ಬೆಳಗಾವಿ ಅಧಿವೇಶನಕ್ಕೆ ಕೈ ಶಾಸಕರು ಬಂಕ್?

ಬೆಂಗಳೂರು: ಸಂಪುಟ ವಿಸ್ತರಣೆ, ನಿಗಮ-ಮಂಡಳಿ ನೇಮಕ ಮಾಡಲು ಮೀನಮೇಷ ಎಣಿಸುತ್ತಿರುವ ಪಕ್ಷದ ನಾಯಕರಿಗೆ ಸೆಡ್ಡು ಹೊಡೆಯಲು ಕಾಂಗ್ರೆಸ್​ನ ಹದಿನಾರಕ್ಕೂ ಹೆಚ್ಚು ಶಾಸಕರು ಸಜ್ಜಾಗಿದ್ದು, ಡಿ.10ರಿಂದ ಆರಂಭವಾಗುವ ಬೆಳಗಾವಿ ಅಧಿವೇಶ ನಕ್ಕೆ ಸಾಮೂಹಿಕ ಗೈರಾಗಲು ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್ ಉನ್ನತ ಮೂಲಗಳು ತಿಳಿಸಿವೆ.

ಅಧಿವೇಶನದಲ್ಲಿ ಪ್ರಮುಖ ವಿಧೇಯಕಗಳು ಅಂಗೀಕಾರವಾಗಬೇಕಿದ್ದು, ಓಟಿಂಗ್ ಸಂದರ್ಭ ಆಡಳಿತ ಪಕ್ಷದ ಶಾಸಕರ ಕೊರತೆಯುಂಟಾಗಿ ಸರ್ಕಾರವನ್ನು ಮುಜುಗರಕ್ಕೆ ತಳ್ಳುವುದು ಅತೃಪ್ತ ಕೈ ಶಾಸಕರ ಯೋಜನೆ. ‘ಬೆಳಗಾವಿ ಅಧಿವೇಶನದಿಂದ ದೂರ ಉಳಿಯೋಣ, ಯಾವುದೇ ಒತ್ತಡಕ್ಕೂ ಮಣಿಯದಿರೋಣ’ ಎಂದು ಶಾಸಕರ ತಂಡ ನಿರ್ಧರಿಸಿದೆ. ಗೈರಾಗುವ 16 ಶಾಸಕರ ಪಟ್ಟಿಯಲ್ಲಿ ಬೆಂಗಳೂರಿನ ಎಂಟಕ್ಕೂ ಹೆಚ್ಚು ಶಾಸಕರಿದ್ದಾರೆಂಬುದು ವಿಶೇಷ.

ಕಳೆದ 2 ದಿನಗಳಲ್ಲಿ ಸಚಿವಾಕಾಂಕ್ಷಿ ಶಾಸಕರಿಗೆ ದೂರವಾಣಿ ಮೂಲಕ ಗೈರು ಹಾಜರಾಗಬೇಕೆಂಬ ಸಂದೇಶಗಳು ರವಾನೆಯಾಗಿವೆ. ಈ ವಿಚಾರವನ್ನು ಮಾಜಿ ಸಚಿವ ಹಾಗೂ ಹಾಲಿ ಶಾಸಕರೊಬ್ಬರು ವಿಜಯವಾಣಿಗೆ ಖಚಿತಪಡಿಸಿ ದ್ದಾರೆ. ಅಧಿವೇಶನಕ್ಕೆ ನಾವೇಕೆ ಹೋಗಬೇಕು ಎಂದು ಮೂರು ಕರೆ ಬಂದಿದ್ದು ನಿಜ. ಅವರ ವಾದವೂ ಸತ್ಯ ಎನಿಸುತ್ತಿದೆ. ಮುಂದೇನು ಮಾಡಬೇಕೆಂದು ನಿರ್ಧರಿಸಿಲ್ಲ. ಅಧಿವೇಶನದೊಳಗೆ ಸಂಪುಟ ವಿಸ್ತರಿಸಲು ಸಾಧ್ಯತೆ ಇದೆ. ಸಂಪುಟ ವಿಸ್ತರಿಸದೆ ಹೋದಲ್ಲಿ ನಂತರವಷ್ಟೇ ನಿರ್ಧಾರ ಎಂದು ಅವರು ವಿವರಿಸಿದರು. ‘ಈವರೆಗೆ 5 ಬಾರಿ ವಿಸ್ತರಣೆ ಮುಂದೂಡಿದ್ದಾರೆ. ಇದಕ್ಕೆ ಹೇಳುವ ನೆಪ ಹಾಸ್ಯಾಸ್ಪದ’ ಎಂಬ ಕಟು ಮಾತು ಸಚಿವಾಕಾಂಕ್ಷಿಗಳಲ್ಲಿದ್ದು, ಯಾವುದೇ ಸಂದರ್ಭ ಅಸಮಾಧಾನ ಹೊರಬೀಳುವ ಸಾಧ್ಯತೆ ಇದೆ.

ಮತ್ತೆ ಕಿಡಿ

ಸಂಪುಟ ವಿಸ್ತರಣೆ ಅಧಿವೇಶನದೊಳಗೆ ನಡೆಯುವುದು ಅನುಮಾನ ಎಂಬ ಮಾತು ಕಾಂಗ್ರೆಸ್ ಒಳಗೆ ಹರಿದಾಡಿದೆ. ಬೇರೆಯವರು ಅಧಿಕಾರ ನಡೆಸಲು ನಾವೇಕೆ ಬೆಂಬಲವಾಗಿ ನಿಲ್ಲಬೇಕು? ಎಂಬ ಸ್ಪಷ್ಟ ವಾದದ ಮೂಲಕ ಶಾಸಕರನ್ನು ಗುಂಪು ಗೂಡಿಸುವ ಕೆಲಸ ನಡೆದಿದೆ. ಈ ಬೆಳವಣಿಗೆ ಕಾಂಗ್ರೆಸ್ ಪ್ರಮುಖ ನಾಯಕರ ಕಿವಿಗೂ ತಲುಪಿದ್ದು, ಅಧಿವೇಶನದಲ್ಲಿ ಮುಜುಗರ ಆಗಬಾರದೆಂದರೆ ಸಂಪುಟ ವಿಸ್ತರಣೆ ಶೀಘ್ರ ಮುಗಿಸುವುದೇ ಒಳಿತು ಎಂಬ ಬಗ್ಗೆ ಚರ್ಚೆಯನ್ನೂ ನಡೆಸಿದ್ದಾರೆಂದು ತಿಳಿದುಬಂದಿದೆ. ಒಂದೊಮ್ಮೆ ಸಂಪುಟ ವಿಸ್ತರಣೆ ಬಳಿಕ ಏಳಬಹುದಾದ ಅಸಮಾಧಾನ ತಡೆಯಲು ಪಕ್ಷಕ್ಕೆ ಲಭ್ಯವಿರುವ ಆರು ಸ್ಥಾನದ ಪೈಕಿ ನಾಲ್ಕನ್ನು ತುಂಬಬಹುದು ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.

ಸರ್ಕಾರ ಟೇಕಾಫ್ ಆಗಿಲ್ಲ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಆಗದಿರುವುದಕ್ಕೆ ಶಾಸಕರಲ್ಲಿ ತೀವ್ರ ಅಸಮಾಧಾನವಿದ್ದು, ಬೇಗ ಮಾಡಿದರೆ ಒಳ್ಳೆಯದು ಎಂದು ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು. ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲ. ನಿಧಾನವಾಗಿದೆ. ಸ್ವಲ್ಪ ಕಾಲಾವಕಾಶ ಬೇಕು, ಟೇಕಾಫ್ ಆಗುತ್ತದೆ. ಸಿದ್ದರಾಮಯ್ಯ ಸರ್ಕಾರದಲ್ಲಿ -ಠಿ;40 ಕೋಟಿ ಅನುದಾನ ಬಂದಿದ್ದರೆ. ಮೈತ್ರಿ ಸರ್ಕಾರದಲ್ಲಿ 10 ಕೋಟಿ ರೂ. ಸಿಗುತ್ತಿದೆ ಎಂದರು. ಶುಕ್ರವಾರ ರಮೇಶ್ ಜಾರಕಿಹೊಳಿ ಭೇಟಿ ಮಾಡಿ, ವರ್ಗಾವಣೆ ಹಾಗೂ ಮೀಸಲಾತಿ ವಿಚಾರವಾಗಿ ಮಾತನಾಡಿದ್ದೇನೆ ಎಂದ ಸತೀಶ್, ರಮೇಶ್ ಬೆಳಗಾವಿಯಲ್ಲಿ ಮಾಡಬೇಕಾಗಿದ್ದ ಕೆಲಸವನ್ನು ಡಿ.ಕೆ.ಶಿವಕುಮಾರ್ ಮಾಡಿದ್ದಾರೆ. ಡಿಕೆಶಿ ಸಚಿವರಾಗಿ ಬೆಳಗಾವಿಗೆ ಭೇಟಿ ನೀಡಿದ್ದಾರಷ್ಟೇ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.