ರಾಮಮಂದಿರಕ್ಕೆ ದಿಕ್ಸೂಚಿ?

ಳಂಕಿತ ರಾಜಕಾರಣಿಗಳ ಚುನಾವಣೆ ಸ್ಪರ್ಧೆ, ಆಧಾರ್, ಬಡ್ತಿ ಮೀಸಲಾತಿ ಪ್ರಕರಣಗಳ ಗೊಂದಲಗ ಳಿಗೆ ತೆರೆ ಎಳೆದ ಬೆನ್ನಲ್ಲೇ ಸುಪ್ರೀಂಕೋರ್ಟ್ ಗುರುವಾರ ಮತ್ತೊಂದು ಐತಿಹಾಸಿಕ ತೀರ್ಪಿತ್ತಿದೆ. ರಾಮಮಂದಿರ ನಿರ್ವಣಕ್ಕೆ ಪರೋಕ್ಷವಾಗಿ ಸಂಬಂಧಿಸಿದ ಪ್ರಕರಣದ ವಿಚಾರಣೆ ಕಾಯ್ದಿರಿಸಿದ್ದ ನ್ಯಾಯಾಲಯ ಸಾಮೂಹಿಕ ಪ್ರಾರ್ಥನೆಗೆ ಮಸೀದಿ ಅಗತ್ಯವಿಲ್ಲ ಎಂದಿದ್ದ 1994ರ ತೀರ್ಪಿನ ಪ್ರಕರಣವನ್ನು ಸಂವಿಧಾನ ಪೀಠಕ್ಕೆ ವಹಿಸಲು ನಿರಾಕರಿಸಿದೆ. ಹಾಗೆಯೇ ಅಯೋಧ್ಯೆ ರಾಮಜನ್ಮಭೂಮಿ ವಿವಾದದ ವಿಚಾರಣೆಯನ್ನು ಅ.29ರಿಂದ ಪ್ರತಿದಿನ ನಡೆಸುವುದಾಗಿ ಸವೋಚ್ಚ ನ್ಯಾಯಾಲಯ ಘೋಷಿಸಿರುವುದು 2019ರ ಲೋಕಸಭೆ ಚುನಾವಣೆಗೆ ಮುನ್ನವೇ ಈ ಪ್ರಕರಣದ ತೀರ್ಪು ಹೊರಬರಬಹುದೆನ್ನುವ ನಿರೀಕ್ಷೆ ಮೂಡಿಸಿದೆ. ಈ ಎರಡು ಬೆಳವಣಿಗೆಗಳು ರಾಮಮಂದಿರ ನಿರ್ವಣಕ್ಕೆ ದಿಕ್ಸೂಚಿಯಂತಿದೆ ಎಂಬ ವಿಶ್ಲೇಷಣೆಯೂ ಕೇಳಿಬರುತ್ತಿದೆ.

ಮಂದಿರ ನಿರೀಕ್ಷೆ ಏಕೆ?

 • 2019ರ ಲೋಕಸಭೆ ಚುನಾವಣೆವರೆಗೆ ಅಯೋಧ್ಯೆ ಪ್ರಕರಣದ ವಿಚಾರಣೆ ನಡೆಸಬಾರದೆಂದು ಸುನ್ನಿ ವಕ್ಪ್ ಮಂಡಳಿ ಪರ ವಕೀಲ ಕಪಿಲ್ ಸಿಬಲ್ ಮಂಡಿಸಿದ್ದ ವಾದಕ್ಕೆ ಸುಪ್ರೀಂ ಮನ್ನಣೆ ನೀಡದಿರುವುದು
 • ಪ್ರಕರಣದ ವಿಚಾರಣೆಯನ್ನು ಪ್ರತಿದಿನ ನಡೆಸಲು ಸುಪ್ರೀಂ ತೀರ್ವನಿಸಿರುವುದರಿಂದ ಲೋಕಸಭೆ ಚುನಾವಣೆಗೆ ಮೊದಲೇ ತೀರ್ಪು ಹೊರಬರುವ ವಿಶ್ವಾಸ.

 

ಕೋರ್ಟ್ ಹೇಳಿದ್ದು

ಸರ್ಕಾರದಿಂದ ಭೂ ಸ್ವಾಧೀನಕ್ಕೆ ಸಂಬಂಧಿಸಿ 1994ರ ಆದೇಶ ನೀಡಲಾಗಿದೆ. ಅಯೋಧ್ಯೆ ಭೂ ವಿವಾದಕ್ಕೆ ಇದರಿಂದ ಯಾವುದೆ ವ್ಯತಿರಿಕ್ತ ಪರಿಣಾಮ ವಾಗುವುದಿಲ್ಲ. ಇಸ್ಮಾಯಿಲ್ ಫಾರೂಕಿ ಪ್ರಕರಣದಲ್ಲಿನ ಆದೇಶವನ್ನು ಕೇವಲ ಕೋರ್ಟ್ ಅಭಿಪ್ರಾಯ ಎಂದು ಪರಿಗಣಿಸಬೇಕು.

| ಸುಪ್ರೀಂ ತ್ರಿಸದಸ್ಯ ಪೀಠ

 

2:1ರ ತೀರ್ಪು

 • ಮಸೀದಿಯಲ್ಲೇ ಪ್ರಾರ್ಥನೆ ಮಾಡಬೇಕು ಎಂದು ಇಸ್ಲಾಂನಲ್ಲಿ ಹೇಳಿಲ್ಲ ಎಂದು 1994ರಲ್ಲಿ ಸುಪ್ರೀಂಕೋರ್ಟ್ ನೀಡಿದ ಅಭಿಪ್ರಾಯ ಕುರಿತು ಸಂವಿಧಾನ ಪೀಠದ ವಿಚಾರಣೆ ಅಗತ್ಯವಿಲ್ಲ ಎಂದು ಸಿಜೆಐ ದೀಪಕ್ ಮಿಶ್ರಾ ಮತ್ತು ನ್ಯಾ.ಅಶೋಕ್ ಭೂಷಣ್ ಅಭಿಪ್ರಾಯ
 • ಧಾರ್ವಿುಕ ಸಂಪ್ರದಾಯಗಳು ನಂಬಿಕೆ ವಿಚಾರವನ್ನು ಒಳಗೊಂಡಿರುತ್ತವೆ. ಫಾರೂಕಿ ಪ್ರಕರಣದಲ್ಲಿನ ಆದೇಶವನ್ನು 7 ಸದಸ್ಯರ ಸಂವಿಧಾನ ಪೀಠದಿಂದ ಪರಾಮಶಿಸುವ ಅಗತ್ಯವಿದೆ ಎಂದು ನ್ಯಾ.ಅಬ್ದುಲ್ ನಜೀರ್ ಅಭಿಮತ

 

ಅ.29ರಿಂದ ನಿತ್ಯ ವಿಚಾರಣೆ

ಅಯೋಧ್ಯೆಯ ವಿವಾದಿತ ಜಾಗವನ್ನು ಮೂರು ಸಂಘಟನೆಗಳಿಗೆ ಹಂಚಿ ಅಲಹಾಬಾದ್ ಹೈಕೋರ್ಟ್ ನೀಡಿದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿಗಳ ವಿಚಾರಣೆ ಅ.29ರಿಂದ ಪ್ರತಿನಿತ್ಯ ನಡೆಯಲಿದೆ. ಈ ಪ್ರಕರಣ ಮಂದಿರ ನಿರ್ಮಾಣ ವಿಷಯಕ್ಕೆ ನಿರ್ಣಾಯಕವಾಗಲಿದೆ.

ರಾಜಕೀಯ ಪರಿಣಾಮ

 • ರಾಮಮಂದಿರ ವಿಷಯ ಮುಂದಿಟ್ಟುಕೊಂಡು 2019ರ ಲೋಕಸಭೆ ಚುನಾವಣೆಗೆ ಹೋಗಲು ಬಿಜೆಪಿಗೆ ಸದವಕಾಶ
 • ವಿಪಕ್ಷಗಳಿಗೆ ತಲೆನೋವು ತಂದಿಟ್ಟ ಆದೇಶ

 

ನಮಗೆ ಶ್ರೀರಾಮ, ಭಾರತದ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇದೆ. ಲೋಕಸಭೆ ಚುನಾವಣೆಗೆ ಮುನ್ನವೇ ರಾಮಮಂದಿರ ನಿರ್ವಣಕ್ಕೆ ಮುಹೂರ್ತ ಕೂಡಿ ಬರುವ ವಿಶ್ವಾಸವಿದೆ.

| ಇಂದ್ರೇಶ್ ಕುಮಾರ್, ಆರೆಸ್ಸೆಸ್ ಮುಖಂಡ

 

ಏನಿದು ಪ್ರಕರಣ?

ಅಯೋಧ್ಯೆ ರಾಮಜನ್ಮಭೂಮಿ ಸುತ್ತ ಭೂಮಿ ವಶಪಡಿಸಿಕೊಳ್ಳುವ ಸಂಬಂಧ 1993ರಲ್ಲಿ ರಾಷ್ಟ್ರಪತಿಗಳು ಹೊರಡಿಸಿದ್ದ ಸುಗ್ರೀವಾಜ್ಞೆಗೆ ಮುಸ್ಲಿಂ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿ ವ್ಯಾಜ್ಯ ಸುಪ್ರೀಂ ಮೆಟ್ಟಿಲೇರಿತ್ತು. 1994ರಲ್ಲಿ ತೀರ್ಪು ನೀಡಿದ್ದ ನ್ಯಾಯಾಲಯ ಮಸೀದಿ ಇಸ್ಲಾಂನ ಅವಿಭಾಗ್ಯ ಅಂಗವೇನೂ ಅಲ್ಲ ಎಂದಿತ್ತು.


ಅ.29ರಿಂದ ಅಯೋಧ್ಯೆ ಅಂತಿಮ ವಿಚಾರಣೆ

ನವದೆಹಲಿ: ಅಯೋಧ್ಯೆ ರಾಮ ಮಂದಿರ ಭೂವಿವಾದಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಗಿದ್ದ ವಿಘ್ನ ನಿವಾರಣೆಯಾಗಿದೆ. ಮಸೀದಿಯಲ್ಲೇ ಪ್ರಾರ್ಥನೆ ಮಾಡಬೇಕು ಎಂದು ಇಸ್ಲಾಂನಲ್ಲಿ ಹೇಳಿಲ್ಲ ಎಂಬ ಸುಪ್ರೀಂ ಕೋರ್ಟ್ ಅಭಿಪ್ರಾಯ ಕುರಿತು ಸಂವಿಧಾನ ಪೀಠದ ವಿಚಾರಣೆ ಅಗತ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠವು 2:1 ಬಹುಮತದಲ್ಲಿ ಸ್ಪಷ್ಟಪಡಿಸಿದೆ.

ಎಂ.ಸಿದ್ದಿಕಿ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಜಾಗೊಳಿಸಿ, ಅ.29ರಿಂದ ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಗೆ ಮುಹೂರ್ತ ನಿಗದಿಪಡಿಸಿದೆ. ಆದರೆ ತ್ರಿಸದಸ್ಯ ಪೀಠದಲ್ಲಿ ಕರ್ನಾಟಕ ಮೂಲದ ನ್ಯಾ.ಅಬ್ದುಲ್ ನಜೀರ್ ಅವರು ಸಿಜೆಐ ಹಾಗೂ ನ್ಯಾ.ಅಶೋಕ್ ಭೂಷಣ್ ತೀರ್ಪಿಗೆ ವ್ಯತಿರಿಕ್ತ ಅಭಿಪ್ರಾಯ ತಿಳಿಸಿದ್ದು, ಸಂವಿಧಾನ ಪೀಠದಿಂದ ಪರಾಮಶಿಸುವ ಅಗತ್ಯತೆ ಇದೆ ಎಂದಿದ್ದಾರೆ.

ಸುಪ್ರೀಂ ಕೋರ್ಟ್​ನ ಈ ಸ್ಪಷ್ಟನೆಯಿಂದ ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿ ಇನ್ನೊಂದು ಹೆಜ್ಜೆ ಮುಂದಿಟ್ಟಂತಾಗಿದೆ. ಕಳೆದ ಜುಲೈನಲ್ಲಿ ಭೂ ವಿವಾದದ ಮುಖ್ಯ ಅರ್ಜಿಯ ದೈನಂದಿನ ವಿಚಾರಣೆ ಆರಂಭಿಸಿದಾಗ ಉತ್ತರ ಪ್ರದೇಶ ಸುನ್ನಿ ವಕ್ಪ್​ಮಂಡಳಿ, ಎಂ.ಸಿದ್ದಿಕಿ ಹಾಗೂ ಇತರರು 1994ರಲ್ಲಿನ ಸುಪ್ರೀಂ ಕೋರ್ಟ್ ಆದೇಶಕ್ಕೆ ಸ್ಪಷ್ಟನೆ ಕೋರಿದ್ದರು.

ಇದಕ್ಕೆ ಖಡಕ್ ಉತ್ತರ ನೀಡಿರುವ ಸುಪ್ರೀಂ ಕೋರ್ಟ್, ಸರ್ಕಾರದಿಂದ ಭೂ ಸ್ವಾಧೀನಕ್ಕೆ ಸಂಬಂಧಿಸಿ ಈ ಆದೇಶ ನೀಡಲಾಗಿದೆ. ಅಯೋಧ್ಯೆ ಭೂ ವಿವಾದಕ್ಕೆ ಇದರಿಂದ ಯಾವುದೆ ವ್ಯತಿರಿಕ್ತ ಪರಿಣಾಮವಾಗುವುದಿಲ್ಲ. ಇಸ್ಮಾಯಿಲ್ ಫಾರೂಕಿ ಪ್ರಕರಣದಲ್ಲಿನ ಆದೇಶವನ್ನು ಕೇವಲ ಕೋರ್ಟ್ ಅಭಿಪ್ರಾಯ ಎಂದು ಪರಿಗಣಿಸಬೇಕು ಎಂದು ನ್ಯಾ.ಮಿಶ್ರಾ ಹಾಗೂ ನ್ಯಾ.ಭೂಷಣ್ ಅಭಿಪ್ರಾಯಪಟ್ಟಿದ್ದಾರೆ. ಆದರೆ ಭಿನ್ನಮತದ ಆದೇಶ ನೀಡಿರುವ ನ್ಯಾ.ಅಬ್ದುಲ್ ನಜೀರ್, ಧಾರ್ವಿುಕ ಸಂಪ್ರದಾಯಗಳನ್ನು ನಂಬಿಕೆಯ ವಿಚಾರವನ್ನು ಒಳಗೊಂಡಿರುತ್ತವೆ. ಫಾರೂಕಿ ಪ್ರಕರಣದಲ್ಲಿನ ಆದೇಶವನ್ನು 7 ಸದಸ್ಯರ ಸಂವಿಧಾನ ಪೀಠದಿಂದ ಪರಾಮಶಿಸುವ ಅಗತ್ಯವಿದೆ ಎಂದಿದ್ದಾರೆ. ಈ ಆದೇಶವನ್ನು ಬಿಜೆಪಿ, ಆರ್​ಎಸ್​ಎಸ್ ಸೇರಿ ಬಲಪಂಥೀಯ ಸಂಘಟನೆಗಳು ಸ್ವಾಗತಿಸಿವೆ. ಆದರೆ ಅರ್ಜಿದಾರರು ಅಸಮಾಧಾನ ವ್ಯಕ್ತಪಡಿಸಿದ್ದು, ಇಂತಹ ಗಂಭೀರ ಪ್ರಕರಣಗಳಲ್ಲಿ ಭಿನ್ನಮತವಿಲ್ಲದ ಆದೇಶ ನಿರೀಕ್ಷಿಸಲಾಗಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ.

ಸಿಜೆಐ, ನ್ಯಾ.ಭೂಷಣ್ ಹೇಳಿದ್ದೇನು?

 • ಫಾರೂಕಿ ಪ್ರಕರಣಕ್ಕೆ ಇತಿ-ಮಿತಿಗಳಿವೆ. ಆ ಪ್ರಕರಣದಲ್ಲಿನ ಆದೇಶಗಳನ್ನು ಅಯೋಧ್ಯೆ ಭೂ ವಿವಾದಕ್ಕೆ ತಳುಕುಹಾಕಲು ಸಾಧ್ಯವಿಲ್ಲ.
 • ಸಾರ್ವಜನಿಕ ಉಪಯೋಗಕ್ಕೆ ಭೂ ಸ್ವಾಧೀನ ಮಾಡಿಕೊಳ್ಳುವ ಪ್ರಕರಣದಲ್ಲಿ ಸಂವಿಧಾನ ಪೀಠ ಆದೇಶ ನೀಡಿದೆ.
 • ಐತಿಹಾಸಿಕ ಹಾಗೂ ಪಾರಂಪರಿಕ ಹಿನ್ನೆಲೆ ಇರದ ಶ್ರದ್ಧಾಕೇಂದ್ರಗಳು ಎಂದು ಕೂಡ ಸ್ಪಷ್ಟಪಡಿಸಲಾಗಿದೆ.
 • ಮುಸ್ಲಿಂರ ಪ್ರಾರ್ಥನೆಗೆ ಮಸೀದಿ ಅಗತ್ಯವೆಂದು ಇಸ್ಲಾಂನಲ್ಲಿ ಉಲ್ಲೇಖವಿಲ್ಲ ಎಂಬ ಸಂವಿಧಾನ ಪೀಠದ ಅಭಿಪ್ರಾಯವು ಅರ್ಜಿದಾರರ ವಾದಕ್ಕೆ ನೀಡಿದ ಪ್ರತಿಕ್ರಿಯೆಯಷ್ಟೆ.
 • ಸಂವಿಧಾನ ಪೀಠದ ಆದೇಶದಲ್ಲಿ ರಾಮಮಂದಿರ ಹಾಗೂ ಮಸೀದಿ ವಿವಾದದ ಬಗ್ಗೆ ಉಲ್ಲೇಖವಾಗಿಲ್ಲ.
 • ಫಾರೂಕಿ ಪ್ರಕರಣದ ಅಭಿಪ್ರಾಯಗಳು ಭೂ ಸ್ವಾಧೀನ ಪ್ರಕ್ರಿಯೆಗೆ ಸೀಮಿತವಾಗಿದೆ.
 • ಅಯೋಧ್ಯೆ ವಿವಾದಕ್ಕೆ ಯಾವುದೆ ಪರಿಣಾಮ ಬೀರದ ಹಿನ್ನೆಲೆಯಲ್ಲಿ ಸಂವಿಧಾನ ಪೀಠಕ್ಕೆ ಪ್ರಕರಣ ವರ್ಗಾಯಿಸುವ ಪ್ರಶ್ನೆ ಉದ್ಭವವಾಗುವುದಿಲ್ಲ.

 

ನ್ಯಾ.ನಜೀರ್ ವಾದವೇನು?

 • ಧಾರ್ವಿುಕ ಪರಂಪರೆಗಳು ನಂಬಿಕೆಯನ್ನು ಆಧರಿಸಿ ಇರುತ್ತವೆ.
 • ಧಾರ್ವಿುಕ ನಂಬಿಕೆಗಳ ವಿಚಾರವನ್ನು ಸುದೀರ್ಘ ಪರಿಶೀಲನೆ ಮೂಲಕ ನಿರ್ಣಯಿಸಬೇಕು.
 • ಫಾರೂಕಿ ಪ್ರಕರಣದಲ್ಲಿ ಪ್ರಾರ್ಥನೆ ಹಾಗೂ ಇಸ್ಲಾಂಗೆ ಸಂಬಂಧಿಸಿದ ಅಭಿಪ್ರಾಯವು ಯಾವುದೇ ಧಾರ್ವಿುಕ ಆಧಾರವಿಲ್ಲದೇ ಉಲ್ಲೇಖವಾಗಿದೆ.
 • ಸಂವಿಧಾನದ 25ನೇ ವಿಧಿ ಪ್ರಕಾರ ಧಾರ್ವಿುಕ ನಂಬಿಕೆಗಳನ್ನು ಗೌರವಿಸಬೇಕು.
 • ಒಬ್ಬ ವ್ಯಕ್ತಿಯ ಧಾರ್ವಿುಕ ನಂಬಿಕೆಯನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ.
 • ಫಾರೂಕಿ ಪ್ರಕರಣದಲ್ಲಿನ ಅಭಿಪ್ರಾಯಕ್ಕೆ ಸ್ಪಷ್ಟನೆ ನೀಡದೆ ಅಯೋಧ್ಯೆ ಭೂ ವಿವಾದದ ಅಂತಿಮ ವಿಚಾರಣೆ ಸೂಕ್ತವಲ್ಲ.
 • ಅಲಹಾಬಾದ್ ಹೈಕೋರ್ಟ್​ನ ಆದೇಶದಲ್ಲಿಯೂ ಈ ವಿಚಾರ ಪ್ರಸ್ತಾಪವಾಗಿದೆ.
 • ಸೂಕ್ಷ್ಮ ಧಾರ್ವಿುಕ ವಿಚಾರಗಳಿರುವುದರಿಂದ ಸಂವಿಧಾನ ಪೀಠದ ಅಭಿಪ್ರಾಯ ಅತ್ಯಗತ್ಯ.
 • ಹೀಗಾಗಿ 7 ಸದಸ್ಯರ ಸಂವಿಧಾನ ಪೀಠದಿಂದ ವಿಚಾರಣೆ ನಡೆಸಬೇಕಿದೆ.

