ಐಎನ್‌ಎಸ್ ಕೊಚ್ಚಿಯಿಂದಲೇ ಅಪಘಾತ: ಪ್ರಮೋದ್

ಉಡುಪಿ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ ಸುವರ್ಣ ತ್ರಿಭುಜ ಬೋಟ್‌ನ ಅವಶೇಷ 139 ದಿನಗಳ ನಂತರ ಪತ್ತೆಯಾದರೂ ಅವಘಡ ಹೇಗೆ ನಡೆದಿದೆ ಎಂಬ ಪ್ರಶ್ನೆಗೆ ಅಧಿಕೃತ ಉತ್ತರ ಲಭಿಸಿಲ್ಲ. ನೌಕಾಪಡೆಯ ಐಎನ್‌ಎಸ್ ಕೊಚ್ಚಿ ಡಿಕ್ಕಿಯಾಗಿಯೇ ದೋಣಿ ಮುಳುಗಿದೆ ಎಂಬ ವಾದವೇ ಗಟ್ಟಿಯಾಗಿರುವ ನಡುವೆಯೇ ಅದೇ ಹೊತ್ತಿನಲ್ಲಿ ಸಾಗಿದ ಇನ್ನೊಂದು ನೌಕೆಯ ಮೇಲೂ ಸಂಶಯಗಳಿವೆ.

ಸುವರ್ಣ ತ್ರಿಭುಜ ಬೋಟ್ ಹೊರಗಿನ ಎಲ್ಲ ಸಂಪರ್ಕ ಕಳೆದುಕೊಂಡ ಸಮಯದಲ್ಲಿ ಆ ಪ್ರದೇಶದಲ್ಲಿ ಐಎನ್‌ಎಸ್ ಕೊಚ್ಚಿ ಹಾಗೂ ಮರ್ಚಂಟ್ ವೆಸೆಲ್ ಹಾರ್ವೆಸ್ಟ್ ಸಾಗಿರುವುದು ಜಿಪಿಎಸ್ ದಾಖಲೆಯಲ್ಲಿದೆ. ಭಾರತೀಯ ನೌಕಾಪಡೆ ಕಾರವಾರ ವಿಭಾಗದ ಸ್ಟಾಫ್ ಆಫೀಸರ್ ಕಮಾಂಡರ್ ಕೆ.ಸಿ. ಅರುಣ್ ಬಾಬು ಅವರು ಉತ್ತರ ಕನ್ನಡ ಜಿಲ್ಲೆ, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸರಕು ಸಾಗಣೆ ಹಡಗು ಸಾಗಿರುವ ಬಗ್ಗೆ ತಾಂತ್ರಿಕ ತನಿಖಾ ಆಧಾರದಲ್ಲಿ ಜನವರಿಯಲ್ಲೇ ವರದಿ ನೀಡಿದ್ದರು ಎಂದು ಈ ಕುರಿತ ದಾಖಲೆಯನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದ್ದಾರೆ.

ಎರಡು ಹಡಗುಗಳು ಬೋಟ್ ಸಾಗುತ್ತಿದ್ದ ಪ್ರದೇಶದಲ್ಲೇ ಸಾಗಿದ್ದರೂ, ಹಾನಿಯಾಗಿರುವುದು ಐಎನ್‌ಎಸ್ ಕೊಚ್ಚಿ ಹಡಗಿಗೆ ಮಾತ್ರ. ಹಾಗಾಗಿ ಈ ಹಡಗೇ ಬೋಟ್‌ಗೆ ಡಿಕ್ಕಿ ಹೊಡೆದಿರುವುದು ಸ್ಪಷ್ಟ ಎಂದು ತಿಳಿಸಿದರು.

25 ಲಕ್ಷ ರೂ. ಪರಿಹಾರ ಬೇಡಿಕೆ: ನೌಕಾಪಡೆ ತಪ್ಪೊಪ್ಪಿಕೊಂಡು ಮೀನುಗಾರರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು, ವಿಮೆ ಪರಿಹಾರಕ್ಕೆ ವ್ಯವಸ್ಥೆ ಮಾಡಬೇಕು. ಈ ಬಗ್ಗೆ ರಕ್ಷಣಾ ಸಚಿವೆ, ಪ್ರಧಾನ ಮಂತ್ರಿ, ರಾಷ್ಟ್ರಪತಿಗಳಿಗೆ ಪತ್ರ ಬರೆಯುತ್ತೇನೆ. ಸ್ಪಂದಿಸದಿದ್ದರೆ ನ್ಯಾಯಾಂಗ ತನಿಖೆಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ಮಾಡುತ್ತೇನೆ ಎಂದು ಪ್ರಮೋದ್ ಹೇಳಿದರು.

