ಸರಳ ವಿವಾಹದತ್ತ ಚಿತ್ತ ಹರಿಸಿ

ಹುಣಸೂರು : ಆಡಂಬರದ ವಿವಾಹ ಮಾಡುವುದನ್ನು ಪ್ರತಿಷ್ಠೆಯನ್ನಾಗಿಸಿಕೊಳ್ಳುವುದನ್ನು ತ್ಯಜಿಸಿ ಸರಳ ಸಾಮೂಹಿಕ ವಿವಾಹದತ್ತ ಎಲ್ಲರೂ ಚಿತ್ತ ಹರಿಸಬೇಕಿದೆ ಎಂದು ಶ್ರೀಕ್ಷೇತ್ರ ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲೂಕಿನ ಮಾದಹಳ್ಳಿಯ ಉಕ್ಕಿನಕಂತೆ ಮಠದ ಆವರಣದಲ್ಲಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳ ಉದ್ಘಾಟನೆ ನಂತರ ಆಯೋಜ ನೆಗೊಂಡಿದ್ದ ಶ್ರೀಗುರುಬೂದಿಸ್ವಾಮೀಜಿ ಅವರ 390ನೇ ಗಣರಾಧನೆ ಮತ್ತು ಮಠಾಧೀಶರ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಆಶೀ ರ್ವಚನ ನೀಡಿದರು. ವಿವಾಹವೆಂದರೆ ಎರಡು ಮನಸ್ಸುಗಳು ಸಂತೋಷವಾಗಿ ಒಂದಾಗುವುದು. ಎರಡು ದೇಹವಿದ್ದರೂ ಆಲೋಚನೆ ಒಂದೇ ಇರಬೇಕೆನ್ನುವ ತತ್ವ ಸಾರುವುದೇ ವಿವಾಹಜೀವನ. ನಮಗೆ ಎರಡು ಕಣ್ಣುಗಳಿದ್ದರೂ ಕಾಣುವ ನೋಟ ಒಂದೇ. ಹಾಗೇ ಜೀವನ ವೆಂಬ ದೃಷ್ಟಿ ಒಂದೇ ರೀತಿಯಲ್ಲಿರಬೇಕು. ಇದಕ್ಕಾಗಿಯೇ ದಂಪತಿಗಳು ಜೀವನದಲ್ಲಿ ಬರುವ ಕಷ್ಟ ಸುಖಗಳನ್ನು ಸಮನಾಗಿ ಸ್ವೀಕರಿಸಿ ಮುನ್ನಡೆಯಬೇಕು ಎಂದರು.

ಗಾವಡಗೆರೆ ಗುರುಲಿಂಗಜಂಗಮದೇವರ ಮಠದ ಶ್ರೀನಟರಾಜಸ್ವಾಮೀಜಿ, ಕನಕಪುರದ ಶ್ರೀದೇಗುಲಮಠದ ಶ್ರೀಡಾ.ಮುಮ್ಮಡಿ ನಿರ್ವಾಣ ಸ್ವಾಮೀಜಿ, ವಾಟಾಳು ಶ್ರೀಸೂರ್ಯಸಿಂಹಾಸನಾಮಠದ ಶ್ರೀಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ,ಬೆಟ್ಟದಪುರದ ಶ್ರೀಸಲೀ ಲಾಖ್ಯಮಠದ ಶ್ರೀಚನ್ನಬಸವದೇಶೀಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.ಉಕ್ಕಿನಕಂತೆ ಮಠದ ಶ್ರೀಸಾಂಬಸದಾಶಿವಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. 5 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು.

ಜೆಎಸ್‌ಎಸ್ ಮಹಾವಿದ್ಯಾಪೀಠದ ಪ್ರಕಟಣಾ ವಿಭಾಗದ ನಿರ್ದೇಶಕ ಮೊರಬದ ಮಲ್ಲಿಕಾರ್ಜುನ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮೈಸೂರು-ಚಾಮರಾಜನಗರ ಜಿಲ್ಲೆ ವ್ಯಾಪ್ತಿಯ ವಿವಿಧ ಮಠಗಳ 100ಕ್ಕೂ ಹೆಚ್ಚು ಮಠಾಧೀಶರು ಸಭೆಯಲ್ಲಿ ಪಾಲ್ಗೊಂಡಿದ್ದರು. ತಾಲೂಕು ವೀರಶೈವಮಹಾಸಭಾದ ಅಧ್ಯಕ್ಷ ಜಾಬಗೆರೆ ರಮೇಶ್, ಮುಖಂಡರಾದ ಡಾ.ವೃಷಬೇಂದ್ರಸ್ವಾಮಿ, ಬಿ.ಎನ್.ನಾಗರಾಜಪ್ಪ, ಹಂದನಹಳ್ಳಿ ಸೋಮಶೇಖರ್, ಭಾಗ್ಯಕುಮಾರ್, ಜಗದೀಶ್, ವಿಜಯಣ್ಣ ಭಾಗವಹಿಸಿದ್ದರು.

ಸಾಮಾಜಿಕ ಕಾರ್ಯಗಳಿಗೆ ಚಾಲನೆ : ಇದೇ ಸಂದರ್ಭದಲ್ಲಿ ಮಠದಿಂದ ನಿರ್ಮಿಸಿರುವ ಶಾಲಾ ಕಟ್ಟಡ ಹಾಗೂ ಗ್ರಾಮದ ಶಕ್ತಿದೇವತೆ ಚೌಡೇಶ್ವರಿ ಅಮ್ಮನವರ ದೇವಾಲಯದ ಉದ್ಘಾಟನೆ ನೆರವೇರಿಸಲಾಯಿತು.