ಭಾರತದ ನೂತನ ಚುನಾವಣಾ ಆಯುಕ್ತರಾಗಿ ಸುಶಿಲ್​ ಚಂದ್ರ ಅಧಿಕಾರ ಸ್ವೀಕಾರ

ನವದೆಹಲಿ: ಭಾರತದ ನೂತನ ಚುನಾವಣಾ ಆಯುಕ್ತರಾಗಿ ಸುಶಿಲ್​ ಚಂದ್ರ ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಸುನಿಲ್​ ಅರೋರಾ ಮತ್ತು ಚುನಾವಣಾ ಆಯುಕ್ತ ಅಶೋಕ್​ ಲಾವಾಸಾ ಅವರಿಗೆ ಇವರು ಸಾಥ್​ ನೀಡಲಿದ್ದಾರೆ.

1957ರ ಮೇ 15ರಂದು ಜನಿಸಿರುವ ಸುಶಿಲ್​ ಚಂದ್ರ ಭಾರತೀಯ ಕಂದಾಯ ಸೇವೆಯ (ಐಆರ್​ಎಸ್​) 1980ನೇ ತಂಡಕ್ಕೆ ಸೇರಿದವರು. ಐಆರ್​ಎಸ್​ ಅಧಿಕಾರಿಯಾಗಿ ಇವರು ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿ, ಗುಜರಾತ್​ ಮತ್ತು ಮಹಾರಾಷ್ಟ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ರೂರ್ಕಿ ವಿಶ್ವವಿದ್ಯಾಲಯದಲ್ಲಿ ಪದವಿ, ದೆಹ್ರಾಡೂನ್​ ಡಿಎವಿ ಕಾಲೇಜಿನಲ್ಲಿ ಕಾನೂನು ಪದವಿ ಪಡೆದುಕೊಂಡಿದ್ದಾರೆ. ಇಂಟರ್​ನ್ಯಾಷನಲ್​ ಟ್ಯಾಕ್ಸೇಷನ್​ ಮತ್ತು ಇನ್​ವೆಸ್ಟಿಗೇಷನ್​ ವಿಭಾಗದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ.

ಭಾರತ ಚುನಾವಣಾ ಆಯುಕ್ತರಾಗಿ ಕಾರ್ಯಭಾರವಹಿಸಿಕೊಳ್ಳುವ ಮುನ್ನ ಸುಶಿಲ್​ ಚಂದ್ರ ಕೇಂದ್ರೀಯ ನೇರ ತೆರಿಗೆಗಳ ನಿಗಮದ ಚೇರ್ಮನ್​ ಆಗಿ ಸೇವೆ ಸಲ್ಲಿಸುತ್ತಿದ್ದರು. ಇವರು ಸಿಬಿಡಿಟಿಯ ತನಿಖಾ ವಿಭಾಗದ ಸದಸ್ಯರಾಗಿದ್ದರು. (ಏಜೆನ್ಸೀಸ್​)