ಅವಶೇಷ ಪತ್ತೆ ಪೊಲೀಸರಿಗೆ ಮಾಹಿತಿ

< ಉಡುಪಿ ಎಸ್‌ಪಿಗೆ ಕಾರವಾರ ನೌಕಾನೆಲೆ ಅಧಿಕಾರಿ ದೃಢ *ಸುವರ್ಣ ತ್ರಿಭುಜ ಬೋಟ್ ನಾಪತ್ತೆ ಪ್ರಕರಣ>

ಉಡುಪಿ: ಮಲ್ಪೆ ಬಂದರಿನಿಂದ ಡಿ.13ರಂದು ಮೀನುಗಾರಿಕೆಗೆ ತೆರಳಿದ ಸುವರ್ಣ ತ್ರಿಭುಜ ಬೋಟ್ 2 ದಿನದ ಬಳಿಕ ಸಂಪರ್ಕ ಕಡಿದುಕೊಂಡಿದ್ದು, ಮಹಾರಾಷ್ಟ್ರದ ಮಾಲ್ವಾಣ್ ಪ್ರದೇಶದ ಸಮುದ್ರ ತೀರದಿಂದ 30 ಕಿ.ಮೀ. ದೂರದಲ್ಲಿ 60 ಮೀಟರ್ ಸಮುದ್ರದ ಆಳದಲ್ಲಿ ಅವಶೇಷಗಳು ಪತ್ತೆಯಾಗಿವೆ ಎಂದು ನೌಕಾಸೇನೆ ಕಾರವಾರ ನೇವಲ್ ಬೇಸ್ ಅಧಿಕಾರಿ ದೃಢಪಡಿಸಿದ್ದಾರೆ.

ಬೋಟ್ ಅವಶೇಷ ಪತ್ತೆಯಾಗಿರುವ ಕುರಿತು ಸ್ಪಷ್ಟ ಮಾಹಿತಿ ನೀಡುವಂತೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಮೇ 3ರಂದು ನೌಕಾಸೇನೆ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಇದಕ್ಕೆ ಉತ್ತರಿಸಿರುವ ಅಧಿಕಾರಿಗಳು, ಮೀನುಗಾರರ ಪತ್ತೆಗೆ ನಡೆಸಿದ ವಿಶೇಷ ಕಾರ್ಯಾಚರಣೆಯ ಕುರಿತ ವಿವರವನ್ನು ಸಲ್ಲಿಸಿದ್ದಾರೆ.

ಏ.30ರಿಂದ ಮೇ 2ರವರೆಗೆ ಶಾಸಕ ರಘುಪತಿ ಭಟ್ ಮತ್ತು ಮೀನುಗಾರರ ಕುಟುಂಬಿಕರೊಂದಿಗೆ ಕಾರ್ಯಾಚರಣೆ ನಡೆಸಿದ್ದು, ಕೊನೇ ದಿನ ಸಮುದ್ರದ ಸುಮಾರು 60 ಮೀಟರ್ ಆಳದಲ್ಲಿ ಬೋಟಿನ ಅವಶೇಷ ಪತ್ತೆಯಾಗಿದೆ. ಈ ಕಾರ್ಯಾಚರಣೆಗೆ ಐಎನ್‌ಎಸ್ ನಿರೀಕ್ಷಕ್, ಪರಿಣತ ಮುಳುಗು ತಜ್ಞರು ಹಾಗೂ ಸೈಡ್‌ಸ್ಕಾನ್ ಸೋನಾರ್ ತಂತ್ರಜ್ಞಾನ ಬಳಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ರಾಷ್ಟ್ರಪತಿ, ಪ್ರಧಾನಿಗೆ ಪತ್ರ: ಮಲ್ಪೆ ಮೂಲದ ಮೀನುಗಾರಿಕಾ ದೋಣಿಗೆ ಐಎನ್‌ಎಸ್ ಕೊಚ್ಚಿ ಡಿಕ್ಕಿ ಹೊಡೆದು ದುರಂತಕ್ಕೀಡಾಗಿರುವುದರ ಬಗ್ಗೆ ಸಂಶಯವಿದೆ. ಅವಘಡಕ್ಕೆ ಕಾರಣ ಯಾರು ಎಂಬುದನ್ನು ಪತ್ತೆ ಹಚ್ಚಲು ಸುಪ್ರೀಂ ಕೋಟ್‌ರ್ರ್ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ರಚಿಸಿ ತನಿಖೆ ನಡೆಸಬೇಕು, ಮೀನುಗಾರರ ಕುಟುಂಬಕ್ಕೆ ಕೇಂದ್ರ ಸರ್ಕಾರ ಮತ್ತು ನೌಕಾದಳದ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರಾಷ್ಟ್ರಪತಿ, ಪ್ರಧಾನ ಮಂತ್ರಿ, ರಕ್ಷಣಾ ಸಚಿವೆ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಕರ್ನಾಟಕ ಮುಖ್ಯಮಂತ್ರಿಗಳಿಗೆ ಇಮೇಲ್ ಮೂಲಕ ಪತ್ರ ಬರೆದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮನವಿ ಮಾಡಿದ್ದಾರೆ.