ಸರ್ಫಿಂಗ್​ ಸ್ಪರ್ಧೆಯಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಬ್ರೆಜಿಲ್​ ಮಹಿಳೆ

ಬ್ರೆಜಿಲ್: ಪೋರ್ಚುಗಲ್​ ಕರಾವಳಿ ತೀರದಲ್ಲಿ 68 ಅಡಿ ಎತ್ತರದ ಅಲೆಗಳ ಮೇಲೆ ಸವಾರಿ (ಸರ್ಫಿಂಗ್) ಮಾಡುವ ಮೂಲಕ ಬ್ರೆಜಿಲ್​ನ ಕಡಲ ಅಲೆ ಸವಾರಿ ಮಹಿಳಾ ಕ್ರೀಡಾಪಟು ಮಾಯಾ ಗಬೆಯಿರಾ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ವರ್ಷದ ಪ್ರಾರಂಭದಲ್ಲಿ ನಝಾರೆಯಲ್ಲಿ ನಡೆದ ಕ್ರೀಡೆಯಲ್ಲಿ 31 ವರ್ಷದ ಮಾಯಾ ಗಬೆಯಿರಾ ಅವರು ಅತಿ ದೊಡ್ಡ ಅಲೆಯ ತುದಿ ಭಾಗದವರೆಗೆ ಹಾರಾಡಿ ಯಶಸ್ವಿಯಾಗಿ ಆಟವಾಡಿದ ವಿಡಿಯೋವನ್ನು ವಿಶ್ವ ಸರ್ಫ್​ ಲೀಗ್​ನ ವಿಡಿಯೋಗ್ರಾಫರ್​ ಸೆರೆಹಿಡಿದಿದ್ದು ಅದೀಗ ವೈರಲ್​ ಆಗಿದೆ. ಮಾಯಾ ಅವರಿಗೆ ಸೋಮವಾರ ಗಿನ್ನೆಸ್ ವಿಶ್ವ ದಾಖಲೆ ಪ್ರಶಸ್ತಿ ನೀಡಲಾಗಿದೆ.

ಗಬೆಯಿರಾ ಸಾಧನೆ ತುಂಬ ವಿಭಿನ್ನ ಎನಿಸಲು ಒಂದು ಕಾರಣವಿದೆ. 2013ಲ್ಲಿ ಇದೇ ಸ್ಥಳದಲ್ಲಿ ಅಲೆಗಳ ಸವಾರಿ ಮಾಡುತ್ತಿದ್ದಾಗ ಮಾಯಾ ಗಂಭೀರವಾಗಿ ಗಾಯಗೊಂಡಿದ್ದರು. ಈಗ ಅದೇ ಸ್ಥಳದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ.

ನಾನು ಗಾಯಗೊಂಡ ನಂತರ ಹಿಂದಕ್ಕೆ ಸರಿಯದೇ ಈ ಐದು ವರ್ಷಗಳಲ್ಲಿ ಅದೇ ಕರಾವಳಿ ಸ್ಥಳಕ್ಕೆ ಹೋಗಿ ತುಂಬ ಸಮಯಗಳ ಕಾಲ ಅಲೆಗಳ ಕ್ರೀಡೆಯಾಡುತ್ತಿದ್ದೆ. ಪ್ರತಿವರ್ಷ ನನ್ನ ಸವಾರಿ ಸಾಮರ್ಥ್ಯ ಹೆಚ್ಚುತ್ತಿತ್ತು. ನನ್ನ ಸುರಕ್ಷತೆಗಾಗಿ ಸುತ್ತಲೂ ಜನರು ಇದ್ದರು ಎಂದು ಗಬೆಯಿರಾ ತಿಳಿಸಿದ್ದಾರೆ.

ಆ 5 ವರ್ಷಗಳು ನನ್ನ ಪಾಲಿಗೆ ಅಮೂಲ್ಯ ಸಮಯವಾಗಿತ್ತು. ನಾನು ತುಂಬ ಕಲಿತಿದ್ದೇನೆ. ಸತತ ಪ್ರಯತ್ನದಿಂದ ಮೊದಲಿನಂತೆ ಅಲೆಗಳ ಜತೆ ಆಟವಾಡಲು ಸಾಧ್ಯವಾಯಿತು ಎಂದಿದ್ದಾರೆ.

ಗಬೆಯಿರಾ ಮಾಡಿರುವ ವಿಶ್ವ ದಾಖಲೆ ಮಹಿಳಾ ಆಟಗಾರ್ತಿಯ ಧೈರ್ಯ, ಬದ್ಧತೆ, ಬೆಳವಣಿಗೆಯನ್ನು ಇಡೀ ಜಗತ್ತಿಗೆ ತೋರಿಸುತ್ತದೆ. ಅವರ ಬಗ್ಗೆ ತುಂಬ ಹೆಮ್ಮೆಯೆನಿಸುತ್ತದೆ ಎಂದು ವಿಶ್ವ ಸರ್ಫ್​ ಲೀಗ್​ನ ಸಿಇಒ ಸೋಫಿ ಗೋಲ್ಡ್​ಸ್ಮಿತ್​ ತಿಳಿಸಿದ್ದಾರೆ.