ಕಾಂಗ್ರೆಸ್​ನೊಂದಿಗೆ ಕೈಜೋಡಿಸಿದ ಸರ್ಜಿಕಲ್​ ಸ್ಟ್ರೈಕ್​ ಹೀರೋ ಹೂಡಾ

ನವದೆಹಲಿ: ಉರಿ ಸೇನಾ ನೆಲೆಯ ಮೇಲೆ ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ನೆಲೆಗಳ ಮೇಲೆ ನಡೆದ ಸರ್ಜಿಕಲ್​ ಸ್ಟ್ರೈಕ್​ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಿವೃತ್ತ ಸೇನಾಧಿಕಾರಿ ಲೆ. ಜನರಲ್​ ಡಿ.ಎಸ್​. ಹೂಡಾ ಕಾಂಗ್ರೆಸ್​ನೊಂದಿಗೆ ಕೈಜೋಡಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ರಾಷ್ಟ್ರೀಯ ಭದ್ರತೆ ಕುರಿತು ಕಾರ್ಯಪಡೆ ರಚಿಸಲು ಮುಂದಾಗಿದ್ದು, ಹೂಡಾ ಆ ಸಮಿತಿಯ ನೇತೃತ್ವವನ್ನು ವಹಿಸಲಿದ್ದಾರೆ. ದೇಶದ ಗಡಿಯನ್ನು ಸಂರಕ್ಷಿಸಲು ಯೋಜನೆ ರೂಪಿಸಲು ತಜ್ಞರ ಸಮಿತಿಯನ್ನು ರಚಿಸಲು ಹೂಡಾ ನೆರವಾಗಲಿದ್ದಾರೆ ಎಂದು ಕಾಂಗ್ರೆಸ್​ ಮೂಲಗಳು ತಿಳಿಸಿವೆ.

ಈ ಕುರಿತು ಟ್ವೀಟ್​ ಮಾಡಿರುವ ಕಾಂಗ್ರೆಸ್​ ವಕ್ತಾರ ‘ಬಲಿಷ್ಟ ದೇಶವನ್ನು ಕಟ್ಟುವ ಮತ್ತು ದೇಶದ ಭದ್ರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್​ ಗಾಂಧಿ ಸಕಾರಾತ್ಮಕ ಪ್ರಯತ್ನವನ್ನು ಆರಂಭಿಸಿದ್ದಾರೆ. ಹೂಡಾ ಅವರ ಅನುಭವ ನಮ್ಮ ಪ್ರಯತ್ನಕ್ಕೆ ಬಲ ತುಂಬಲಿದೆ’ ಎಂದು ತಿಳಿಸಿದ್ದಾರೆ.

2016ರ ಸೆಪ್ಟೆಂಬರ್​ 29ರಂದು ಭಾರತೀಯ ಸೈನಿಕರು ಪಾಕ್​ ವಿರುದ್ಧ ಸರ್ಜಿಕಲ್​ ಸ್ಟ್ರೈಕ್​ ನಡೆಸಿದ್ದರು. ಈ ಸಂದರ್ಭದಲ್ಲಿ ಹೂಡಾ ಸೇನೆಯ ಉತ್ತರ ವಿಭಾಗದ ಕಮಾಂಡರ್​ ಆಗಿದ್ದರು ಮತ್ತು ಸರ್ಜಿಕಲ್​ ಸ್ಟ್ರೈಕ್​ನ ರೂಪುರೇಷೆ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. (ಏಜೆನ್ಸೀಸ್​)