ನವದೆಹಲಿ: ವಿಧಾನಸಭೆಯ ಸ್ಪೀಕರ್ಗೆ ಶಾಸಕರನ್ನು ಅಮಾನತು ಮಾಡುವ ಅಧಿಕಾರವಿದೆಯೇ ಎಂದು ಪರಿಶೀಲಿಸಿ ಎಂದು ಸುಪ್ರೀಂಕೋರ್ಟ್ ಸಂಸತ್ಗೆ ಸೂಚಿಸಿದೆ.
ಮಣಿಪುರದ ಸಚಿವ ಟಿ. ಶ್ಯಾಮ್ಕುಮಾರ್ ಅವರ ಅಮಾನತು ಸಂಬಂಧ ಸಲ್ಲಿಕೆಯಾದ ಅರ್ಜಿ ವಿಚಾರಣೆ ವೇಳೆ ಈ ಪ್ರಶ್ನೆ ಎತ್ತಿದ ನ್ಯಾಯಮೂರ್ತಿ ರೋಹಿಂಗ್ಟನ್ ಫಾಲಿ ನಾರಿಮನ್ ಅವರಿದ್ದ ಪೀಠ, ನಾಲ್ಕು ವಾರಗಳಲ್ಲಿ ಈ ಬಗ್ಗೆ ನಿರ್ಣಯಿಸಲು ಮಣಿಪುರದ ವಿಧಾನಸಭಾ ಅಧ್ಯಕ್ಷರಿಗೆ ಸೂಚಿಸಿತು.
2017ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನ ಟಿ. ಶ್ಯಾಮ್ಕುಮಾರ್ ಆ್ಯಂಡ್ರೊ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಈ ವೇಳೆ ಕಾಂಗ್ರೆಸ್ 28 ಸ್ಥಾನಗಳನ್ನು ಪಡೆದಿತ್ತು. ಒಟ್ಟು 60 ಸ್ಥಾನ ಇರುವ ಮಣಿಪುರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಇನ್ನೂ 3 ಸ್ಥಾನ ಪಡೆಯಬೇಕಾಗಿತ್ತು.
21 ಸ್ಥಾನ ಗೆದ್ದಿದ್ದ ಬಿಜೆಪಿ ಉಳಿದ ಪಕ್ಷಗಳೊಂದಿಗೆ ಸೇರಿದ ಮೇಲೆ ಅದರ ಬಲಾಬಲ 30 ಆಗಿತ್ತು. ಆದರೆ ಸರ್ಕಾರ ರಚಿಸಲು ಇನ್ನೂ ಒಬ್ಬ ಶಾಸಕರ ಬೆಂಬಲ ಅವಶ್ಯವಿತ್ತು. ಆಗ ಶ್ಯಾಮ್ಕುಮಾರ್ ಅವರು ಬಿಜೆಪಿ ಸೇರಿ ಸರ್ಕಾರ ರಚನೆಗೆ ಸಹಕರಿಸಿದ್ದರು. ಆದರೆ ಅವರು ಕಾಂಗ್ರೆಸ್ಗೆ ರಾಜೀನಾಮೆ ನೀಡಿರಲಿಲ್ಲ.
ಇದೇ ಸ್ಥಿತಿ ಕರ್ನಾಟಕದಲ್ಲೂ ಆಗಿತ್ತು. ಕಳೆದ ಬಾರಿ ಪಕ್ಷ ವಿರೋಧಿ ನಡೆ ಅನುಸರಿಸಲಾಗಿದೆ ಎಂದು ಅಂದಿನ ಸ್ಪೀಕರ್ ರಮೇಶ್ಕುಮಾರ್ ಅವರು ಬಂಡಾಯವೆದ್ದ 17 ಶಾಸಕರನ್ನು ಅಮಾನತು ಮಾಡಿದ್ದರು. ಮತ್ತೆ ಅವರು ಚುನಾವಣೆ ಎದುರಿಸಬೇಕಾಯಿತು. ಇದರಿಂದ ಕಾಂಗ್ರೆಸ್ -ಜೆಡಿಎಸ್ ಸರ್ಕಾರ ಉರುಳಿ ಬಿಜೆಪಿ ಸರ್ಕಾರ ರಚನೆಯಾಗಿದೆ. (ಏಜೆನ್ಸೀಸ್)