ಬೆಂಗಳೂರು: ಪಾಸ್‌ಪೋರ್ಟ್ ಪರಿಶೀಲನೆ ವೇಳೆ ಮಹಿಳಾ ಟೆಕ್ಕಿ ಜತೆ ಅಸಭ್ಯವಾಗಿ ವರ್ತಿಸಿದ ಆರೋಪದಡಿ ಕಾನ್‌ಸ್ಟೆಬಲ್‌ನನ್ನು ಅಮಾನತು ಮಾಡಲಾಗಿದೆ.
ಬ್ಯಾಟರಾಯನಪುರ ಠಾಣೆಯ ಕಿರಣ್ ಅಮಾನತುಗೊಂಡವ. ಮೈಸೂರು ರಸ್ತೆ ಬಾಪೂಜಿನಗರದಲ್ಲಿ ನೆಲೆಸಿರುವ ಮಹಿಳಾ ಟೆಕ್ಕಿ, ಇತ್ತೀಚೆಗೆ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪಾಸ್‌ಪೋರ್ಟ್ ಕಚೇರಿಯಿಂದ ಅರ್ಜಿ ಸ್ವೀಕರಿಸಿದ ಕಿರಣ್, ವೆರಿಫಿಕೇಷನ್ ನೆಪದಲ್ಲಿ ಯುವತಿಯ ಮನೆಗೆ 2-3 ಬಾರಿ ಹೋಗಿದ್ದ. ಇತ್ತೀಚೆಗೆ ಹಠಾತ್ ಮನೆಯೊಳಗೆ ಪ್ರವೇಶಿಸಿ ಅರ್ಧ ಬಾಗಿಲು ಮುಚ್ಚಿದ್ದ. ನಂತರ ಯುವತಿಗೆ, ‘ನಿನ್ನ ಅಣ್ಣ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾನೆ. ಇದನ್ನೇ ನೆಪವಾಗಿ ಇಟ್ಟುಕೊಂಡು ನಿನ್ನ ಪಾಸ್‌ಪೋರ್ಟ್ ರದ್ದು ಮಾಡಿಸುತ್ತೇನೆ. ನೀನು ನನಗೆ ಸಹಕರಿಸಬೇಕು. ಬಾಗಿಲು ಹಾಕು’ ಎಂದು ಕಾನ್‌ಸ್ಟೆಬಲ್ ತಾಕೀತು ಮಾಡಿದ ಎಂದು ಯುವತಿ ಆರೋಪಿಸಿದ್ದಾಳೆ.
ಇದಕ್ಕೆ ಯುವತಿ ಒಪ್ಪದಿದ್ದಾಗ ತಾನೇ ಬಾಗಿಲು ಮುಚ್ಚಿದ್ದ. ‘ಯಾರಿಗೂ ಹೇಳಬೇಡ, ಒಂದೇ ಒಂದು ಸಲ ಅಪ್ಪಿಕೊಳ್ಳುತ್ತೇನೆ’ ಎಂದಿದ್ದ. ಇದೇ ವೇಳೆ ಮತ್ತೊಂದು ಕೊಠಡಿಯಲ್ಲಿ ಆಕೆಯ ಅಣ್ಣ ಇರುವುದನ್ನು ಗಮನಿಸಿದ ಕಿರಣ್, ‘ನಿನ್ನ ತಂಗಿ ನನ್ನ ತಂಗಿ ಇದ್ದಹಾಗೆ’ ಎಂದು ಹೇಳಿ ಹೊರಟುಹೋದ ಎಂದು ಆರೋಪಿಸಿದ ಯುವತಿ, ಪಶ್ಚಿಮ ವಿಭಾಗ ಡಿಸಿಪಿ ಎಸ್. ಗಿರೀಶ್‌ಗೆ ದೂರು ಸಲ್ಲಿಸಿದ್ದಳು.