭಾಜ್ಯ ಅಂಗವಾದರೂ ಅದರಿಂದ ಅಂತರವನ್ನು ಸಾಧಿಸಿ ಸಾಕ್ಷೀಭಾವದಿಂದ ಈ ಜೀವನಪ್ರವಾಹವನ್ನು ವೀಕ್ಷಿಸುವ ಕಲೆಯನ್ನು ಬೆಳೆಸಿಕೊಳ್ಳಬೇಕು. ಈ ರೀತಿ ದೂರ ನಿಂತು ವೀಕ್ಷಿಸುವುದರಿಂದ ಮಾತ್ರ ಜೀವನದ ಸಮಗ್ರ ಗ್ರಹಿಕೆ ಸಾಧ್ಯವಾಗುತ್ತದೆ. ತನ್ಮೂಲಕ ಜೀವನದ ಧರ್ಮ, ನೀತಿ, ಉದ್ದೇಶಗಳನ್ನು ಅರಿಯಲು ಸಾಧ್ಯವಾಗುತ್ತದೆ. ಕೂಲಂಕಷವಾದ ವೀಕ್ಷಣೆ, ಪರಿಶೀಲನೆ, ಸಂಶೋಧನೆ ಮತ್ತು ಧ್ಯಾನದಿಂದ, ಹುಟ್ಟಿ ಬೆಳೆದು ನಶಿಸುವ ಜೀವನದ ಈ ಪ್ರವಾಹವನ್ನು ಅರ್ಥಮಾಡಿಕೊಳ್ಳಬೇಕು. ಇದರಿಂದ ಜೀವನವನ್ನು ಅದರ ವಾಸ್ತವತೆಯಲ್ಲಿ ಸ್ವೀಕರಿಸಿ, ಎದುರಿಸಲು ಅವಕಾಶವಾಗುವುದು.

    ನಮ್ಮ ಜೀವನಯಾತ್ರೆ ನಿಗೂಢವಾದ ಪಯಣ! ಬುದ್ಧಿಶಕ್ತಿಗೆ ನಿಲುಕದ ಸೂಕ್ಷ್ಮವಾದ ಬೇರೆ-ಬೇರೆ ರೀತಿಯಾದ ಪ್ರಭಾವಗಳು ಪ್ರತಿಯೊಬ್ಬರ ಜೀವನವನ್ನು ರೂಪಿಸುತ್ತಿವೆ. ಅನೇಕಾನೇಕ ಸೂತ್ರಗಳು, ಶಕ್ತಿಗಳು ನಮ್ಮನ್ನು ಗೊಂಬೆಯಂತೆ ಅಗೋಚರವಾಗಿ ಆಡಿಸುತ್ತಿವೆ. ಮನುಷ್ಯನ ಬವಣೆ, ದುಃಖ, ಸಮಸ್ಯೆಗಳನ್ನು ಆಮೂಲಾಗ್ರವಾಗಿ ತೆಗೆದುಹಾಕಲು ಸಾಧ್ಯವಿಲ್ಲ. ಆದರೆ ಋಷಿಗಳು, ಯೋಗಿಗಳು, ಮಹಾಪುರುಷರು, ಮನುಷ್ಯನ ಅಹಂಕಾರದ ಅಸ್ತಿತ್ವವನ್ನು ಅತಿಕ್ರಮಿಸಿ ಅವನಲ್ಲಿ ಸುಪ್ತವಾಗಿರುವ ಉನ್ನತ ಸ್ತರದ ದೈವೀಪ್ರಜ್ಞೆಯನ್ನು ಜಾಗೃತಗೊಳಿಸಿದರು. ನಮ್ಮ ದೇಹ, ಮನಸ್ಸಿಗೆ ಅತೀತವಾಗಿರುವಂಥ ಔನ್ನತ್ಯದ ಪ್ರಜ್ಞಾಸ್ಥಿತಿಯನ್ನು ಧ್ಯಾನ ಹಾಗೂ ಅಧ್ಯಾತ್ಮದ ಮೂಲಕ, ಯೋಗ ಮಾರ್ಗದ ಮೂಲಕ ಸಾಕ್ಷಾತ್ಕರಿಸಿಕೊಳ್ಳಬಹುದು ಎಂದು ತಮ್ಮ ಅನುಭವದಿಂದ ಸಾರಿದರು. ಈ ಮಾರ್ಗದಲ್ಲಿ ಮುಂದೆ ಸಾಗಿದರೆ ಮಾತ್ರ ಇಹಜೀವನದ ಸಮಸ್ಯೆಗಳಿಂದ ಮತ್ತು ದುಃಖಗಳಿಂದ ಪಾರಾಗಬಹುದು ಎಂಬುದನ್ನು ಸ್ಪಷ್ಟಪಡಿಸಿದರು.

    ಹೀಗೆ ಮನುಷ್ಯ ತನ್ನ ಮನಸ್ಸನ್ನು ಶಿಸ್ತು ಮತ್ತು ವಿವೇಕದ ಬೆಳಕಿನಲ್ಲಿ ಪಳಗಿಸಿ, ಆಂತರಿಕ ವಿಕಾರಗಳನ್ನು ತೊಡೆದುಹಾಕಿ, ತನ್ನ ಆಧ್ಯಾತ್ಮಿಕ ನೆಲೆಯನ್ನು ಕಂಡುಕೊಂಡರೆ ಮಾತ್ರ ತನ್ನ ಆಂತರ್ಯದಲ್ಲಿರುವ ದಿವ್ಯಜ್ಞಾನ ಮತ್ತು ಬೆಳಕನ್ನು ಅನುಭವಿಸಬಹುದು. ಈ ಬೆಳಕಿನ ಪಥದಲ್ಲಿ ಸತ್ಯವನ್ನು ಹುಡುಕುತ್ತ ಜೀವನ ನಡೆಸಿದಾಗ ಬಾಳು ಆನಂದಮಯವಾಗುತ್ತದೆ. ಇದೇ ಶ್ರೇಯಸ್ಕರವಾದ ಪರಿಪೂರ್ಣ ಜೀವನ.

    (ಲೇಖಕರು ಮೈಸೂರು ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts