ತಾಜ್​ ಮಹಲ್​ ರಕ್ಷಣೆಗೆ ಕೇಂದ್ರದ ನಿರಾಸಕ್ತಿ: ಸುಪ್ರೀಂ ಕೋರ್ಟ್​ ತಪರಾಕಿ

ನವದೆಹಲಿ: ಐತಿಹಾಸಿಕ ಸ್ಮಾರಕವಾದ ತಾಜ್​ ಮಹಲ್​ ಅನ್ನು ಸಂರಕ್ಷಣೆ ಮಾಡಲು ಕೇಂದ್ರ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಅಧೀನ ಸಂಸ್ಥೆಗಳು ನಿರಾಸಕ್ತಿ ತೋರುತ್ತಿವೆ ಎಂದು ಸುಪ್ರೀಂ ಕೋರ್ಟ್ ಕಿಡಿ ಕಾರಿದೆ.

ನ್ಯಾಯಮೂರ್ತಿ ಎಂ.ಬಿ. ಲೋಕೂರ್​ ಮತ್ತು ನ್ಯಾಯಮೂರ್ತಿ ದೀಪಕ್​ ಗುಪ್ತಾ ಅವರಿದ್ದ ಪೀಠ ತಾಜ್​ ಮಹಲ್​ ಅನ್ನು ಸಂರಕ್ಷಿಸಲು ಕಾರ್ಯಸೂಚಿ ರೂಪಿಸದ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು. ಇದೇ ಸಂದರ್ಭದಲ್ಲಿ ತಾಜ್​ ಮಹಲ್​ ಸಂರಕ್ಷಣೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿತು.

ಇದಕ್ಕೆ ಉತ್ತರಿಸಿದ ಕೇಂದ್ರ ಸರ್ಕಾರದ ಪರ ವಕೀಲರು ತಾಜ್​ ಮಹಲ್​ ಸುತ್ತಲಿನ ಪ್ರದೇಶದಲ್ಲಿ ವಾಯು ಮಾಲಿನ್ಯದ ಪ್ರಮಾಣ ಎಷ್ಟಿದೆ ಎಂಬುದರ ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆ ಮಾಹಿತಿ ಕಲೆ ಹಾಕುತ್ತಿದೆ. ಸಂಸ್ಥೆ ನಾಲ್ಕು ತಿಂಗಳಲ್ಲಿ ಇದರ ವರದಿ ನೀಡಲಿದೆ.

ಜತೆಗೆ ತಾಜ್​ ಮಹಲ್​ನ ಸುತ್ತಮುತ್ತಲ ಪ್ರದೇಶದಲ್ಲಿ ವಾಯು ಮಾಲಿನ್ಯಕ್ಕೆ ಕಾರಣವಾಗಿರುವ ಅಂಶಗಳು ಮತ್ತು ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ತೆಗೆದುಕೊಳ್ಳಬೇಕಿರುವ ಕ್ರಮಗಳ ಕುರಿತು ವರದಿ ನೀಡಲು ವಿಶೇಷ ಸಮಿತಿಯನ್ನು ರಚಿಸಲಾಗಿದೆ ಎಂದು ಕೋರ್ಟ್​ಗೆ ಮಾಹಿತಿ ನೀಡಿದರು.

ಜುಲೈ 31 ರಿಂದ ಈ ಪ್ರಕರಣದ ವಿಚಾರಣೆಯನ್ನು ದಿನವೂ ನಡೆಸುವುದಾಗಿ ತಿಳಿಸಿ ಕೋರ್ಟ್​ ವಿಚಾರಣೆಯನ್ನು ಮುಂದೂಡಿತು. (ಏಜೆನ್ಸೀಸ್​)