ಕಣ್ಗಾವಲಿಗೆ ಸುಪ್ರೀಂಕೋರ್ಟ್ ನೋಟಿಸ್

ನವದೆಹಲಿ: ಕಂಪ್ಯೂಟರ್​ಗಳ ಮೇಲೆ ಕಣ್ಗಾವಲಿಡುವ ಕೇಂದ್ರ ಸರ್ಕಾರದ ವಿವಾದಿತ ಸುತ್ತೋಲೆ ಕುರಿತು ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ, ನೋಟಿಸ್ ಜಾರಿ ಮಾಡಿ 6 ವಾರದೊಳಗೆ ಪ್ರತಿಕ್ರಿಯೆ ನೀಡಬೇಕು ಎಂದು ಗೃಹ ಸಚಿವಾಲಯಕ್ಕೆ ಸೂಚಿಸಿದೆ. ಕೇಂದ್ರ ಸರ್ಕಾರದ 10 ಏಜೆನ್ಸಿಗಳು ದೇಶದಲ್ಲಿ ಬಳಕೆಯಾಗುತ್ತಿರುವ ಎಲ್ಲ ಕಂಪ್ಯೂಟರ್​ಗಳ ಮೇಲೂ ಕಣ್ಗಾವಲು (ಸ್ನೂಪಿಂಗ್) ಇಡಬಹುದು ಎಂದು ಸುತ್ತೋಲೆ ಹೊರಡಿಸಲಾಗಿತ್ತು. ಇದರಿಂದ ಕೇಂದ್ರ ಸರ್ಕಾರ ಅಧಿಕೃತ ಸ್ನೂಪಿಂಗ್​ಗೆ ಅವಕಾಶ ಮಾಡಿಕೊಟ್ಟಿದೆ. ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎಂದು ಪಿಐಎಲ್​ನಲ್ಲಿ ಆರೋಪಿಸಲಾಗಿದೆ.

ಪ್ರತಿಪಕ್ಷಗಳು ಕೂಡ ಕೇಂದ್ರದ ವಿರುದ್ಧ ಹರಿಹಾಯ್ದಿದ್ದವು. ಆದರೆ ಇದಕ್ಕೆ ಸಮರ್ಥನೆ ನೀಡಿದ್ದ ಕೇಂದ್ರ ಸರ್ಕಾರ, ಯುಪಿಎ ಅವಧಿಯಲ್ಲಿ ತಿದ್ದುಪಡಿಯಾಗಿದ್ದ ಕಾಯ್ದೆಗೆ ನಿಯಮ ರೂಪಿಸಲಾಗಿದೆ. ಈ ಹಿಂದೆಯೂ ದೂರವಾಣಿ, ಮೊಬೈಲ್ ಮೇಲೆ ಕಣ್ಗಾವಲು ಇಡಲಾಗುತ್ತಿತ್ತು. ತಂತ್ರಜ್ಞಾನ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಕಂಪ್ಯೂಟರ್​ನ್ನು ಸೇರಿಸಲಾಗಿದೆ ಎಂದಿತ್ತು.