ಮಹಮದ್ ಮೊಹಿಸಿನ್ ಅಮಾನತು ಸರಿಯಲ್ಲ

ಹಾಸನ: ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ತಪಾಸಣೆ ಮಾಡಲು ಆದೇಶಿಸಿದ ಕಾರಣಕ್ಕಾಗಿ ರಾಜ್ಯ ಕೇಡರ್‌ನ ಐಎಎಸ್ ಅಧಿಕಾರಿ ಮಹಮದ್ ಮೊಹಿಸಿನ್ ಅವರನ್ನು ಅಮಾನತುಗೊಳಿಸಿರುವ ಕ್ರಮ ಸರಿಯಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅಭಿಪ್ರಾಪಟ್ಟರು.

ಮೊಹಿಸಿನ್ ಒಬ್ಬ ಪ್ರಾಮಾಣಿಕ ಅಧಿಕಾರಿ, ಇಷ್ಟಕ್ಕೂ ಪ್ರಧಾನಿಯವರು ಪ್ರಯಾಣಿಸಿದ ಹೆಲಿಕಾಪ್ಟರ್ ತಪಾಸಣೆ ನಡೆಸಿದರೆ ಅದರಲ್ಲಿ ತಪ್ಪೇನಿದೆ? ಚುನಾವಣೆ ಎಂದರೆ ಎಲ್ಲರಿಗೂ ಒಂದೇ ಅಲ್ಲವೇ? ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಪ್ರತಿ ಚೆಕ್‌ಪೋಸ್ಟ್‌ನಲ್ಲಿಯೂ ನನ್ನ ವಾಹನವನ್ನು ತಪಾಸಣೆ ನಡೆಸಿದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕಾರನ್ನೂ ಹಲವಾರು ಬಾರಿ ತಪಾಸಣೆ ನಡೆಸಿದ್ದಾರೆ. ನಾವ್ಯಾರೂ ಅದಕ್ಕೆ ಪ್ರತಿರೋಧ ವ್ಯಕ್ತಪಡಿಸಿಲ್ಲ ಎಂದರು.

ಐಟಿಗೆ ಜೆಡಿಎಸ್ ಗುರಿ: ಜಿಲ್ಲೆಯಲ್ಲಿ ಜೆಡಿಎಸ್ ಮುಖಂಡರನ್ನೇ ಗುರಿಯಾಗಿಸಿಕೊಂಡು ಪದೇ ಪದೆ ಐಟಿ ದಾಳಿ ಮಾಡಲಾಗಿದೆ. ಹೊಳೆನರಸೀಪುರದಲ್ಲಿ ಐಟಿ ಅಧಿಕಾರಿಯೆಂದು ಹೇಳಿಕೊಂಡು ತರಕಾರಿ ವ್ಯಾಪಾರಿ ಮನೆಗೆ ಬಂದವರು 80 ಸಾವಿರ ರೂ. ವಶಪಡಿಸಿಕೊಂಡು ಹೋಗಿದ್ದಾರೆ. ಅವರು ಯಾರು ಎನ್ನುವುದೇ ಇನ್ನೂ ಗೊತ್ತಾಗಿಲ್ಲ. ನಮ್ಮ ಮುಖಂಡ ಬೋರೇಗೌಡ ಅವರ ಮನೆ ತಪಾಸಣೆ ಮಾಡಿ ಏನು ಸಿಗದಿದ್ದಾಗ ಅವರ ಪರ್ಸ್ ಪರಿಶೀಲನೆ ಮಾಡಿದ್ದಾರೆ. ಅದರಲ್ಲಿ ಕೇವಲ 10 ರೂ. ನೋಟು ಕಂಡು ಅವರೇ ಕ್ಷಮೆ ಕೇಳಿ ಹೋಗಿದ್ದಾರೆ ಎಂದರು.

