ಸಿನಿಮೀಯ ಸರ್ಜಿಕಲ್ ಸ್ಟ್ರೈಕ್

| ಮದನ್ ಬೆಂಗಳೂರು

18 ಸೆಪ್ಟೆಂಬರ್ 2016. ಇಡೀ ಭಾರತೀಯ ಸೇನೆಯ ನಿದ್ದೆ ಕೆಡಿಸಿದ ದಿನಾಂಕವದು. ಉರಿ ಸೇನಾ ನೆಲೆ ಮೇಲೆ ಪಾಕಿಸ್ತಾನಿ ಭಯೋತ್ಪಾದಕರು ದಾಳಿ ನಡೆಸಿ 19 ಸೈನಿಕರ ಮೇಲೆ ಗುಂಡಿನ ದಾಳಿ ಮಾಡಿದರು. ಈ ಘಟನೆ ನಡೆದ 11 ದಿನದೊಳಗೆ ಪಾಕಿಸ್ತಾನಕ್ಕೆ ಭಾರತ ದಿಟ್ಟ ಉತ್ತರ ನೀಡಿತು. ‘ಸರ್ಜಿಕಲ್ ಸ್ಟ್ರೈಕ್’ ಹೆಸರಿನಲ್ಲಿ ಭಾರತ ನಡೆಸಿದ ಪ್ರತಿದಾಳಿಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಭಯೋತ್ಪಾದಕರ ಅಡಗುತಾಣಗಳು ಧ್ವಂಸಗೊಳ್ಳುವುದರ ಜತೆ ಹಲವು ಭಯೋತ್ಪಾದಕರು ಹತರಾದರು. ಈ ಕ್ಷಿಪ್ರಗತಿಯ ಕಾರ್ಯಾಚರಣೆಯ ಪ್ರತಿ ವಿವರವೂ ಬಲು ರೋಚಕ. ಅವುಗಳನ್ನೇ ಆಧರಿಸಿ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಆದಿತ್ಯ ಧಾರ್. ಸಿನಿಮಾ ನೋಡುವುದಕ್ಕೂ ಮುನ್ನ ಪ್ರೇಕ್ಷಕರು ಗಮನಿಸಬೇಕಾದ ಅಂಶ ಏನೆಂದರೆ, ಇದು ಸತ್ಯ ಘಟನೆಗಳನ್ನು ಆಧರಿಸಿದ ಚಿತ್ರವೇ ಹೊರತು, ಸರ್ಜಿಕಲ್ ಸ್ಟ್ರೈಕ್​ನ ಮರುಸೃಷ್ಟಿ ಅಲ್ಲ.

ಸಾಕಷ್ಟು ಸಂಶೋಧನೆ ನಡೆಸಿ, ಹಲವು ಬಗೆಯ ಮಾಹಿತಿ ಸಂಗ್ರಹಿಸಿದ ಬಳಿಕವೇ ಚಿತ್ರಕಥೆ ಬರೆದಿದ್ದಾಗಿ ಹೇಳಿಕೊಂಡಿದೆ ‘ಉರಿ..’ ಬಳಗ. ದೊರೆತ ಮಾಹಿತಿಗೆ ಅಗತ್ಯವಾದ ಮಸಾಲೆ ಬೆರೆಸಿಯೇ ಒಟ್ಟಾರೆ ಚಿತ್ರವನ್ನು ರಂಜನೀಯವಾಗಿಸುವ ಪ್ರಯತ್ನ ನಡೆದಿದೆ ಎಂಬುದನ್ನೂ ಚಿತ್ರತಂಡ ಒಪ್ಪಿಕೊಂಡಿದೆ. ಅಸಲಿ ಸರ್ಜಿಕಲ್ ಸ್ಟ್ರೈಕ್​ನ ನೆನಪು ಇನ್ನೂ ಹಸಿರಾಗಿರುವಾಗಲೇ ಆ ಘಟನೆಗೆ ಹಲವಾರು ಕಾಲ್ಪನಿಕ ಅಂಶಗಳನ್ನು ಸೇರಿಸಿ ಸಿನಿಮಾ ಮಾಡಿದ್ದು ಸರಿಯೋ ತಪ್ಪೋ ಎಂಬ ವಾದ ಬೇರೆ. ಅದನ್ನು ಬದಿಗಿಟ್ಟು ನೋಡಿದರೆ ‘ಉರಿ..’ ಒಂದು ಕಮರ್ಷಿಯಲ್ ಆಕ್ಷನ್ ಚಿತ್ರವಾಗಿ ಗಮನ ಸೆಳೆಯುವುದು ಗ್ಯಾರಂಟಿ. ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಕೇಳಿಬಂದ ಕೆಲವು ವಿವಾದಗಳನ್ನು ತೆರೆಮೇಲೆ ರ್ಚಚಿಸುವ ಗೋಜಿಗೆ ನಿರ್ದೇಶಕರು ಕೈಹಾಕಿಲ್ಲ.

ಈಗಾಗಲೇ ಬಂದು ಹೋಗಿರುವ ವಾರ್ ಸಿನಿಮಾಗಳಿಗಿಂತಲೂ ‘ಉರಿ..’ ತೀರಾ ಭಿನ್ನವೇನಲ್ಲ. ಆದರೂ ಸಿನಿಮೀಯ ಮತ್ತು ನೈಜತೆ ಮಿಶ್ರಿತ ನಿರೂಪಣೆಯಿಂದಾಗಿ ಇಷ್ಟವಾಗುತ್ತದೆ. ಮೊದಲರ್ಧದಲ್ಲಿ ಭಾವನಾತ್ಮಕ ದೃಶ್ಯಗಳಿಗೆ ಹೆಚ್ಚು ಪ್ರಾಧಾನ್ಯತೆ ಸಿಕ್ಕಿದೆ. ಸೇನಾಧಿಕಾರಿಯ ಕುಟುಂಬ, ಅವನ ವೈಯಕ್ತಿಕ ಕಷ್ಟ-ಸುಖ ಮುಂತಾದ ವಿಷಯಗಳು ನೋಡುಗರನ್ನು ಆವರಿಸಿಕೊಳ್ಳುತ್ತವೆ. ಕೆಲವು ದೃಶ್ಯಗಳಲ್ಲಂತೂ ಪ್ರೇಕ್ಷಕರಿಗೆ ಕಣ್ಣೀರು ತರಿಸುವಷ್ಟು ಮೆಲೋಡ್ರಾಮಾ ತುಂಬಿಕೊಂಡಿದೆ. ಅದರಲ್ಲಿ ಹಿನ್ನೆಲೆ ಸಂಗೀತದ ಪಾತ್ರವೇ ದೊಡ್ಡದು. ಇನ್ನು, ದ್ವಿತೀಯಾರ್ಧದಲ್ಲಿ ಆಕ್ಷನ್​ಗೆ ಮಹತ್ವ ನೀಡಲಾಗಿದೆ. ಸರ್ಜಿಕಲ್ ಸ್ಟ್ರೈಕ್​ಗೆ ಭಾರತ ಸರ್ಕಾರ ನಡೆಸಿದ ತಯಾರಿ, ಗುಪ್ತಚರ ಇಲಾಖೆ ಜತೆ ಸೇರಿ ಮಾಡಿದ ಮಾಸ್ಟರ್​ಪ್ಲಾ್ಯನ್ ಇತ್ಯಾದಿ ಘಟನೆಗಳು ತೆರೆಮೇಲೆ ಮೂಡಿಬರುವಾಗ ಕೌತುಕ ಇಮ್ಮಡಿಯಾಗುತ್ತದೆ. ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಭಾರತೀಯ ಸೈನಿಕರು ನುಗ್ಗಿ, ಶತ್ರುಗಳನ್ನು ಸದೆ ಬಡಿಯುವ ಸನ್ನಿವೇಶಗಳು ರೋಚಕವಾಗಿ ಮೂಡಿಬಂದಿವೆ. ಅದಕ್ಕೆ ಕಾರಣರಾದ ಸಾಹಸ ನಿರ್ದೇಶಕ ಸ್ಟೆಫನ್ ರಿಚ್ಟರ್​ಗೆ ಪೂರ್ಣಾಂಕ ಸಲ್ಲಬೇಕು. ನಡುರಾತ್ರಿ ನಡೆದ ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆಯನ್ನು ತೆರೆಮೇಲೆ ಕಟ್ಟಿಕೊಡುವಲ್ಲಿ ಛಾಯಾಗ್ರಾಹಕ ಮಿತೇಶ್ ಶ್ರಮ ಎದ್ದು ಕಾಣುತ್ತದೆ. ಕಲಾವಿದರ ಪೈಕಿ ಸೇನಾಧಿಕಾರಿ ಪಾತ್ರದಲ್ಲಿ ನಟಿಸಿರುವ ವಿಕ್ಕಿ ಕೌಶಾಲ್ ಇಡೀ ಚಿತ್ರವನ್ನು ಆವರಿಸಿದ್ದಾರೆ. ಈವರೆಗೂ ಆಫ್ ಬೀಟ್ ಪಾತ್ರಗಳನ್ನು ಮಾಡುತ್ತಿದ್ದ ಅವರಿಗೆ ‘ಉರಿ..’ ಚಿತ್ರದಲ್ಲಿ ಹೀರೋಯಿಸಂ ಪ್ರದರ್ಶಿಸುವ ಚಾನ್ಸ್ ಸಿಕ್ಕಿದೆ. ಭಾವುಕತೆಯ ಹೊತ್ತಿನಲ್ಲಿ ಸೂಕ್ಷ್ಮವಾಗಿ ನಟಿಸುತ್ತ, ಮಿಲಿಟರಿ ಗತ್ತಿನಲ್ಲಿ ದೊಡ್ಡದಾಗಿ ಅಬ್ಬರಿಸುತ್ತ ಅವರು ಮಿಂಚಿದ್ದಾರೆ. ನರೇಂದ್ರ ಮೋದಿ ಪಾತ್ರದಲ್ಲಿ ರಜಿತ್ ಕಪೂರ್, ಗುಪ್ತಚರ ಇಲಾಖೆ ಹಿರಿಯ ಅಧಿಕಾರಿ ಪಾತ್ರದಲ್ಲಿ ಪರೇಶ್ ರಾವಲ್ ಗಂಭೀರವಾಗಿ ಕ್ಯಾಮರಾ ಎದುರಿಸಿದ್ದಾರೆ. ಕೃತಿ, ಯಾಮಿ ಪಾತ್ರಗಳಿಗೆ ಹೆಚ್ಚಿನ ಸ್ಕೋಪ್ ಇಲ್ಲ. ಶಾಶ್ವತ್ ಸಚ್​ದೇವ್ ಸಂಗೀತ ಸಂಯೋಜಿಸಿರುವ ಹಾಡುಗಳಿಗೆ ಸೆಳೆಯುವ ಗುಣವಿದೆ.

Leave a Reply

Your email address will not be published. Required fields are marked *