ಸುಪ್ರೀಂಕೋರ್ಟ್ ಆದೇಶಕ್ಕೆ ರಾಮಚಂದ್ರಾಪುರ ಮಠದ ಭಕ್ತರ ಸಂಭ್ರಮ

ಹೊಸನಗರ: ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಆಡಳಿತವನ್ನು ಮರಳಿ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರಿಸಿ ಸುಪ್ರೀಂಕೋರ್ಟ್ ನೀಡಿದ ಆದೇಶ ಹಿನ್ನೆಲೆಯಲ್ಲಿ ಮಠದ ಭಕ್ತರು ಹೊಸನಗರದಲ್ಲಿ ಸಂಭ್ರಮಿಸಿದರು.

ಪಟ್ಟಣದ ಬಸ್ ನಿಲ್ದಾಣ ಎದುರು ಸೇರಿದ್ದ ಶ್ರೀ ರಾಮಚಂದ್ರಾಪುರ ಮಠದ ಅಭಿಮಾನಿಗಳು, ಭಕ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಮಠದ ಮಹಾನಂದಿ ಗೋಲೋಕದ ಕೋಶಾಧ್ಯಕ್ಷ ಹೆದ್ಲಿ ಬಾಲಚಂದ್ರ ಮಾತನಾಡಿ, ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ಪೀಠಕ್ಕೆ ಬಂದ ನಂತರ ಶ್ರೀಮಠ ವೈಭವದ ಪಥದಲ್ಲಿ ಸಾಗಿದೆ. ಸಾಮಾಜಿಕ, ಧಾರ್ವಿುಕ ಕ್ಷೇತ್ರದಲ್ಲಿ ಮೇಲ್ಪಂಕ್ತಿಯ ಸಾಧನೆ ಮಾಡಿದೆ. ಶ್ರೀಮಠ ಮತ್ತು ಅಭ್ಯುದಯ ಸಹಿಸದ ಪಟ್ಟಭದ್ರ ಶಕ್ತಿಗಳು ಷಡ್ಯಂತ್ರ ರೂಪಿಸಿ ಶ್ರೀಗಳು ಹಾಗೂ ಮಠಕ್ಕೆ ಕಳಂಕ ತರುವ ಪ್ರಯತ್ನವನ್ನು ನಿರಂತರವಾಗಿ ನಡೆಸುತ್ತಿದ್ದಾರೆ ಎಂದು ದೂರಿದರು.

ಗೋಕರ್ಣ ದೇವಸ್ಥಾನ ಶ್ರೀಮಠದ ಅವಿಭಾಜ್ಯ ಅಂಗವಾಗಿದೆ. ಈ ವಿಚಾರದಲ್ಲಿ ಕ್ಷುಲ್ಲಕ ತಗಾದೆ ತೆಗೆಯುತ್ತಿರುವ ಪಟ್ಟಭದ್ರರು ಸಂಚು ರೂಪಿಸಿದ್ದಾರೆ. ದೇವಸ್ಥಾನದ ಆಡಳಿತವನ್ನು ಸುಪ್ರೀಂಕೋರ್ಟ್ ಪುನಃ ಶ್ರೀಮಠದ ಸುಪರ್ದಿಗೆ ಹಸ್ತಾಂತರಿಸಿ ಆದೇಶ ನೀಡಿರುವುದು ಸ್ವಾಗತಾರ್ಹ ಎಂದರು.

ಪ್ರಮುಖರಾದ ಎಂ.ಎನ್.ಸುಧಾಕರ್, ಎಚ್.ಶ್ರೀನಿವಾಸ ಕಾಮತ್, ಅಶ್ವಿನಿಕುಮಾರ್, ವಿಶ್ವೇಶ್ವರ, ಶುಭಕರ, ಶ್ರೀಧರ ಉಡುಪ, ಸುಧೀಂದ್ರ ಕೋಟ್ಯಾನ್, ಮನು ಸುರೇಶ್, ಕಟ್ಟೆ ಸುರೇಶ ಮತ್ತಿತರರು ಇದ್ದರು.