
ಹೊಸಕೋಟೆ: ಪ್ರತಿ ದಿನ ನಮ್ಮ ನಗರವನ್ನು ಸ್ವಚ್ಛವಾಗಿಡಲು ಶ್ರಮಿಸುತ್ತಿರುವ ಪೌರಕಾರ್ಮಿಕರನ್ನು ನಾವೆಲ್ಲರೂ ಗೌರವಿಸಬೇಕು. ಜತೆಗೆ ಸತ್ಯಮೇವ ಜಯತೆ ಜತೆಯಲ್ಲಿ ಸ್ವಚ್ಛಮೇವ ಜಯತೆ ಪಾಲಿಸಬೇಕು ಎಂದು ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಡಿ.ಎಸ್. ರಾಜ್ ಕುಮಾರ್ ತಿಳಿಸಿದರು.
ನಗರದ ಎಸ್‌ಜೆಆರ್‌ಎಸ್ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹೊಸವರ್ಷ ಆಚರಣೆ ಸಂದರ್ಭದಲ್ಲಿ ನಗರದ ಪೌರಕಾರ್ಮಿಕರನ್ನು ಗೌರವಿಸುವ ವಿನೂತನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೌರ ಕಾರ್ಮಿಕರು ಕೆಲಸದಲ್ಲಿ ತಲ್ಲೀನರಾಗುವುದರಿಂದ ಹೆಚ್ಚಿನ ಆರೋಗ್ಯ ಸಮಸ್ಯೆಗೆ ಗುರಿಯಾಗುತಿದ್ದಾರೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ನನ್ನ ಮನೆಯ ಸ್ವಚ್ಛತೆಯನ್ನು ನಾವು ಮಾಡಿಕೊಂಡರೆ ನಗರದ ಸ್ವಚ್ಛತೆಯಲ್ಲಿ ಹೆಚ್ಚಿನ ಕಾಳಜಿ ವಹಿಸುವವರು ಪೌರ ಕಾರ್ಮಿಕರಾಗಿರುತ್ತಾರೆ. ಕಸವನ್ನು ರಸ್ತೆಗಳಲ್ಲಿ ಚಲ್ಲದೆ ಮನೆ ಮನೆಗೆ ಬರುವ ಕಸ ಸಂಗ್ರಹಣಾ ವಾಹನಕ್ಕೆ ನೀಡಿ ಸ್ವಚ್ಛತೆ ಕಾಪಾಡಿ ಎಂದರು.
ಪಂಚಮುಖಿ ಗಣಪತಿ ದೇವಾಲಯದ ದರ್ಮದರ್ಶಿ ವಾಸುದೇವಯ್ಯಮಾತನಾಡಿ, ಮಕ್ಕಳಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಕರ್ತವ್ಯ. ಮಕ್ಕಳಲ್ಲಿ ಅರಿವು ಮೂಡಿದಲ್ಲಿ ಸ್ವಚ್ಛಭಾರತದ ಕನಸು ನನಸಾಗುತ್ತದೆ. ಆದ್ದರಿಂದಲೆ ದೇಶದ ಪ್ರಧಾನಿ ಮೋದಿ ಅವರು ಪ್ರಯಾಜ್ ರಾಜ್‌ನಲ್ಲಿ ಪೌರ ಕಾರ್ಮಿಕರ ಪಾದಪೂಜೆ ಸಲ್ಲಿಸಿ ಗೌರವಿಸಿದರು ಹಾಗೂ ಸ್ವಚ್ಛ ಭಾರತ ಅಭಿಯಾನಕ್ಕೆ ಚಾಲನೆ ನೀಡಿ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸುತ್ತಿದ್ದಾರೆ ಎಂದರು.
ನಗರಸಭೆ ಆರೋಗ್ಯಾಧಿಕಾರಿ ಅಖಿಲಾ ಬಾನು ಮಾತನಾಡಿ, ಪರಿಸರ ಸ್ವಚ್ಛತೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಮಕ್ಕಳಿಂದ ದೊಡ್ಡವರ ವರೆಗೆ ಕ ವಿಲೇವಾರಿ ಬಗ್ಗೆ ಅರಿವು ಮುಖ್ಯ ಎಂದರು.
ನಗರದ ಎಸ್‌ಜೆಆರ್‌ಎಸ್ ಶಾಲೆಯಲ್ಲಿ ಪೌರಕಾರ್ಮಿಕರು ಪ್ರೌಢಶಾಲೆಗೆ ಸೇರಿಸಿದಲ್ಲಿ ಅವರಿಗೆ ಸಂಪೂರ್ಣ ಉಚಿತವಾಗಿ ವಿದ್ಯಾಭ್ಯಾಸಕ್ಕೆ ಎಲ್ಲ ರೀತಿಯ ನೆರವು ನೀಡಲಾಗುವುದು. ಜತೆಗೆ ಆಂಗ್ಲ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡುವ ಪೌರ ಕಾರ್ಮಿಕರ ಮಕ್ಕಳಿಗೆ ಶೇ.50 ರಿಯಾಯಿತಿ ದರದಲ್ಲಿ ಶಿಕ್ಷಣ ನೀಡಲಾಗುವುದು ಎಂದು ಎಸ್‌ಜೆಆರ್‌ಎಸ್ ಶಾಲಾ ಮುಖ್ಯ ಶಿಕ್ಷಕ ನಾಗರಾಜ್ ತಿಳಿಸಿದರು.
ಶಾಲಾ ಸೇವಾ ಸಮಿತಿ ಮುಖ್ಯ ಶಿಕ್ಷಕಕರಾದ ವಕೀಲ ರಾಮಚಂದ್ರಪ್ಪ ಮಾತನಾಡಿದರು.