 

ಮುಂದಿನ ಕಾನೂನು ಹೋರಾಟ

 • ಅ.29ರಿಂದ ನಿತ್ಯ ವಿಚಾರಣೆ ಸಾಧ್ಯತೆ
 • ರಾಮನ ಪೂಜೆ ಮಾಡುವುದು ಧಾರ್ವಿುಕ ಹಕ್ಕು ಎಂಬ ಸುಬ್ರಮಣಿಯನ್ ಸ್ವಾಮಿ ಅರ್ಜಿ ವಿಚಾರಣೆ
 • ಭೂ ವಿವಾದ ಎಂದು ಅರ್ಜಿ ವಿಚಾರಣೆಗೆ ಈಗಾಗಲೇ ಸಮ್ಮತಿಸಿರುವ ಸುಪ್ರೀಂ ಕೋರ್ಟ್
 • ಭಿನ್ನಮತದ ಆದೇಶದ ಹಿನ್ನೆಲೆಯಲ್ಲಿ ಅರ್ಜಿಯ ಮರು ವಿಚಾರಣೆಗೆ ಮುಸ್ಲಿಂ ಸಂಘಟನೆಗಳಿಂದ ಮನವಿ ಸಾಧ್ಯತೆ.

 

ಹೈಕೋರ್ಟ್ ಆದೇಶದಲ್ಲೇನಿದೆ?

ದಶಕಗಳ ಕಾನೂನು ಹೋರಾಟದ ಬಳಿಕ 2010ರಲ್ಲಿ ಅಲಹಾಬಾದ್ ಹೈಕೋರ್ಟ್ ಐತಿಹಾಸಿಕ ಆದೇಶ ನೀಡಿತ್ತು. ಇಡೀ ದೇಶದಲ್ಲಿ ಕಟ್ಟೆಚ್ಚರ ಘೋಷಿಸಿ ಈ ಆದೇಶ ಪ್ರಕಟಿಸಲಾಗಿತ್ತು. ಅಯೋಧ್ಯೆಯ 1.12 ಹೆಕ್ಟೇರ್ ಭೂಮಿಯನ್ನು 3 ಸಮಾನ ಭಾಗವನ್ನಾಗಿ ಹಂಚಲು ನ್ಯಾಯಪೀಠ ಆದೇಶಿಸಿತ್ತು. ಈ ಪ್ರಕಾರ ಹಿಂದು ಮಹಾಸಭಾಗೆ 1/3 ಭಾಗ, ನಿಮೋಹಿ ಅಖಾಡಕ್ಕೆ 1/3 ಭಾಗ ಹಾಗೂ ಸುನ್ನಿ ವಕ್ಪ್ ಮಂಡಳಿಗೆ 1/3 ಭಾಗವನ್ನು ನೀಡಲಾಗಿತ್ತು. ಆದರೆ ಎಲ್ಲ ಅರ್ಜಿದಾರರು ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಹೊಸ ವರ್ಷ ಆರಂಭದಲ್ಲಿ ತೀರ್ಪು?

ಸುಪ್ರೀಂ ಕೋರ್ಟ್​ನ ತ್ರಿಸದಸ್ಯ ಪೀಠದಲ್ಲಿ ಅಯೋಧ್ಯೆ ಭೂವಿವಾದ ಪ್ರಕರಣ ವಿಚಾರಣೆಗೆ ಬಾಕಿಯಿದೆ. ವಿಳಂಬ ಮಾಡದೆ ಅ.29ರಿಂದ ವಿಚಾರಣೆ ಆರಂಭಿಸಬೇಕು ಎಂದು ಸಿಜೆಐ ನಿರ್ದೇಶಿಸಿದ್ದಾರೆ. ಈ ಹಿಂದೆ ನಿತ್ಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದ್ದ ಹಿನ್ನೆಲೆಯಲ್ಲಿ ಅ.29ರಿಂದಲೇ ದೈನಂದಿನ ವಿಚಾರಣೆ ನಡೆಯುವ ಸಾಧ್ಯತೆಯಿದೆ. ನೂತನ ಸಿಜೆಐ ಇದಕ್ಕೆ ಒಪ್ಪಿದರೆ ವರ್ಷಾಂತ್ಯದೊಳಗೆ ಅಥವಾ ಹೊಸ ವರ್ಷದ ಆರಂಭದಲ್ಲಿ ರಾಮ ಮಂದಿರ ನಿರ್ವಣಕ್ಕೆ ಆದೇಶ ಪ್ರಕಟವಾದರೂ ಆಶ್ಚರ್ಯವಿಲ್ಲ.

ಫಾರೂಕಿ ಪ್ರಕರಣವೇನು?

ಅಯೋಧ್ಯೆ ಸುತ್ತಲಿನ ಕೆಲ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಕೇಂದ್ರ ಸರ್ಕಾರ 1993ರಲ್ಲಿ ಸುಗ್ರೀವಾಜ್ಞೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಇಸ್ಮಾಯಿಲ್ ಫಾರೂಕಿ ಹಾಗೂ ಇತರರು ಸುಪ್ರಿಂೕ ಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಆದೇಶ ನೀಡುವಾಗ, ಧಾರ್ವಿುಕ ಹಕ್ಕು ಹಾಗೂ ಭೂ ಸ್ವಾಧೀನದ ಬಗ್ಗೆ ವಿವರಿಸಲಾಗಿದೆ. ಆದೇಶದ 82ನೇ ಪ್ಯಾರಾದಲ್ಲಿ ನಮಾಜ್ ಹಾಗೂ ಇಸ್ಲಾಂಗೆ ಬಗ್ಗೆ ಉಲ್ಲೇಖಿಸಲಾಗಿದೆ. ಮಸೀದಿಯು ಇಸ್ಲಾಂ ಧರ್ಮದ ಅವಿಭಾಜ್ಯ ಅಂಗವಲ್ಲ. ಮುಸ್ಲಿಮರು ಎಲ್ಲಿ ಬೇಕಾದರೂ ನಮಾಜ್ ಮಾಡಬಹುದಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು.


ಮಂದಿರ ನಿರ್ಮಾಣ ಮತ್ತೆ ಮುನ್ನೆಲೆಗೆ

| ಕೆ. ರಾಘವಶರ್ಮ

ನವದೆಹಲಿ: ಮುಸ್ಲಿಮರ ಪ್ರಾರ್ಥನಾ ಸ್ಥಳ ಕುರಿತ ಸುಪ್ರೀಂಕೋರ್ಟ್ ತೀರ್ಪಿಗೂ ರಾಮಜನ್ಮಭೂಮಿ ವಿವಾದ ಪ್ರಕರಣಕ್ಕೂ ನೇರ ಸಂಬಂಧವಿಲ್ಲದಿದ್ದರೂ, ಲೋಕಸಭೆ ಚುನಾವಣೆಗೆ ಮುನ್ನವೇ ರಾಮ ಮಂದಿರ ಮೂಲ ವಿವಾದದ ವಿಚಾರಣೆ ಆರಂಭಗೊಳ್ಳುತ್ತಿರುವುದು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.

