ವ್ಯಕ್ತಿತ್ವ ವಿಕಸನದಲ್ಲಿ ಯೋಗದ ಪಾತ್ರ ಅಪಾರ

ಸುತ್ತೂರು: ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಯೋಗ ಮಹತ್ತರವಾದ ಪಾತ್ರ ವಹಿಸುತ್ತದೆ ಎಂದು ಸುತ್ತೂರು ಜೆಎಸ್‌ಎಸ್ ಸಂಸ್ಥೆಗಳ ಸಂಯೋಜನಾಧಿಕಾರಿ ಜಿ.ಎಲ್.ತ್ರಿಪುರಾಂತಕ ಅಭಿಪ್ರಾಯಪಟ್ಟರು.

ಸುತ್ತೂರು ಶ್ರೀಕ್ಷೇತ್ರದಲ್ಲಿ ಮೈಸೂರಿನ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯವರು ಶ್ರೀ ಸುತ್ತೂರು ಮಠದ ಸಹಯೋಗದೊಂದಿಗೆ ಆಯೋಜಿಸಿರುವ 4 ದಿನಗಳ ಮಕ್ಕಳ ವ್ಯಕ್ತಿತ್ವ ವಿಕಸನ ವಸಂತ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಇಂದಿನ ಮಕ್ಕಳು ಸ್ಪರ್ಧಾ ಜಗತ್ತಿನಲ್ಲಿ ಬದುಕುತ್ತಿದ್ದು, ಸಹಜ ಬದುಕಿನಿಂದ ದೂರವಾಗಿರುತ್ತಾರೆ. ಪ್ರತಿದಿನ ಯೋಗ, ಪ್ರಾಣಾಯಾಮ ಹಾಗೂ ಧ್ಯಾನ ಮಾಡುವುದರ ಮೂಲಕ ಸ್ವಸ್ಥ ಬದುಕನ್ನು ರೂಢಿಸಿಕೊಳ್ಳಬಹುದು ಎಂದು ಹೇಳಿದರು.

ಯೋಗ ಸಮಿತಿಯ ಸಂಯೋಜಕ ರಾಘವೇಂದ್ರ ಮಾತನಾಡಿ, ಪತಂಜಲಿ ಯೋಗ ಸಮಿತಿಯಿಂದ ಕಳೆದ 14 ವರ್ಷಗಳಿಂದ ಅನೇಕ ಜಿಲ್ಲೆಗಳಲ್ಲಿ ಬೇಸಿಗೆ ರಜೆ ಅವಧಿಯಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸುತ್ತಿದ್ದು, ಸಾವಿರಾರು ಮಕ್ಕಳು ಇದರ ಪ್ರಯೋಜನ ಪಡೆದಿದ್ದಾರೆ ಎಂದರು.

ಸಹಾಯಕ ಸಂಯೋಜನಾಧಿಕಾರಿ ವೀರಭದ್ರಯ್ಯ, ಪತಂಜಲಿ ಯೋಗ ಸಮಿತಿಯ ಖಜಾಂಚಿ ಸತ್ಯನಾರಾಯಣ ಮಾತನಾಡಿದರು. ಮೇಘಾಲಯ ರಾಜ್ಯದ 40 ವಿದ್ಯಾರ್ಥಿಗಳ ಜತೆಗೆ ಮೈಸೂರು, ಚಾಮರಾಜನಗರ ಹಾಗೂ ಮಂಡ್ಯ ಜಿಲ್ಲೆಯಿಂದ ಒಟ್ಟು 150 ಶಿಬಿರಾರ್ಥಿಗಳು ಭಾಗವಹಿಸಿದ್ದಾರೆ.

Leave a Reply

Your email address will not be published. Required fields are marked *