ಹಾರ್ದಿಕ್, ಕೆಎಲ್ ರಾಹುಲ್ ಅಮಾನತು

ನವದೆಹಲಿ: ಟೀಮ್ ಇಂಡಿಯಾ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್​ರ ವಿರುದ್ಧ ತನಿಖೆಗೆ ಆದೇಶಿಸಿ ಬಿಸಿಸಿಐ ಅಮಾನತುಗೊಳಿಸಿದೆ. ಖಾಸಗಿ ಟಿವಿ ಶೋನಲ್ಲಿ ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತನಾಡಿದ ಕಾರಣಕ್ಕೆ ಇವರಿಬ್ಬರ ವಿರುದ್ಧ ತನಿಖೆ ನಡೆಸುವುದಾಗಿ ಬಿಸಿಸಿಐ ತಿಳಿಸಿದ್ದು, ಅಲ್ಲಿಯವರೆಗೂ ಅವರು ಅಮಾನತಿನಲ್ಲಿ ಇರಲಿದ್ದಾರೆ. ಅದರೊಂದಿಗೆ ಈ ಆಟಗಾರರ ಆಸ್ಟ್ರೇಲಿಯಾ ಪ್ರವಾಸವೂ ಅಕಾಲಿಕವಾಗಿ ಅಂತ್ಯಗೊಂಡಿದ್ದು, ಶೀಘ್ರ ತವರಿಗೆ ಮರಳಲಿದ್ದಾರೆ.

ನಿರ್ದೇಶಕ ಹಾಗೂ ನಿರ್ವಪಕ ಕರಣ್ ಜೋಹರ್ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಲಿಂಗ ತಾರತಮ್ಯ ಹಾಗೂ ಸೆಕ್ಸಿಸ್ಟ್ ಆದ ಹೇಳಿಕೆ ನೀಡಿದ ಕಾರಣಕ್ಕೆ, ಇವರಿಬ್ಬರೂ ಸಿಡ್ನಿ ಏಕದಿನ ಪಂದ್ಯದಿಂದ ಹೊರಬಿದ್ದಿದ್ದಾರೆ. ‘ಅವರ ವಿರುದ್ಧ ಇನ್ನೂ ತನಿಖೆ ಆಗಬೇಕಿರುವ ಕಾರಣ ಹಾರ್ದಿಕ್ ಹಾಗೂ ರಾಹುಲ್​ರನ್ನು ಅಮಾನತು ಮಾಡಲಾಗಿದೆ’ ಎಂದು ಸಿಒಎ ಚೇರ್ಮನ್ ವಿನೋದ್ ರಾಯ್ ತಿಳಿಸಿದ್ದಾರೆ. ಅಲ್ಲದೆ, ಇವರಿಬ್ಬರಿಗೂ ಹೊಸದಾಗಿ ಶೋಕಾಸ್ ನೋಟಿಸ್ ನೀಡುವ ಪ್ರಕ್ರಿಯೆಯೂ ಜಾರಿಯಲ್ಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಬಿಸಿಸಿಐನ ಆಂತರಿಕ ಸಮಿತಿ ಅಥವಾ ಆಡ್​ಹಾಕ್ ಒಂಬುಡ್ಸ್​ಮನ್ ತನಿಖೆ ನಡೆಸಲಿದ್ದಾರೆ. ಆ ಕುರಿತು ಇನ್ನಷ್ಟೇ ನಿರ್ಧಾರವಾಗಬೇಕಿದೆ. ಇವರಿಬ್ಬರೂ ಲಭ್ಯವಿರುವ ಮೊದಲ ವಿಮಾನದಲ್ಲೇ ಆಸ್ಟ್ರೇಲಿಯಾದಿಂದ ತವರಿಗೆ ವಾಪಸಾಗಲಿದ್ದಾರೆ. ಇವರಿಬ್ಬರೂ ಆಸೀಸ್ ವಿರುದ್ಧದ ಏಕದಿನ ಸರಣಿಯ ಮೂರೂ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಅಲ್ಲದೆ, ಕಿವೀಸ್ ಪ್ರವಾಸಕ್ಕೂ ಇವರು ಅವಕಾಶ ಪಡೆಯುವ ಸಾಧ್ಯತೆ ವಿರಳವೆನಿಸಿದೆ.

ಮನೀಷ್, ರಿಷಭ್​ಗೆ ಚಾನ್ಸ್?: ಹಾರ್ದಿಕ್, ರಾಹುಲ್ ತವರಿಗೆ ಮರಳುತ್ತಿರುವ ಕಾರಣ ತಂಡದಲ್ಲಿ ಅವರ ಸ್ಥಾನವನ್ನು ಮನೀಷ್ ಪಾಂಡೆ, ರಿಷಭ್ ಪಂತ್, ವಿಜಯ್ ಶಂಕರ್ ಅಥವಾ ಶ್ರೇಯಸ್ ಅಯ್ಯರ್ ತುಂಬುವ ಸಾಧ್ಯತೆ ಇದೆ. -ಪಿಟಿಐ

ಅನುಚಿತ ಹೇಳಿಕೆಗೆ ಕೊಹ್ಲಿ ಬೆಂಬಲವಿಲ್ಲ

ಹಾರ್ದಿಕ್-ರಾಹುಲ್​ರ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿರುವ ವಿರಾಟ್ ಕೊಹ್ಲಿ, ‘ಈ ಮಾತುಗಳನ್ನು ನಾನು ಬೆಂಬಲಿಸುವುದಿಲ್ಲ. ಇದು ಅವರ ವೈಯಕ್ತಿಕ ಹೇಳಿಕೆಗಳೇ ಹೊರತು ಟೀಮ್ ಇಂಡಿಯಾ ಡ್ರೆಸಿಂಗ್ ರೂಮ್ ಅಭಿಪ್ರಾಯವಲ್ಲ’ ಎಂದು ಹೇಳಿದ್ದಾರೆ. ಭಾರತ ಕ್ರಿಕೆಟ್ ತಂಡದ ದೃಷ್ಟಿಯಿಂದ, ಇಂಥ ಅನುಚಿತ ಹೇಳಿಕೆಗಳನ್ನು ಯಾವುದೇ ಹಂತದಲ್ಲಾಗಲಿ, ಎಲ್ಲೇ ಆಗಲಿ ಹೇಳಿದರೆ ಅದಕ್ಕೆ ಬೆಂಬಲವಿರುವುದಿಲ್ಲ. ಇಬ್ಬರಿಗೂ ತಮ್ಮ ತಪ್ಪಿನ ಅರಿವಾಗಿದೆ ಎಂದು ಸಿಡ್ನಿ ಏಕದಿನ ಪಂದ್ಯಕ್ಕೂ ಮುನ್ನ ಹೇಳಿದರು. ಖಂಡಿತವಾಗಿ ಇದು ಅವರಿಗೆ ಬಹಳ ಪರಿಣಾಮ ಬೀರುತ್ತದೆ. ಆದರೆ ಇದರಿಂದ ಡ್ರೆಸಿಂಗ್ ರೂಮ್ ವಾತಾವರಣದ ಮೇಲೆ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ. ಇನ್ನು ಪಾಂಡ್ಯ ಹೊರತಾಗಿ ಆಲ್ರೌಂಡರ್ ಆಯ್ಕೆಗಳೂ ಇವೆ ಎಂದೂ ಕೊಹ್ಲಿ ತಿಳಿಸಿದ್ದಾರೆ.