ಪಟೇಲರಿಗೆ ಲಾಭ: ವಿಧಾನ ಪರಿಷತ್ ಮಾಜಿ ಸದಸ್ಯ ಪಟೇಲ್ ಶಿವರಾಂ ಅವರ ಮನೆಯ ಮೇಲೆ ಐಟಿ ದಾಳಿಯಾದಾಗ ಅವರ ಬಳಿ 7 ಸಾವಿರ ರೂ., ಅವರ ಪುತ್ರ ಸಂಬಳ ಡ್ರಾ ಮಾಡಿ ತಂದಿದ್ದ 8 ಸಾವಿರ ರೂ. ಹಾಗೂ ಅವರ ಪತ್ನಿ ಯಾರಿಗೂ ತಿಳಿಯದಂತೆ ಉಳಿಸಿದ್ದ 20 ಸಾವಿರ ರೂ. ದೊರಕಿದೆ. ಪತ್ನಿ ಬಚ್ಚಿಟ್ಟಿದ್ದ 20 ಸಾವಿರ ರೂ. ಮನೆಯಲ್ಲಿರುವ ವಿಷಯ ತಿಳಿದು ಪಟೇಲರಿಗೆ ಲಾಭವಾಗಿದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
ನಮ್ಮ ಇತರ ಮುಖಂಡರ ಮನೆಗಳಲ್ಲಿಯೂ ಹೀಗೇ ಆಗಿದೆ. ಎಲ್ಲರನ್ನೂ ಚುನಾವಣೆ ಪ್ರಚಾರಕ್ಕೆ ಹೋಗದಂತೆ ಇಡೀ ದಿನ ಮನೆಯಲ್ಲಿ ಇರುವಂತೆ ಮಾಡಿದ್ದಾರೆ. ಇದರ ಬದಲು ಪೊಲೀಸರಿಗೆ ಹೇಳಿ ನಮ್ಮ ಎಲ್ಲ ಮುಖಂಡರನ್ನು ಕೂಡಿ ಹಾಕಬಹುದಿತ್ತು ಎಂದು ವ್ಯಂಗ್ಯವಾಡಿದರು.

ಥಿಯೇಟರ್ ಹಣ ವಶಕ್ಕೆ: ಹೊಳೆನರಸೀಪುರದ ಚನ್ನಾಂಬಿಕ ಚಿತ್ರಮಂದಿರದ ಕಲೆಕ್ಷನ್ ಹಣವನ್ನು ಜತೆಯಲ್ಲಿಸಿರಿಕೊಂಡು ಮಲಗಿದ್ದ ಮಂಜು ಎಂಬಾತ ಹಾಗೂ ಥಿಯೇಟರ್ ಮೇಲಿನ ಕೊಠಡಿಗೆ ಹೋಗಲೆಂದು ನಮ್ಮ ಮನೆಯ ಕಾಂಪೌಂಡ್ ಹಾರುತ್ತಿದ್ದ ನನ್ನ ಸಹಾಯಕ ರಾಘುವನ್ನು ಹಿಡಿದ ಐಟಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಇಬ್ಬರು ಬಳಿಯೂ ತಲಾ 60 ಸಾವಿರ ರೂ. ಇರುವುದನ್ನು ಕಂಡು ಎಣಿಕೆಗಾಗಿ ಸಮೀಪದಲ್ಲಿದ್ದ ಬೆಂಗಾವಲು ವಾಹನದ ಡಿಕ್ಕಿ ತೆರೆದಿದ್ದಾರೆ. ಅಲ್ಲಿದ್ದ ಬ್ಯಾಗನ್ನೂ ತಪಾಸಣೆ ನಡೆಸಿದ್ದಾರೆ. ಅದರಲ್ಲಿ ಏನೂ ಸಿಗದಿದ್ದಾಗ ಅಲ್ಲಿಯೇ ಹಣವಿಟ್ಟು ಫೋಟೋ ತೆಗೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಪ್ರೊಬೇಷನರಿ ಐಎಎಸ್ ಅಧಿಕಾರಿ ಪ್ರಿಯಾಂಗ ಎಂಬುವರನ್ನು ಸ್ಥಳಕ್ಕೆ ಕರೆಯಿಸಿದ ಐಟಿ ಅಧಿಕಾರಿಗಳು ಅಲ್ಲಿಂದ ತೆರಳಿದ್ದಾರೆ. ವಾಸ್ತವ ಬೇರೆಯೇ ಇದ್ದರೂ ಅವರು ಐಟಿ ಅಧಿಕಾರಿಗಳು ಹಣ ಇರಿಸಿದ ಸ್ಥಳದಲ್ಲೇ ವಶಕ್ಕೆ ಪಡೆಯುವುದಾಗಿ ಹೇಳಿದ್ದಾರೆ. ರಾತ್ರಿ 12.30ರಲ್ಲಿ ಪ್ರಕರಣ ನಡೆದರೂ ಮುಂಜಾನೆ 4 ಗಂಟೆಗೆ ದೂರು ನೀಡಿದ್ದಾರೆ ಎಂದು ಆರೋಪಿಸಿದರು.

ಬೇಕಿದ್ದರೆ ಪ್ರಕರಣದ ಬಗ್ಗೆ ತನಿಖೆ ನಡೆಸಿಕೊಂಡು ಸತ್ಯಾಸತ್ಯತೆ ಪತ್ತೆ ಮಾಡಲಿ. ದೇಶದಲ್ಲಿ 10 ವರ್ಷಗಳ ಕಾಲ ಯುಪಿಎ ಸರ್ಕಾರ ಆಡಳಿತ ನಡೆಸಿತ್ತು. ಅವರು ಎಂದಿಗೂ ಇಷ್ಟು ಕೆಳಮಟ್ಟಕ್ಕೆ ಇಳಿದಿರಲಿಲ್ಲ. ಈ ಚುನಾವಣೆಯಲ್ಲಿ ಆಡಳಿತ ಯಂತ್ರವನ್ನು ಸಂಪೂರ್ಣವಾಗಿ ದುರುಪಯೋಗಪಡಿಸಿಕೊಳ್ಳಲಾಗಿದೆ. ಪ್ರಧಾನಿಯಾಗಿರುವವರು ಯಾರೋ ಚೀಟಿಯಲ್ಲಿ ಬರೆದುಕೊಟ್ಟಿದ್ದನ್ನೆಲ್ಲ ಓದುತ್ತಾರೆ. ಅವರು ಎಷ್ಟೇ ಸುಳ್ಳು ಹೇಳಿದರೂ ಅದೆಲ್ಲ ಜನರಿಗೆ ಅರ್ಥವಾಗಿದೆ. ಅವರು ಮಾತನಾಡಿದರೆ ಜನರು ನಗುತ್ತಾರೆ. ಹೀಗಾಗಿ ಈ ಬಾರಿ ಅವರು ಪುನರಾಯ್ಕೆಯಾಗುವುದಿಲ್ಲ ಎಂದರು.

ಅವರೇನು ಪುರಂದರ ದಾಸರೇ?: ಜಿಲ್ಲೆಯಲ್ಲಿ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವವರಲ್ಲಿ ಯಾರೂ ಶ್ರೀಮಂತರಿಲ್ಲವೇ? ಅವರೆಲ್ಲರೂ ಪುರಂದರ ದಾಸರೇ?ದೇಶದಲ್ಲಿ ಎಲ್ಲಿಯೂ ಬಿಜೆಪಿಯವರ ಮನೆ ಮೇಲೆ ಐಟಿ ದಾಳಿಯಾದ ವಿಷಯವನ್ನೇ ಕೇಳಲಿಲ್ಲ. ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್‌ನವರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಲಾಯಿತು ಎಂದು ಟೀಕಿಸಿದರು.

ಗೆಲುವಿನ ವಿಶ್ವಾಸ: ಹಾಸನ ಲೋಕಸಭಾ ಕ್ಷೇತ್ರದ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲೂ ನಮಗೆ ಮುನ್ನಡೆ ದೊರೆಯಲಿದೆ. ಮಂಡ್ಯ, ಹಾಸನ, ತುಮಕೂರು ಕ್ಷೇತ್ರಗಳ ಫಲಿತಾಂಶ ಜೆಡಿಎಸ್ ಪರವಾಗಲಿದೆ. ದೇವೇಗೌಡರು ಮತ್ತೆ ಪಾರ್ಲಿಮೆಂಟ್‌ಗೆ ಹೋಗಿ ರೈತರ ಪರವಾಗಿ ಹೋರಾಟ ಮಾಡಲಿದ್ದಾರೆ. ಪ್ರಜ್ವಲ್, ನಿಖಿಲ್ ಇಬ್ಬರೂ ಗೆಲ್ಲಲಿದ್ದಾರೆ. ಚಿಕ್ಕಮಗಳೂರು-ಉಡುಪಿ ಕ್ಷೇತ್ರದ ಫಲಿತಾಂಶವೂ ನಮ್ಮ ಪರವಾಗಲಿದೆ. ನಾನು ಈವರೆಗೂ ಹೇಳಿದ ಶಾಸ್ತ್ರ ಯಾವತ್ತೂ ಸುಳ್ಳಾಗಿಲ್ಲ. ಈ ಬಾರಿಯೂ ಗೆಲುವು ನಮ್ಮದೇ ಎಂದರು.
ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದು, ರಾಜ್ಯ ಸರ್ಕಾರ ಪತನವಾಗಲಿದೆ ಎನ್ನುವ ಎ.ಮಂಜು ಹೇಳಿಕೆಗೆ ಪ್ರತಿಕ್ರಿಯಿಸಿದ ರೇವಣ್ಣ, ಫಲಿತಾಂಶ ಪ್ರಕಟವಾದ ನಂತರ ಮೊದಲು ಅವರು ಏನಾಗುತ್ತಾರೆ, ಎಲ್ಲಿರುತ್ತಾರೆ ಎಂದು ನೋಡಿಕೊಳ್ಳಲಿ. ನಂತರ ಮೋದಿ ಬಗ್ಗೆ ಮಾತನಾಡಲಿ ಎಂದು ತಿರುಗೇಟು ನೀಡಿದರು.
ನಾನು ಯಾವುದೇ ವರ್ಗಾವಣೆಯಲ್ಲಿ ಎಂದಾದರೂ ಒಂದು ರೂ. ಮುಟ್ಟಿದ್ದೇನೆಯೇ? ಕೆಲಸ ಮಾಡಿ ಯಾರೂ ಪರ್ಸೆಂಟೇಜ್ ತೆಗೆದುಕೊಳ್ಳುವುದಿಲ್ಲ. ಹಾಗಿದ್ದರೆ ಜಗದೀಶ್ ಶೆಟ್ಟರ್ ಹೇಳಿದ ಕೆಲಸ ಕೊಡಿಸಿದ್ದೀವಿ, ಅದಕ್ಕೆ ಅವರು ಪರ್ಸೆಂಟೇಜ್ ತಗೊಂಡಿದ್ದಾರಾ? ಎಂದು ಬಿಜೆಪಿ ಟೀಕೆಗೆ ತಿರುಗೇಟು ನೀಡಿದರು.
ಪರ್ಸೆಂಟೇಜ್ ವ್ಯವಹಾರ ಶುರುವಾಗಿದ್ದೇ ಬಿಜೆಪಿ ಸರ್ಕಾರ ಇದ್ದ ಅವಧಿಯಲ್ಲಿ, ಅವರೇ ಚೆಕ್ ಮೂಲಕ ಹಣ ಪಡೆದು ಜೈಲಿಗೆ ಹೋಗಿದ್ದರು. ಮೋದಿಯವರು ಅದನ್ನೂ ಹೇಳಬೇಕು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಪಟೇಲ್ ಶಿವರಾಂ, ಜೆಡಿಎಸ್ ಮುಖಂಡ ಧರ್ಮೇಗೌಡ ಮುಂತಾದವರಿದ್ದರು.