ಸಿಜೆಐ ವಿರುದ್ಧ ದಾವೂದ್ ಇಬ್ರಾಹಿಂ, ಗೋಯೆಲ್ ಷಡ್ಯಂತ್ರ

ನವದೆಹಲಿ: ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ವಿರುದ್ಧ ಮಾಜಿ ಕಿರಿಯ ಸಹಾಯಕಿ ಮಾಡಿರುವ ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆ ಸ್ವಯಂಪ್ರೇರಿತ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ವಕೀಲ ಉತ್ಸವ್ ಬೈನ್ಸ್​ಗೆ ಮಂಗಳವಾರ ನೋಟಿಸ್ ನೀಡಿದೆ.

ಸಿಜೆಐ ವಿರುದ್ಧ ಸಂಚು ಹೆಣೆದು ಅವರನ್ನು ಸಿಲುಕಿಸಿ ರಾಜೀನಾಮೆ ಕೊಡಿಸುವ ಉದ್ದೇಶದಿಂದ ಓರ್ವ ವ್ಯಕ್ತಿ ಕೋಟಿಗಟ್ಟಲೆ ಹಣ ನೀಡುವ ಆಮಿಷವೊಡ್ಡಿದ್ದ ಎಂದು ವಕೀಲ ಬೈನ್ಸ್ ಆರೋಪಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾ. ಅರುಣ್ ಮಿಶ್ರಾ, ನ್ಯಾ. ಆರ್.ಎಫ್ . ನಾರಿಮನ್ ಮತ್ತು ನ್ಯಾ. ದೀಪಕ್ ಗುಪ್ತಾ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ವಿವರಣೆ ನೀಡುವಂತೆ ಬೈನ್ಸ್​ಗೆ ನೋಟಿಸ್ ಜಾರಿ ಮಾಡಿದೆ.

ಏ.24ರಂದು ನಡೆಯುವ ವಿಚಾರಣೆಗೆ ಖುದ್ದಾಗಿ ಹಾಜರಾಗಬೇಕು ಮತ್ತು ಆರೋಪಗಳಿಗೆ ಸಂಬಂಧಿಸಿದ ಸಾಕ್ಷ್ಯಗಳನ್ನು ಹಾಜರುಪಡಿಸಬೇಕೆಂದು ಸೂಚಿಸಿದೆ. ಸಿಜೆಐ ರಾಜೀನಾಮೆ ಕೊಡುವಂತೆ ಮಾಡಲು ದೊಡ್ಡಮಟ್ಟದ ಪಿತೂರಿ ನಡೆಸಲಾಗುತ್ತಿದೆ ಎಂದು ಬೈನ್ಸ್ ಸೋಮವಾರ ಸುಪ್ರೀಂಗೆ ಅಫಿಡವಿಟ್ ಕೂಡ ಸಲ್ಲಿಸಿದ್ದರು.

ಪಾತಕಿ ದಾವೂದ್, ಗೋಯೆಲ್ ಪ್ರಭಾವ: ಬೈನ್ಸ್ ಸಲ್ಲಿಸಿರುವ ಅಫಿಡವಿಟ್​ನಲ್ಲಿ, ‘ನನ್ನ ಜೀವಕ್ಕೆ ಅಪಾಯವಿದೆ. ವಿಷದಿಂದ ನನ್ನನ್ನು ಕೊಲ್ಲುವ ಸಾಧ್ಯತೆಯಿದೆ. ಯಾಕೆಂದರೆ ಸಿಜೆಐ ವಿರುದ್ಧ ಪ್ರಭಾವಿಗಳ ಕೂಟವೇ ಇದೆ. ಜೆಟ್ ಏರ್​ವೇಸ್​ನ ಮಾಜಿ ಮುಖ್ಯಸ್ಥ ನರೇಶ್ ಗೋಯಲ್ ಮತ್ತು ಮಧ್ಯವರ್ತಿ ರೊಮೇಶ್ ಶರ್ಮ ಕೈವಾಡ ಇರುವ ಸಾಧ್ಯತೆ ಹೆಚ್ಚಿದೆ. ಜೆಟ್ ಏರ್​ವೇಸ್​ಗೆ ನೀಡಿರುವ ಸಾಲವನ್ನು ಮನ್ನಾ ಮಾಡುವ ಪರವಾಗಿ ತೀರ್ಪು ನೀಡಲು ನ್ಯಾ.ಗೊಗೊಯ್ಗೆ ಶರ್ಮ ಮೂಲಕ ಲಂಚ ನೀಡಲು ಯತ್ನಿಸಲಾಗಿತ್ತು. ಆದರೆ ಸಿಜೆಐ ಇದಕ್ಕೆ ಸಮ್ಮತಿಸದ ಹಿನ್ನೆಲೆಯಲ್ಲಿ ಈ ಷಡ್ಯಂತ್ರ ಹೆಣೆಯಲಾಗಿದೆ ’ ಎಂದು ಆರೋಪಿಸಿದ್ದಾರೆ,

ಜತೆಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕೂಡ ಸಿಜೆಐ ವಿರುದ್ಧ ಪ್ರಭಾವ ಬೀರಿರುವ ಸಾಧ್ಯತೆಯನ್ನು ಬೈನ್ಸ್ ಉಲ್ಲೇಖಿಸಿದ್ದಾರೆ. ಸಿಜೆಐ ವಿರುದ್ಧ ಪಿತೂರಿಯಲ್ಲಿ ಸಾಥ್ ನೀಡಿ, ಅವರ ವಿರುದ್ಧ ಸುದ್ದಿಗೋಷ್ಠಿ ನಡೆಸಲು ತನಗೆ 1.5 ಕೋಟಿ ರೂ. ಲಂಚ ನೀಡಲು ಅಜಯ್ ಎನ್ನುವ ವ್ಯಕ್ತಿ ಪ್ರಯತ್ನಿಸಿದ್ದ ಎಂದು ಬೈನ್ಸ್ ಹೇಳಿದ್ದಾರೆ. ಶನಿವಾರವೇ ಸುಪ್ರೀಂಕೋರ್ಟ್​ನಲ್ಲಿ ಈ ಪ್ರಕರಣದ ಬಗ್ಗೆ ರಂಜನ್ ಗೊಗೊಯ್ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿತ್ತು.

ಮಹಿಳಾ ಸಿಬ್ಬಂದಿ ನಿಯೋಜನೆಯೇ ಬೇಡ!

ಸೋಮವಾರ ಬೆಳಗ್ಗೆ ಸುಪ್ರೀಂಕೋರ್ಟ್​ನಲ್ಲಿ ನಡೆದ ನ್ಯಾಯಮೂರ್ತಿಗಳ ಸಭೆಯಲ್ಲಿ ಲೈಂಗಿಕ ಕಿರುಕುಳ ಆರೋಪ ಒಂದು ಷಡ್ಯಂತ್ರ ಎನ್ನುವ ಸಿಜೆಐ ರಂಜನ್ ಗೊಗೊಯ್ ಅವರ ನಿಲುವಿಗೆ ಹೆಚ್ಚಿನ ನ್ಯಾಯಮೂರ್ತಿಗಳು ಸಹಮತ ವ್ಯಕ್ತಪಡಿಸಿದ್ದಾರೆ. 20 ನಿಮಿಷಗಳ ಕಾಲ ನಡೆದ ಸಭೆಯಲ್ಲಿ ನ್ಯಾಯ ಮೂರ್ತಿಗಳು ಅವರ ನಿವಾಸದಲ್ಲಿರುವ ಕಚೇರಿಗೆ ಪುರುಷ ಸಿಬ್ಬಂದಿಯನ್ನು ನಿಯೋಜಿಸ ಬೇಕೆಂದು ಮನವಿ ಮಾಡಿದ್ದಾರೆಂದು ಸಿಜೆಐ ತಿಳಿಸಿದ್ದಾರೆ. ಅಲ್ಲದೆ ನಿವಾಸದ ಕಚೇರಿ ಯಲ್ಲಿ ಪುರುಷ ಸಿಬ್ಬಂದಿಯನ್ನು ನಿಯೋಜಿಸಿದರೆ ತಡರಾತ್ರಿಯವರೆಗೂ ಕಾರ್ಯನಿರ್ವಹಿಸು ವುದಕ್ಕೆ ಅನುಕೂಲವಾಗಲಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ನ್ಯಾಯಮೂರ್ತಿಗಳ ಈ ಬೇಡಿಕೆಯನ್ನು ಈಡೇರಿಸು ವುದು ಕಷ್ಟಸಾಧ್ಯ. ಯಾಕೆಂದರೆ ಕೋರ್ಟ್​ನಲ್ಲಿರುವ ಶೇ.60ರಷ್ಟು ಸಿಬ್ಬಂದಿ ಮಹಿಳೆಯರಾಗಿದ್ದಾರೆ. ಭವಿಷ್ಯದಲ್ಲಿ ನ್ಯಾಯಮೂರ್ತಿಗಳ ಮೇಲೆ ಇಂತಹ ಆರೋಪಗಳನ್ನು ಮಾಡುವುದನ್ನು ತಪ್ಪಿಸಲು ಸೂಕ್ತಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ನ್ಯಾಯ ಮೂರ್ತಿಗಳು ಸಭೆಯಲ್ಲಿ ಒತ್ತಾಯಿಸಿದ್ದಾರೆ.