ಸ್ವಚ್ಛ ಭಾರತ ಅಭಿಯಾನದಿಂದ ಅಂತರ್ಜಲ ಮಾಲಿನ್ಯ ಪ್ರಮಾಣ ಕಡಿಮೆಯಾಗಿದೆ: ಯುನಿಸೆಫ್​

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಅಭಿಯಾನದಿಂದ ಅಂತರ್ಜಲದ ಮಾಲಿನ್ಯ ಕಡಿಮೆಯಾಗಿದೆ ಎಂದು ಯುನಿಸೆಫ್​ ತನ್ನ ವರದಿಯಲ್ಲಿ ತಿಳಿಸಿದೆ.

ಸ್ವಚ್ಛ ಭಾರತ ಅಭಿಯಾನದ ಕುರಿತು ಯುನಿಸೆಫ್​ ಹಾಗೂ ಬಿಲ್​ ಮತ್ತು ಮಿಲಿಂದಾ ಗೇಟ್ಸ್​ ಫೌಂಡೇಷನ್​ ನಡೆಸಿದ ಅಧ್ಯಯನದ ವರದಿಯನ್ನು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್​ ಶೇಖಾವತ್​ ಬುಧವಾರ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಶುಚಿತ್ವ ಪರಿಸರದ ಎಲ್ಲಾ ಆಯಾಮಗಳ ಮೇಲೆ ಪ್ರಭಾವ ಬೀರುತ್ತದೆ. ಅದರಲ್ಲೂ ಬಯಲು ಶೌಚಮುಕ್ತ ಪ್ರದೇಶಗಳು ಆ ಪ್ರದೇಶದ ಸಮುದಾಯದ ಆರೋಗ್ಯದ ಮೇಲೆ ಪರಿಣಾಮಕಾರಿ ಪ್ರಭಾವ ಬೀರುತ್ತವೆ. ಕಳೆದ ವರ್ಷ ಸ್ವಚ್ಛ ಭಾರತ ಅಭಿಯಾನದಿಂದಾಗಿ ದೇಶ ಬಯಲು ಶೌಚಮುಕ್ತವಾಗುತ್ತಿದ್ದು, ಇದರಿಂದ ವಾರ್ಷಿಕ ಮೂರು ಲಕ್ಷ ಜನರ ಪ್ರಾಣ ಉಳಿಯುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿತ್ತು ಎಂದು ತಿಳಿಸಿದರು.

ಸ್ವಚ್ಛ ಭಾರತ ಅಭಿಯಾನದಿಂದ ನೀರು, ಮಣ್ಣು ಮತ್ತು ಆಹಾರದ ಮೇಲಾಗಿರುವ ಪರಿಣಾಮಗಳ ಕುರಿತು ಯುನಿಸೆಫ್​ ಅಧ್ಯಯನ ನಡೆಸಿತ್ತು. ಅದರ ಭಾಗವಾಗಿ ಒಡಿಶಾ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಬಯಲು ಶೌಚಮುಕ್ತ ಗ್ರಾಮಗಳು ಹಾಗೂ ಬಯಲು ಶೌಚ ಮುಕ್ತವಾಗದ ಗ್ರಾಮಗಳಲ್ಲಿ ಅಂತರ್ಜಲದ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಮಾದರಿಗಳನ್ನು ಪರೀಕ್ಷಿಸಿದಾಗ ಬಯಲು ಶೌಚಮುಕ್ತವಾಗದ ಹಳ್ಳಿಗಳಲ್ಲಿ ಸಂಗ್ರಹಿಸಿದ ನೀರು ಹೆಚ್ಚು ಕಲುಷಿತವಾಗಿರುವುದು ಕಂಡು ಬಂದಿತ್ತು.

ಸ್ವಚ್ಛ ಭಾರತ ಅಭಿಯಾನದಲ್ಲಿ ಗ್ರಾಮೀಣ ಭಾಗದಲ್ಲಿ ಶೌಚಗೃಹಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಇದರಿಂದ ಬಯಲಿನಲ್ಲಿ ಶೌಚ ಮಾಡುವ ಪ್ರಮಾಣ ಕಡಿಮೆಯಾಗಿದೆ. ಹಾಗಾಗಿ ಜಲಮೂಲಗಳು, ಆಹಾರ ಮತ್ತು ಪರಿಸರ ಕಲುಷಿತವಾಗುವ ಪ್ರಮಾಣ ತಗ್ಗಿದೆ ಎಂದು ಯುನಿಸೆಫ್​ ತನ್ನ ವರದಿಯಲ್ಲಿ ತಿಳಿಸಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *