ತಿರುಗಾಟದಲ್ಲಿ ನಿಲುಕುವ ಅಚ್ಚರಿಗಳು

ತಿರುಗಾಟದಲ್ಲಿ ನಿಲುಕುವ ಅಚ್ಚರಿಗಳು ಯಾಕಾಗಿ ವಿದೇಶ ಪ್ರವಾಸ ಮಾಡುತ್ತಾರೆ? ಎಂದು ಕೇಳಿದರೆ ಹಾಗೊಮ್ಮೆ ತಿರುಗಿದರೆ ಮಾತ್ರವೇ ಅದೆಲ್ಲ ಗೊತ್ತಾಗುತ್ತದೆ ಎನ್ನುತ್ತೇನೆ ನಾನು. ಕಾರಣ ಮನುಷ್ಯ ಹುಟ್ಟಿದಾರಭ್ಯ ಮೊದಲು ಆರಂಭಿಸಿದ್ದೇ ಅಲೆಮಾರಿತನ. ಜಗತ್ತು ಮತ್ತು ಜೀವನ ಬೆಳೆದದ್ದು, ಖಂಡಾಂತರಗಳ ಬೆಸುಗೆಯಾದದ್ದೂ, ಜಗತ್ತಿನ ಹಲವು ವೈರುಧ್ಯಗಳ ಜತೆಗೆ ಕ್ರಾಂತಿಕಾರಕ ಬದಲಾವಣೆಗಳೂ ಎಲ್ಲ ಭೂಭಾಗದಲ್ಲಿ ಘಟಿಸಲು ಕಾರಣವಾದದ್ದು ಅಲೆಮಾರಿತನವೇ.

ಇವತ್ತು ಭಾರತವನ್ನು ಮೊದಲಿಗೆ ವಿದೇಶಕ್ಕೆ ಪರಿಚಯಿಸಿದ್ದೇ ಅಲ್ಲಿನ ಅಲೆಮಾರಿಗಳು. ಹಾಗೊಂದು ವೇಳೆ ಅಲೆಮಾರಿತನದ ವಿಪರೀತತೆ ಅವರಿಗಿಲ್ಲದೆ ಹೋಗಿದ್ದರೆ, ಗುಡ್ ಆಫ್ ಹೋಪ್ ಭೂಶಿರ ದಾಟಿ ಜನರು ಈಚೆಗೆ ಬರುತ್ತಲೇ ಇರಲಿಲ್ಲ. ಕಾನಸ್ಟಂಟಿನೋಪಲ್ ಎಂಬ ಪದ ಓದಿಯೇ ಈ ಎರಡು ಖಂಡಗಳನ್ನು ಬೆಸೆದ ಈ ಭೂಭಾಗಕ್ಕೆ ಒಮ್ಮೆಯಾದರೂ ಹೋಗಿ ಆ ಸೇತುವೆಯ ಮೇಲೆ ನಿಲ್ಲಬೇಕೆನ್ನುವ ತುಡಿತ ನನ್ನಲ್ಲೂ ಉಂಟಾಗಿ ಅದಕ್ಕಾಗಿ ನಾನು ಟರ್ಕಿ ಎಂಬ ವಿಪರೀತ ವೈರುಧ್ಯಗಳ ಆಕರ್ಷಣೆಯ ದೇಶಕ್ಕೆ ಕಾಲಿಡುತ್ತಲೂ ಇರಲಿಲ್ಲ.

ನೆನಪಿರಲಿ, ಪ್ರವಾಸಕ್ಕೂ ಅಲೆಮಾರಿತನಕ್ಕೂ ಭಯಂಕರ ವ್ಯತ್ಯಾಸಗಳಿವೆ. ಸುಮ್ಮನೆ ಆಯ್ದು ಸಿದ್ಧಸೂತ್ರದ ದಾರಿ ಹಿಡಿದು ಕಾರು, ರೈಲು ಎಂದೆಲ್ಲ ಸಮಯಕ್ಕೆ ಸರಿಯಾಗಿ ಸೆಲ್ಪಿ ಕ್ಲಿಕ್ಕಿಸುತ್ತ, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತ ಮೆರವಣಿಗೆ ಮಾಡಿಕೊಳ್ಳುವ ಶೋಕಿ ಖಂಡಿತವಾಗಿಯೂ ಅಲೆಮಾರಿತನವಲ್ಲ ಮತ್ತು ಅಂಥದ್ದೊಂದು ಪ್ರವಾಸ ಒಂದು ಪ್ರದೇಶಕ್ಕೆ ಭೇಟಿ ಎಂದಾಗುತ್ತದೆಯೇ ಹೊರತು ಅದು ನೀವು ಹೋಗಿನಿಂತ ಕ್ಷಣವನ್ನು ಅವಿಸ್ಮರಣೀಯ ಮಾಡುವುದಿಲ್ಲ. ಆದಾಗ್ಯೂ ಜನರ ಪ್ರವಾಸದ ಆಯ್ಕೆ ಇವತ್ತಿಗೂ ಹೆಚ್ಚಾಗಿ ಅದೇ ಆಗಿರುತ್ತದೆ. ಆದರೆ ಅಲೆಮಾರಿತನದ ವಿಶೇಷತೆಗಳು ಮತು ಅನುಭವಗಳು ಯಾವಾಗಲೂ ವಿಭಿನ್ನ.

ಎಷ್ಟು ವಿಪರೀತ, ವಿಭಿನ್ನ ವಿಷಯಗಳನ್ನು ನೀವು ನೋಡಬಹುದೆಂದರೆ, ಸ್ವಲ್ಪೇ ಸ್ವಲ್ಪ ಲಂಡನ್ ನಗರದಾಚೆಗೆ ಹೋದರೂ ಹಲವು ಹಳ್ಳಿಗಳ ಹೆಸರನ್ನು ಉಚ್ಚರಿಸಲೇ ಆಗುವುದಿಲ್ಲ. ವೇಲ್ಸ್ ದೇಶದ ಅಕ್ಷರ ಮೂಲದ ಕನ್​ಫ್ಯೂಶನ್ನೆ ಬೇಡ ಎಂದು ಊರಿಗೇ ಅಬ್ರಿವೆಷನ್ ಬಳಸುವ ವೈಚಿತ್ರ್ಯ ದಕ್ಕೋದು ಬ್ರಿಟನ್ ಎಂಬ ಗ್ರೇಟ್ ದೇಶದಲ್ಲಿ ಮಾತ್ರ. ವಿಚಿತ್ರ ಕಾಗುಣಿತದ ಊರುಗಳನ್ನು ನೆನಪಿಡುವುದಾದರೂ ಹೇಗೆ? ಅದಕ್ಕೂ ಮೊದಲು ಅದನ್ನು ಎಲ್ಲಿದೆ ಎಂದು ವಿಚಾರಿಸುವುದಾದರೂ ಹೇಗೆ? ಈ ಊರುಗಳು ವಿಚಿತ್ರ ಹೆಸರಿಗಷ್ಟೆ ವಿಭಿನ್ನ ಮಾತ್ರವಲ್ಲ, ನಾವು ನೀವು ಕನಸಿನಲ್ಲೂ ನಿರೀಕ್ಷಿಸದಷ್ಟು ಆಕರ್ಷಕ ಕೂಡ. ಇವೆಲ್ಲ ಕಲ್ಪನೆಯೂ ಮಾಡಿಕೊಳ್ಳಲಾಗದಷ್ಟು ವ್ಯವಸ್ಥಿತವೂ ಆಗಿವೆಯಲ್ಲದೆ, ವೇಲ್ಸ್​ನ ರಾಜಧಾನಿ ಕಾರ್ಡಿಫ್ ಮತ್ತು

ಕಾಟ್ಸ್​ವರ್ಡ್​ನ ಆಚೀಚೆ ಇಂಥದ್ದೇ ಹಳ್ಳಿಗಳ ಸರಮಾಲೆ ಸುತ್ತಲು ಹೊರಟರೆ ತಿಂಗಳುಗಳು ಸಾಲುವುದಿಲ್ಲ. ಇವೆಲ್ಲ ಪ್ರವಾಸಿಗರಿಗೆ ದಕ್ಕಿದ್ದೇ ಇಲ್ಲ. ಏನಿದ್ದರೂ ಅಲೆಮಾರಿತನಕ್ಕೆ ಮಾತ್ರ ಕೈಗೆಟುಕುವ ಅದ್ಭುತ ದೃಶ್ಯಕಾವ್ಯ.

ನಾವು ಈ ಮೊದಲು ನೋಡಿದ್ದ ಬರ್ಕಲೀ ಎಂಬ ಸಿಗರೇಟು ಹುಟ್ಟಿದ್ದು ನಮ್ಮ ಮಂಗಳೂರು ಗಣೇಶ ಬೀಡಿ ಬ್ರಾಂಡಿನಂತೆ ಊರಿನ ಹೆಸರು ಹೊತ್ತು, ಈಗಲೂ ಗ್ಲಿನ್ ಫಿಡ್ಡಿಚ್​ನಂತೆ ವ್ಯವಸ್ಥಿತ ಪ್ರವಾಸಿಕೇಂದ್ರವಾಗಿದ್ದರೆ, ಮೂಲನಿವಾಸಿಗಳ ಕೇಂದ್ರ ಮತ್ತು ಕಾಡು ತೋರಿಸುವುದೇ ವಿದೇಶದವೊಂದರ ಪ್ರಮುಖ ಆದಾಯ ಮೂಲ ಎಂದರೆ ನೀವು ನಂಬಲೇಬೇಕು. ಎಂಥ ಕೊರೆವ ಚಳಿ ಇದ್ದರೂ ಅದಕ್ಕಿಂತ ತಣ್ಣಗಿನ ಬಿಯರು ಸೇವಿಸುವ, ಅಗತ್ಯ ಇದೆಯೋ ಇಲ್ಲವೋ ಕಡ್ಡಾಯ ನಿಮಗೆ ವೈಫೈ ಸೌಲಭ್ಯ ನೀಡುವ, ಹಬ್ಬ ಎಂದರೆ ಲಾಭ ಸಾಯಲಿ, ಲೆಕ್ಕತಪ್ಪಿ ಹಣ ಕೊಡುತ್ತೇನೆಂದರೂ ಅಂಗಡಿ ತೆಗೆಯದ ಜನತೆ, ಒಂದೆಡೆಯಲ್ಲಿ ಯಾವ ಬೋರ್ಡ ಓದಬೇಕು, ಓದಬಾರದು ಎಂದು ಹಿಂಸೆಯಾಗುವಷ್ಟು ಹೋದಲ್ಲೆಲ್ಲ ಸೂಚನಾ ಫಲಕಗಳ ಕಾರಣ ಊರೇ ಬೋರ್ಡಮಯ. ಹೀಗೆ ಹಲವು ಅಚ್ಚರಿಗಳಿಗೆ ಸಿಗುವ ಆಮೋದಕ್ಕೆ ಕಾರಣ ಅಲೆಮಾರಿತನವೇ ಹೊರತಾಗಿ ಸುಮ್ಮನೆ ಯೋಜಿತ ಪ್ರವಾಸವಲ್ಲ.

ನಾನು ತಿರುಗಾಟ ಮಾಡಿದಲ್ಲೆಲ್ಲ ಅಚ್ಚರಿ ಎನ್ನಿಸುವಷ್ಟರ ಮಟ್ಟಿಗಿನ ಶಬ್ದ ಮತ್ತು ಕೋನಗಳನ್ನು ಬದಲಾಯಿಸುವ ಉಚ್ಚಾರಗಳನ್ನು ಗಮನಿಸಿದ್ದೇನೆ. ಅದರಲ್ಲೂ ಒಂದು ಊರಿಂದ ಇನ್ನೊಂದು ಊರಿಗೆ ಹೋದಂತೆಲ್ಲ ಬ್ರಿಟನ್ ತುಂಬೆಲ್ಲ ಜಗತ್ತಿಗೇ ಖದರು ನೀಡಿದ ಅಡ್ನಾಡಿ ಇಂಗ್ಲಿಷ್ ಬದಲಾಗುತ್ತ ಹೋಗುತ್ತದೆ. ಕೆಲವು ಕಡೆ ‘ಸ್’ ಉಚ್ಚಾರ ಇಲ್ಲದಿದ್ದರೆ, ಕೆಲವೆಡೆ ‘ಸಿ’ ಲೆಕ್ಕಕ್ಕೇ ಇಲ್ಲ. ಮಗದೊಂದು ದೇಶದಲ್ಲಿ ‘ಆರ್’ ಬಗ್ಗೆ ಭಯಾನಕ ದ್ವೇಷ, ಅದಕ್ಕೂ ಮೇಲೆ ಹೋದರೆ ನಮ್ಮಲ್ಲಿ ‘ವ’ ಅಕ್ಷರಕ್ಕೆ ‘ಬ’ ಎಂದಂತೆ ‘ಕ’ ಮತ್ತು ‘ಗ’ ಕಾರಕ್ಕೆ ವ್ಯತ್ಯಾಸ ಇಲ್ಲದಂತೆಯೂ, ‘ವೈ’ ಉಚ್ಚಾರದಲ್ಲಿ ಹೆಚ್ಚುವರಿ ‘ಹ’ಕಾರಕ್ಕೆ ಒತ್ತು ಕೊಡುವಾಗ, ಅವರೆದುರಿಗೆ ನಮ್ಮ ತೀರಾ ದೇಶಿಶೈಲಿಯ ಇಂಗ್ಲಿಷ್ ಕಕ್ಕಾಬಿಕ್ಕಿ. ‘ಹೌ ಆರ್ ಯು’ ಎನ್ನುವುದನ್ನು ಉಚ್ಚಾರದಲ್ಲಿ ಹೇಗೆಲ್ಲ ಹೇಳುತ್ತಾರೆ ಎನ್ನುವುದನ್ನು ಬರೆಯಲೇ ಅಸಾಧ್ಯ.

ವಿಪರೀತ ಶಿಸ್ತು ನಮಗಾಗಲ್ಲ ಎನ್ನುವ ಮಟ್ಟಿಗಿನ ಬೆರಗುಗಳ ಮಧ್ಯೆ, ಕಾಲು ದಾರಿ ದಾಟಲೇ ಸಾಲು ಸಾಲು ಕಾರುಗಳು ನಿಂತು ದಾರಿ ಮಾಡಿಕೊಡುವ ರಾಜಮರ್ಯಾದೆ ಸಿಕ್ಕುವುದು ಇಂಥ ಶಿಸ್ತಿನಲ್ಲಿ ಮಾತ್ರ. ಯಜಮಾನರೇ ಇಲ್ಲದ ಅಂಗಡಿಗಳು, ಎಲ್ಲೋ ಒಬ್ಬ ಸೆಕ್ಯೂರಿಟಿ ಇರುವ ಪೆಟ್ರೋಲ್ ಬಂಕು, ಊರಲ್ಲೆಲ್ಲ ದಾರಿಗಿಂತ ನೀರಿನ ಹರಿವೇ ಹೆಚ್ಚಿರುವ ಹೊಳೆಯ ಕಾಲ್ದಾರಿಗಳು, ಪ್ರತಿ ಮನೆಯೂ ಒಂದೊಂದು ವಿಭಿನ್ನ ಡಿಸೈನ್ ಎಂದು ನಿರ್ಧರಿಸಿಯೇ ಊರು ಕಟ್ಟುವ ಜನ, ಎಲ್ಲಿ ಕಾಲಿಟ್ಟರೂ ಪುಸ್ತಕಗಳದ್ದೇ ಕಾರುಬಾರು, ನಾಯಿಗೊಂದು ಮನೆ, ಕುದುರೆಗೊಂದು ಬಿಡಾರ, ಟ್ರಾ್ಯಕ್ಟರಿಗೊಂದು ಶೆಡ್ಡು, ರೆಂಟೆ ಕುಂಟೆಗಳಿಗೆಲ್ಲ ಗರಾಜು, ಹೊರಗೆ ನಿಲ್ಲಿಸಿದ ಬುಲೆಟ್​ಗೂ ಒಂದು ತಗಡಿನ ಅರೆ ಮಾಡು ಹೀಗೆ ಸಾಲು ಮನೆಗಳ ಸಾಮ್ರಾಜ್ಯದ ಮಧ್ಯೆ ರೈತಾಪಿಯೊಬ್ಬ ಕುರಿಗಳ ಬುಡಕ್ಕೆ ಬಣ್ಣ ಹಚ್ಚುತ್ತಿದ್ದರೆ ಅದು ಪಕ್ಕಾ ಬ್ರಿಟಿಷ್ ಕಾಲೊನಿ ಎಂದೂ, ಹಬ್ಬ ಎಂಬ ಏಕೈಕ ಕಾರಣಕ್ಕೆ ಲೆಕ್ಕ ತಪ್ಪಿ ಪುಕ್ಕಟ್ಟೆ ಬಿಯರು ಹಂಚುವ, ಕೇಕಿನಲ್ಲೇ ನಿಮ್ಮನ್ನು ಮುಳುಗೇಳಿಸುವ ದ್ವೀಪ ವ್ಯವಸ್ಥೆಯ ಜನ, ನನ್ನಂಥವನೊಬ್ಬ ಪಕ್ಕ ಶಾಖಾಹಾರಿಯಾಗಿ ಹುಡುಕುವಾಗ, ಪೀಸ್ ತೆಗೆದಿಟ್ಟು ‘ಈದೀಗ ಪ್ಯೂರ್ ವೆಜ್ ತಿನ್ನು’ ಎನ್ನುವ ಪ್ರಖರ ವೈಚಾರಿಕ ತಮಾಷೆಗೆ ನಗಬೇಕೋ, ಚಚ್ಚಿಕೊಳ್ಳಬೇಕೋ ಗೊತ್ತಾಗದ ಪರಿಸ್ಥಿತಿಯನ್ನು ಒಬ್ಬ ಅಲೆಮಾರಿ ಮಾತ್ರ ಅನುಭವಿಸಬಲ್ಲ.

ಇಲ್ಲೆಲ್ಲ ಇಂಗ್ಲಿಷ್ ಹೌದು, ಆದರೆ ನಮ್ಮದಲ್ಲ ಎನ್ನುವುದು ಅರಿತಿದ್ದರೆ, ಸುಲಭ ಸಂವಹನ ಸಾಧ್ಯ. ಕಾರಣ ನಮಗೆ ಬೇಕಾಗುವ ಶಬ್ದ ಮತ್ತು ವ್ಯಾಖ್ಯೆಗಳ ಸಂಖ್ಯೆ ದಿನಕ್ಕೆ ಹತ್ತಿಪ್ಪತ್ತು ದಾಟುವುದಿಲ್ಲ. ದಾರಿ ಎಲ್ಲಿಗೆ ಹೋಗುತ್ತದೆ, ಹೋಟೆಲ್ ಎಲ್ಲಿದೆ, ಎಷ್ಟು ದೂರ, ಬಸ್​ಸ್ಟಾ್ಯಂಡ್, ಟೀ ಶಾಪ್, ಸಬ್​ವೇ, ಟ್ಯಾಕ್ಸಿ ಬುಕಿಂಗ್ ಹೀಗೆ ಕೆಲವೇ ಕೆಲವು ಶಬ್ದಗಳನ್ನು ಸರಿಯಾಗಿ ಉಚ್ಚಾರ ಸಮೇತ ಕಲಿತಿದ್ದರೂ ಪೂರ್ತಿ ವಿದೇಶವನ್ನೇ ಆಳಿಬಿಡಬಹುದು. ಜೊತೆಗೆ ನಮ್ಮ ಅರೆಬರೆ ಶಬ್ದ ಆಧಾರಿತ, ವಸ್ತು ತೋರಿಸುವ ಬೆರಳು ಆಧಾರಿತ ಭಾಷೆಯಿಂದ ಈತ ಎಲ್ಲಿಂದಲೋ ಬಂದವ, ಎಂದು ಪರಿಸ್ಥಿತಿ ಸಹಿತ ಏನೆಲ್ಲ ಬೇಕಾಗಬಹುದು ಎನ್ನುವುದನ್ನು ಅವರೂ ಅರ್ಥಮಾಡಿಕೊಂಡು ಕೊಟ್ಟುಬಿಡುತ್ತಾರೆ. ಇನ್ನೇನು ಬೇಕು? ಬಸ್​ಸ್ಟಾಪ್​ಗಳಲ್ಲಿ ಅತ್ಯಂತ ಶುದ್ಧಾತಿ ಶುದ್ಧ ಇಂಗ್ಲಿಷ್​ನಲ್ಲಿ ಮುದ್ರಿಸಿದ ಬೋರ್ಡಿನಲ್ಲಿ ಇರುವ ಮಾಹಿತಿಯ ಪ್ರಕಾರವೇ ಸಮಯ ಮಿತಿಗೆ ತಕ್ಕಂತೆ ಕರಾರುವಾಕ್ಕಾಗಿ ಸೇವೆ ನೀಡುವ ಕಾರಣ ಹೆಚ್ಚುವರಿ ವಿಚಾರಣೆ ಅಗತ್ಯವೇ ನಮಗಿರುವುದಿಲ್ಲ. ಇನ್ನು ಎಕ್ಸಾ ್ಟ್ರ ಮಾತುಕತೆ ಯಾತಕ್ಕೆ?

ಇನ್ನು ಭಾಷೆಯ ಸಂವಹನವನ್ನೂ ಸರಳಗೊಳಿಸುವುದು ಗೂಗಲ್ ಅನುವಾದ ಮುಖೇನ. ಅವರೇ ಬೆಚ್ಚುವಂತೆ ಏರಿಳಿತವಿಲ್ಲದೆ ಪಾಠ ಒಪ್ಪಿಸಿದರೆ, ಕೆಲಸ ಮುಗಿಯಿತು. ಹೇಳಲಿಕ್ಕೆ ಬರುವುದಿಲ್ಲವಾ ಎದುರಿನವನ ಮುಖಕ್ಕೆ ಆ ಭಾಷಾಂತರ ಹಿಡಿದು ಅವನ ಮುಖದ ಮೇಲೆ ಮೂಡುವ ನಗು ನೋಡುತ್ತಲೇ ನಮ್ಮ ಅರ್ಧ ಕೆಲಸ ಆಗುವುದು ಇಂಥ ಅಲೆಮಾರಿತನದಲ್ಲಿ ಮಾತ್ರ. ಪ್ರತಿ ದೇಶದಲ್ಲೂ ನಾನು ಆಯಾ ಸ್ಥಳೀಯ ಭಾಷೆಗೆ ಭಾಷಾಂತರಿಸಿದ ಅಗತ್ಯ ಸಾಲುಗಳ, ಪ್ರಶ್ನೆಗಳ ಒಂದು ಚಾರ್ಟ್ ಇಟ್ಟುಕೊಂಡಿರುತ್ತಿದ್ದೆ. ಅದರಲ್ಲಿನ ಸಾಲನ್ನು ತೋರಿಸಿ ಉತ್ತರ ಸಲೀಸಾಗಿ ಪಡೆದು ವ್ಯವಹರಿಸುತ್ತಿದ್ದೆ. ತಂತ್ರಜ್ಞಾನ ಮತ್ತು ಸಮಯೋಚಿತತೆಯಿದ್ದರೆ ಯಾವುದೇ ದೇಶವಾದರೂ ಸಂವಹನ ಸಮಸ್ಯೆಯಾಗುವುದೇ ಇಲ್ಲ.

ಮುಖ್ಯವಾದದ್ದು ಹೊಸ ನೆಲಕ್ಕೆ ಕಾಲೂರುವ ಉಮೇದಿ ನಮಗಿರಬೇಕಷ್ಟೆ. ನಮಗೆ ಭಾಷೆ ಬರದಿದ್ದರೂ ಪರವಾಗಿಲ್ಲ, ನಾವು ಏನೋ ಹೇಳುತ್ತಿದ್ದೇವೆ ಎಂದು ಎದುರಿನವನು ಹೇಗೋ ಅರ್ಥೈಸಿಕೊಳ್ಳುವಷ್ಟು ಬಕಬಕ ಬಾಯಿ ಬಿಡುವಂತಿದ್ದರೂ ಸಾಕು, ಭಾಷೆ ಮತ್ತು ಬುದ್ಧಿವಂತಿಕೆಗಿಂತ ಒಂದು ಹಿಡಿ ಹೆಚ್ಚುವರಿ ಆತ್ಮವಿಶ್ವಾಸ ಗುಂಡಿಗೆಲಿ ಇದ್ರೆ ಅಲೆಮಾರಿತನ ಎನ್ನುವುದು ಅಂಗೈಗೆರೆಯಾಗಿ ಬಿಡುತ್ತದೆ.

(ಲೇಖಕರು ಕತೆಗಾರರು)

ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ಕೇಂದ್ರ ಸರ್ಕಾರ ಕ್ರಮವಹಿಸಲಿ: ಸಚಿವ ದಿನೇಶ್ ಗುಂಡೂರಾವ್ ಒತ್ತಾಯ

Share This Article

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…

ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು

 ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…