40ನೇ ಕಾರ್ಯಕ್ರಮದತ್ತ ಸ್ವಚ್ಛ ಸುರತ್ಕಲ್

ಲೋಕೇಶ್ ಸುರತ್ಕಲ್
ಸುರತ್ಕಲ್ ಪರಿಸರ ಸ್ವಚ್ಛವಾಗಿಡುವ ಸಂಕಲ್ಪದೊಂದಿಗೆ 2018ರ ಗಾಂಧಿ ಜಯಂತಿಯಂದು ಆರಂಭಗೊಂಡ ಸ್ವಚ್ಛ ಸುರತ್ಕಲ್ ಅಭಿಯನ 39ನೇ ಶ್ರಮದಾನ ಪೂರ್ಣಗೊಳಿಸಿದೆ.

ಊರು ಸ್ವಚ್ಛವಾಗಿರಲಿ ಎಂಬ ಆಶಯದೊಂದಿಗೆ ಒಂದು ವರ್ಷದಿಂದ ಪ್ರತಿ ಭಾನುವಾರ ಒಂದಷ್ಟು ಮಂದಿ ಸಮಾಜಕ್ಕಾಗಿ ಸಮಯ ವಿನಿಯೋಗಿಸುತ್ತಿದ್ದಾರೆ. ಮಂಗಳೂರಿನ ರಾಮಕೃಷ್ಣ ಮಿಷನ್, ಸ್ವಚ್ಛ ಸುರತ್ಕಲ್ ಅಭಿಯಾನದ ಆಶ್ರಯದಲ್ಲಿ, ಎಂಆರ್‌ಪಿಎಲ್ ಸಹಭಾಗಿತ್ವ, ನಾಗರಿಕ ಸಲಹಾ ಸಮಿತಿ ಸುರತ್ಕಲ್ ನೇತೃತ್ವ, ಪರಿಸರದ ಸಂಘ ಸಂಸ್ಥೆಗಳ ಶಾಲಾ ಕಾಲೇಜು ವಿದ್ಯಾರ್ಥಿಗಳ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯುತ್ತಿದೆ.
ಪ್ರತಿವಾರ ಸುಮಾರು 50 ಚೀಲದಷ್ಟು ತ್ಯಾಜ್ಯ ಸಂಗ್ರಹಿಸುತ್ತಿದ್ದಾರೆ. ಕಸ ಎಸೆಯಲಾಗುವ 16 ಸ್ಥಳ ಗುರುತಿಸಿ ಅಲ್ಲಿ ಹೂದೋಟ ನಿರ್ಮಿಸಲಾಗಿದೆ. ಕಳೆದ ಸಾಲಿನಲ್ಲಿ ಸುಮಾರು 20, ಪ್ರೌಢಶಾಲೆಗಳಲ್ಲಿ ಸ್ವಚ್ಛಮನಸ್ಸು ಕಾರ್ಯಕ್ರಮ ನಡೆಸಲಾಗಿದೆ. ಈ ಸಾಲಿನಲ್ಲಿ 17 ಶಾಲೆಗಳಲ್ಲಿ ಕಾರ್ಯಕ್ರಮ ನಡೆಸಲಾಗಿದೆ. 230 ಮಡಕೆ ಗೊಬ್ಬರ ಘಟಕ ವಿತರಿಸಲಾಗಿದೆ. ಹಸಿ ಕಸ ಒಣಕಸ ವಿಂಗಡನೆಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಕಸದ ತೊಟ್ಟಿಯಂತೆ ಇದ್ದ ಸುರತ್ಕಲ್ ಫ್ಲೈ ಓವರ್ ಅಡಿಯನ್ನು ಉದ್ಯಮ, ಬ್ಯಾಂಕ್ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿ ಅಲ್ಲಿ ಪಾರ್ಕಿಗ್, ಉದ್ಯಾನವನ, ಮೂಲಿಕಾವನ ನಿರ್ಮಿಸಿದ್ದಾರೆ.

ಅಧಿಕಾರಿಗಳ ಸಹಕಾರ ಬೇಕು: ಸಮಿತಿ ವತಿಯಿಂದ ಅಭಿವೃದ್ಧಿಪಡಿಸಲಾಗಿರುವ ಸುರತ್ಕಲ್ ಫ್ಲೈಓವರ್ ಅಡಿಗೆ ಬೀದಿದೀಪ ಅಳವಡಿಗೆ ಭರವಸೆಯಾಗಿಯೇ ಉಳಿದಿದೆ. ಕುಡುಕರ, ಭಿಕ್ಷುಕರ, ಅಲೆಮಾರಿಗಳ, ಆಶ್ರಯತಾಣವಾಗುತ್ತಿದೆ. ಪೊಲೀಸ್ ಇಲಾಖೆ, ಸಮಾಜಕಲ್ಯಾಣ ಇಲಾಖೆ ಭಿಕ್ಷುಕರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಿದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ ಎನ್ನುತ್ತಾರೆ ನಾಗರಿಕ ಸಲಹಾ ಸಮಿತಿ ಸ್ವಚ್ಛತಾ ಸಂಚಾಲಕ ಸತೀಶ್ ಸದಾನಂದ.

ಕಸ ನಿರ್ವಹಣೆ ಬಗ್ಗೆ ನಾಗರಿಕರಲ್ಲಿ ಪ್ರಜ್ಞೆ ಮೂಡಲಾರಂಭಿಸಿದೆ. ಪರಿಸರ ಜಾಗೃತಿ ಮೂಡುತ್ತಿದೆ. ಸ್ವಚ್ಛತಾ ಆಂದೋಲದಲ್ಲಿ ನಾಗರಿಕರು ಸಂಘ, ಸಂಸ್ಥೆಗಳ ಪ್ರತಿನಿಧಿಗಳು ತಾವಾಗಿಯೇ ಭಾಗವಹಿಸುತ್ತಿದ್ದಾರೆ. ಈ ಕಾರ್ಯಕ್ರಮ ಮುಂದುವರಿಸಲಾಗುವುದು. ಈ ಬಗ್ಗೆ ಸಮಿತಿಯ ಸದಸ್ಯರ, ಸಂಘ ಸಂಸ್ಥೆಗಳ ಸಭೆ ಕರೆದು ತೀರ್ಮಾನಿಸುತ್ತೇವೆ.
ಪ್ರೊ.ಕೆ.ರಾಜ್‌ಮೋಹನ್ ರಾವ್ ಸುರತ್ಕಲ್ ನಾಗರಿಕ ಸಲಹಾ ಸಮಿತಿ ಸಂಚಾಲಕ

Leave a Reply

Your email address will not be published. Required fields are marked *