ನಂದಿನಿ, ಫಲ್ಗುಣಿ ನೀರೇ ಆಸರೆ

ಲೋಕೇಶ್ ಸುರತ್ಕಲ್

ನಂದಿನಿ ನದಿ ತಟದಲ್ಲಿರುವ ಸೂರಿಂಜೆ ಗ್ರಾಮ ಪಂಚಾಯಿತಿ ಪ್ರದೇಶಕ್ಕೆ ಸಹಜವಾಗಿಯೇ ನಂದಿನಿ ನದಿ ನೀರು ಪ್ರಮುಖ ಆಸರೆ ಯಾಗಿದ್ದು, ಇದರೊಟ್ಟಿಗೆ ದೂರದ ಮಳವೂರು ಡ್ಯಾಂನಿಂದ ಫಲ್ಗುಣಿ ನದಿ ನೀರೂ ಪೂರೈಕೆಯಾಗುವುದರಿಂದ ಇಲ್ಲಿ ನೀರಿನ ಸಮಸ್ಯೆ ಸದ್ಯಕ್ಕೆ ಇಲ್ಲ ಎನ್ನುವಷ್ಟು ಪರಿಸ್ಥಿತಿ ಆಶಾದಾಯಕವಾಗಿದೆ.

ನಂದಿನಿ ನದಿಗೆ ಬೃಹತ್ ಕಿಂಡಿ ಅಣೆಕಟ್ಟು ನಿರ್ಮಿಸಿರುವ ಕಾರಣ ಇಲ್ಲಿನ ಕೃಷಿಕರೂ ನಿಟ್ಟುಸಿರು ಬಿಡುವಂತಾಗಿದೆ. ಪಂಚಾಯಿತಿ ವ್ಯಾಪ್ತಿಯ ಕೋಟೆಯಲ್ಲಿ ಎರಡು, ಶಿಬರೂರಿನಲ್ಲಿ ಎರಡು, ದೇಲಂತಬೆಟ್ಟುವಿನಲ್ಲಿ ನಾಲ್ಕು ತೆರೆದ ಬಾವಿಗಳಿವೆ. 600 ಮನೆಗಳಿಗೆ ನೀರಿನ ನಳ್ಳಿ ಸಂಪರ್ಕವಿದೆ. ಕುಲ್ಲಂಗಾಲ್‌ನಲ್ಲಿ, ಕೋಟೆ, ಸೂರಿಂಜೆ, ಶಿಬರೂರಿನಲ್ಲಿ ಒಟ್ಟು ಆರು ಬೋರ್‌ವೆಲ್‌ಗಳಿವೆ. ಮಳವೂರು ಡ್ಯಾಂನಿಂದ ಈಗ ಎರಡು ದಿನಕ್ಕೆ ಒಂದು ಸಲ ನೀರು ಪೂರೈಕೆಯಾಗುತ್ತಿದೆ. ಇದನ್ನು ಟ್ಯಾಂಕ್‌ಗೆ ಸೇರಿಸಿ ಪೂರೈಸಲಾಗುತ್ತಿದ್ದು, ಮಳವೂರು ಡ್ಯಾಂನಿಂದ ಪ್ರತಿ ದಿನ ನೀರು ಪೂರೈಕೆಯಾದಲ್ಲಿ ಉತ್ತಮ ಎನ್ನುತ್ತಾರೆ ಸೂರಿಂಜೆ ನೀರು ಪೂರೈಕೆ ಸಮಿತಿ ಅಧ್ಯಕ್ಷ ಎಸ್. ರಝಾಕ್ ಸೂರಿಂಜೆ.

ಪೈಪ್‌ಲೈನ್ ವಿಸ್ತರಣೆಗೆ ಅನುದಾನ: ಕೋಟೆಯಲ್ಲಿ ನೀರು ಪೂರೈಕೆ ಸಮಸ್ಯೆ ಸ್ಪಲ್ಪಮಟ್ಟಿಗೆ ತಲೆದೋರಿರುವ ಬಗ್ಗೆ ವಾರ್ಡ್ ಸಭೆಯಲ್ಲಿ ದೂರಲಾಗಿತ್ತು. ಇದು ಪಂಪ್ ಆಪರೇಟರ್‌ನ ಸಮಸ್ಯೆಯಾಗಿದೆಯೇ ವಿನಾಃ ನೀರಿನ ಅಭಾವ ಕಾರಣವಲ್ಲ. ಪೂರೈಕೆ ವ್ಯವಸ್ಥೆ ಉತ್ತಮಪಡಿಸಬೇಕಾಗಿದ್ದು, ನೀರಿನ ಅಭಾವ ಬಗ್ಗೆ ದೂರು ಈವರೆಗೆ ಬಂದಿಲ್ಲ. ಪೈಪ್‌ಲೈನ್ ವಿಸ್ತರಣೆಗೆ ಅನುದಾನ ನೀಡಬೇಕು. ಬಾವಿಯನ್ನು ನರೇಗಾ ಯೋಜನೆಯಡಿ ನಿರ್ಮಿಸಬಹುದು. ಕಳೆದ ವರ್ಷವೂ ನೀರಿನ ಅಭಾವ ಸಮಸ್ಯೆ ತಲೆದೋರಿಲ್ಲ ಎಂದು ಪಿಡಿಒ ರಾಜೇಂದ್ರ ಶೆಟ್ಟಿ ಮಾಹಿತಿ ನೀಡಿದ್ದಾರೆ.

ಇರಲಿ ಮಿತವ್ಯಯ: ನಳ್ಳಿಯಲ್ಲಿ ಎರಡು ದಿನಕ್ಕೆ ಒಂದು ಸಲ ನೀರು ಬರುತ್ತಿದೆ. ಅದನ್ನು ತುಂಬಿಸಿ ಇಟ್ಟು ಕುಡಿಯಲು ಬಳಸುತ್ತೇವೆ. ಅಭಾವ ಸಮಸ್ಯೆಯಿಲ್ಲ ಎಂದು ದೇಲಂತಬೆಟ್ಟು ನಿವಾಸಿ ಭುವನೇಶ್ ಅಚಾರ್ಯ ‘ವಿಜಯವಾಣಿ’ಗೆ ತಿಳಿಸಿದರು. ಜನರು ಮಿತನೀರು ಬಳಸಿ ಪಂಚಾಯಿತಿನೊಂದಿಗೆ ಸಹಕರಿಸುವಂತೆ ಪಂಚಾಯಿತಿ ಅಧ್ಯಕ್ಷೆ ಕಸ್ತೂರಿ ದಯಾನಂದ ಕೋರಿದರು.

ಪ್ರತಿ ವ್ಯಕ್ತಿಗೆ 55 ಲೀ.ಗಿಂತ ಹೆಚ್ಚು ನೀರು: ಮಳವೂರು ಡ್ಯಾಂನಿಂದ ಎಂಟು ಪಂಚಾಯಿತಿಗಳಿಗೆ ಅಲ್ಲದೇ ಸಿದ್ದಾರ್ಥನಗರ ಪುನರ್ ವಸತಿ ಕಾಲನಿಗೆ ಪ್ರತಿ ವ್ಯಕ್ತಿಗೆ ದಿನಕ್ಕೆ ನಿಗದಿತ 55 ಲೀಟರ್‌ಗಿಂತ ಹೆಚ್ಚು ನೀರು ನೀಡುತ್ತಿದ್ದೇವೆ. ಇದಕ್ಕಿಂತ ಹೆಚ್ಚಿನ ಬೇಡಿಕೆಯಿದ್ದರೂ ಈಗಲೇ ಜಾಸ್ತಿ ನೀಡಿದಲ್ಲಿ ಬೇಸಿಗೆ ಕೊನೇ ಭಾಗದಲ್ಲಿ ಅಭಾವ ಪರಿಸ್ಥಿತಿ ಬರಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.