ದೀದಿಕಾಳಗಕ್ಕೆ ಸುಪ್ರೀಂ ಬ್ರೇಕ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹಠಕ್ಕೆ ಬಿದ್ದು, ಕೋಲ್ಕತ ಪೊಲೀಸ್ ಆಯುಕ್ತರ ವಿಚಾರಣೆಗಾಗಿ ಆಗಮಿಸಿದ್ದ ಸಿಬಿಐ ಅಧಿಕಾರಿಗಳನ್ನೇ ವಶಕ್ಕೆ ಪಡೆಯುವ ಮೂಲಕ ಕೇಂದ್ರ ಸರ್ಕಾರದ ಜತೆಗೆ ಸುಪ್ರೀಂಕೋರ್ಟ್​ಗೂ ಸೆಡ್ಡು ಹೊಡೆದಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಮುಖಭಂಗವಾಗಿದೆ. ಶಾರದಾ ಚಿಟ್​ಫಂಡ್ ಮತ್ತು ರೋಸ್​ವ್ಯಾಲಿ ಹಗರಣಗಳ ತನಿಖೆಗೆ ಸಂಬಂಧಿಸಿ ಆರೋಪಿ ಸ್ಥಾನದಲ್ಲಿರುವ ಕೋಲ್ಕತ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಸಿಬಿಐ ಎದುರು ವಿಚಾರಣೆಗೆ ಹಾಜರಾಗಲೇಬೇಕೆಂದು ಸುಪ್ರೀಂಕೋರ್ಟ್ ಆದೇಶಿಸಿದೆ.

ಬಂಗಾಳ ಸರ್ಕಾರದ ನಡೆ ಖಂಡಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿಗಳನ್ನು ಮಂಗಳವಾರ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆಗೆ ಕೈಗೆತ್ತಿಕೊಂಡಿತು. ‘ವಾದ ಪ್ರತಿವಾದಗಳು ಏನೇ ಇರಲಿ. ಮೊದಲು ಕೋಲ್ಕತ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ವಿಶ್ವಾಸಪೂರ್ವಕವಾಗಿ ಸಿಬಿಐ ಎದುರು ವಿಚಾರಣೆಗೆ ಹಾಜರಾಗಬೇಕು. ಆದರೆ ಸದ್ಯಕ್ಕೆ ಅವರ ಬಂಧನಕ್ಕೆ ಸಿಬಿಐ ಮುಂದಾಗಬಾರದು. ಮೇಘಾಲಯದ ಶಿಲ್ಲಾಂಗ್​ನಲ್ಲಿ ರಾಜೀವ್ ವಿಚಾರಣೆ ಎದುರಿಸಲಿ’ ