ಶಬರಿಮಲೆ ದೇಗುಲ ಪ್ರವೇಶ ಮಹಿಳೆಯರ ಸಾಂವಿಧಾನಿಕ ಹಕ್ಕು ಎಂದ ಸುಪ್ರೀಂಕೋರ್ಟ್​

ನವದೆಹಲಿ: ಪ್ರಾರ್ಥನೆ, ದೇವರ ಪೂಜೆ ಮಹಿಳೆಯರ ಸಾಂವಿಧಾನಿಕ ಹಕ್ಕು. ಅದು ಕಾನೂನಿನ ಮೇಲೆ ಅವಲಂಬಿತವಾಗಿಲ್ಲ ಎಂದು ಸುಪ್ರೀಂಕೋರ್ಟ್​ ಇಂದು ಸ್ಪಷ್ಟಪಡಿಸಿದೆ.

ಸಂಪ್ರದಾಯದ ಹೆಸರಿನಲ್ಲಿ 10-50 ವರ್ಷದವರೆಗಿನ ಮಹಿಳೆಯರಿಗೆ ಶಬರಿಮಲೆಗೆ ಪ್ರವೇಶ ನಿಷೇಧ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ ಪೀಠ, ಮಹಿಳೆಯರಿಗೆ ಏಕೆ ತಾರತಮ್ಯ ತೋರಿಸಬೇಕು ಎಂದು ಪ್ರಶ್ನಿಸಿದೆ.

ವಿಚಾರಣೆ ನಡೆಸಿದ ಪೀಠದಲ್ಲಿದ್ದ ಐವರು ನ್ಯಾಯಮೂರ್ತಿಗಳಲ್ಲಿ ಒಬ್ಬರಾದ ಡಿ.ವೈ. ಚಂದ್ರಚೂಡ್​ ಅವರು, ಪ್ರತಿ ಮಹಿಳೆಯೂ ದೇವರ ಸೃಷ್ಟಿ. ಅಂದಮೇಲೆ ಭಕ್ತಿ, ಪೂಜೆ ಹಾಗೂ ಉದ್ಯೋಗದ ವಿಚಾರದಲ್ಲಿ ಅವರಿಗೆ ಏಕೆ ತಾರತಮ್ಯ ತೋರಿಸಬೇಕು ಎಂದು ಪ್ರಶ್ನಿಸಿದ್ದಾರೆ.

ಪ್ರತಿ ಮನುಷ್ಯನಿಗೂ ಆತನ ಆತ್ಮಸಾಕ್ಷಿಯಂತೆ ನಡೆದುಕೊಳ್ಳುವ, ಅವರ ಹಕ್ಕನ್ನು ದೃಢೀಕರಿಸುವ, ಧರ್ಮವನ್ನು ಪ್ರಚಾರ ಪಡಿಸುವ ಹಾಗೂ ಅದನ್ನು ಅನುಷ್ಠಾನಕ್ಕೆ ತರುವ ಹಕ್ಕು ಇದೆ. ಅಂದ ಮೇಲೆ ಮಹಿಳೆಯರ ಪೂಜೆಯ ಹಕ್ಕು ಕಾನೂನನ್ನು ಹೇಗೆ ಅವಲಂಬಿಸಿರುತ್ತದೆ? ಅದು ಸಾಂವಿಧಾನಿಕ ಹಕ್ಕು ಎಂದಿದ್ದಾರೆ. ಅಲ್ಲದೆ, ಮಹಿಳೆಯರ ಋತುಚಕ್ರದ ಜತೆ ಅವರ ಧಾರ್ಮಿಕ ಭಾವನೆಯನ್ನು ಸೇರಿಸುವುದು ಅಸಂಬದ್ಧ ಎನಿಸುತ್ತದೆ ಎಂದೂ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

ಅಯ್ಯಪ್ಪ ಸ್ವಾಮಿ ಬ್ರಹ್ಮಚಾರಿಯಾಗಿದ್ದು ಆತ ನೆಲೆಸಿರುವ ಶಬರಿಮಲೆಗೆ ಮಹಿಳೆಯರು ಪ್ರವೇಶಿಸಬಾರದು. ಮುಟ್ಟಾಗುವ ಮಹಿಳೆಯರು ಶಬರಿಮಲೆಗೆ ಹೋಗುವುದು ಅಪಚಾರ. ಹಾಗಾಗಿ 10-50 ವರ್ಷದ ಮಹಿಳೆಯರಿಗೆ ದೇಗುಲ ಪ್ರವೇಶ ನಿಷೇಧಿಸಲಾಗಿದೆ ಎಂದು ದೇಗುಲ ಆಡಳಿತ ಮಂಡಳಿ ಕಡ್ಡಾಯ ಮಾಡಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ ಮಹಿಳಾ ಪರ ತೀರ್ಪನ್ನು ಎತ್ತಿ ಹಿಡಿದಿದೆ.