More

    ಸ್ವನಿಧಿ ಯೋಜನೆಯಲ್ಲಿ ಕರ್ನಾಟಕಕ್ಕೆ ಐದನೇ ಸ್ಥಾನ: ಮಾಜಿ ಶಾಸಕ ಕೆ.ರಾಮದಾಸ್ ಮಾಹಿತಿ

    ಮಂಡ್ಯ: ಮಹತ್ವಾಕಾಂಕ್ಷೆಯ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಲ್ಲಿ ದೇಶದಲ್ಲೇ ಕರ್ನಾಟಕ 5ನೇ ಸ್ಥಾನದಲ್ಲಿದೆ ಎಂದು ಯೋಜನೆಯ ರಾಜ್ಯ ಸಂಚಾಲಕ ಕೆ.ರಾಮದಾಸ್ ತಿಳಿಸಿದರು.
    ಯೋಜನೆಯಡಿ ರಾಜ್ಯದ 311 ನಗರ, ಪಟ್ಟಣ ಪ್ರದೇಶಗಳ ಸ್ಥಳೀಯ ಸಂಸ್ಥೆಗಳಿಗೆ ಆದೇಶ ಹೊರಡಿಸಿದೆ. ಅಂತೆಯೇ ರಾಜ್ಯದಲ್ಲಿ 3.31 ಲಕ್ಷ ಜನರಿಗೆ ನೀಡುವ ಗುರಿ ಹೊಂದಲಾಗಿದ್ದು, ಈಗಾಗಲೇ 3.8 ಲಕ್ಷ ಜನರಿಗೆ ನೀಡಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ಗುರಿ ಸಾಧನೆ ಮಾಡಲಾಗುವುದು. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
    ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ 555 ಕೋಟಿ ರೂ ಬಿಡುಗಡೆ ಮಾಡಿದ್ದು, ಈ ಯೋಜನೆಗೆ ವ್ಯಾಪಾರಸ್ಥರ ಜತೆಗೆ ಅಸಂಘಟಿತ ಕಾರ್ಮಿಕರನ್ನು ತರುವ ಉದ್ದೇಶ ಹೊಂದಲಾಗಿದೆ. ಇನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಯೋಜನೆ ಜಾರಿಯಲ್ಲಿದ್ದು, ದೇಶದ 4.86 ಜನರಿಗೆ 9 ಸಾವಿರ ಕೋಟಿ ರೂಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಜಿಲ್ಲೆಯಲ್ಲಿ 4181 ಜನರು ಅರ್ಜಿ ಸಲ್ಲಿಸಿದ್ದು, ಈ ಪೈಕಿ 4065 ಅರ್ಜಿಯನ್ನು ಶಿಫಾರಸು ಮಾಡಲಾಗಿದೆ. ಇದರಲ್ಲಿ 3795 ಜನರಿಗೆ ಸಾಲ ನೀಡುವ ಮೂಲಕ ಶೇ. 97ರಷ್ಟು ಸಾಧನೆ ಮಡಲಾಗಿದೆ ಎಂದು ಮಾಹಿತಿ ನೀಡಿದರು.
    ಪ್ರಾರಂಭಿಕ ಹಂತದಲ್ಲಿ 10 ಸಾವಿರ ರೂಗಳ ಸ್ವನಿಧಿ ಯೋಜನೆಯ ಸಾಲ ವಿತರಿಸಲಾಗುವುದು. ಸಾಲ ಮರುಪಾವತಿ ಮಾಡಿದಲ್ಲಿ 20 ಸಾವಿರ ರೂ ಹಾಗೂ 50 ಸಾವಿರ ರೂಗೆ ಏರಿಕೆ ಮಾಡಲಾಗುವುದು. ಈ ಸಾಲವನ್ನು ನಿಗದಿತ ಸಮಯದೊಳಗೆ ಮರುಪಾವತಿ ಮಾಡಿದಲ್ಲಿ ಮುದ್ರಾ ಯೋಜನೆಗೆ ಪರಿವರ್ತನೆ ಮಾಡಿ 10 ಲಕ್ಷ ರೂವರೆಗೆ ಯಾವುದೇ ಗ್ಯಾರಂಟಿಗಳಿಲ್ಲದೆ ಸಾಲ ನೀಡಲಾಗುತ್ತದೆ. ಪ್ರಧಾನಮಂತ್ರಿ ಸ್ವನಿಧಿ, ಸಮೃದ್ಧಿ ತಕ್, ವಿಶ್ವಕರ್ಮ, ಅತ್ಮನಿರ್ಭರ, ಜೀವನ್ ಸುರಕ್ಷಾ ಸೇರಿದಂತೆ ವಿವಿಧ ಏಳು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಈ ಪೈಕಿ ಸ್ವನಿಧಿ ಯೋಜನೆಯಲ್ಲಿ ಇದುವರೆಗೆ ಬೀದಿ ಬದಿ ವ್ಯಾಪಾರಿಗಳು, ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ನೀಡಲಾಗುತ್ತಿತ್ತು. ಇದೀಗ ಮನೆ ಮನೆಗೆ ಪತ್ರಿಕೆ, ಹಾಲು ವಿತರಿಸುವವರು, ಇಸ್ತ್ರಿ ಮಾಡುವವರು, ಕ್ಯಾಟರಿಂಗ್, ಟೈಲರಿಂಗ್, ಮನೆ ಮನೆಗೆ ಆಹಾರ, ಇತರೆ ವಸ್ತುಗಳನ್ನು ವಿತರಣೆ ಮಾಡುವವರಿಗೆ ಸಾಲ ನೀಡಲಾಗುವುದು ಎಂದು ಹೇಳಿದರು.
    ಪ್ರಧಾನಮಂತ್ರಿ ಜೀವನ್ ಸುರಕ್ಷಾ ಯೋಜನೆಯಡಿ ಅಪಘಾತ, ಸ್ವಾಭಾವಿಕ ಸಾವು ಸಂಭವಿಸಿದಲ್ಲಿ 2 ಲಕ್ಷ ರೂ ಪರಿಹಾರ ವಿತರಿಸಲಾಗುತ್ತದೆ. ಮಾತೃವಂದನಾ ಯೋಜನೆಯಲ್ಲಿ ಗರ್ಭಿಣಿಯರಿಗೆ ಪ್ರತಿ ತಿಂಗಳು 5 ಸಾವಿರ ರೂ, ಹೆರಿಗೆಯಾದ ನಂತರ ತಾಯಂದಿರಿಗೆ ಪ್ರತಿ ತಿಂಗಳು 6 ಸಾವಿರ ರೂ ಅವರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂದ ಅವರು, ಬ್ಯಾಂಕುಗಳಲ್ಲಿ ಫಲಾನುಭವಿಗಳಿಗೆ ಸರಿಯಾದ ರೀತಿಯಲ್ಲಿ ಸಾಲ ನೀಡುತ್ತಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವರು ಸ್ವತಃ ಬ್ಯಾಂಕುಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ. ಸರ್ಕಾರ ನೀಡುವ ಹಣವನ್ನು ಈ ಯೋಜನೆಯಡಿ ಸಾಲ ವಿತರಿಸಬೇಕು. ಈ ಹಿನ್ನೆಲೆಯಲ್ಲಿ ಪ್ರತಿ ಬುಧವಾರ ಸಾಲಮೇಳ ಆಯೋಜಿಸುವಂತೆ ಸೂಚಿಸಲಾಗಿದ್ದು, ಎಲ್ಲ ಬ್ಯಾಂಕುಗಳಲ್ಲೂ ನಡೆಯಲಿದೆ ಎಂದು ವಿವರಿಸಿದರು.
    ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಮುಖಂಡರಾದ ಸಚ್ಚಿದಾನಂದ, ಅಶೋಕ್ ಜಯರಾಂ, ಸಿ.ಟಿ.ಮಂಜುನಾಥ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts