More

  ಏಕ ಭಾರತಕ್ಕೆ ಸುಪ್ರೀಂ ಬಲ; ಜಮ್ಮು-ಕಾಶ್ಮೀರದ 370ನೇ ವಿಧಿ ನಿಷ್ಕ್ರಿಯಗೊಳಿಸಿದ ಕ್ರಮಕ್ಕೆ ಪುರಸ್ಕಾರ

  ರಾಘವ ಶರ್ಮ ನಿಡ್ಲೆ ನವದೆಹಲಿ
  ವಿಶೇಷ ಸ್ಥಾನಮಾನದ ಹೆಸರಲ್ಲಿ ಜಮ್ಮು-ಕಾಶ್ಮೀರವನ್ನು ಭಾರತದ ಅಭಿವೃದ್ಧಿ ಪಥದಿಂದ ದೂರವಿಟ್ಟ ‘ತಾತ್ಕಾಲಿಕ’ 370ನೇ ವಿಧಿಯನ್ನು ಶಾಶ್ವತವಾಗಿ ನಿಷ್ಕ್ರಿಯಗೊಳಿಸಿದ ಕೇಂದ್ರ ಸರ್ಕಾರದ ಕ್ರಮ ಸಂವಿಧಾನಬದ್ಧ ಎಂದು ಸುಪ್ರೀಂ ಕೋರ್ಟ್​ನ ಅಧಿಕೃತ ಮುದ್ರೆ ಸಿಕ್ಕಿದೆ. 2019ರ ಆಗಸ್ಟ್​ನಲ್ಲಿ ಎನ್​ಡಿಎ ಸರ್ಕಾರ ಕೈಗೊಂಡಿದ್ದ ದಿಟ್ಟ ಕ್ರಮವನ್ನು ಸುಪ್ರೀಂ ಕೋರ್ಟ್​ನ ಪಂಚ ಸದಸ್ಯರ ಸಂವಿಧಾನ ಪೀಠ ಪುರಸ್ಕರಿಸುವ ಮೂಲಕ ಕಾನೂನು ಹೋರಾಟದಲ್ಲೂ ನರೇಂದ್ರ ಮೋದಿ ಸರ್ಕಾರ ಐತಿಹಾಸಿಕ ಗೆಲುವು ಸಾಧಿಸಿದಂತಾಗಿದೆ.

  ಕಣಿವೆ ರಾಜ್ಯದ ವಿಶೇಷ ಸ್ಥಾನಮಾನ ರದ್ದು ಗೊಳಿಸಿದ್ದರ ಹಿಂದೆ ಕೇಂದ್ರ ಸರ್ಕಾರಕ್ಕೆ ಯಾವುದೇ ದುರುದ್ದೇಶವಿರಲಿಲ್ಲ. ಸ್ವಾತಂತ್ರಾ್ಯನಂತರ ಇದು ಕಾಲಕ್ರಮೇಣವಾಗಿ ಆಗಬೇಕಿತ್ತು. ಆದರೆ, ಯಾವುದೇ ಕ್ರಮ ಕೈಗೊಳ್ಳದ ಕಾರಣ 370ನೇ ವಿಧಿ ಉಳಿದುಕೊಂಡಿತ್ತು ಎಂದು ಸುಪ್ರೀಂಕೋರ್ಟ್ ಹೇಳಿದೆ. ರಾಜತಾಂತ್ರಿಕ ಮತ್ತು ಐತಿಹಾಸಿಕ ನೆಲೆ ಯಲ್ಲೂ ಈ ತೀರ್ಪು ಮಹತ್ವದ್ದಾಗಿದ್ದು, ವಿಶೇಷ ಸ್ಥಾನಮಾನ ಕುರಿತ ಪರ/ವಿರೋಧ ಚರ್ಚೆಗೂ ಮುಖ್ಯ ನ್ಯಾ.ಡಿ.ವೈ. ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠ ಅಂತ್ಯ ಹಾಡಿದಂತಾಗಿದೆ.

  370ನೇ ವಿಧಿ ನಿಷ್ಕ್ರಿಯಗೊಳಿಸಿದ್ದನ್ನು ಪ್ರಶ್ನಿಸಿ 23 ಅರ್ಜಿಗಳು ಸಲ್ಲಿಕೆಯಾಗಿದ್ದವು ಮತ್ತು ಪಂಚ ಸದಸ್ಯರ ನ್ಯಾಯಪೀಠ ಮೂರು ತೀರ್ಪುಗಳನ್ನು ನೀಡಿದೆ. ಆದರೆ, ಈ ಮೂರೂ ತೀರ್ಪುಗಳಲ್ಲಿ ನ್ಯಾಯಮೂರ್ತಿಗಳು ಪರಸ್ಪರ ಅಭಿಪ್ರಾಯಗಳನ್ನು ಬೆಂಬಲಿಸಿರುವುದರಿಂದ ಇದೊಂದು ಸರ್ವ ಸಮ್ಮತದ ತೀರ್ಪು ಎನ್ನುವುದು ಗಮನಾರ್ಹ. ಜಮ್ಮು-ಕಾಶ್ಮೀರದಿಂದ ಲಡಾಖ್ ಬೇರ್ಪಡಿಸಿ ಅದನ್ನು ಮತ್ತೊಂದು ಕೇಂದ್ರಾಡಳಿತ ಪ್ರದೇಶವನ್ನಾಗಿ ಪರಿವರ್ತಿಸಿದ್ದಕ್ಕೂ ಸಮ್ಮತಿಸಲಾಗಿದ್ದು, ರಾಜ್ಯವೊಂದರಿಂದ ನಿರ್ದಿಷ್ಟ ಭೂಭಾಗವನ್ನು ಬೇರ್ಪ ಡಿಸಿ, ಕೇಂದ್ರಾಡಳಿತವನ್ನಾಗಿ ಘೊಷಿಸುವ ಅಧಿಕಾರ ಸಂಸತ್ತಿಗೆ ಇದೆ ಎನ್ನುವುದನ್ನೂ ತೀರ್ಪಿನಲ್ಲಿ ದಾಖಲಿಸಿದೆ.

  ವಿಶೇಷ ಸ್ಥಾನಮಾನ ತಾತ್ಕಾಲಿಕ ವ್ಯವಸ್ಥೆ: ಸಂವಿಧಾನದ 370ನೇ ವಿಧಿ ಜಮ್ಮು-ಕಾಶ್ಮೀರಕ್ಕೆ ಒದಗಿಸಲಾಗಿದ್ದ ತಾತ್ಕಾಲಿಕ ವ್ಯವಸ್ಥೆಯಾಗಿತ್ತೇ ವಿನಃ ಅದನ್ನು ಶಾಶ್ವತವಾಗಿರಿಸುವ ಉದ್ದೇಶ ಇರಲಿಲ್ಲ. ರಾಜ್ಯದ ಸಂವಿಧಾನ ಸಭೆ ರಚನೆಯಾಗುವ ತನಕ ಮಧ್ಯಂತರ ವ್ಯವಸ್ಥೆ ಒದಗಿಸಲು ಮತ್ತು ಇತರ ವಿಷಯಗಳಲ್ಲಿ ಒಕ್ಕೂಟದ ಶಾಸಕಾಂಗ ಸಾಮರ್ಥ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಹಾಗೂ ಅಂತಿಮವಾಗಿ ಭಾರತದ ಸಂವಿಧಾನವನ್ನು ಅನುಮೋದಿಸಲು ಇದನ್ನು ರೂಪಿಸಲಾಗಿತ್ತು. ಅಲ್ಲದೆ, ಜಮ್ಮು-ಕಾಶ್ಮೀರದಲ್ಲಿನ ಯುದ್ಧದ ಪರಿಸ್ಥಿತಿಗಳ ವಿಶೇಷ ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿತ್ತು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಸಂವಿಧಾನ ಸಭೆ ಅಸ್ತಿತ್ವದಲ್ಲಿಲ್ಲದ ಕಾರಣಕ್ಕಾಗಿ 370ನೇ ವಿಧಿ ಶಾಶ್ವತವಾಗಿ ಮುಂದುವರಿಯುತ್ತದೆ ಎಂದರ್ಥವಲ್ಲ ಎಂದು ಅಭಿಪ್ರಾಯಪಟ್ಟಿದೆ. ಈ ಮೂಲಕ ಸಂವಿಧಾನದ 370ನೇ ವಿಧಿ ರದ್ದತಿ ಸರಿಯಾದ ಕ್ರಮ ಎಂದು ಒತ್ತಿಹೇಳಿದೆ.

  ರಾಷ್ಟ್ರಪತಿ ಆದೇಶದಲ್ಲಿ ಹಸ್ತಕ್ಷೇಪವಿಲ್ಲ: 370ನೇ ವಿಧಿಯಡಿಯಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಲು ಸಾಂವಿಧಾನಿಕ ಆದೇಶ ಹೊರಡಿಸುವ ಎಲ್ಲ ಅಧಿಕಾರ ರಾಷ್ಟ್ರಪತಿಗಿದೆ ಎಂದಿರುವ ನ್ಯಾಯಪೀಠ, ಅಂದು ರಾಷ್ಟ್ರಪತಿಯಾಗಿದ್ದ ರಾಮನಾಥ ಕೋವಿಂದ ಆದೇಶವನ್ನೂ ಎತ್ತಿಹಿಡಿದಿದೆ. ರಾಷ್ಟ್ರಪತಿ ಆಳ್ವಿಕೆಯ ಸಿಂಧುತ್ವದ ಬಗ್ಗೆ ಅರ್ಜಿದಾರರು ಪ್ರಶ್ನಿಸಿಲ್ಲ. ಹೀಗಾಗಿ, ಸಿಂಧುತ್ವದ ಕುರಿತು ತೀರ್ಪು ನೀಡಿಲ್ಲ. ಜಮ್ಮು-ಕಾಶ್ಮೀರ ವಿಧಾನಸಭೆಯ ಶಿಫಾರಸುಗಳು ರಾಷ್ಟ್ರಪತಿಗಳಿಗೆ ಅನ್ವಯವಾಗುವುದಿಲ್ಲ. ಆರ್ಟಿಕಲ್ 370(1)ಡಿ) ಅನ್ವಯ ರಾಜ್ಯದಲ್ಲಿ ಎಲ್ಲ ನಿಬಂಧನೆಗಳನ್ನು ಅನ್ವಯಿಸಲು ರಾಜ್ಯ ಸರ್ಕಾರದ ಅನುಮತಿಯನ್ನೂ ಪಡೆಯಬೇಕಿಲ್ಲ. ಹೀಗಾಗಿ, ಕೇಂದ್ರದ ಕ್ರಮವನ್ನು ರಾಷ್ಟ್ರಪತಿ ಅನುಮೋದಿಸಿರುವುದು ತಪ್ಪೇನಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

  ರಾಜಕೀಯ ಲೆಕ್ಕಾಚಾರ: ವಿಶೇಷ ಸ್ಥಾನಮಾನ ರದ್ದುಪಡಿಸಿದ್ದನ್ನು ಪ್ರಶ್ನಿಸಿ ಕೇಂದ್ರದ ವಿರುದ್ಧ ಜಮ್ಮು-ಕಾಶ್ಮೀರದ ನ್ಯಾಷನಲ್ ಕಾನ್ಪರೆನ್ಸ್, ಪಿಡಿಪಿ, ಕಾಂಗ್ರೆಸ್ ಸೇರಿದಂತೆ ಇತರ ಪ್ರಾದೇಶಿಕ ಪಕ್ಷಗಳು ಕಳೆದ 4 ವರ್ಷಗಳಿಂದ ರಾಜಕೀಯ ಸಮರವನ್ನೇ ಸಾರಿವೆ. ಕೇಂದ್ರದ ವಿರುದ್ಧ ಜನಾಭಿಪ್ರಾಯ ರೂಪಿಸುವಲ್ಲೂ ಈ ಪಕ್ಷಗಳು ನಿರತವಾಗಿವೆ. ರಾಜ್ಯ ಸ್ಥಾನಮಾನ ಕಸಿದುಕೊಂಡು ಜನರ ಹಕ್ಕುಗಳನ್ನೂ ಕಿತ್ತುಕೊಳ್ಳಲಾಗಿದೆ ಎಂದು ಫಾರೂಕ್ ಅಬ್ದುಲ್ಲಾ, ಓಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಸೇರಿ ಹಲವರು ಬಿಜೆಪಿ ವಿರುದ್ಧ ದನಿಯೆತ್ತಿದ್ದರು. ಆದರೆ, ಸುಪ್ರೀಂಕೋರ್ಟ್ ತೀರ್ಪು ಇವರೆಲ್ಲರ ವಾದಕ್ಕೆ ವ್ಯತಿರಿಕ್ತವಾಗಿರುವುದರಿಂದ ಈ ಪಕ್ಷಗಳ ಮುಂದಿನ ರಾಜಕೀಯ ಹೋರಾಟದ ಹಾದಿ ಹೇಗಿರಲಿದೆ ಎಂಬ ಕುತೂಹಲ ಹೆಚ್ಚಿದೆ. ತೀರ್ಪಿನ ನಂತರ ಜಮ್ಮುವಿನಲ್ಲಿ ಬಿಜೆಪಿ ಬಲವರ್ಧನೆಯಾದರೂ, ಕಾಶ್ಮೀರದಲ್ಲಿ ಬಿಜೆಪಿಗೆ ಲಾಭವಾಗುವ ಬಗ್ಗೆ ಸ್ಪಷ್ಟತೆ ಇಲ್ಲ.

  ಕಾಶ್ಮೀರಿ ಪಂಡಿತರ ಉಲ್ಲೇಖ: ಜಮ್ಮು-ಕಾಶ್ಮೀರದಲ್ಲಿ 1980ರ ದಶಕದಿಂದ ಒಂದು ಸಮುದಾಯದ (ಕಾಶ್ಮೀರಿ ಪಂಡಿತರು) ವಿರುದ್ಧದ ಮಾನವ ಹಕ್ಕು ಉಲ್ಲಂಘನೆಯ ಘಟನೆಗಳ ಬಗ್ಗೆ ತನಿಖೆ ಮಾಡಿ ವರದಿ ಸಲ್ಲಿಸಲು ಸತ್ಯ ಮತ್ತು ಸಮನ್ವಯ ಆಯೋಗವೊಂದನ್ನು ರಚಿಸಬೇಕು ಎಂದು ನ್ಯಾಯಪೀಠದ ಸದಸ್ಯ ನ್ಯಾ.ಸಂಜಯ್ ಕಿಶನ್ ಕೌಲ್ ತೀರ್ಪಿನಲ್ಲಿ ದಾಖಲಿಸಿದ್ದಾರೆ. ಮೂಲತಃ ಕಾಶ್ಮೀರಿ ಪಂಡಿತರೇ ಆಗಿರುವ ನ್ಯಾ.ಕೌಲ್, ಕಾಶ್ಮೀರ ಕಣಿವೆಯು ಐತಿಹಾಸಿಕ ಹೊರೆಯೊಂದನ್ನು ಹೊತ್ತುಕೊಂಡಿದೆ ಮತ್ತು ಅಲ್ಲಿ ವಾಸಿಸುವ ಜನರು ದಶಕಗಳಿಂದ ಸಂಘರ್ಷಗಳಿಗೆ ಬಲಿಯಾಗಿದ್ದಾರೆ ಎಂದು ಬೇಸರ ಹೊರಹಾಕಿದ್ದಾರೆ. 80ರ ದಶಕದಲ್ಲಿ ಕಣಿವೆ ಎದುರಿಸಿದ ದಂಗೆಗಳನ್ನು ಉಲ್ಲೇಖಿಸಿದ ಅವರು, ರಾಜ್ಯದ ಜನಸಂಖ್ಯೆಯ ಒಂದು ಭಾಗ ಇತರ ಭಾಗಗಳಿಗೆ ವಲಸೆ ಹೋಗಬೇಕಾಗಿ ಬಂತು. ಇದು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಧಕ್ಕೆ ತಂದ ಕಾರಣ, ಇಲ್ಲಿಗೆ ಸೇನೆಯನ್ನು ಕರೆಸಬೇಕಾಯಿತು ಎಂದು ವಿವರಿಸಿದ್ದಾರೆ.

  ಕಾಶ್ಮೀರಕ್ಕೆ ಆಂತರಿಕ ಸಾರ್ವಭೌಮತ್ವವಿಲ್ಲ: ಭಾರತಕ್ಕೆ 1949ರಲ್ಲಿ ವಿಲೀನಗೊಂಡ ನಂತರ ಜಮ್ಮು ಮತ್ತು ಕಾಶ್ಮೀರಕ್ಕೆ ಯಾವುದೇ ಆಂತರಿಕ ಸಾರ್ವಭೌಮತ್ವ ಇರಲಿಲ್ಲ ಎಂದು ನ್ಯಾಯಾಲಯವು ಹೇಳಿದೆ. ಆಂತರಿಕ ಸಾರ್ವಭೌಮತ್ವವಿದೆ ಎನ್ನುವುದನ್ನು ಸಂವಿಧಾನದ ಯಾವ ಅಂಶವೂ ಹೇಳುವುದಿಲ್ಲ. 1949ರಲ್ಲಿ ಯುವರಾಜ ಕರಣ್ ಸಿಂಗ್ ಘೊಷಣೆ ಮತ್ತು ನಂತರದಲ್ಲಿ ಸಂವಿಧಾನ ಕೂಡ ಅದನ್ನು ಸ್ಪಷ್ಟಪಡಿಸಿತು. ಈ ರಾಜ್ಯ ಭಾರತದ ಅವಿಭಾಜ್ಯ ಅಂಗ ಎಂಬುದು ಸಂವಿಧಾನದ 1ನೇ ವಿಧಿಯಿಂದ ಸ್ಪಷ್ಟ ಎನ್ನುವುದನ್ನೂ ಸುಪ್ರೀಂಕೋರ್ಟ್ ಹೇಳಿದೆ.

  ಭರವಸೆಯ ದಾರಿದೀಪವೆಂದ ಮೋದಿ: ಇದೊಂದು ಐತಿಹಾಸಿಕ ತೀರ್ಪ. ಜಮ್ಮು-ಕಾಶ್ಮೀರ, ಲಡಾಖ್​ನಲ್ಲಿರುವ ಸೋದರ, ಸೋದರಿಯರಿಗೆ ಭರವಸೆ, ಪ್ರಗತಿ ಮತ್ತು ಏಕತೆಯನ್ನು ಪ್ರತಿಧ್ವನಿಸುವ ತೀರ್ಪು ಇದಾಗಿದ್ದು, ಭಾರತೀಯರಾದ ನಾವು ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸುವ ಏಕತೆಯ ಸಾರವನ್ನು ಬಲಪಡಿಸಿದೆ. ನಿಮ್ಮ ಕನಸುಗಳನ್ನು ಈಡೇರಿಸುವ ನಮ್ಮ ಬದ್ಧತೆ ಅಚಲ ಎಂದು ನಾನು ಜಮ್ಮು, ಕಾಶ್ಮೀರ ಮತ್ತು ಲಡಾಖ್​ನ ಜನರಿಗೆ ಭರವಸೆ ನೀಡುತ್ತಿದ್ದೇನೆ. ಅಭಿವೃದ್ಧಿಯ ಫಲ ತಲುಪಿಸುವ ಜತೆಗೆ 370ನೇ ವಿಧಿಯಿಂದಾಗಿ ವಿಪರೀತ ತೊಂದರೆಗಳನ್ನು ಅನುಭವಿಸಿದ ದುರ್ಬಲ, ಅಂಚಿನಲ್ಲಿರುವ ವರ್ಗಗಳಿಗೆ ಅಭಿವೃದ್ಧಿಯ ಪ್ರಯೋಜನಗಳನ್ನೂ ವಿಸ್ತರಿಸಲಿದ್ದೇವೆ. ಈ ತೀರ್ಪು ಭರವಸೆಯ ದಾರಿದೀಪ. ಉಜ್ವಲ ಭವಿಷ್ಯ ಮತ್ತು ಬಲಿಷ್ಠ, ಅಖಂಡ ಭಾರತ ನಿರ್ವಿುಸುವ ನಮ್ಮ ಸಾಮೂಹಿಕ ಸಂಕಲ್ಪಕ್ಕೆ ಸಾಕ್ಷಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

