ನರಮಂಡಲಕ್ಕೆ ಸಂಬಂಧಿಸಿದ ಕಾಯಿಲೆ ‘ಸೆರೆಬ್ರಲ್ ಪಾಲ್ಸಿ’ಗೆ ತುತ್ತಾಗಿ ಬದುಕುವ ಆಸೆಯನ್ನೇ ಕಳೆದುಕೊಂಡ ಗುಜರಾತ್ ಯುವಕನೊಬ್ಬ ಈಚೆಗೆ ನ್ಯಾಯಾಧೀಶರ ಹುದ್ದೆ ಏರಿದ್ದಾರೆ. 31 ವರ್ಷದ ನಿಖಿಲ್ ಪ್ರಸಾದ್ ಸತತ ಪರಿಶ್ರಮದಿಂದ ಈ ಹುದ್ದೆ ದಕ್ಕಿಸಿಕೊಂಡಿದ್ದು, ಸಾಧನೆಯ ಮುಂದೆ ಯಾವುದೂ ಲೆಕ್ಕಕ್ಕಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ.
‘ಚಿಕ್ಕ ವಯಸ್ಸಿನಲ್ಲಿಯೇ ನಾನು ಸೆರೆಬ್ರಲ್ ಪಾಲ್ಸಿಗೆ ತುತ್ತಾದೆ. ಆದರೆ ನನ್ನ ಪಾಲಕರು ನನ್ನನ್ನು ಸಾಮಾನ್ಯ ಶಾಲೆಗೆ ಸೇರಿಸಿದರು. ಶಾಲೆಯಲ್ಲಿ ಕೂಡ ಯಾರೂ ನಾನು ಬುದ್ಧಿಮಾಂದ್ಯ ಎನ್ನುವಂತೆ ನೋಡಿಕೊಳ್ಳಲಿಲ್ಲ.ಇದರಿಂದ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿತು. ದೈಹಿಕವಾಗಿ ತುಂಬಾ ಬಳಲಿದ್ದ ಕಾರಣ, ಆಟೋಟಗಳಲ್ಲಿ ಭಾಗವಹಿಸುವುದು ಕಷ್ಟವಾಗುತ್ತಿತ್ತು. ಆದರೆ ನಾನು ನನ್ನ ದೌರ್ಬಲ್ಯವನ್ನು ಮೆಟ್ಟಿ ನಿಲ್ಲುವ ಛಲ ತೊಟ್ಟಿದ್ದೆ. ಆದ್ದರಿಂದ ಆಟೋಟಗಳಲ್ಲಿ ತುಂಬಾ ಶ್ರಮದಿಂದ ತೊಡಗಿಸಿಕೊಂಡೆ. ಇದರಿಂದ ನನ್ನಲ್ಲಿ ಇನ್ನಷ್ಟು ಚೈತನ್ಯ ತುಂಬಿತು. ಪಿಯುಸಿ ನಂತರ ಕಾನೂನು ಪದವಿ ಪಡೆದೆ. ನರಕ್ಕೆ ಸಂಬಂಧಿಸಿದ ದೌರ್ಬಲ್ಯ ಇದ್ದುದರಿಂದ ಓದಿದ್ದನ್ನು ನೆನೆಪಿನಲ್ಲಿ ಇಟ್ಟುಕೊಳ್ಳುವುದು ಕಷ್ಟವಾಗುತ್ತಿತ್ತು. ಆದರೂ ಛಲ ಬಿಡಲಿಲ್ಲ. ಸಿವಿಲ್ ಜಡ್ಜ್ ಪರೀಕ್ಷೆ ಬರೆದೆ. ಅಲ್ಲಿ ಪಾಸಾದೆ’ ಎಂದು ತಮ್ಮ ಸಾಧನೆಯ ಬಗ್ಗೆ ಹೇಳಿಕೊಳ್ಳುವ ನಿಖಿಲ್, ‘ಸಾಧಿಸುವ ಛಲವೊಂದಿದ್ದರೆ ಯಾವುದೂ ಅಸಾಧ್ಯವಲ್ಲ. ಅದಿಲ್ಲ, ಇದಿಲ್ಲ, ಅದು ಸರಿಯಿಲ್ಲ, ಇದು ಅನುಕೂಲವಿಲ್ಲ…. ಎಂಬ ಯಾವ ನೆಪವೂ ಸಾಧನೆಗೆ ಅಡ್ಡಿ ಬರುವುದೇ ಇಲ್ಲ’ ಎನ್ನುತ್ತಾರೆ.
ಸತತ ಪ್ರಯತ್ನದಿಂದ ತಮ್ಮ ನರ ದೌರ್ಬಲ್ಯವನ್ನೂ ಹಿಮ್ಮೆಟ್ಟಿಸಿರುವ ಹೆಮ್ಮೆ ಇವರದ್ದು.