ಹೂಳು ತುಂಬಿರುವ ಹೆದ್ದಾರಿ ಮೋರಿ

ಲೋಕೇಶ್ ಸುರತ್ಕಲ್
ಸುರತ್ಕಲ್‌ನ ರಾಷ್ಟ್ರೀಯ ಪಕ್ಕದ ಕಚೇರಿಸಾನ, ಕಾಶಿಮಠ ಬಳಿಯ ಸುಮಾರು 20- 30 ಮನೆ ನಿವಾಸಿಗಳು, ವಿದ್ಯಾರ್ಥಿಗಳು ಮಳೆಗಾಲದಲ್ಲಿ ಭೀತಿಯಿಂದಲೇ ದಿನ ಕಳೆಯಬೇಕಾಗಿದೆ.
ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಅಡಿಯಲ್ಲಿ ಹೆದ್ದಾರಿ ಇಲಾಖೆಯವರು ಹಾಕಿರುವ ಮೂರು ಮೋರಿಗಳಲ್ಲಿ ಹೂಳು ತುಂಬಿರುವುದು, ಹೂಳಿನಿಂದ ಮೋರಿಗಳು ನೆಲದಡಿ ಹೂತು ಹೋಗಿರುವುದು ಇದಕ್ಕೆ ಕಾರಣ ಎನ್ನುತ್ತಾರೆ ಸ್ಥಳೀಯರು.
ಅವೈಜ್ಞಾನಿಕ ಕಾಮಗಾರಿ ಎಂಬ ಶಂಕೆಯೂ ವ್ಯಕ್ತವಾಗಿದೆ. ಮೋರಿ ಒಳಗೆ ಹೂಳು ತುಂಬಿದ್ದರೂ ತೆಗೆದಿಲ್ಲ. ಪ್ರತಿವರ್ಷ ಈ ಸಮಸ್ಯೆ ಇದ್ದದ್ದೇ. ಈ ವರ್ಷ ಚುನಾವಣಾ ನೀತಿ ಸಂಹಿತೆ ಕಾರಣ ಅಧಿಕಾರಿಗಳನ್ನು ಕೇಳುವವರೇ ಇಲ್ಲವಾಗಿದೆ. ಸುರತ್ಕಲ್ ಪೇಟೆಯಿಂದ ತಡಂಬೈಲ್ ಅರ್ಧಭಾಗದವರೆಗಿನ ಮಳೆ ನೀರು ಇಲ್ಲಿಂದ ಪೂರ್ವಭಾಗಕ್ಕೆ ಹರಿದು ಪಾವಂಜೆಯಲ್ಲಿ ನಂದಿನಿ ನದಿಗೆ ಸೇರುವ ಕೃಷಿ ತೋಡಿಗೆ ಸೇರಬೇಕಾಗಿದ್ದು, ಇದಕ್ಕೆ ಅಡ್ಡಿಯಾಗಿದೆ ಪ್ರತಿವರ್ಷ ಇಲ್ಲಿನ ಮನೆಗಳ ನಿವಾಸಿಗಳು ಬೇರೆ ಮನೆಗಳಿಗೆ ಸ್ಥಳಾಂತರವಾಗುವುದು ಇಲ್ಲವೇ ಅಂಗಳದ ನೀರನ್ನು ಪಂಪ್ ಬಳಸಿ ತೆಗೆಯಬೇಕಾಗಿದೆ. ಈ ಬಗ್ಗೆ ಸಾಕಷ್ಟು ಸಲ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದ್ದೇವೆ ಎನ್ನುತ್ತಾರೆ ಇಲ್ಲಿನ ಸಂತ್ರಸ್ತ ನಿವಾಸಿ ಚಂದು ಸಾಲ್ಯಾನ್.

ಸಂಸದರಿಂದ ಭರವಸೆ:  ಕಳೆದ ವರ್ಷ ಮೇ 28ರ ಸುಮಾರಿಗೆ ಸುರಿದ ಭಾರಿ ಮಳೆ ಸಂದರ್ಭ ಇಲ್ಲಿ ನೀರಿನ ಹರಿವಿಗೆ ಅಡ್ಡಿಯಾಗಿ ಕಾಶಿಮಠ ಪ್ರದೇಶದಲ್ಲಿ ಹಲವು ಮನೆಗಳಿಗೆ ನೀರು ಆವರಿಸಿ ಕಷ್ಟ ನಷ್ಟ ಸಂಭವಿಸಿತ್ತು. ಈ ಬಗ್ಗೆ ಹೆದ್ದಾರಿ ಚರಂಡಿ ಪೈಪ್‌ಗಳ ಮರುವಿನ್ಯಾಸಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಭರವಸೆ ನೀಡಿದ್ದರು. ಮಳೆ ನೀರಿನ ಹರಿವಿಗೆ ಇಲ್ಲಿನ ತೋಡುಗಳಿಗೆ ಸ್ಲಾೃಬ್ ಅಳವಡಿಸಿ ಪಾರ್ಕಿಂಗ್ ನಿರ್ಮಿಸಲು ಪಾಲಿಕೆ ವತಿಯಿಂದ ಅನುಮತಿ ನೀಡಲಾಗಿರುವುದು ಕಾರಣ, ಇದು ಅಕ್ರಮವಾಗಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಸುರೇಂದ್ರ.

ಈ ಬಗ್ಗೆ ಹೆದ್ದಾರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಕೂಡಲೆ ಸೂಕ್ತ ಕ್ರಮ ತೆಗೆದುಕೊಳ್ಳಲು ಸೂಚಿಸುತ್ತೇನೆ.
ಡಾ.ವೈ.ಭರತ್ ಶೆಟ್ಟಿ, ಶಾಸಕ

ಈ ಭಾಗದಿಂದ ಪೂರ್ವಕ್ಕೆ ಇರುವ ತಾರ್‌ವರೆಗೆ ಸಣ್ಣ ನೀರಾವರಿ ಇಲಾಖೆ ವತಿಯಿಂದ ಚರಂಡಿ ನಿರ್ಮಿಸಕೊಡಬೇಕು ಎಂದು ಶಾಸಕರಿಗೆ ಇತ್ತೀಚೆಗೆ ಮನವಿ ಸಲ್ಲಿಸಲಾಗಿದೆ.
ಸ್ಥಳೀಯರು

ಸುರತ್ಕಲ್‌ನ ರಾಷ್ಟ್ರೀಯ ಪಕ್ಕದ ಕಚೇರಿಸಾನ, ಕಾಶಿಮಠ ಬಳಿಯ ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗುವುದು.
ಸುಮಿತ್ರಾ ಕೆ. ಮಾಜಿ ಕಾರ್ಪೋರೇಟರ್