More

    ಸುವರ್ಣಾವತಿ ಜಲಾಶಯದಲ್ಲಿ ಜಲಸಾಹಸ ಕ್ರೀಡೆ

    ಚಾಮರಾಜನಗರ: ಯುವಜನರು ಅಂತರಾಷ್ಟ್ರೀಯ ಮಟ್ಟದ ಜಲಸಾಹಸ ಕ್ರೀಡೆಯಲ್ಲಿ ಬೆಳೆಯಲು ಜಿಲ್ಲಾ ಮಟ್ಟದ ಜಲಕ್ರೀಡೆ ಕಾರ್ಯಕ್ರಮವು ಸಹಕಾರಿಯಾಗಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಎಸ್. ಪೂವಿತಾ ತಿಳಿಸಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಚಾಮರಾಜನಗರ ತಾಲೂಕಿನ ಸುವರ್ಣಾವತಿ ಜಲಾಶಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಜಲಸಾಹಸ ಕ್ರೀಡೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

    ಜಲಸಾಹಸ ಕ್ರೀಡೆಯಲ್ಲಿ ಯುವಜನತೆಗೆ ಸಾಕಷ್ಟು ಅವಕಾಶಗಳಿವೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಜಲಸಾಹಸ ಕ್ರೀಡೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಜಲಸಾಹಸ ಕ್ರಿಡೆಯಿಂದ ಪ್ರವಾಸೋದ್ಯಮ ಅಭಿವೃದ್ದಿಯು ಆಗಲಿದೆ. ಇದರಿಂದ ಯುವಕರಿಗೆ ಉದ್ಯೋಗ ಅವಕಾಶಗಳು ಲಭಿಸಲಿದೆ ಎಂದರು.

    ಜಲ ಕ್ರೀಡೆಯ ಬಗ್ಗೆ ಸ್ಥಳೀಯರಿಗೆ ಅರಿವು ಮೂಡಿಸಲು ಇಂತಹ ಕಾರ್ಯಕ್ರಮ ಅನುಕೂಲವಾಗಲಿದೆ. ಜಿಲ್ಲೆಯ ಯುವಜನತೆ ಜಲ ಕ್ರೀಡೆಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವಂತಾಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಎಸ್. ಪೂವಿತಾ ಅವರು ತಿಳಿಸಿದರು.

    ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಅವರು ಮಾತನಾಡಿ ಜಿಲ್ಲೆಯಲ್ಲಿ ಜಲಕ್ರೀಡೆ ಕಾರ್ಯಕ್ರಮವು ಮೊದಲ ಬಾರಿಗೆ ಆಯೋಜಿಸಲಾಗಿದೆ. ಜಿಲ್ಲೆಯಲ್ಲಿ ಜಲಸಾಹಸ ಕ್ರೀಡೆಗೆ ಉತ್ತಮ ತಾಣಗಳಿವೆ. ಬೆಟ್ಟ ಗುಡ್ಡಗಳು ಹೆಚ್ಚಾಗಿ ಇರುವುದರಿಂದ ಟ್ರಕ್ಕಿಂಗ್, ಜಿಪ್ ಲೈನ್ ನಂತಹ ಸಾಹಸ ಚಟುವಟಿಕೆಗಳಿಗೆ ಸೂಕ್ತವಾಗಿದೆ ಎಂದರು.

    ಅಟ್ಟುಗೂಳಿಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಿ. ವಿಮಲಾ ಅವರು ಮಾತನಾಡಿ ಜಲ ಕ್ರೀಡೆಯ ಉದ್ದೇಶವೂ ಉತ್ತಮವಾಗಿದ್ದು, ಯುವಜನರ ಸಬಲೀಕರಣಕ್ಕೆ ಪೂರಕ ಕಾರ್ಯಕ್ರಮವಾಗಿದೆ. ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ನೀಡುವ ನಿಟ್ಟಿನಲ್ಲಿ ಕೆಲಸವಾಗಬೇಕಿದೆ ಎಂದು ತಿಳಿಸಿದರು.

    ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಎಸ್. ಮರಿಸ್ವಾಮಿ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಆರ್. ಅನಿತಾ, ಜನರಲ್ ತಿಮ್ಮಯ್ಯ ರಾಷ್ಟ್ರೀಯ ಅಕಾಡೆಮಿಯ ವ್ಯವಸ್ಥಾಪಕರಾದ ಮುನಿರಾಜು, ಶಬ್ಬೀರ್, ದಿನೇಶ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    ಗಣ್ಯರಾದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಎಸ್. ಪೂವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಇತರರು ಜಲಾಶಯದಲ್ಲಿ ಬೋಟ್ ನಲ್ಲಿ ಪ್ರಯಾಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅಭಿನಂದಿಸಿದರು.

    ತದನಂತರ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಯುವಜನರು ಲೈಫ್ ಜಾಕೆಟ್ ಧರಿಸಿ ಬೋಟ್‌ಗಳ ಮೂಲಕ ಜಲಾಶಯದಲ್ಲಿ ಸಂಚಾರ ನಡೆಸಿ ಸಂತಸ ವ್ಯಕ್ತಪಡಿಸಿದರು. ಜಲಸಾಹಸ ಕ್ರೀಡೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts