ಸೂರ್ಗೋಳಿ ಶಾಲೆ ಪರಿಸರ ಮಿತ್ರ

<ಸಾವಯವ ಶಾಲಾ ತರಕಾರಿ ತೋಟ, ಔಷಧ ವನ, ಎರೆಹುಳು ಗೊಬ್ಬರ, ಜೇನು ಕೃಷಿ>

ಕೆ.ಸಂಜೀವ ಆರ್ಡಿ
ಸೂರ್ಗೋಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸರ್ಕಾರದ ಸೌಲಭ್ಯಗಳು, ದಾನಿಗಳ ಕೊಡುಗೆಗಳನ್ನು ಸದುಪಯೋಗಿಸಿಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಕೃಷಿ ಪಾಠ (ಚಟುವಟಿಕೆಯೊಂದಿಗೆ) ಶಾಲೆಯಾಗಿ ಗುರುತಿಸಿಕೊಂಡು, ಸತತ ನಾಲ್ಕು ವರ್ಷಗಳಿಂದ ಪರಿಸರ ಮಿತ್ರ ಹಸಿರು ಶಾಲೆ ಪ್ರಶಸ್ತಿ ಪಡೆದ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸೂರ್ಗೋಳಿ ಶಾಲೆ ಗ್ರಾಮೀಣ ಭಾಗದಲ್ಲಿದ್ದರೂ ಶಿಕ್ಷಣ, ಕ್ರೀಡೆ, ತರಕಾರಿ ತೋಟ, ಪರಿಸರ ಸ್ನೇಹಿ ಕೃಷಿ ಚಟುವಟಿಕೆಗಳು ಸೇರಿದಂತೆ ಹಲವಾರು ಕಾರ್ಯಕ್ರಮ ಆಯೋಜಿಸುವಲ್ಲಿ ಇಲ್ಲಿನ ಶಿಕ್ಷಕ ವೃಂದವರ ಶ್ರಮ, ಶ್ರದ್ಧೆ, ಕಾಳಜಿಯಿಂದ ಜಿಲ್ಲಾಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಶೈಕ್ಷಣಿಕ ಸಾಲಿನಲ್ಲಿ ಶಾಲೆ 60 ವರ್ಷ ಪೂರೈಸಿದ ಸವಿನೆನಪಿಗಾಗಿ ವಾರ್ಷಿಕೋತ್ಸವದೊಂದಿಗೆ 60 ಜಾತಿಯ ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದೆ.

ಸಾವಯವ ತರಕಾರಿ ತೋಟ: ಕೃಷಿ ಅವಲಂಬಿತ ಕುಟುಂಬಗಳ ಮಕ್ಕಳು ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮನೆಯಲ್ಲಿ ಬೆಳೆಸುವ ತರಕಾರಿಗಳನ್ನು ಪಾಲಕರ ಸಹಕಾರ, ಶಿಕ್ಷಕ ವೃಂದವರ ಮಾರ್ಗದರ್ಶನದಲ್ಲಿ ಬೆಳೆಸುತ್ತಾರೆ. ಮಳೆಗಾಲ, ಬೇಸಿಗೆಯಲ್ಲೂ ಶಾಲೆಯ ತರಕಾರಿ ತೋಟದಲ್ಲಿ ತೊಂಡೆ, ಬದನೆ, ಅಲಸಂಡೆ, ಬಸಲೆ, ನುಗ್ಗೆ, ಸೋರೆ, ಕುಂಬಳ, ಟೊಮ್ಯಾಟೊ, ಹರಿವೆ, ಬೆಂಡೆ ಮೊದಲಾದ ತರಕಾರಿ ಸಾವಯವ ಪದ್ಧತಿ ಮೂಲಕ ಬೆಳೆಸುತ್ತಿದ್ದಾರೆ. ಎಲೆಗೊಬ್ಬರ ತಯಾರಿಕಾ ಘಟಕ ರಚಿಸಿ ಸೆಗಣಿ ಹಾಗೂ ಎರೆಗೊಬ್ಬರ ತಯಾರಿಸಿ ತರಕಾರಿಗಳಿಗೆ ಬಳಸಲಾಗುತ್ತಿದೆ. ಜೀವಾಮೃತ ಜೈವಿಕ ಗೊಬ್ಬರವನ್ನೂ ತಯಾರಿಸಲಾಗುತ್ತಿದೆ.

ಪ್ರಕೃತಿ ಔಷಧ ವನ: ಅಶೋಕ, ಸರ್ಪಗಂಧಿ, ಮಧುನಾಶಿನಿ, ಕದಿರೆ, ಕಕ್ಕೆ, ಕಹಿಬೇವು, ಸಂದ್‌ಬೀಳು, ಕಿರಾತಕಡ್ಡಿ, ತುಂಬೆ, ಬ್ರಾಹ್ಮೀ, ಧ್ರುವ, ಹಾಲೆ, ಲೋಳೆಸರ, ಲಕ್ಷ್ಮಣ ಫಲ, ನೀರುಳ್ಳಿ, ಬೆಳ್ಳುಳಿ ಸೇರಿದಂತೆ ಸುಮಾರು 60 ಕ್ಕೂ ಮಿಕ್ಕಿದ ವಿಶಿಷ್ಟವಾದ ಔಷಧಿ ಸಸ್ಯಗಳನ್ನು ಬೆಳೆಸಿರುತ್ತಾರೆ. ವಿದ್ಯಾರ್ಥಿಗಳು ಆಯಾಯ ಸಸ್ಯಗಳ ಪರಿಚಯದೊಂದಿಗೆ ಇವುಗಳ ಉಪಯೋಗಗಳ ಕುರಿತು ತಿಳಿದಿದ್ದು, ಇತರರಿಗೆ ಮಾಹಿತಿ ನೀಡುತ್ತಾರೆ. ಶೈಕ್ಷಣಿಕ ವರ್ಷದಿಂದ ಜೇನು ಕೃಷಿ ಆರಂಭವಾಗಿದೆ.

ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ರಜತಾದ್ರಿ ವಾಜಪೇಯಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಮುಖ್ಯಶಿಕ್ಷಕ ಸದಾನಂದ ನಾಯಕ್, ಸಹ ಶಿಕ್ಷಕಿ ಶಿಕ್ಷಕರು, ವಿದ್ಯಾರ್ಥಿಗಳ ತಂಡಕ್ಕೆ ಪ್ರಶಸ್ತಿ ಹಾಗೂ ನಗದು ಪುರಸ್ಕಾರ ನೀಡಿದರು.

ಸೂರ್ಗೋಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಶಾಲೆಯಾಗಿ ಗುರುತಿಸಿಕೊಂಡಿದೆ. ಶಿಕ್ಷಕ ವೃಂದ, ಮಕ್ಕಳ ಪಾಲಕರು, ಪೋಷಕರು, ವಿದ್ಯಾರ್ಥಿಗಳ ಸಹಕಾರದಿಂದ ಸತತ ನಾಲ್ಕು ವರ್ಷಗಳಿಂದ ಪರಿಸರ ಮಿತ್ರ ಹಸಿರು ಶಾಲೆ ಪ್ರಶಸ್ತಿಯನ್ನು ಪಡೆಯಲು ಸಾಧ್ಯವಾಗಿದೆ. ಪ್ರಶಸ್ತಿ ಹೆಮ್ಮೆ ಹಾಗೂ ಶಾಲೆಯ ಕೀರ್ತಿ ಹೆಚ್ಚಿಸಿದೆ.
– ಸದಾನಂದ ನಾಯಕ್, ಮುಖ್ಯ ಶಿಕ್ಷಕರು, ಸ.ಹಿ.ಪ್ರಾ.ಶಾಲೆ.ಸೂರ‌್ಗೋಳಿ.

ಮುಖ್ಯ ಶಿಕ್ಷಕರು, ಶಿಕ್ಷಕ ವೃಂದವರ ಮಾರ್ಗದರ್ಶನದಲ್ಲಿ ಸಾವಯವ ಗೊಬ್ಬರ ಬಳಸಿ ತರಕಾರಿ ಬೆಳೆಸುತ್ತಿದ್ದೇವೆ. ತೋಟದಲ್ಲಿ ಬೆಳೆಯುವ ತರಕಾರಿಗಳನ್ನು ಬಿಸಿಯೂಟಕ್ಕೆ ನೀಡುತ್ತೇವೆ. ಜೇನು ಕೃಷಿ, ಎರೆಹುಳು ಗೊಬ್ಬರ, ಔಷಧ ವನದಿಂದ ಸಾಕಷ್ಟು ಪ್ರಯೋಜನವಾಗಿದೆ. ಶಾಲೆಗೆ ಪರಿಸರ ಮಿತ್ರ ಹಸಿರು ಶಾಲೆ ಪ್ರಶಸ್ತಿ ಬಂದಿರುವುದು ನಮಗೆಲ್ಲರಿಗೂ ಇನ್ನಷ್ಟು ಖುಷಿಯಾಗಿದೆ.
-ಅನಿಶಾ, ಶಾಲಾ ವಿದ್ಯಾರ್ಥಿ ನಾಯಕ