ಅರ್ಧ ಶತಕದತ್ತ ನಗರ ಭಜನೆ

ಲೋಕೇಶ್ ಸುರತ್ಕಲ್
ಎಲ್ಲೆಡೆ ವಿರಳವಾಗುತ್ತಿರುವ ಸವಾರಿ ಭಜನೆ (ನಗರ ಭಜನೆ) ಕೃಷ್ಣಾಪುರದಲ್ಲಿ ಈಗಲೂ ನಡೆಯುತ್ತಿದ್ದು, 47ನೇ ವರ್ಷ ಪೂರೈಸಿದೆ.

ಕೃಷ್ಣಾಪುರ ಶ್ರೀ ರಾಮ ಭಜನಾ ಮಂಡಳಿಯಿಂದ 47ನೇ ವರ್ಷದ ನಗರ ಭಜನೆ ಮಾ.15ರಂದು ಆರಂಭಗೊಂಡಿದ್ದು, ಏ.12ರವರೆಗೆ ಕೃಷ್ಣಾಪುರ ಪರಿಸರದ ಮನೆಗಳಿಗೆ ಈಗ ಸಂಚಾರ ನಡೆಸಲಿದೆ. ಈವರೆಗೆ ಕೃಷ್ಣಾಪುರ 4ನೇ ವಿಭಾಗ, 5ನೇ ವಿಭಾಗ, ಬೊಳ್ಳಾಜೆ, ಹನುಮನಗರ ಪ್ರದೇಶಗಳ ಸುಮಾರು ಸಾವಿರ ಮನೆಗಳಲ್ಲಿ ಸಂಚಾರ ನಡೆಸಿದೆ.

ರೂಪು ಪಡೆದ ಕಥೆ: ನವಮಂಗಳೂರು ಬಂದರು ಸೇರಿ ಬೃಹತ್ ಉದ್ಯಮಗಳಿಗೆ ಮನೆ, ಭೂಮಿ ನೀಡಿದ್ದ ನಿರಾಶ್ರಿತರು ಕೃಷ್ಣಾಪುರಕ್ಕೆ 1966-67ರಲ್ಲಿ ಬಂದು ನೆಲೆಸಿದ್ದಾರೆ. ಆಗ ಕೃಷ್ಣಾಪುರ 5ನೇ ವಿಭಾಗದಲ್ಲಿ ಸರಿಸುಮಾರು 15 ಮನೆಗಳಿದ್ದವು. ಬೊಳ್ಳಾಜೆಯಲ್ಲಿ ಕೆಲವು ಮನೆಗಳಿದ್ದವು. ಮಿಕ್ಕಂತೆ ಕಿಲೋಮೀಟರ್‌ಗೆ ಒಂದರಂತೆ ಮನೆಗಳಿದ್ದವು. ಭಜನಾ ಮಂಡಳಿ ಅದಾಗಲೇ ಈಗಿನ ಕೃಷ್ಣಾಪುರ 5ನೇ ವಿಭಾಗ ಕೋಡ್ದಬ್ಬು ದ್ವಾರದ ಬಳಿಯಿದ್ದ ಲಕ್ಷ್ಮೀನಾರಾಯಣ ಕಾರಂತ ಎಂಬುವರ ಹೋಟೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಬಳಿಕ ಇಲ್ಲಿನ ಶೀನ ದೇವಾಡಿಗ ಅವರ ಕಟ್ಟಡದಲ್ಲಿತ್ತು. ಯುವಕ ಮಂಡಲ ಸ್ಥಾಪನೆಯಾದ ಬಳಿಕ ಇದನ್ನು ಅಲ್ಲಿಗೆ ಸ್ಥಳಾಂತರಿಸಲಾಯಿತು ಎಂದು ಕೃಷ್ಣಾಪುರ ಯುವಕ ಮಂಡಲ ಮಾಜಿ ಅಧ್ಯಕ್ಷ ಪಿ.ಸುಧಾಕರ್ ಕಾಮತ್ ಭಜನಾ ಮಂಡಳಿಯ ಹಿಂದಿನ ಕಥೆಯನ್ನು ಮೆಲುಕು ಹಾಕುತ್ತಾರೆ.

ಮಕ್ಕಳು, ವೃದ್ಧರೂ ತಂಡದಲ್ಲಿ: ಪ್ರತಿದಿನ 35ರಿಂದ 40 ಮನೆಗಳಿಗೆ ಸಂಚರಿಸಿ ಭಜನೆ ನಡೆಸುವ ತಂಡದಲ್ಲಿ ಮಕ್ಕಳು, ವಯೋವೃದ್ಧರು ಸೇರಿ ಸುಮಾರು 40 ಮಂದಿ ಇರುತ್ತಾರೆ. ಭಜನಾ ಮಂಡಳಿಯ ಸದಸ್ಯರೇ ಕೃಷ್ಣಾಪುರದ ಯುವಕ ಮಂಡಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ಯಕ್ಷಗಾನ ಬಯಲಾಟ ಸೇವಾ ಸಮಿತಿಗಳಲ್ಲಿ ತಂಡವಾಗಿ ಕಾರ್ಯ ನಿರ್ವಹಿಸುತ್ತಾ ಧಾರ್ಮಿಕ, ವಿವಿಧ ಕಾರ್ಯಕ್ರಮ ನಿರಂತರ ನಡೆಸುತ್ತಿದ್ದಾರೆ ಎಂದು ಶ್ರೀ ರಾಮ ಭಜನಾ ಮಂಡಳಿ ಅಧ್ಯಕ್ಷ ಸತೀಶ್ ಸಾಲ್ಯಾನ್ ಭಜನಾ ಮಂಡಳಿಯ ಕಾರ್ಯಗಳ ಬಗ್ಗೆ ವಿವರಿಸಿದರು.

ನಾಳೆ ಭಜನಾ ಮಂಗಲೋತ್ಸವ: ಭಜನಾ ಮಂಡಳಿಯಲ್ಲಿ 47ನೇ ವರ್ಷದ ಶ್ರೀ ರಾಮ ನವಮಿ ಉತ್ಸವ, ಭಜನಾ ಮಂಗಲೋತ್ಸವ ಏ.13ರ ಸೂರ್ಯಾಸ್ತದಿಂದ ಮರುದಿನ ಸೂರ್ಯೋದಯದವರೆಗೆ ನಡೆಯಲಿದೆ.