ಭಯಪಡಿಸಿದ ಭಿಕ್ಷುಕನ ಗ್ರಾಮದಲ್ಲಿ ಸೈನಿಕರೇ ಹೆಚ್ಚು

ಬೆಂಗಳೂರು: ಮೆಟ್ರೋ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡಿ ಬಂಧನಕ್ಕೊಳಗಾದ ರಾಜಸ್ಥಾನ ಮೂಲದ ಸಾಜಿದ್ ಖಾನ್ ವಾಸವಿರುವ ಗ್ರಾಮದಲ್ಲಿ ಶೇ.40 ಸೈನಿಕರು ಹಾಗೂ ಶೇ.40 ಶಿಕ್ಷಕರಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ. ಚೆನ್ನಣ್ಣನವರ್ ತಿಳಿಸಿದ್ದಾರೆ.

ಉಪ್ಪಾರಪೇಟೆ ಪೊಲೀಸರು ಶುಕ್ರವಾರ ತಡರಾತ್ರಿ ಆರ್.ಟಿ. ನಗರದ ಮಸೀದಿ ಬಳಿ ಸಾಜಿದ್​ಖಾನ್​ನನ್ನು ವಶಕ್ಕೆ ಪಡೆದು, ಕಾಟನ್​ಪೇಟೆಯ ಲಾಡ್ಜ್​ನಲ್ಲಿದ್ದ ಆತನ ಪತ್ನಿ ಹಾಗೂ ಮಕ್ಕಳನ್ನು ವಿಚಾರಣೆ ನಡೆಸಿದ್ದರು. ಆತನ ಸ್ವಗ್ರಾಮ ರಾಜಸ್ಥಾನದ ಜುಂಜುನು ಜಿಲ್ಲೆಯ ನಿರಾಧುನ್ ಗ್ರಾಮಕ್ಕೆ ನಗರದ ಪೊಲೀಸರ ತಂಡ ತೆರಳಿ ಆತನ ಪೂರ್ವಪರ ಪರಿಶೀಲನೆ ನಡೆಸಿದೆ.

ಅಲ್ಲದೆ, ಈತ ವಿವಾಹ ಸಮಾರಂಭಗಳಲ್ಲಿ ಶಹನಾಯಿ ನುಡಿಸುತ್ತಿದ್ದ. ಈತನ ಪತ್ನಿ ಗೃಹಿಣಿ. ತನ್ನ ಊರಿನಲ್ಲೂ ಸಾಜಿದ್ ದಾನ ಪಡೆಯಲು ಹೋಗುತ್ತಿದ್ದ. ರಾಜಸ್ಥಾನದಲ್ಲಿ ಈತನ ವಿರುದ್ಧ ಯಾವುದೇ ಅಪರಾಧ ಪ್ರಕರಣ ದಾಖಲಾಗಿಲ್ಲ. ಆದರೆ, ಈ ಬಾರಿಯ ರಂಜಾನ್ ಸಮಯದಲ್ಲಿ ಆರ್.ಟಿ. ನಗರದಲ್ಲಿರುವ ಈತನ ಸಂಬಂಧಿಕರ ಮನೆಗೆ ಬಂದಿದ್ದ. ನಂತರ ನಗರದಲ್ಲಿ ಜಕಾತ್ ಸಂಗ್ರಹಿಸಲು ಹೋಗುತ್ತಿದ್ದ. ಸದ್ಯ ಈತನನ್ನು ಬಿಟ್ಟು ಕಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ?

ರಮಜಾನ್ ಪ್ರಯುಕ್ತ ಭಿಕ್ಷಾಟನೆ ಮಾಡಲು ಬೆಂಗಳೂರಿಗೆ ಬಂದಿದ್ದ ಸಾಜಿದ್ ಖಾನ್ ಮತ್ತು ಕುಟುಂಬ ನಗರದ ವಿವಿಧ ಮಸೀದಿ ಹಾಗೂ ಸಾರ್ವಜನಿಕ ಪ್ರದೇಶದ ಬಳಿ ಸಾರ್ವಜನಿಕರು ಕೊಡುವ ದಾನ ಪಡೆಯುತ್ತಿತ್ತು. ಮೇ 6ರಂದು ವಿವಿಧ ಮಸೀದಿಗಳ ಬಳಿ ಭಿಕ್ಷೆ ಪಡೆದಿದ್ದ ನಾಣ್ಯಗಳು ಮತ್ತು ಸೊಂಟದಲ್ಲಿ ಕಟ್ಟಿದ್ದ ತಾಯತಗಳಿಂದ ಲೋಹಶೋಧಕ ಯಂತ್ರದಲ್ಲಿ ಕೆಂಪು ದೀಪ ಹೊತ್ತಿಕೊಂಡು ಬೀಪ್ ಸದ್ದು ಕೇಳಿ ಬಂದಿತ್ತು ಎನ್ನಲಾಗಿದೆ.

Leave a Reply

Your email address will not be published. Required fields are marked *