ಬಸವಕಲ್ಯಾಣ: ಅಂತಾರಾಷ್ಟ್ರೀಯ ಲಿಂಗಾಯತ ಧರ್ಮಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಸಹಯೋಗದಡಿ ಹರಳಯ್ಯ ಗವಿಯಲ್ಲಿ ಸಮಾನತೆಗಾಗಿ ಪ್ರಾಣ ಬಲಿದಾನ ಮಾಡಿದ ಶರಣರ ಸ್ಮರಣೆಗಾಗಿ ಶರಣ ವಿಜಯೋತ್ಸವ, ಲಿಂಗವಂತ ಹುತಾತ್ಮ ದಿನಾಚರಣೆ ಗುರುವಾರದಿಂದ ಅ.೧೨ರವರೆಗೆ ನಡೆಯಲಿದೆ ಎಂದು ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ತಿಳಿಸಿದರು.
ಗುರುವಾರ ಬೆಳಗ್ಗೆ ೮ಕ್ಕೆ ನಗರದ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ, ಪ್ರಾರ್ಥನೆ, ಪರುಷ ಕಟ್ಟೆವರೆಗೆ ವಚನ ಸಾಹಿತ್ಯದ ಪಲ್ಲಕಿ ಉತ್ಸವ ಜರುಗಲಿದೆ. ಸಂಜೆ ೬ಕ್ಕೆ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸುವರು. ಧಾರವಾಡದ ಶ್ರೀ ಡಾ.ಮಲ್ಲಿಕಾರ್ಜುನ ಮಹಾಸ್ವಾಮೀಜಿ ಅನುಭಾವ ನೀಡುವರು. ಶಾಸಕ ಶರಣು ಸಲಗರ ಅಧ್ಯಕ್ಷತೆ ವಹಿಸುವರು ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶುಕ್ರವಾರ ಸಂಜೆ ೬ಕ್ಕೆ ವೀರ ಸೈನಿಕರ ವೇದಿಕೆ ಗೋಷ್ಠಿಯಲ್ಲಿ ವಿಕಾಸ ಅಕಾಡೆಮಿ ಮುಖ್ಯ ಸಂಯೋಜಕ ಡಾ.ಬಸವರಾಜ ಪಾಟೀಲ್ ಸೇಡಂ, ಕರ್ನಲ್ ವೆಂಕಟರೆಡ್ಡಿ ಅನುಭಾವ ನೀಡುವರು. ೫ರಂದು ಮಕ್ಕಳ ಸಮಾವೇಶವನ್ನು ಖೇಳಗಿಯ ಶ್ರೀ ಶಿವಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗುರುರಾಜ ಉದ್ಘಾಟಿಸುವರು. ೬ರಂದು ಸಂಜೆ ೬ಕ್ಕೆ ಮಹಾಶಕ್ತಿ ಕೂಟಗಳ ಸಮಾವೇಶ ಗೋಷ್ಠಿಯನ್ನು ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ, ೭ರಂದು ಹಿರಿಯ ನಾಗರಿಕರ ಸಮಾವೇಶವನ್ನು ತಹಸೀಲ್ದಾರ್ ದತ್ತಾತ್ರೇಯ ಗಾದಾ ಉದ್ಘಾಟಿಸುವರು. ೮ರಂದು ಸಂಜೆ ೬ಕ್ಕೆ ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ಸಾನ್ನಿಧ್ಯ, ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೊರಕೆ ಅಧ್ಯಕ್ಷತೆಯಲ್ಲಿ ಸಾಮಾಜಿಕ ನಾಟಕ ತಾಯಿಯ ಕರುಳು ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು.
೯ರಂದು ೬ಕ್ಕೆ ಬಸವ ಚಳವಳಿ ಅಂದು ಇಂದು ಮುಂದು ಗೋಷ್ಠಿಯನ್ನು ಶ್ರೀ ಗುರುಬಸವ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಸಂಸದ ಸಾಗರ್ ಖಂಡ್ರೆ ಉದ್ಘಾಟಿಸಲಿದ್ದು, ಹಿರಿಯ ಪತ್ರಕರ್ತ ದಿನೇಶ್ ಅಮೀನಮಟ್ಟು ಅನುಭಾವ ನೀಡುವರು. ೧೦ರಂದು ಸಂಜೆ ೬ಕ್ಕೆ ಅನುಭಾವ ಗೋಷ್ಠಿಯಲ್ಲಿ ಬಾದಾಮಿಯ ಶ್ರೀ ಡಾ.ಮಹಾಂತ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕೆವಿಕೆ ಮುಖ್ಯಸ್ಥ ಸುನೀಲಕುಮಾರ ಅನುಭಾವ ನೀಡುವರು. ೧೧ರಂದು ಬೆಳಗ್ಗೆ ೮ಕ್ಕೆ ಸಾಮೂಹಿಕ ಇಷ್ಟಲಿಂಗಾರ್ಚನೆ, ೧೧ಕ್ಕೆ ಹುತಾತ್ಮ ದಿನಾಚರಣೆ, ವಿವಿಧ ಕ್ಷೇತ್ರದ ಸಾಧಕರಿಗೆ ಶರಣ ನಾಯಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ, ಮಧ್ಯಾಹ್ನ ೩ಕ್ಕೆ ಹುತಾತ್ಮ ಶರಣ ಎಳೆಹೂಟೆ ಮೆರವಣಿಗೆ ಕೋಟೆಯಿಂದ ಹರಳಯ್ಯ ಗವಿವರೆಗೆ ನಡೆಯಲಿದೆ. ಸಂಜೆ ೬ಕ್ಕೆ ಶರಣ ಶ್ರೀ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಅವರಿಗೆ ವಿಜಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಗುಲ್ಬರ್ಗ ವಿಶ್ವವಿದ್ಯಾಲಯ ಕುಲಪತಿ ಪ್ರೊ.ದಯಾನಂದ ಅಗಸರ ಉದ್ಘಾಟಿಸುವರು. ೧೨ರಂದು ಶರಣ ವಿಜಯೋತ್ಸವ ಮಂಗಲಗೊಳ್ಳಲಿದೆ ಎಂದು ವಿವರಿಸಿದರು.
ಪ್ರಮುಖರಾದ ಚನ್ನಪ್ಪ ಪರ್ತಾಪುರೆ, ಬಸವರಾಜ ತೊಂಡಾರೆ, ಪ್ರೊ.ಶಂಕರ ಕರಣೆ, ಗುರುನಾಥ ಗಡ್ಡೆ, ಬಸವರಾಜ ಬಾಲಿಕಿಲೆ, ರವೀಂದ್ರ ಕೊಳಕೂರ, ಶಿವಕುಮಾರ ಬಿರಾದಾರ, ಸಂಜುಕುಮಾರ ಜಾಧವ್, ಸುಭಾಷ ರಗಟೆ, ಸೋನಾಲಿ ನೀಲಕಂಠೆ, ಜಯಶ್ರೀ ಬಿರಾದಾರ, ಅಂಬಿಕಾ ನಾಗರಾಳೆ, ಜಗನ್ನಾಥ ಕುಶನೂರೆ ಇದ್ದರು.