ಬೈಲಹೊಂಗಲ: 26ರಂದು ರಾಯಣ್ಣನ ಆತ್ಮಜ್ಯೋತಿ ಯಾತ್ರೆ

ಬೈಲಹೊಂಗಲ: ಅಖಿಲ ಕರ್ನಾಟಕ ಕ್ರಾಂತಿವೀರ ಶೂರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿಯಿಂದ ಜ.26ರಂದು ರಾಯಣ್ಣನ ಹುತಾತ್ಮ ಸ್ಥಳ ನಂದಗಡದಿಂದ ಚನ್ನಮ್ಮನ ಸಮಾಧಿ ಸ್ಥಳದವರೆಗೆ ರಾಯಣ್ಣನ ಆತ್ಮಜ್ಯೋತಿ ಯಾತ್ರೆ ಹಮ್ಮಿಕೊಳ್ಳಲಾಗಿದೆ.ರಾಯಣ್ಣನ ಆತ್ಮಜ್ಯೋತಿ ತಂದು ಗೌರವ ಸಲ್ಲಿಸುವ ಮೂಲಕ ರಾಷ್ಟ್ರಭಕ್ತಿ ಜಾಗೃತಗೊಳಿಸಲಾಗುವುದು.

ಅಂದು ಬೆಳಗ್ಗೆ 8ಕ್ಕೆ ಇಂಚಲ ಕ್ರಾಸ್‌ನ ಶಿವಬಸವೇಶ್ವರ ಕಲ್ಯಾಣ ಮಂಟಪದ ಬಳಿಯಿಂದ ರಾಯಣ್ಣನ ಅಭಿಮಾನಿಗಳು ನಂದಗಡಕ್ಕೆ ಪ್ರಯಾಣ ಬೆಳೆಸುವರು.ನಂದಗಡ, ಬೀಡಿ, ಚನ್ನಮ್ಮನ ಕಿತ್ತೂರು, ಸಂಗೊಳ್ಳಿ ಮಾರ್ಗವಾಗಿ ಜ್ಯೋತಿ ಯಾತ್ರೆ ಬೈಲಹೊಂಗಲ ಪ್ರವೇಶಿಸಲಿದೆ. ರಾಯಣ್ಣನ ಅಭಿಮಾನಿಗಳು, ಭಕ್ತರು, ಸಮಿತಿಯ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ರಾಜು ಸೊಗಲ, ಉಪಾಧ್ಯಕ್ಷ ಸೋಮನಾಥ ಸೊಪ್ಪಿಮಠ ತಿಳಿಸಿದ್ದಾರೆ.