ಭಾರತೀಯ ನೌಕಾಪಡೆಯ ಐಎನ್‌ಎಸ್ ಕೊಚ್ಚಿ ಹಡಗಿಗೆ ಅವಘಡದಿಂದ ಹಾನಿಯಾಗಿರುವ ಚಿತ್ರ ನೌಕಾಪಡೆಯವರಿಂದಲೇ ನನಗೆ ದೊರೆತಿದೆ. ಡಿ.15-16ರಂದು ಘಟನೆ ನಡೆದಿದೆ. ಮಹಾರಾಷ್ಟ್ರ ಬಂದರಿನಲ್ಲಿ ಅಧಿಕಾರಿಗಳು ಹಾನಿಯಾದ ಹಡಗನ್ನು ಪರಿಶೀಲಿಸಿದ್ದಾರೆ. ಘಟನೆ ನಡೆದ ದಿನ, ಜಿಪಿಎಸ್ ಸಂಪರ್ಕ, ಲೊಕೇಶನ್, ಬೋಟ್ ಸಂಪರ್ಕ ಕಡಿತಗೊಂಡ ಅವಧಿ ಎಲ್ಲವು ತಾಳೆಯಾಗುತ್ತಿದೆ. ನೌಕಾಪಡೆ ಹಡಗು ಡಿಕ್ಕಿಯಾಗಿ 7 ಮೀನುಗಾರರು ಸತ್ತರು ಎಂದು ಸುದ್ದಿಯಾದರೆ ಕೇಂದ್ರ ಸರ್ಕಾರ, ನೌಕಾಪಡೆಗೆ ಹಿನ್ನಡೆಯಾಗುತ್ತದೆ. ಚುನಾವಣೆ ಸಮಯದಲ್ಲಿ ಮೀನುಗಾರರು ಬಿಜೆಪಿ ವಿರುದ್ಧ ತಿರುಗಿ ಬೀಳಬಹುದು ಎಂದು ಮುಚ್ಚಿಡಲಾಗಿದೆ ಎಂದು ಆರೋಪಿಸಿದರು.

ಐಎನ್‌ಎಸ್ ಕೊಚ್ಚಿ ನೌಕೆ ಮುನ್ನಡೆಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಮುಳುಗಿರುವ ಸುವರ್ಣ ತ್ರಿಭುಜ ಬೋಟನ್ನು ಮೇಲಕ್ಕೆತ್ತಿ ತಾಂತ್ರಿಕ ಆಯಾಮದಲ್ಲೂ ತನಿಖೆ ನಡೆಯಬೇಕು. ಬಿಜೆಪಿಯವರು ನಿರಂತರವಾಗಿ ಸುಳ್ಳು ಹೇಳಿ ಮೀನುಗಾರರ ದಿಕ್ಕು ತಪ್ಪಿಸುತ್ತಿದ್ದಾರೆ. ಸಂಸದೆ, ಶಾಸಕರು ನಾಟಕ ಬಿಟ್ಟು ಕೇಂದ್ರದಿಂದ ಗರಿಷ್ಠ ಪರಿಹಾರಕ್ಕೆ ಪ್ರಯತ್ನಿಸಲಿ ಎಂದು ಆಗ್ರಹಿಸಿದರು.
ಕಾಂಗ್ರೆಸ್ ಮುಖಂಡರಾದ ಸತೀಶ್ ಅಮೀನ್ ಪಡುಕೆರೆ, ಭಾಸ್ಕರ್‌ರಾವ್ ಕಿದಿಯೂರು, ಜನಾರ್ದನ ಭಂಡಾರ್ಕರ್, ಜೆಡಿಎಸ್ ಅಧ್ಯಕ್ಷ ಯೋಗೀಶ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.

ನೌಕಾಪಡೆ ಮೇಲೆ ಗೌರವವಿದೆ: ಗಡಿ ಕಾಯುವ ಭಾರತೀಯ ಸೇನೆ, ನೌಕಾಪಡೆ ಮೇಲೆ ಅಪಾರ ಗೌರವವಿದೆ. ಹಾಗೆಯೇ ಮೀನುಗಾರರ ಹಿತಾಸಕ್ತಿ ಕಾಯುವುದು ಮುಖ್ಯ. ಇದು ಉದ್ದೇಶಪೂರ್ವಕವಲ್ಲ, ಆಕಸ್ಮಿಕವಾಗಿ ನಡೆದ ಅಪಘಾತ. ಆದರೆ ನೌಕಾಪಡೆ ವಿಷಯ ಮುಚ್ಚಿಟ್ಟಿರುವುದು ಅಪರಾಧ. ಮೀನುಗಾರರ ಸಾವಿಗೆ ಬೆಲೆ ಇಲ್ಲವೇ? ಅವರ ಕುಟುಂಬಕ್ಕೆ ಯಾರು ದಿಕ್ಕು ಎಂದು ಪ್ರಮೋದ್ ಪ್ರಶ್ನಿಸಿದರು.

ಅಧಿಕೃತ ಮಾಹಿತಿ ಕೋರಿ ನೌಕಾಪಡೆಗೆ ಎಸ್‌ಪಿ ಪತ್ರ: ನಾಪತ್ತೆಯಾದ ಮಲ್ಪೆ ಸುವರ್ಣ ತ್ರಿಭುಜ ಬೋಟ್‌ನ ಅವಶೇಷ ಸಿಕ್ಕಿರುವ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಂತೆ ಕಾರವಾರ ನೌಕಾನೆಲೆ ನೌಕಾಪಡೆ ಅಧಿಕಾರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಪತ್ರ ಬರೆದಿದ್ದಾರೆ. ಶಾಸಕ ಕೆ.ರಘುಪತಿ ಭಟ್ ಮತ್ತು ನಾಪತ್ತೆಯಾದ ಮೀನುಗಾರರ ಸಂಬಂಧಿಕರು, ಮೀನುಗಾರ ಮುಖಂಡರ ತಂಡ ಮಲ್ಪೆ ಸುವರ್ಣ ತ್ರಿಭುಜ ಬೋಟ್ ಪತ್ತೆ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದು, ಅವಶೇಷ ಸಿಕ್ಕಿರುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಟ್ವಿಟರ್‌ನಲ್ಲೂ ನೇವಿ ಮಾಹಿತಿ ನೀಡಿದೆ. ಈ ಬಗ್ಗೆ ಅಧಿಕೃತ ವರದಿ ನೀಡುವಂತೆ ಎಸ್‌ಪಿ ಕೋರಿದ್ದಾರೆ.

ಮನೆಯವರಿಗೆ ಇನ್ನೂ ಗೊತ್ತಿಲ್ಲ: ಬೋಟ್ ಅವಶೇಷ ಸಿಕ್ಕಿದರೂ ಕುಟುಂಬಿಕರಿಗೆ ಇನ್ನೂ ವಿಚಾರ ತಿಳಿದಿಲ್ಲ. ಆಘಾತಗೊಳ್ಳುತ್ತಾರೆ ಎಂಬ ಕಾರಣಕ್ಕೆ ಬಡಾನಿಡಿಯೂರಿನ ಚಂದ್ರಶೇಖರ್ ಕೋಟ್ಯಾನ್ ಅವರ ಪತ್ನಿಗೆ ಮತ್ತು ದಾಮೋದರ್ ಸಾಲ್ಯಾನ್ ಅವರ ತಂದೆ, ತಾಯಿ, ಪತ್ನಿ ಅವರಿಗೆ ಮಾಹಿತಿ ನೀಡಿಲ್ಲ. ತಮ್ಮವರು ಇಂದಲ್ಲ ನಾಳೆ ವಾಪಸ್ ಬರಬಹುದು ಎಂಬ ನಿರೀಕ್ಷೆಯಲ್ಲೇ ಮನೆಯವರು ಕಾಯುತ್ತಿದ್ದಾರೆ. ಸರಿಯಾಗಿ ಊಟ, ತಿಂಡಿ ಮಾಡದೆ ಮೌನಕ್ಕೆ ಶರಣಾದ ಕುಟುಂಬಗಳ ನೋವಿನ ಕಥೆ ಮನಕಲುಕುತ್ತಿದೆ.

ಮೀನುಗಾರರಿಂದ ರಕ್ಷಣಾ ಸಚಿವರ ಭೇಟಿಗೆ ಸಿದ್ಧತೆ: ಮಲ್ಪೆ ಮೀನುಗಾರರ ಸಂಘದ ಮುಖಂಡರು ಶುಕ್ರವಾರ ಶಾಸಕ ರಘುಪತಿ ಭಟ್ ಉಪಸ್ಥಿತಿಯಲ್ಲಿ ಸಭೆ ನಡೆಸಿದ್ದು, ಮೇ 16ರೊಳಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಮಾಡುವ ಬಗ್ಗೆ ನಿರ್ಣಯ ತೆಗೆದುಕೊಂಡಿದ್ದಾರೆ. ಬೋಟು ಮುಳುಗಡೆಗೆ ಕಾರಣ, ಸಮಗ್ರ ತನಿಖೆ, 7 ಮೀನುಗಾರರ ಕುಟುಂಬಕ್ಕೆ ಗರಿಷ್ಠ ಪರಿಹಾರ ನೀಡುವ ಬಗ್ಗೆ ಒತ್ತಾಯಿಸಲಾಗುವುದು. ಸ್ಪಂದಿಸದಿದ್ದರೆ ಮುಂದಿನ ಕ್ರಮದ ಬಗ್ಗೆ ಚಿಂತಿಸಲಾಗುವುದು ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ತಿಳಿಸಿದ್ದಾರೆ.