More

    ಸ್ವಾಭಿಮಾನಕ್ಕೆ ಸದಾ ಚಿರಋಣಿ, ಸ್ವಾಭಿಮಾನಿ ಕಾರ್ಯಕರ್ತರಿಗೆ ಸನ್ಮಾನ ಸಮಾರಂಭದಲ್ಲಿ ಶಾಸಕ ಶರತ್ ಬಚ್ಚೇಗೌಡ ಊವಾಚ

    ಹೊಸಕೋಟೆ: ಉಪಚುನಾವಣೆಯಲ್ಲಿ ಸ್ವಾಭಿಮಾನಕ್ಕೆ ಬೆಲೆ ನೀಡಿದ ಮತದಾರರು ಹಾಗೂ ಕಾರ್ಯಕರ್ತರ ಶ್ರಮಕ್ಕೆ ಸದಾ ಚಿರಋಣಿಯಾಗಿರುವೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

    ನಗರದ ಶ್ರೀವಾರಿ ಕಲ್ಯಾಣ ಮಂಟಪದಲ್ಲಿ ಸ್ವಾಭಿಮಾನಿ ಕಾರ್ಯಕರ್ತರಿಗೆ ಸನ್ಮಾನ ಸಮಾರಂಭ ಹಾಗೂ ಟೌನ್ ಬ್ಯಾಂಕ್ ಚುನಾವಣೆ ಪ್ರಯುಕ್ತ ಬುಧವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

    ಒಗ್ಗಟ್ಟಿನಿಂದ ಗೆಲುವಿದೆ ಎಂದು ತಾಲೂಕಿನ ಮತದಾರರು ತೋರಿಸಿಕೊಟ್ಟಿದ್ದಾರೆ. ಆದರೆ ಪ್ರತಿ ಪಕ್ಷದವರು ನಮ್ಮ ವಿರುದ್ಧ ಇಲ್ಲ ಸಲ್ಲದ ಆರೋಪಗಳ ಜತೆಗೆ ತಾಲೂಕಿನ ಅಭಿವೃದ್ಧಿ ಕುಂಠಿತಗೊಳಿಸಲು ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ದೂರಿದರು.
    ಸರ್ಕಾರ ನಮ್ಮ ಪರ ಇಲ್ಲದಿದ್ದರೂ ಅಧಿಕಾರಿಗಳು, ಜನತೆ ನಮ್ಮ ಪರ ಇದ್ದು, ತಾಲೂಕಿನ ಸಮಗ್ರ ಅಭಿವೃದ್ಧಿಗೆ ಕೈಜೋಡಿಸಲಿದ್ದಾರೆ ಎಂದರು.

    ಮುಂಬರುವ ದಿ ಟೌನ್ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಐದು ವರ್ಷಗಳ ಆಡಳಿತದಿಂದ ಬ್ಯಾಂಕ್ ಷೇರುದಾರರು ಹಾಗೂ ಠೇವಣಿದಾರರು ಸೂಕ್ತ ಸೌಲಭ್ಯಗಳಿಲ್ಲದೆ ತೊಂದರೆಗೆ ಒಳಪಟಿದ್ದಾರೆ. ಬ್ಯಾಂಕ್‌ನಿಂದ ಇಂದಿಗೂ ಸಾವಿರಾರು ಜನ ಈ ಬ್ಯಾಂಕಿನಿಂದ ಸಹಾಯ ಪಡೆದಿದ್ದು, ಆರ್ಥಿಕ ಹಾಗೂ ವ್ಯಾವಹಾರಿಕವಾಗಿ ಪ್ರಯೋಜನ ಪಡೆದಿದ್ದಾರೆ, ಇನ್ನು ಮುಂದಿನ ದಿನಗಳಲ್ಲಿ ಹೆಚ್ಚಿನ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸವಾಗಬೇಕಿದೆ ಎಂದು ಹೇಳಿದರು.

    ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ಬ್ಯಾಂಕ್‌ನಲ್ಲಿ ಸುಮಾರು 18 ಸಾವಿರಕ್ಕೂ ಹೆಚ್ಚು ಷೇರುದಾರರು ಹಾಗೂ ಠೇವಣಿದಾರರಿದ್ದಾರೆ. ಆದರೆ ಮತಚಲಾಯಿಸಲು ಕೆಲವರಿಗೆ ಮಾತ್ರ ಅವಕಾಶ ನೀಡಿ ಅವೈಜ್ಞಾನಿಕವಾಗಿ ನಿಯಮ ಜಾರಿಮಾಡಿ ಸದಸ್ಯರಿಗೆ ಹಾಗೂ ಷೇರುದಾರರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ದೂರಿದರು.

    25 ಸಾವಿರ ರೂ. ಇದ್ದ ಮರಣ ನಿಧಿಯನ್ನು 15 ಸಾರಿತ ರೂ.ಗೆ ಇಳಿಕೆ ಮಾಡಿರುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಬ್ಯಾಂಕಿನ ಸದಸ್ಯರು ಜಾಗೃತರಾಗಿ ಉತ್ತಮ ಆಡಳಿತ ನೀಡುವವರನ್ನು ಬೆಂಬಲಿಸಬೇಕು ಎಂದರು.

    ಮುಖಂಡರಾರ ಬಿ.ವಿ. ಬೈರೇಗೌಡ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸುನೀಲ್, ಪುರಸಭೆ ಮಾಜಿ ಅಧ್ಯಕ್ಷ ನಾಗರಾಜ್, ಮುಖಂಡರಾದ ಇಂತಿಯಾಜ್ ಪಾಷ, ಕ್ಯಾಸೆಟ್ ನಾಗರಾಜ್, ಟೌನ್ ಬ್ಯಾಂಕ್ ಮಾಜಿ ಅಧ್ಯಕ್ಷ ನಟರಾಜ್ ಇತರರು ಹಾಜರಿದ್ದರು.

    ಮೊಳಕೆಯಲ್ಲಿ ಚಿವುಟಿಹಾಕಲು ನಾನಾ ಶಕ್ತಿಗಳು ನನ್ನ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ, ನಾನು ಸೌಮ್ಯ ಸ್ವಭಾವದವನು. ಆದರೆ ಅಂದುಕೊಂಡ ಕೆಲಸವನ್ನು ಮಾಡುವುದರಲ್ಲಿ ನಾನು ಹಠವಾದಿ.
    ಶರತ್ ಬಚ್ಚೇಗೌಡ
    ಶಾಸಕ, ಹೊಸಕೋಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts