More

    ಆಪ್ತನಿಂದಲೇ ಸುರೇಂದ್ರ ಬಂಟ್ವಾಳ್ ಹತ್ಯೆ?

    ಬಂಟ್ವಾಳ: ಚಿತ್ರನಟ, ರೌಡಿಶೀಟರ್ ಸುರೇಂದ್ರ ಬಂಟ್ವಾಳ್ ಅವರನ್ನು ಆಪ್ತರೇ ಹತ್ಯೆ ಮಾಡಿರುವ ಶಂಕೆ ಬಲವಾಗಿದೆ.
    ಹಲವು ವರ್ಷಗಳಿಂದ ಜತೆಯಲ್ಲಿದ್ದುಕೊಂಡು ಅವರ ಮನೆಯಲ್ಲಿಯೇ ಉಳಿದುಕೊಳ್ಳುತ್ತಿದ್ದ ಸತೀಶ್ ಎಂಬಾತ ಹತ್ಯೆ ಬಳಿಕ ಮೊಬೈಲ್ ಸ್ವಿಚ್‌ಆಫ್ ಮಾಡಿ ನಾಪತ್ತೆಯಾಗಿದ್ದಾನೆ. ಇದರಿಂದಾಗಿ ಆತನ ಮೇಲೆಯೇ ಅನುಮಾನ ಬಲವಾಗಿದ್ದು, ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    ಈ ನಡುವೆ ನಾಪತ್ತೆಯಾಗಿರುವ ಸತೀಶನದ್ದು ಎಂದು ಹೇಳಲಾಗಿರುವ ಆಡಿಯೋ ತುಣುಕೊಂದು ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿದ್ದು, ಇತ್ತೀಚೆಗೆ ಉಡುಪಿಯಲ್ಲಿ ನಡೆದ ರೌಡಿಶೀಟರ್ ಕಿಶನ್ ಹೆಗ್ಡೆ ಹತ್ಯೆಗೆ ಪ್ರತೀಕಾರವಾಗಿ ಸುರೇಂದ್ರ ಅವರನ್ನು ಕೊಲೆ ಮಾಡಿರುವುದಾಗಿ ಆಡಿಯೋದಲ್ಲಿ ಹೇಳಿಕೊಳ್ಳಲಾಗಿದೆ.
    ಮಂಗಳವಾರ ರಾತ್ರಿ ಸ್ನೇಹಿತನೊಬ್ಬ ಫ್ಲಾೃಟ್‌ಗೆ ಹೋಗಿ ಸುರೇಂದ್ರರಿಗೆ ಊಟ ನೀಡಿ ಬಂದಾಗಲೂ ಸತೀಶ್ ಅವರ ಮನೆಯಲ್ಲಿಯೇ ಇದ್ದ. ಬಳಿಕ ಇನ್ನೊರ್ವ ವ್ಯಕ್ತಿ ಫ್ಲಾೃಟ್ ಪ್ರವೇಶಿಸಿರುವುದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.
    ಸತೀಶ್ ಹಿಂದೆ ಅಮ್ಟಾಡಿ ಗ್ರಾಪಂನಲ್ಲಿ ನೀರಿನ ಬಿಲ್ ಕಲೆಕ್ಟರ್ ಆಗಿದ್ದ. ಬಾಡಿಗೆ ಮನೆ ಇದ್ದರೂ ಹೆಚ್ಚಾಗಿ ಸುರೇಂದ್ರನ ವಸತಿಗೃಹದಲ್ಲೇ ಉಳಿದುಕೊಳ್ಳುತ್ತಿದ್ದ. ಸತೀಶ್ ಪತ್ತೆಯಾದ ಬಳಿಕ ಘಟನೆಯ ಸತ್ಯಾಸತ್ಯತೆ ಹೊರ ಬೀಳಲಿದೆ.
    ‘ಹತ್ಯೆ ಆರೋಪಿಗಳ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದೇವೆ. ಸುರೇಂದ್ರ ಬಂಟ್ವಾಳ್ ಜತೆಗಿದ್ದ ಸತೀಶ್ ಹುಡುಕಾಟ ಮುಂದುವರಿದಿದ್ದು ಆತ ಸೆರೆ ಸಿಕ್ಕ ಮೇಲೆ ಸತ್ಯ ಗೊತ್ತ್ತಾಗಲಿದೆ. ಕಿಶನ್ ಹೆಗ್ಡೆ ಹತ್ಯೆ ಪ್ರತಿಕಾರವೋ ಅಥವಾ ಬೇರೆ ಯಾವುದೇ ಕಾರಣ ಇದೆಯೋ ಎನ್ನುವುದು ಬಳಿಕ ತಿಳಿಯಲಿದೆ’ ಎಂದು ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಸಿ.ಡಿ.ನಾಗರಾಜ್ ಪ್ರತಿಕ್ರಿಯಿಸಿದ್ದಾರೆ.

    ಆಡಿಯೋ ತುಣುಕಿನಲ್ಲಿ ಏನಿದೆ?
    ‘ನಮಸ್ತೆ, ನಾನು ಸತೀಶ್. ವಸ್ತಿ ಅಪಾರ್ಟ್‌ಮೆಂಟ್‌ನಲ್ಲಿ ಸುರೇಂದ್ರನ ಹತ್ಯೆ ಮಾಡಿರುವುದು ನಾನೇ. ಇದು ಕಿಶನ್ ಹೆಗ್ಡೆ ಸಾವಿಗೆ ಪ್ರತೀಕಾರ. ಸುರೇಂದ್ರ ಬಡ್ಡಿ ವ್ಯವಹಾರ ಮಾಡಿ ಅದನ್ನು ಪಾಪದ ಜನರ ಸಾವಿಗೆ ಉಪಯೋಗಿಸುತ್ತಿದ್ದ. ನಾನು 22 ವರ್ಷದಿಂದ ಸುರೇಂದ್ರನ ಜತೆಯಲ್ಲೇ ಇದ್ದವನು. ಅವನ ಎಲ್ಲ ಅವ್ಯವಹಾರಗಳೂ ಗೊತ್ತಿತ್ತು. ಕಿಶನ್ ಹೆಗ್ಡೆ ಕೊಲೆಗೆ ಇವನು ಹಣ ಸಹಾಯ ಮಾಡಿದ್ದ. ವಿಷಯ ತಿಳಿದ ನಾನು, ನೀನು ತಪ್ಪು ಮಾಡ್ತಾ ಇದ್ದೀಯಾ ಅಂತ ಹೇಳಿದ್ದೆ. ಆಗ, ಈ ವಿಷಯ ಹೊರಗಡೆ ಹೇಳಿದ್ರೆ ನಿನ್ನನ್ನು ಸಾಯಿಸುತ್ತೇನೆ ಅಂತ ನನಗೇ ಬೆದರಿಕೆ ಹಾಕಿದ್ದ. ನಂತರ ಜೈಲಿನಲ್ಲಿರುವ ಮನೋಜ್‌ಗೆ (ಕಿಶನ್ ಹೆಗ್ಡೆ ಕೊಲೆ ಆರೋಪಿ) ಹಣ, ಬಟ್ಟೆ ಕೊಡಲು ಸಹಾಯಕ್ಕಾಗಿ ಯಾರಲ್ಲೋ ಮಾತನಾಡಿದ್ದು, ಅದನ್ನು ತಲುಪಿಸಿರುವ ಸಂಭಾಷಣೆಯನ್ನೂ ಕೇಳಿದ್ದೇನೆ. ಈ ವಿಚಾರದಲ್ಲಿ ಕಿಶನ್‌ನ ಗೆಳೆಯನೊಂದಿಗೆ ಮಾತುಕತೆ ನಡೆಸಿದ್ದೆ. ಸುರೇಂದ್ರ ಮತ್ತು ಕೋಡಿಕೆರೆ ಮನೋಜನಿಂದ ಹಲವು ಯುವಕರು ಕೊಲೆಯಾಗುತ್ತಿದ್ದರು. ಅದಕ್ಕಾಗಿ ನಾವೇ ಸುರೇಂದ್ರನನ್ನು ಕೊಂದೆವು. ನಾವೀಗ ಏನು ಮಾಡಬೇಕೆಂದು ತೋಚದೆ ಕಾರವಾರ ತಲುಪಿದ್ದೇವೆ. ಇನ್ನೊಂದೆರಡು ದಿನಗಳಲ್ಲಿ ಪೊಲೀಸರಿಗೆ ಶರಣಾಗುತ್ತೇವೆ’ ಎನ್ನುವ ಸಂದೇಶ ಆಡಿಯೋದಲ್ಲಿದೆ.

    See also  ಕೆಲಸದಿಂದ ವಜಾ ಮಾಡಿದ್ದಕ್ಕೆ ಪಿನಾಯಿಲ್ ಸೇವಿಸಿ ಆತ್ಮಹತ್ಯೆಗೆ ಯತ್ನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts