ಸುರಪುರ: ತಿರುಪತಿ ತಿರುಮಲಾಧೀಶ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಬ್ರಹ್ಮೋತ್ಸವ ನಿಮಿತ್ತ ಸೋಮವಾರ ಅದ್ದೂರಿ ರಥೋತ್ಸವ ನಡೆಯಿತು.
ರಥದ ಮೇಲಿಂದ ಸುರಪುರಮ್ ಎಂದು ಜೋರಾಗಿ ಕೂಗಿ ಆರತಿ ತಟ್ಟೆಯೊಂದಿಗೆ ಬಂದ ಸುರಪುರ ಸಂಸ್ಥಾನದ ಅಳಿಯ, ಪ್ರತಿನಿಧಿ ವೇಣುಮಾಧವ ನಾಯಕ ಪ್ರಥಮ ಪೂಜೆ, ಮಂಗಳಾರತಿ ನೆರವೇರಿಸಿದ ಬಳಿಕ ಬ್ರಹ್ಮೋತ್ಸವಕ್ಕೆ ಚಾಲನೆ ನೀಡಲಾಯಿತು.
ಸುರಪುರ ಸಂಸ್ಥಾನದಿಂದ ಮೊದಲ ಪೂಜೆ ನಂತರವೇ ರಥೋತ್ಸವಕ್ಕೆ ಚಾಲನೆ ಸಿಗುತ್ತದೆ. ಇದು ಸಂಸ್ಥಾನದ ಅರಸರ ಕಾಲದಿಂದಲೂ ನಡೆದುಕೊಂಡು ಬಂದಿರುವ ಪರಂಪರೆ. ನೆರದಿದ್ದ ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡರು. ನಮ್ಮ ಜತೆ ಶ್ರೀನಿವಾಸ ದೇವರು ಇದ್ದರು ಎಂದು ವೇಣುಮಾಧವ ನಾಯಕ ತಿಳಿಸಿದರು.
ಸುರಪುರದ ವೇಣುಗೋಪಾಲ ಸ್ವಾಮಿ ತಿರುಪತಿ ವೆಂಕಟೇಶ್ವರನ ಹೆಸರಿನಿಂದಲೂ ಪ್ರಖ್ಯಾತಿ ಪಡೆದಿದ್ದಾನೆ. ಇಬ್ಬರೂ ಒಂದೇ ಎಂದು ಕರೆಯಲಾಗುತ್ತದೆ. ಸುರಪುರ ಸಂಸ್ಥಾನದ ಅರಸರು ಗೋಪಾಲಸ್ವಾಮಿಯ ಪರಮ ಭಕ್ತರು. ಮನೆ ದೇವರೆಂದು ಪೂಜಿಸುತ್ತಾರೆ. ಒಮ್ಮೆ ವೆಂಕಟೇಶ್ವರ ಸ್ವಾಮಿ ಸುರಪುರ ಅರಸರ ಕನಸಿನಲ್ಲಿ ಬಂದು ನೀವು ನನ್ನ ಮಹಾನ್ ಭಕ್ತರು. ಹೀಗಾಗಿ ನೀವ್ಯಾರೂ ತಿರುಪತಿಗೆ ದರ್ಶನಕ್ಕಾಗಿ ಬರುವ ಅಗತ್ಯವಿಲ್ಲ. ನೀವಿದ್ದಲ್ಲೇ ದರ್ಶನ ಕೊಡುವೆ ಎಂದು ತಿಳಿಸಿದ್ದನಂತೆ. ಹೀಗಾಗಿ ಸ್ವಾಮಿ ಆದೇಶದಂತೆ ಇದುವರೆಗೂ ಅಲ್ಲಿಗೆ ಅರಸು ಮನೆತನದ ಯಾರೊಬ್ಬರೂ ಹೋಗುವುದಿಲ್ಲ ಎಂದು ಮಾಹಿತಿ ನೀಡಿದರು.
ಇದರಿಂದಾಗಿ ಅರಸರು ಸುರಪುರದಲ್ಲೇ ವೇಣುಗೋಪಾಲ ಸ್ವಾಮಿ ದೇಗುಲ ನಿರ್ಮಿಸಿ ಬ್ರಾಹ್ಮಣರನ್ನು ಪೂಜೆಗೆ ನಿಯೋಜಿಸಿದರು. ತಿರುಪತಿಯಲ್ಲಿ ಜರುಗುವ ಪ್ರತಿ ಕರ‍್ಯಕ್ರಮವೂ ಸುರಪುರದಲ್ಲಿ ನಡೆಯುವಂತೆ ಮಾಡಿದರು. ಹೀಗಾಗಿ ತಿರುಪತಿ ಬ್ರಹ್ಮೋತ್ಸವದಲ್ಲಿ ಪೂಜೆ ಸಲ್ಲಿಸಲು ರಾಜಪ್ರತಿನಿಧಿಯನ್ನು ಮಾತ್ರ ಕಳುಹಿಸುತ್ತಾರೆ ಎಂದರು.
೯೦ರ ದಶಕದಲ್ಲಿ ಒಂದು ಅಚ್ಚರಿ ಪ್ರಸಂಗ ನಡೆದಿದೆ. ಸುರಪುರ ರಾಜಪ್ರತಿನಿಧಿಯನ್ನು ಕರೆಯದೆ ಬ್ರಹ್ಮೋತ್ಸವಕ್ಕೆ ಚಾಲನೆ ನೀಡಿದಾಗ ರಥ ಸ್ವಲ್ಪ ಮುಂದೆ ಚಲಿಸಿದ ಬಳಿಕ ನಿಂತಲ್ಲೇ ನಿಂತು ಬಿಟ್ಟಿತು. ಸಾವಿರಾರು ಜನ ಎಷ್ಟೇ ಪ್ರಯತ್ನಪಟ್ಟರೂ, ನಾನಾ ಹರಸಾಹಸ ಮಾಡಿ ರಥ ಎಳೆದರೂ ಮುಂದೆ ಚಲಿಸಲಿಲ್ಲ. ನಂತರ ಹಿರಿಯರು ಸುರಪುರದವರನ್ನು ಕರೆಯಿಸಿ ಮಂಗಳಾರತಿ ಮಾಡಿಸಿದಾಗ ಮಾತ್ರ ರಥ ಸರಾಗವಾಗಿ ಚಲಿಸಿತು ಎಂದು ಹಿರಿಯರು ಹೇಳುತ್ತಾರೆ ಎಂದು ಸ್ಮರಿಸಿದರು.
ವೆಂಕಟೇಶ ಸ್ವಾಮಿಯ ಬ್ರಹ್ಮೋತ್ಸವದಲ್ಲಿ ಸುರಪುರ ಸಂಸ್ಥಾನದಿಂದ ಅಗ್ರಪೂಜೆ ಸಲ್ಲಿಸಲಾಯಿತು. ಹಲವು ವರ್ಷಗಳಿಂದ ಸಂಸ್ಥಾನದ ರಾಜಪ್ರತಿನಿಧಿಯಾಗಿ ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ದೈವವನ್ನು ಕಣ್ತುಂಬಿಕೊಳ್ಳುತ್ತಿರುವುದು ನನ್ನ ಪೂರ್ವಜನ್ಮದ ಪುಣ್ಯ.
| ವೇಣುಮಾಧವ ನಾಯಕ ಸುರಪುರ ಸಂಸ್ಥಾನದ ರಾಜಪ್ರತಿನಿಧಿ