ಸರ್ವೇ ಇಲಾಖೆಯ ವಿಳಂಬ ಧೋರಣೆ ಖಂಡನೀಯ

ಯಲಬುರ್ಗಾ: ಭೂಮಾಪನ ಕಾರ್ಯವನ್ನು ವಿಳಂಬ ಮಾಡುತ್ತಿರುವ ಸರ್ವೇ ಇಲಾಖೆಯ ಧೋರಣೆ ಖಂಡಿಸಿ ಪಟ್ಟಣದ ವಕೀಲರ ಸಂಘ ತಹಸೀಲ್ದಾರ್ ರಮೇಶ ಅಳವಂಡಿಕರ್‌ಗೆ ಸೋಮವಾರ ಮನವಿ ಸಲ್ಲಿಸಿತು.

ಸಂಘದ ತಾಲೂಕಾಧ್ಯಕ್ಷ ಆರ್.ಜಿ.ನಿಂಗೋಜಿ ಮಾತನಾಡಿ, ನ್ಯಾಯಾಲಯದಲ್ಲಿ ಮೂಲ ದಾವೆಯಲ್ಲಿ ರಾಜಿ ಡಿಕ್ರಿ ಪ್ರಕಾರ ಪಹಣಿ ಪತ್ರಿಕೆಯನ್ನು ಶೀಘ್ರ ಮಾಡಿಕೊಬೇಕು. ಕೋರ್ಟ್ ಡಿಕ್ರಿ ಪ್ರಕಾರ ವರ್ಗಾವಣೆ ಹಕ್ಕು ಬದಲಾವಣೆ ಮಾಡಲು ಸರ್ವೇ ನಕಾಶೆ ನೀಡಬೇಕು ಎಂದಿದೆ. ಇಲಾಖೆ ಮಾಡುತ್ತಿರುವ ವಿಳಂಬದಿಂದ ರೈತರಿಗೆ ತುಂಬಾ ತೊಂದರೆಯಾಗುತ್ತಿದೆ. ಕಂದಾಯ ಇಲಾಖೆಯ ಕೆಲ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದು, ರೈತರಿಗೆ ಅನ್ಯಾಯವಾಗುತ್ತಿದೆ. ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಕುತ್ತದೆ ಎಂದು ಎಚ್ಚರಿಕೆ ನೀಡಿದರು.

ಮನವಿ ಸ್ವೀಕರಿಸಿ ತಹಸೀಲ್ದಾರ್ ರಮೇಶ ಅಳವಂಡಿಕರ್ ಮಾತನಾಡಿ, ಶೀಘ್ರ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು. ಸಂಘದ ಪದಾಧಿಕಾರಿಗಳಾದ ಆರ್.ಜಿ.ಕುಷ್ಟಗಿ ಶೆಟ್ಟರ್, ಬಿ.ಎಂ.ಶರೂರು, ಸಿ.ಎಸ್.ಬನ್ನಪ್ಪಗೌಡ್ರ, ರಾಮಣ್ಣ ಸಾಲಬಾವಿ, ಶಂಕರಗೌಡ್ರ ಗೆದಗೇರಿ, ಪಿ.ಆರ್.ಹಿರೇಮಠ, ಎಚ್.ಎಚ್.ಹಿರೇಮನಿ, ಮಲ್ಲನಗೌಡ ಪಾಟೀಲ್, ಇಂದಿರಾ ಉಳ್ಳಾಗಡ್ಡಿ, ಜಗದೀಶ ತೊಂಡಿಹಾಳ, ಕೆ.ಆರ್.ಬೆಟಗೇರಿ, ಸುಬಾಸ್ ಹೊಂಬಳ ಇತರರು ಇದ್ದರು.