ಪ್ರತಿ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ನಾಯಕರು ‘ರಾಮ ಮಂದಿರ ನಿರ್ವಣ’ ವಿಚಾರವನ್ನು ಮುನ್ನೆಲೆಗೆ ತರುವುದು ಹೊಸ ವಿಷಯವೇನಲ್ಲ. ಆದರೆ ಚುನಾವಣೆ ಬಳಿಕ ಈ ವಿಷಯ ಕಣ್ಮರೆಯಾಗುವುದು ಬಿಜೆಪಿ ಬೆಂಬಲಿಗರು, ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗುತ್ತಲೇ ಇದೆ. ಆದರೆ ಈಗ 2019ರ ಲೋಕಸಭೆ ಚುನಾವಣೆ ಮುನ್ನವೇ ‘ಅಯೋಧ್ಯೆ ಭೂ ವಿವಾದ’ ಇತ್ಯರ್ಥಗೊಂಡು ಮಂದಿರ ನಿರ್ವಣವಾಗಲಿದೆ ಎಂದು ಆರ್​ಎಸ್​ಎಸ್, ಹಿಂದು ಸಂಘಟನೆಗಳು ಹಾಗೂ ಬಿಜೆಪಿ ವಲಯದಲ್ಲಿ ಚರ್ಚೆಯಾಗುತ್ತಿರುವುದು ಕಾಂಗ್ರೆಸ್ ಮತ್ತು ಪ್ರತಿಪಕ್ಷಗಳನ್ನು ಚಿಂತೆಗೀಡುಮಾಡಿದೆ. ರಾಮ ಮಂದಿರ ವಿಚಾರದಲ್ಲಿ ಹಿಂದುಗಳನ್ನು ಭಾವನಾತ್ಮಕವಾಗಿ ಸೆಳೆದುಕೊಳ್ಳುವ ಮೂಲಕ ಹಿಂದು ಮತಗಳ ಕ್ರೋಡೀಕರಣಕ್ಕೆ ಕೈ ಹಾಕುವ ಬಿಜೆಪಿಯ ತಂತ್ರಗಾರಿಕೆ ವಿಪಕ್ಷಗಳಿಗೆ ತಿಳಿಯದ ವಿಷಯವೇನಲ್ಲ. ಸುಪ್ರೀಂಕೋರ್ಟ್​ನ 1994 ತೀರ್ಪನ್ನು ಮರುಪರಿಶೀಲನೆಗೆ ಒಡ್ಡದಿರುವುದು ಬಿಜೆಪಿ ಮತ್ತು ಹಿಂದು ಸಂಘಟನೆಗಳ ರಾಜಕೀಯ ಹುಮ್ಮಸ್ಸನ್ನು ಹೆಚ್ಚಿಸಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ರಣತಂತ್ರ ಹೆಣೆಯುತ್ತಿರುವ ವಿಪಕ್ಷಗಳಿಗೆ ಈ ಬೆಳವಣಿಗೆ ಹೊಸ ತಲೆನೋವಾಗಿ ಕಾಡಲಾರಂಭಿಸಿದೆ. ‘ಒಂದುವೇಳೆ ಲೋಕಸಭೆ ಚುನಾವಣೆ ಮುನ್ನ ಹಿಂದು ಸಂಘಟನೆಗಳ ನಿರೀಕ್ಷೆಗೆ ತಕ್ಕಂತೆ ಭೂಮಿ ಹಂಚಿಕೆ ಮಾಡುವ ತೀರ್ಪು ಹೊರಬಿದ್ದಲ್ಲಿ, ಲೋಕಸಭೆ ಚುನಾವಣೆಯಲ್ಲಿ ಇದರಿಂದ ಬಿಜೆಪಿಗೆ ಲಾಭವಾಗುವುದರಲ್ಲಿ ಅನುಮಾನವೇ ಇಲ್ಲ’ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಕಾಂಗ್ರೆಸ್​ನ ನಾಯಕರೊಬ್ಬರು ಒಪ್ಪಿಕೊಳ್ಳುತ್ತಾರೆ.

ಸಿಬಲ್ ಯತ್ನಕ್ಕೆ ಹಿನ್ನಡೆ

ಕ್ರಿಮಿನಲ್ ವಕೀಲ, ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಇದೆನ್ನೆಲ್ಲಾ ಮೊದಲೇ ಗ್ರಹಿಸಿದ್ದರು ಎಂಬುದು ಸುಳ್ಳಲ್ಲ. ಪ್ರಕರಣದ ವಿಚಾರಣೆ ವೇಳೆ ಮುಸ್ಲಿಂ ಸಂಘಟನೆ ಪರ ವಾದಿಸಿದ್ದ ಸಿಬಲ್, 2019ರ ಲೋಕಸಭೆ ಚುನಾವಣೆ ನಂತರವೇ ರಾಮ ಮಂದಿರ ವಿವಾದದ ಮೂಲ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ಮು.ನ್ಯಾ. ದೀಪಕ್ ಮಿಶ್ರಾ ನ್ಯಾಯಪೀಠದ ಮುಂದೆ ವಿನಂತಿಸಿಕೊಂಡಿದ್ದರು. ಆದರೆ, ಸಿಬಲ್​ರ ಬೇಡಿಕೆಯನ್ನು ಕೋರ್ಟ್ ಪುರಸ್ಕರಿಸಲಿಲ್ಲ. ಬದಲಿಗೆ, ಅಕ್ಟೋಬರ್ 29ರಿಂದ ಮೂಲ ವಿವಾದದ ಬಗ್ಗೆ ದಿನಂಪ್ರತಿ ವಿಚಾರಣೆ ನಡೆಸಬೇಕೆಂದು ಸೂಚನೆ ನೀಡಿದೆ. ಅ.3ರಂದು ಸಿಜೆಐ ದೀಪಕ್ ಮಿಶ್ರಾ ನಿವೃತ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದಲ್ಲಿ ವಿಚಾರಣೆ ನಡೆಯಬಹುದು.