ಬೋಟ್‌ಗೆ ನೌಕಾಪಡೆ ಹಡಗು ಡಿಕ್ಕಿ

>

ಮಂಗಳೂರು/ಉಡುಪಿ: ಮಲ್ಪೆಯಿಂದ ಆಳ ಸಮುದ್ರ ಮೀನುಗಾರಿಕೆಗೆಂದು ತೆರಳಿ ಡಿ.15ರಿಂದ ನಾಪತ್ತೆಯಾದ ಸುವರ್ಣ ತ್ರಿಭುಜ ಬೋಟಿಗೆ ನೌಕಾಪಡೆಯ ನೌಕೆ ಡಿಕ್ಕಿಯಾಗಿರುವ ವಿಷಯ ಬಹುತೇಕ ಖಚಿತವಾಗಿದ್ದು, ಒಂದೆರಡು ದಿನಗಳಲ್ಲಿ ಸಂಪೂರ್ಣ ವಿವರಗಳು ಬಹಿರಂಗಗೊಳ್ಳುವ ಸಾಧ್ಯತೆಗಳಿವೆ.
ಸಾಕಷ್ಟು ಗೊಂದಲವಾಗಿದ್ದ ಈ ಪ್ರಕರಣದ ಬಗ್ಗೆ ಈಗ ಅಂತಿಮ ಸುಳಿವುಗಳು ಸಿಗುತ್ತಿವೆ. ನೌಕಾ ಪಡೆಯ ಯುದ್ಧ ಹಡಗು ಬೋಟಿಗೆ ಡಿಕ್ಕಿಯಾಗಿರುವುದು ತನಿಖೆಯಿಂದ ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಕಾರವಾರದಲ್ಲಿ ನೌಕಾಪಡೆಯ ಅಧಿಕಾರಿಗಳು, ಉಡುಪಿ, ಕಾರವಾರ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆದಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.

ನೌಕೆ ಡಿಕ್ಕಿಯಾಗಿರುವುದನ್ನು ನೌಕಾ ಪಡೆಯ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಇನ್ನೆರಡು ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ಮಾಹಿತಿ ಹೊರ ಬೀಳುವ ನಿರೀಕ್ಷೆ ಇದೆ ಮೂಲಗಳು ತಿಳಿಸಿವೆ.
ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಗೋವಾ ರಾಜ್ಯದ ಬೆತುಲ್ ಮೀನುಗಾರಿಕೆ ಸಮುದ್ರ ವ್ಯಾಪ್ತಿಯಲ್ಲಿ ಬೋಟಿನಿಂದ ಸೋರಿಕೆಯಾದ ಡೀಸೆಲ್ ಅಂಶ ಪತ್ತೆಯಾಗಿದೆ ಎಂಬ ವದಂತಿ ಹಿನ್ನೆಲೆ ಜಿಲ್ಲೆಯ ಪೊಲೀಸರು, ಕೋಸ್ಟ್‌ಗಾರ್ಡ್ ಪರಿಶೀಲನೆ ನಡೆಸಿದೆ. ಸೋಮವಾರ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫಾರ್ವರ್ಡ್ ಆದ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕೋಸ್ಟ್‌ಗಾರ್ಡ್ ಸಹಾಯದಿಂದ ಗೋವಾದ ಬೆತುಲ್ ಸಮುದ್ರ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಆದರೆ ಯಾವುದೇ ಕುರುಹು ಪತ್ತೆಯಾಗದ ಹಿನ್ನೆಲೆಯಲ್ಲಿ ತಂಡ ವಾಪಸ್ಸಾಗಿದೆ ಎಂದು ತಿಳಿದು ಬಂದಿದೆ.

ಐಎನ್‌ಎಸ್ ಕೊಚ್ಚಿ ಡಿಕ್ಕಿ?:  ಅರಬ್ಬಿ ಸಮುದ್ರ ವ್ಯಾಪ್ತಿ ಕಾರವಾರದಿಂದ ಮಹಾರಾಷ್ಟ್ರಕ್ಕೆ ಸಾಗುತ್ತಿದ್ದ ಐಎನ್‌ಎಸ್ ಕೊಚ್ಚಿ ಯುದ್ಧ ನೌಕೆಯ ತಳಭಾಗಕ್ಕೆ ಡಿ.16ರಂದು ಯಾವುದೋ ವಸ್ತು ತಾಗಿ ಸ್ವಲ್ಪ ಹಾನಿಯಾಗಿದ್ದು, ಮಹಾರಾಷ್ಟ್ರಕ್ಕೆ ತೆರಳಿ ಈ ಬಗ್ಗೆ ಪರಿಶೀಲಿಸಿದಾಗ ಹಾನಿಯಾಗಿರುವುದು ಗಮನಕ್ಕೆ ಬಂದಿತ್ತು. ಈ ಬಗ್ಗೆ ವೈರ್‌ಲೆಸ್ ಮೂಲಕ ಭಾರತೀಯ ನೌಕಾಪಡೆ, ಕೋಸ್ಟ್‌ಗಾರ್ಡ್‌ನೊಂದಿಗೆ ಸಂವಹನ ನಡೆಸಿ ಯಾವುದಾದರೂ ಬೋಟು ಹಾನಿಯಾದ ಬಗ್ಗೆ ವರದಿ ಇದೆಯೇ ಎಂದು ವಿಚಾರಿಸಿತ್ತು.

ಕೋಸ್ಟ್‌ಗಾರ್ಡ್ ಸಿಂಧುದುರ್ಗ, ರತ್ನಗಿರಿ ಮೀನುಗಾರಿಕೆ ಬಂದರಿಗೆ ತೆರಳಿ ಅಲ್ಲಿನ ಸ್ಥಳೀಯ ಮೀನುಗಾರರೊಂದಿಗೆ ವಿಚಾರಣೆ ನಡೆಸಿತ್ತು. ಯಾವುದಾದರೂ ಬೋಟ್ ಸಮುದ್ರದಲ್ಲಿ ಅವಘಡಕ್ಕೀಡಾಗಿದೆಯೇ ಎಂದು ಪ್ರಶ್ನಿಸಲಾಗಿತ್ತು. ಆಗ ಸ್ಥಳೀಯ ಮೀನುಗಾರರು ತಮ್ಮ ಬೋಟುಗಳು ಸುರಕ್ಷಿತವಾಗಿರುವ ಮಾಹಿತಿ ನೀಡಿದ್ದರು. ಈ ವಿದ್ಯಮಾನ ನಡೆದಿರುವುದು ಡಿ.20ರೊಳಗಿನ ದಿನಗಳಲ್ಲಿ. ಆದರೆ ಮಲ್ಪೆ ಮೀನುಗಾರಿಕಾ ಬೋಟು ನಾಪತ್ತೆಯಾಗಿರುವುದು ನಂತರವಷ್ಟೇ ಬಹಿರಂಗವಾಗಿತ್ತು. ಅದಾದ ಮೇಲೆ ಮಲ್ಪೆಯ ಮೀನುಗಾರರು, ಇಲ್ಲಿನ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಗಮನ ಸೆಳೆದಿದ್ದಾರೆ. ಬಳಿಕ ತನಿಖೆ ನಡೆದಿದ್ದು, ಮಲ್ಪೆಯ ಬೋಟು ನೌಕೆಗೆ ಡಿಕ್ಕಿಯಾಗಿರುವುದು ಖಚಿತವಾಗಿದೆ ಎಂದು ತಿಳಿದುಬಂದಿದೆ.

ಡಿಕ್ಕಿಯಾದ ನೌಕೆಯನ್ನೇ ಬಳಸಿ ಸೋನಾರ್ ಶೋಧ!: ಮೂಲಗಳ ಪ್ರಕಾರ ಸುವರ್ಣ ತ್ರಿಭುಜ ಬೋಟ್‌ಗೆ ಡಿಕ್ಕಿಯಾಗಿರುವುದು ಐಎನ್‌ಎಸ್ ಕೊಚ್ಚಿ ಎಂಬ ನೌಕೆ. ಬೋಟ್ ನಾಪತ್ತೆಯಾದ ಬಳಿಕ ಹಲವು ಆಯಾಮಗಳಲ್ಲಿ ತನಿಖೆ ನಡೆದಿತ್ತು. ಬೋಟುಗಳ ಮೂಲಕ ಮೀನುಗಾರರು, ಕೋಸ್ಟ್‌ಗಾರ್ಡ್, ಪೊಲೀಸರು ತನಿಖೆ ನಡೆಸಿದ್ದರು. ಹೆಲಿಕಾಪ್ಟರ್, ಕ್ರೂಸ್‌ಗಳನ್ನು ಬಳಸಿ ಕೋಸ್ಟ್‌ಗಾರ್ಡ್ ಹುಡುಕಾಡಿತ್ತು. ಇಸ್ರೋದಿಂದ ಚಿತ್ರಗಳನ್ನು ಪಡೆದು ತನಿಖೆ ನಡೆಸಲು ಮುಂದಾದರೂ ಅದರಲ್ಲೂ ಯಾವುದೇ ಮಹತ್ವದ ಸುಳಿವು ಸಿಕ್ಕಿರಲಿಲ್ಲ. ಈ ನಡುವೆ, ಸೋನಾರ್ ತಂತ್ರಜ್ಞಾನದ ಮೂಲಕ ಸಾಗರದಾಳದಲ್ಲಿ ಬೋಟು ಇರುವ ಬಗ್ಗೆ ಹುಡುಕಾಟ ನಡೆಸಲಾಗಿತ್ತು. ಈ ಹುಡುಕಾಟಕ್ಕೆ ಅಪಘಾತಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿರುವ ಐಎನ್‌ಎಸ್ ಕೊಚ್ಚಿ ನೌಕೆಯನ್ನೇ ಬಳಸಲಾಗಿದೆ.

ಒಪ್ಪದ ಮೀನುಗಾರರು: ಬೋಟ್‌ಗೆ ಹಡಗು ಡಿಕ್ಕಿಯಾಗಿರುವ ಸಾಧ್ಯತೆಯನ್ನೇ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಇದನ್ನು ಮೀನುಗಾರರು ಒಪ್ಪಲು ಸಿದ್ಧರಿಲ್ಲ. ಬೋಟುಗಳು ಸಂಚರಿಸುವಾಗ ಅಥವಾ ಲಂಗರು ಹಾಕಿರುವಾಗ ಯಾವುದೇ ದಿಕ್ಕಿನಿಂದ ಬೇರೆ ಬೋಟು ಅಥವಾ ಹಡಗು ಬರುವುದಾದರೂ ಅವುಗಳಿಗೆ ತಿಳಿಯುವ ರೀತಿಯ ಲೈಟಿಂಗ್ ಮತ್ತು ಅಲರಾಂ ವ್ಯವಸ್ಥೆ ಇರುತ್ತದೆ. ಕಿಲೋಮೀಟರ್ ದೂರದಲ್ಲಿರುವಾಗಲೇ ಈ ಬಗ್ಗೆ ಗೊತ್ತಾಗುತ್ತದೆ. ಅಷ್ಟಕ್ಕೂ ಬೋಟ್‌ಗೆ ಹಡಗು ಡಿಕ್ಕಿ ಹೊಡೆದಿದೆ ಎಂದುಕೊಂಡರೂ, ಬೋಟ್‌ನ ಅವಶೇಷಗಳು ಸಿಗಬೇಕಿತ್ತು. 10 ಸಾವಿರ ಲೀಟರ್‌ನಷ್ಟು ಡೀಸೆಲ್ ಬೋಟ್‌ನಲ್ಲಿರುತ್ತದೆ, ಅದು ಸೋರಿಕೆಯಾಗಬೇಕಿತ್ತು. ಹಾಗಾಗಿ ಬೋಟ್ ಅಪಘಾತಕ್ಕೀಡಾಗಿರುವ ಸಾಧ್ಯತೆ ಕಡಿಮೆ ಎಂದೇ ಹೇಳುತ್ತಾರೆ.