2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ: ಸುಷ್ಮಾ ಸ್ವರಾಜ್​ ಘೋಷಣೆ

ನವದೆಹಲಿ: ಬಿಜೆಪಿ ಹಿರಿಯ ನಾಯಕಿ, ವಿದೇಶಾಂಗ ವ್ಯವಹಾರಗಳ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್​, 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ಮಾಧ್ಯಮದವರ ಜತೆ ಮಾತನಾಡಿ, ಲೋಕಸಭೆ ಚುನಾವಣೆ ಅಭ್ಯರ್ಥಿಗಳನ್ನು ಪಕ್ಷ ನಿರ್ಧರಿಸುತ್ತದೆ. ಆದರೆ, ನಾನು ಯಾವ ಕಾರಣಕ್ಕೂ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ತೀರ್ಮಾನಿಸಿದ್ದೇನೆ. ಪಕ್ಷಕ್ಕೂ ತಿಳಿಸಿದ್ದೇನೆ. ಅನಾರೋಗ್ಯ ಕಾರಣದಿಂದ ಚುನಾವಣೆಯಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಹೇಳಿದ್ದಾರೆ.

ಸುಷ್ಮಾ ಸ್ವರಾಜ್​ ಅವರು ಭೂಪಾಲ್​ನ ವಿದಿಶಾ ಲೋಕಸಭಾ ಕ್ಷೇತ್ರದ ಸಂಸದರು. ಸುಷ್ಮಾ ಸ್ವರಾಜ್​ ಆ ಕ್ಷೇತ್ರಕ್ಕೆ ಭೇಟಿ ನೀಡುತ್ತಿಲ್ಲ. ಸಂಸದರು ಕ್ಷೇತ್ರಕ್ಕೆ ಆಗಮಿಸದೆ ತುಂಬ ದಿನವಾಯಿತು ಎಂಬ ಪೋಸ್ಟರ್​ಗಳನ್ನು ಇತ್ತೀಚೆಗೆ ಅಲ್ಲಿ ಹಾಕಲಾಗಿತ್ತು. ಈ ಬಗ್ಗೆ ಮಾಧ್ಯಮದವರು ಸಚಿವರ ಬಳಿ ಪ್ರಶ್ನಿಸಿದಾಗ, ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.

ಸುಷ್ಮಾ ಸ್ವರಾಜ್​ ಅವರು ಈಗಾಗಲೇ 11 ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ಈಗ ಅವರ ಆರೋಗ್ಯ ಹಾಳಾಗಿರುವ ಕಾರಣದಿಂದ ವಿಶ್ರಾಂತಿ ಅಗತ್ಯವಿದೆ. ಅದರ ಹೊರತಾಗಿ ಬೇರೆ ಯಾವುದೇ ರಾಜಕೀಯ ಕಾರಣವಿಲ್ಲ ಎಂದು ಅವರ ಕುಟುಂಬ ಮೂಲಗಳೂ ತಿಳಿಸಿವೆ.