ರಹಸ್ಯ ಸಂಖ್ಯೆ ಟ್ವೀಟ್​ ಮಾಡಿ ನೆಟ್ಟಿಗರ ತಲೆ ಕೆಡಿಸಿದ ಕೇಂದ್ರ ವಿದೇಶಾಂಗ ಸಚಿವೆ​!

ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ ರಹಸ್ಯ ಸಂಖ್ಯೆಯೊಂದನ್ನು ಟ್ವೀಟ್​ ಮಾಡುವ ಮೂಲಕ ನೆಟ್ಟಿಗರ ತಲೆಗೆ ಹುಳು ಬಿಟ್ಟಿದ್ದಾರೆ.

ಶನಿವಾರ ಮಧ್ಯಾಹ್ನ 3.18ಕ್ಕೆ ಕೇಂದ್ರ ಸಚಿವೆ, ಕೇವಲ 638781 ಎಂಬ ಸಂಖ್ಯೆಯನ್ನು ಟ್ವೀಟ್​ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಸಂಖ್ಯೆಯನ್ನು ಡಿಕೋಡ್​ ಮಾಡಲು ತಲೆ ಕೆಡಿಸಿಕೊಂಡಿದ್ದು, ಸಂಖ್ಯೆಯ ಅರ್ಥವೇನು ಎಂಬುದನ್ನು ಸಚಿವೆಗೆ ಪ್ರಶ್ನಿಸಿದ್ದಾರೆ.

ಟ್ವಿಟರ್​ನಲ್ಲಿ 12 ಮಿಲಿಯನ್​ ಫಾಲೋವರ್ಸ್​ಗಳನ್ನು ಹೊಂದಿರುವ ಸುಷ್ಮಾ ಸ್ವರಾಜ್​ ಅವರು ರಹಸ್ಯ ಸಂಖ್ಯೆ ಟ್ವೀಟ್​ ಮಾಡುತ್ತಿದ್ದಂತೆ, ‘ಸಿಂಗಾಪುರದ ಪಿನ್​ಕೋಡ್​ 638781’, ‘ಒನ್​ ಟೈಮ್​ ಪಾಸ್​ವರ್ಡ್​’, ‘ಪ್ರಾಂಕ್​’ ಎಂದು ಸಂಖ್ಯೆಯನ್ನು ಡಿಕೋಡ್​ ಮಾಡಲು ಯತ್ನಿಸಿದ್ದಾರೆ.

ಇಷ್ಟೊಂದು ಕುತೂಹಲ ಮೂಡಿಸಿರುವ ಟ್ವೀಟ್​ನ ಅರ್ಥವೇನು ಎಂಬುದನ್ನು ಸ್ವತಃ ಸುಷ್ಮಾ ಅವರೇ ಮತ್ತೊಂದು ಟ್ವೀಟ್​ ಮೂಲಕ ತಿಳಿಸಬೇಕಿತ್ತು. ಆದರೆ ಸ್ವಲ್ಪ ಹೊತ್ತಿನ ಬಳಿಕ ಟ್ವೀಟ್​ನ್ನು ಡಿಲೀಟ್​ ಮಾಡಿ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.

66 ವರ್ಷದ ಸುಷ್ಮಾ ಸ್ವರಾಜ್​ 2010ರಲ್ಲಿ ಸಾಮಾಜಿಕ ಜಾಲತಾಣ ಬಳಸಲು ಆರಂಭಿಸಿದ್ದು, ಅಂದಿನಿಂದ ಟ್ವಿಟರ್​ನಲ್ಲಿ ಸಾಕಷ್ಟು ಆಕ್ಟಿವ್​ ಆಗಿದ್ದಾರೆ. (ಏಜೆನ್ಸೀಸ್)