ಪ್ರಾಜೆಕ್ಟ್ ಕೂರ್ಗ್ ಯೋಜನಾ ಘಟಕಕ್ಕೆ ಶಿಕ್ಷಣ ಸಚಿವ ಭೇಟಿ

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಕಾಲೂರಿನಲ್ಲಿ ಭಾರತೀಯ ವಿದ್ಯಾಭವನದ ಪ್ರಾಜೆಕ್ಟ್ ಕೂರ್ಗ್ ಯೋಜನಾ ಘಟಕಕ್ಕೆ ಶನಿವಾರ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಜಿಲ್ಲಾ ಪ್ರವಾಸ ಸಂದರ್ಭ ಭೇಟಿ ನೀಡಿದ್ದರು.
ಕಾಲೂರು ಗ್ರಾಮದಲ್ಲಿ ಪ್ರಕೃತಿ ವಿಕೋಪದಿಂದ ನೊಂದಿದ್ದ ಮಹಿಳೆಯರಿಗೆ ಸ್ವಾವಲಂಬಿ ಜೀವನ ಸಾಗಿಸಲು ಭಾರತೀಯ ವಿದ್ಯಾಭವನ ಕಳೆದ ವರ್ಷ ಪ್ರಾರಂಭಿಸಿದ್ದ ಯಶಸ್ವಿ ಹೆಸರಿನ ಮಸಾಲೆ ಪದಾರ್ಥ ಉತ್ಪನ್ನಗಳ ತಯಾರಿಕೆ ಹಾಗೂ ಹೊಲಿಗೆ ತರಬೇತಿ ಘಟಕಗಳಿಗೆ ಭೇಟಿ ನೀಡಿದ್ದ ಸುರೇಶ್ ಕುಮಾರ್ ಮಹಿಳೆಯರಿಂದ ಮಾಹಿತಿ ಪಡೆದರು.
ಪ್ರಕೃತಿ ವಿಕೋಪದ ಸಂದರ್ಭ ತಾವು ಸಾಕಷ್ಟು ನೊಂದಿದ್ದೇವೆ. ಈ ಸಂದರ್ಭ ಭಾರತೀಯ ವಿದ್ಯಾಭವನ ತಮ್ಮ ನೆರವಿಗೆ ಈ ಯೋಜನೆ ಮೂಲಕ ಬಂದದ್ದನ್ನು ಹೆಮ್ಮೆಯಿಂದ ಸ್ಮರಿಸಿಕೊಂಡ ಮಹಿಳೆಯರೊಂದಿಗೆ ಸಚಿವರು ಕೆಲಕಾಲ ಸಂವಾದ ನಡೆಸಿದರು.
ಎಂಥ ದುರಂತ ಎದುರಾದರೂ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಇದ್ದೇ ಇದೆ. ಮಹಿಳೆಯರು ಯಾವುದೇ ಕಾರಣಕ್ಕೂ ಛಲಬಿಡದೆ ತಮಗೆ ಸಾಧ್ಯವಾದ ರೀತಿಯಲ್ಲಿ ಹೊಸ ಜೀವನ ಕಟ್ಟಿಕೊಳ್ಳಬೇಕೆಂದು ಸುರೇಶ್ ಕುಮಾರ್ ಕಿವಿಮಾತು ಹೇಳಿದರು.
ಕಾಲೂರಿನಂಥ ಗ್ರಾಮೀಣ ಪ್ರದೇಶದಲ್ಲಿ ಭಾರತೀಯ ವಿದ್ಯಾಭವನವು ಈ ರೀತಿ ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ನೆರವಾದ ರೀತಿ ಪ್ರಶಂಸನೀಯ ಹಾಗೂ ಮಾದರಿ ಎಂದು ಸಚಿವರು ಶ್ಲಾಘಿಸಿದರು. ಸರ್ಕಾರದಿಂದ ಕಾಲೂರಿನ ಮಹಿಳೆಯರಿಗೆ ಸಾಧ್ಯವಾದ ರೀತಿಯಲ್ಲಿ ನೆರವು ನೀಡುವುದಾಗಿಯೂ ಭರವಸೆ ನೀಡಿದರು.
ಪ್ರಾಜೆಕ್ಟ್ ಕೂರ್ಗ್‌ನ ನಿರ್ದೇಶಕ ಹಾಗೂ ಭಾರತೀಯ ವಿದ್ಯಾಭವನ ಕೊಡಗು ಘಟಕದ ಕಾರ್ಯದರ್ಶಿ ಬಾಲಾಜಿ ಕಶ್ಯಪ್ ಸಚಿವರಿಗೆ ಯೋಜನೆಯ ಮಾಹಿತಿ ನೀಡಿದರು. 

Leave a Reply

Your email address will not be published. Required fields are marked *