ಸುರತ್ಕಲ್ ಎನ್‌ಐಟಿಕೆ ಟೋಲ್‌ಗೇಟ್ ರದ್ದು

-ವಿಜಯವಾಣಿ ಸುದ್ದಿಜಾಲ ಮಂಗಳೂರು
ಸುರತ್ಕಲ್ ಎನ್‌ಐಟಿಕೆ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇರುವ ಟೋಲ್‌ಗೇಟ್ ರದ್ದುಪಡಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ(ಎನ್‌ಎಚ್‌ಎಐ) ಕೇಂದ್ರ ಕಚೇರಿಗೆ ಶಿಫಾರಸು ಮಾಡಲು ಪ್ರಾಧಿಕಾರದ ಮಂಗಳೂರು ಯೋಜನಾ ನಿರ್ದೇಶಕ ಸಾಮ್ಸನ್ ವಿಜಯ ಕುಮಾರ್ ಒಪ್ಪಿಗೆ ಸೂಚಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಟೋಲ್‌ಗೇಟ್ ವಿರೋಧಿ ಹೋರಾಟಗಾರರು ಹಾಗೂ ಅಧಿಕಾರಿಗಳ ಸಭೆ ಜರುಗಿತು.
ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಎನ್‌ಐಟಿಕೆ ಸಮೀಪದ ಟೋಲ್‌ಗೇಟ್ ರದ್ದುಪಡಿಸುವಂತೆ ದೀರ್ಘಕಾಲದಿಂದ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಸಾರ್ವಜನಿಕರ ಬೇಡಿಕೆ ನ್ಯಾಯಯುತವಾಗಿದ್ದು, ತಕ್ಷಣ ಈ ಬಗ್ಗೆ ಎನ್‌ಎಚ್‌ಎಐ ಪ್ರಾದೇಶಿಕ ಕಚೇರಿ (ಬೆಂಗಳೂರು) ಮೂಲಕ ಕೇಂದ್ರಕ್ಕೆ ಶಿಫಾರಸು ಕಳುಹಿಸುವಂತೆ ಸಚಿವರು ನೀಡಿದ ಸಲಹೆಗೆ ಎನ್‌ಎಚ್‌ಎಐ ಅಧಿಕಾರಿಗಳು ಒಪ್ಪಿಗೆ ನೀಡಿದರು.
ಮುಂದಿನ ಹಂತದಲ್ಲಿ ಸ್ಥಳೀಯ ಸಂಸದರು ಹಾಗೂ ಟೋಲ್‌ವಿರೋಧಿ ಹೋರಾಟಗಾರರ ಪ್ರತಿನಿಧಿಗಳನ್ನು ಒಳಗೊಂಡಿರುವ ನಿಯೋಗ ನವದೆಹಲಿಗೆ ತೆರಳಿ ಕೇಂದ್ರದ ಅಧಿಕಾರಿಗಳಿಗೆ ಪರಿಸ್ಥಿತಿ ಮನವರಿಕೆ ಮಾಡಿಕೊಡಲು ಪ್ರಯತ್ನಿಸಲು ಸಭೆ ನಿರ್ಣಯಿಸಿತು.

ಒಂದೇ ಕಾರ್ಯಸೂಚಿ: ಟೋಲ್ ವಿಲೀನ ಪರಿಕಲ್ಪನೆಯೇ ಸರಿ ಇಲ್ಲ. ಆದ್ದರಿಂದ ಎನ್‌ಐಟಿಕೆ ಟೋಲ್ ಹೆಜಮಾಡಿ ಟೋಲ್‌ನಲ್ಲಿ ವಿಲೀನಗೊಳಿಸುವ ಪ್ರಸ್ತಾವನೆ ಬೇಡ. ಟೋಲ್ ರದ್ದು ಬೇಡಿಕೆಯ ಒಂದು ಅಜೆಂಡಾ(ಕಾರ್ಯಸೂಚಿ) ಮಾತ್ರ ಸಾಕು ಎನ್ನುವ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಸಲಹೆಗೆ ಎಲ್ಲರೂ ಸಹಮತ ಸೂಚಿಸಿದರು.
ಇದು ಆದಾಯ ತುಂಬಿಕೊಳ್ಳುವ ವಿಷಯ. ಇಲಾಖೆ ಕಮರ್ಷಿಯಲ್ ವ್ಯವಹಾರಗಳ ವಿಭಾಗದ ಅಭಿಪ್ರಾಯ ಈ ವಿಷಯದಲ್ಲಿ ಮುಖ್ಯ ಎಂದು ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಅಭಿಪ್ರಾಯಪಟ್ಟರು.

ಟೋಲ್ ಅವೈಜ್ಞಾನಿಕ: ಎನ್‌ಐಟಿಕೆ ಟೋಲ್ ತಾತ್ಕಾಲಿಕವಾಗಿ ಎಂದು ಆರಂಭಿಸಲಾಯಿತು ಮತ್ತು ಹಂತಹಂತವಾಗಿ ಮುಂದುವರಿಸಲಾಗುತ್ತಿದೆ. ಇದು ಅವೈಜ್ಞಾನಿಕ ಟೋಲ್ ಎನ್ನುವುದಕ್ಕೆ ಈ ಪ್ರಕ್ರಿಯೆಯೇ ಸಾಕ್ಷಿ ಎಂದು ಟೋಲ್ ವಿರೋಧಿ ಹೋರಾಟಗಾರರು ಆಕ್ಷೇಪಿಸಿದರು. ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಉದ್ಧಟತನದ ವರ್ತನೆ ತೋರುತ್ತಿದ್ದಾರೆ. ಸಾರ್ವಜನಿಕರ ಜತೆ ಕನಿಷ್ಠ ಉತ್ತಮ ನಡವಳಿಕೆ ತೋರುವ ಸೌಜನ್ಯ ಕೂಡ ಅವರಿಗಿಲ್ಲ ಎಂದು ದೂರಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಜಿಪಂ ಸಿಇಒ ಆರ್.ಸೆಲ್ವಮಣಿ, ಹೋರಾಟಗಾರರ ಪರವಾಗಿ ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಪಾಲಿಕೆ ಸದಸ್ಯರಾದ ರೇವತಿ, ದಯಾನಂದ ಶೆಟ್ಟಿ, ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ಮುಖಂಡರಾದ ಬಿ.ಕೆ.ಇಮ್ತಿಯಾಜ್, ಪುರುಷೋತ್ತಮ ಚಿತ್ರಾಪುರ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿದರು.

ವೆನ್ಲಾಕ್‌ನಲ್ಲಿ ಜ್ವರದ ಕ್ಲಿನಿಕ್: ಎಚ್1ಎನ್1 ಸೋಂಕಿಗೆ ಜಿಲ್ಲೆಯ ವಿವಿಧೆಡೆ ಹಲವು ಸಾವು ಸಂಭವಿಸಿದ ಹಿನ್ನೆಲೆಯಲ್ಲಿ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಜ್ವರಗಳ ತಪಾಸಣೆ ಹಾಗೂ ಚಿಕಿತ್ಸೆಗೆ ಪ್ರತ್ಯೇಕ ಕ್ಲಿನಿಕ್ ತೆರೆಯಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು.
ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ಎಚ್1ಎನ್1 ಸೋಂಕಿನ ಚಿಕಿತ್ಸೆಗೆ ಅಗತ್ಯ ಮಾತ್ರೆಗಳ ಪೂರೈಕೆಗೆ ಗಮನ ನೀಡಬೇಕು. ವೆನ್ಲಾಕ್ ಆಸ್ಪತ್ರೆಗೆ ಬರುವ ರೋಗಿಗಳಿಗೆ ಅಗತ್ಯ ಚಿಕಿತ್ಸೆ ದೊರೆಯಬೇಕು. ವಸ್ತು ಸ್ಥಿತಿ ಬಗ್ಗೆ ಜಿಲ್ಲೆಯ ಎಲ್ಲ ಕಡೆಗಳಿಂದ ಸಕಾಲದಲ್ಲಿ ಮಾಹಿತಿ ರವಾನೆಯಾಗುವಂತೆ ವ್ಯವಸ್ಥೆ ಮಾಡಿಕೊಳ್ಳುವಂತೆ ಸಚಿವರು ಸೂಚಿಸಿದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಮಕೃಷ್ಣ ರಾವ್, ತಾಲೂಕು ವೈದ್ಯಾಧಿಕಾರಿ ಡಾ.ನವೀನ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಪ್ರವೀಣ್ ಉಪಸ್ಥಿತರಿದ್ದರು.