  ರಾಜ್ಯದ ಸ್ಥಾನಮಾನ ಯಾವಾಗ?: ಜಮ್ಮು-ಕಾಶ್ಮೀರದಲ್ಲಿ ರಾಜ್ಯದ ಸ್ಥಾನಮಾನ ಮರುಸ್ಥಾಪಿಸಲಾಗುವುದು ಎಂದು ಕೇಂದ್ರ ಸರ್ಕಾರ ವಾದ ಮಂಡನೆ ವೇಳೆ ಹೇಳಿಕೆ ನೀಡಿದ್ದನ್ನು ತೀರ್ಪಿನಲ್ಲಿ ಉಲ್ಲೇಖಿಸಿರುವ ಸಾಂವಿಧಾನಿಕ ಪೀಠ, ಈ ಕಾರಣಕ್ಕಾಗಿ 2019ರ ಜಮ್ಮು-ಕಾಶ್ಮೀರ ಮರುವಿಂಗಡಣೆ ಕಾಯ್ದೆಯ ಸಿಂಧುತ್ವ ಈಗ ಪರಾಮಶಿಸುವ ಅಗತ್ಯ ಕಾಣುತ್ತಿಲ್ಲ ಎಂದು ತಿಳಿಸಿತು. ಕಣಿವೆಗೆ ರಾಜ್ಯದ ಸ್ಥಾನಮಾನ ನೀಡಬೇಕು ಎಂದಿರುವ ಕೋರ್ಟ್, 2024ರ ಸೆಪ್ಟೆಂಬರ್ ಒಳಗೆ ವಿಧಾನಸಭೆ ಚುನಾವಣೆ ನಡೆಸಲು ಗಡುವು ವಿಧಿಸಿದೆ. ಚುನಾವಣೆಗೆ ಮುನ್ನ ಕೇಂದ್ರ ಸರ್ಕಾರ ರಾಜ್ಯ ಸ್ಥಾನಮಾನ ನೀಡುವುದೋ ಇಲ್ಲವೋ ಎಂಬುದು ಖಚಿತಪಟ್ಟಿಲ್ಲ.

  370ನೇ ವಿಧಿ ತಾತ್ಕಾಲಿಕ ಅಧಿಕಾರ. ಅಂತೆಯೇ ರಾಜ್ಯ ಶಾಸ ಕಾಂಗದ ಅಭಿಪ್ರಾಯಗಳು ಕೂಡ ಶಿಫಾರಸು. ಕೇಂದ್ರದ ನಿರ್ದೇಶನದನ್ವಯ ವಿಶೇಷ ಸ್ಥಾನಮಾನದ ವಿಧಿ ರದ್ದುಗೊಳಿಸಿದ ರಾಷ್ಟ್ರಪತಿ ಅಧ್ಯಾದೇಶವು ಸಮಗ್ರ ಪ್ರಕ್ರಿಯೆಯ ಭಾಗವಾಗಿದೆ.

  | ನ್ಯಾ. ಡಿ.ವೈ. ಚಂದ್ರಚೂಡ್ ಮುಖ್ಯ ನ್ಯಾಯಮೂರ್ತಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts