ಅಯೋಧ್ಯೆ ಸಂಧಾನ ಮಾತುಕತೆ ಪ್ರಕ್ರಿಯೆ ಕುರಿತು ಜು.18ಕ್ಕೆ ಮಾಹಿತಿ ಕೊಡಿ, 25ರಿಂದ ಪ್ರತಿದಿನ ವಿಚಾರಣೆ: ಸುಪ್ರೀಂಕೋರ್ಟ್​

ನವದೆಹಲಿ: ಅಯೋಧ್ಯೆ ಶ್ರೀ ರಾಮಮಂದಿರದ ಭೂ ವಿವಾದವನ್ನು ಸಂಧಾನ ಮಾತುಕತೆ ಮೂಲಕ ಪರಿಹರಿಸಿಕೊಳ್ಳುವಂತೆ ತಾನು ಕೊಟ್ಟಿದ್ದ ಸೂಚನೆ ಮೇರೆಗೆ ಇದುವರೆಗೆ ಆಗಿರುವ ಪ್ರಗತಿ ಕುರಿತು ಜು.18ಕ್ಕೆ ವರದಿ ಸಲ್ಲಿಸುವಂತೆ ಸುಪ್ರೀಂಕೋರ್ಟ್​ ಹೇಳಿದೆ. ಒಂದು ವೇಳೆ ಸಂಧಾನ ಅಸಾಧ್ಯ ಅಥವಾ ಅದು ವಿಫಲವಾಗಿದೆ ಎಂದು ಹೇಳಿದರೆ,, ಜು.25ರಿಂದ ಮುಕ್ತ ನ್ಯಾಯಾಲಯದಲ್ಲಿ ಪ್ರತಿದಿನವೂ ಈ ಕುರಿತು ವಿಚಾರಣೆ ಮುಂದುವರಿಸುವುದಾಗಿ ತಿಳಿಸಿದೆ.

ಹಲವು ದಶಕಗಳಿಂದಲೂ ಇರುವ ಈ ವಿವಾದವನ್ನು ಸಂಧಾನ ಮಾತುಕತೆ ಮೂಲಕ ನ್ಯಾಯಾಲಯದ ಹೊರಗೆ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವಂತೆ ಸುಪ್ರೀಂಕೋರ್ಟ್​ ಸೂಚಿಸಿತ್ತು. ಇದಕ್ಕಾಗಿ ಆಗಸ್ಟ್​ 15ರವರೆಗೆ ಸಮಯಾವಕಾಶ ನೀಡಿತ್ತು. ಸಂಧಾನ ಮಾತುಕತೆ ತುಂಬಾ ಗುಪ್ತವಾಗಿ ನಡೆಯಬೇಕು ಮತ್ತು ಈ ಅಂಶಗಳು ಯಾವುದೇ ಕಾರಣಕ್ಕೂ ಬಹಿರಂಗಗೊಳ್ಳಬಾರದು ಎಂದು ಹಿಂದು ಹಾಗೂ ಮುಸ್ಲಿಂ ಸಂಘಟನೆಗಳ ನಾಯಕರಿಗೆ ಸೂಚಿಸಿತ್ತು.

ಆದರೆ, ಸಂಧಾನ ಮಾತುಕತೆಯಲ್ಲಿ ನಿರೀಕ್ಷಿತ ಪ್ರಗತಿಗಳಾಗಿಲ್ಲ. ಮಾತುಕತೆಗಳು ಯಶಸ್ವಿಯಾಗುವ ನಿರೀಕ್ಷೆಯೂ ಇಲ್ಲ ಎಂದು ಗುರುವಾರದ ವಿಚಾರಣೆಯಲ್ಲಿ ಸುಪ್ರೀಂಕೋರ್ಟ್​ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್​ ಈ ನಿರ್ಧಾರ ಕೈಗೊಂಡಿದೆ. ಅಲಹಾಬಾದ್​ ಹೈಕೋರ್ಟ್​ ವಿವಾದಕ್ಕೆ ಒಳಪಟ್ಟಿರುವ 2.77 ಎಕರೆ ಭೂಮಿಯನ್ನು ನಿರ್ಮೋಹಿ ಅಖಾಡ, ಸುನ್ನಿ ಸೆಂಟ್ರಲ್​ ವಕ್ಫ್​ ಬೋರ್ಡ್ ಮತ್ತು ರಾಮ್​ ಲಲ್ಲಾ ಸಂಸ್ಥೆಗಳಿಗೆ ಸಮನಾಗಿ ಹಂಚಿ 2010ರಲ್ಲಿ ಆದೇಶ ಹೊರಡಿಸಿತ್ತು. ಈ ಬಗ್ಗೆ ಮೂರೂ ಪಕ್ಷಗಳ ಸದಸ್ಯರು ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದು, ಅದರ ವಿಚಾರಣೆ ನಡೆಯುತ್ತಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *