ಸಿನಿಮಾ

ದೇಹದ ತೂಕ ಮತ್ತು ಕೊಬ್ಬನ್ನು ಕರಗಿಸಲು ಸೂರ್ಯ ಮುದ್ರೆ

ದೇಹವನ್ನು ಸದೃಢವಾಗಿಡಲು ಹಲವು ಪ್ರಕಾರಗಳಲ್ಲಿ ಕಾಳಜಿ ವಹಿಸಬೇಕಾಗುತ್ತದೆ. ಆಹಾರ ಕ್ರಮ, ಜೀವನಶೈಲಿ, ಯೋಗಾಭ್ಯಾಸ, ವಾಕಿಂಗ್ ಹೀಗೆ ಹಲವು ಅಂಶಗಳು ಸೇರ್ಪಡೆಯಾಗುತ್ತವೆ. ಆರ್ಯುರ್ವೇದ ಮತ್ತು ಯೋಗವು ಸದೃಢ ಆರೋಗ್ಯಕ್ಕೆ ಹಲವು ಆಸನ ಮತ್ತು ಮುದ್ರೆಗಳ ಬಗ್ಗೆ ಹೇಳುತ್ತದೆ. ಒಂದು ಮುದ್ರೆಯನ್ನು ಅಭ್ಯಾಸ ಮಾಡುವುದರಿಂದ ಹಲವು ಕಾಯಿಲೆಗಳನ್ನು ಹೊಡೆದೋಡಿಸಬಹುದು ಎಂದು ಹೇಳಲಾಗುತ್ತದೆ. ಅವುಗಳಲ್ಲಿ ಒಂದು ಸೂರ್ಯ ಮುದ್ರೆ ಆಗಿದೆ. ಸಂಸ್ಕೃದಲ್ಲಿ ಸೂರ್ಯ ಎಂದರೆ ಸೂರ್ಯ ಮತ್ತು ಮುದ್ರೆ ಎಂದರೆ ಸನ್ನೆ ಎಂದರ್ಥ.

ಬೆಂಕಿಯನ್ನು ಅಗ್ನಿ ಎಂದು ಕರೆಯುವುದರಿಂದ, ಸೂರ್ಯ ಮುದ್ರೆಯನ್ನು ಸಂಸ್ಕೃದಲ್ಲಿ ಅಗ್ನಿ ಮುದ್ರೆ ಎಂದು ಕರೆಯಲಾಗುತ್ತದೆ. ಇದು ಬೆಂಕಿಯ ಅಂಶವನ್ನು ಹೆಚ್ಚಿಸುತ್ತದೆ. ಆದ್ದರಿಂದ ಇದನ್ನು ಅಗ್ನಿ ವರ್ಧಕ ಮುದ್ರೆ ಎಂದು ಕರೆಯಲಾಗುತ್ತದೆ. ಸೂರ್ಯ ಮುದ್ರೆಯ ಇನ್ನೊಂದು ಹೆಸರು ಪೃಥ್ವಿ ಶಮಕ್ ಮುದ್ರಾ ಅಥವಾ ಭೂಮಿಯ ಅಂಶವನ್ನು ಕಡಿಮೆ ಮಾಡುವ ಮುದ್ರೆ.

ಉಂಗುರದ ಬೆರಳಿನ ಮೇಲೆ ಹೆಬ್ಬೆರಳನ್ನು ಇರಿಸುವುದರಿಂದ ದೇಹದೊಳಗಿನ ಭೂಮಿಯ ಅಂಶವನ್ನು (ಪೃಥ್ವಿ ತತ್ವ) ಪರಿಣಾಮ ಕಾರಿಯಾಗಿ ಕಡಿಮೆ ಮಾಡುತ್ತದೆ. ದೇಹದೊಳಗೆ ಬೆಂಕಿಯ ಅಂಶದ ಶಕ್ತಿಯನ್ನು ಸಕ್ರಿಯಗೊಳಿಸುವ ಮೂಲಕ, ಸೂರ್ಯ ಮುದ್ರೆಯು ಜೀರ್ಣಕ್ರಿಯೆಯನ್ನು ಸುಧಾರಿ ಸುತ್ತದೆ. ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಮತ್ತು ಸುಗಮ ಶಕ್ತಿಯ ಹರಿವನ್ನು ಉತ್ತೇಜಿಸುತ್ತದೆ. ಸೋಮಾರಿಯಾದ ಅಥವಾ ಆಲಸ್ಯವನ್ನು ಅನುಭವಿಸುವ ಜನರಿಗೆ, ಸೂರ್ಯ ಮುದ್ರೆಯು ಅವರ ಶಕ್ತಿಯನ್ನು ಹೆಚ್ಚಿಸುವಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ.

ಸೂರ್ಯ ಮುದ್ರೆ ಮಾಡುವ ವಿಧಾನ: ಉಂಗುರದ ಬೆರಳಿನ ತುದಿಯನ್ನು ಹೆಬ್ಬೆರಳಿನ ಬುಡದಲ್ಲಿರಿಸಿ, ಹೆಬ್ಬೆರಳನ್ನು ಉಂಗುರ ಬೆರಳಿನ ಮೇಲೆ ಹಗುರವಾಗಿ ಒತ್ತಿ ಇಡಿ. ಉಳಿದ ಬೆರಳುಗಳು ನೇರವಾಗಿರಲಿ. ಇದನ್ನು ಸುಮಾರು 10 ರಿಂದ 20, 40 ನಿಮಿಷ ಮಾಡಿದರೂ ಉಪಯೋಗ ಕಾಣಬಹುದು. ಅಥವಾ ಹತ್ತರಿಂದ ಹದಿನೈದು ನಿಮಿಷಗಳ ವರೆಗೆ ಮೂರು ಬಾರಿ ಸಹಾ ಅಭ್ಯಾಸ ಮಾಡಬಹುದು. ಬಳಿಕ 10 ನಿಮಿಷ ಪ್ರಾಣ ಮುದ್ರೆಯನ್ನು ಮಾಡಿ. ಮುದ್ರೆಯನ್ನು ಎರಡೂ ಕೈಯಲ್ಲಿ ಅಭ್ಯಾಸ ಮಾಡಬೇಕು. ಹೇಳಬೇಕಾದ ಮಂತ್ರ: ಓಂ ಸೂರ್ಯಾಯ ನಮಃ

ಪ್ರಯೋಜನವೇನು?: ದೇಹದ ತೂಕ ಮತ್ತು ಕೊಬ್ಬನ್ನು ಕರಗಿಸಲು ಪ್ರಾಚೀನ ಕಲೆಯಾದ ಯೋಗ, ಮುದ್ರೆಗಳು ಬಹಳಷ್ಟು ಸಹಕಾರಿಯಾಗುತ್ತವೆ. ಯೋಗಾಭ್ಯಾಸದಿಂದ ದೇಹದ ಒಳಗಿನ ಅಂಗಕ್ಕೆ ಹೆಚ್ಚಿನ ವ್ಯಾಯಾಮ ಬೇಗನೆ ದೊರಕಿ ಕೊಬ್ಬು ಕರಗಲು ಸಹಕಾರಿಯಾಗುತ್ತದೆ. ಇದರೊಂದಿಗೆ ನಿಯಮಿತವಾದ ಪೋಷಕಾಂಶಗಳ ಆಹಾರ ಸೇವನೆ ಅಗತ್ಯ. ಕೊಬ್ಬಿನಂಶವಿರುವ ಆಹಾರವನ್ನು ಆದಷ್ಟು ಕಡಿಮೆ ಮಾಡಬೇಕು. ಸೂರ್ಯ ಮುದ್ರೆಯನ್ನು ಮಾಡುವುದರಿಂದ ಶರೀರದ ಬೊಜ್ಜನ್ನು ಕರಗಿಸಬಹುದು. ದೇಹದ ಅತಿಯಾದ ಕೊಬ್ಬನ್ನು ಕರಗಿಸಿ ದೇಹದ ತೂಕವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿ ಉಷ್ಣತೆಯನ್ನು ಉಂಟುಮಾಡಿ ಜೀರ್ಣಕ್ರಿಯೆಯನ್ನು ಸುಗಮವಾಗಿಸುತ್ತದೆ. ಮಧುಮೇಹ ಮತ್ತು ಪಿತ್ತಜನಕಾಂಗದ ಕಾಯಿಲೆಗಳಿಗೆ ಇದು ಔಷಧದಂತೆ ಕೆಲಸ ಮಾಡುತ್ತದೆ. ರಕ್ತದಲ್ಲಿನ ಕೊಲೆಸ್ಟ್ರಾಲ್ ಸಹ ಇಳಿಯುತ್ತದೆ. ಕಫ, ಶೀತ, ಸೈನಸ್, ಕ್ಷಯ ಗಂಟಲು ಸಂಬಂಧಿ ಸಮಸ್ಯೆಗಳಿರುವಾಗ ಈ ಸೂರ್ಯ ಮುದ್ರೆಯನ್ನು ಮಾಡಿದಲ್ಲಿ ಉತ್ತಮ ಫಲವನ್ನು ಕಾಣಬಹುದು. ದೇಹದ ಉಷ್ಣತೆಯನ್ನು ಹೆಚ್ಚಿಸಿ, ಚಳಿಯ ಅನುಭವವನ್ನು ಕಡಿಮೆ ಮಾಡಿ ದೇಹಕ್ಕೆ ಉತ್ಸಾಹ, ಚೈತನ್ಯ ತುಂಬುತ್ತದೆ. ಶರೀರದ ತೊಂದರೆಗಳು ಕಡಿಮೆಯಾದಾಗ ಸೂರ್ಯ ಮುದ್ರೆ ಮಾಡುವುದನ್ನು ನಿಲ್ಲಿಸಬೇಕು.

ವಿಶೇಷ ಸೂಚನೆ: ಪಿತ್ತ ದೋಷ ಇದ್ದವರು ಸೂರ್ಯ ಮುದ್ರೆಯನ್ನು ಅಭ್ಯಾಸ ಮಾಡುವುದು ಬೇಡ. ಹಾಗೆಯೇ ಈ ಸೂರ್ಯ ಮುದ್ರೆಯನ್ನು ಮಧ್ಯಾಹ್ನ 12 ರಿಂದ 2 ಗಂಟೆಯ ವರೆಗಿನ ಅವಧಿಯಲ್ಲಿ ಅಭ್ಯಾಸ ಮಾಡುವುದು ಬೇಡ.

ನೆನಪಿಡಿ. ಈ ಮುದ್ರೆ ಮಾಡುವುದರ ಜತೆಗೆ ಸೇವಿಸುವ ಆಹಾರದ ಮೇಲೆ ನಿಯಂತ್ರಣ ಅಗತ್ಯ. ಸೇವಿಸುವ ಆಹಾರದ ಮೂಲಕ ಶೇಖರಣೆಗೊಳ್ಳುವ ಕೊಬ್ಬಿನ ಅಂಶ ಯೋಗದ ಮೂಲಕ ಕರಗುವ ಕೊಬ್ಬಿಗಿಂತ ಕಡಿಮೆ ಇರಬೇಕು. ಕೊಬ್ಬು ಶೇಖರಣೆಗೊಳ್ಳಲು ಸಮಯ ತೆಗೆದುಕೊಂಡಂತೆ, ಕರಗಲೂ ಸ್ವಲ್ಪ ಸಮಯ ಅಗತ್ಯ.

ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಬೆಲೆಯಲ್ಲಿ ಭಾರಿ ಇಳಿಕೆ; ಕಾರಣ ಇದು..

ನಾನು ಬದುಕಿದ್ದಾಗಲೇ ಸಾಯೋದಕ್ಕೆ ಇಷ್ಟಪಡ್ತೀನಿ!: ನಿರ್ದೇಶಕ ಉಪೇಂದ್ರ ಹೀಗಂದಿದ್ಯಾಕೆ?

Latest Posts

ಲೈಫ್‌ಸ್ಟೈಲ್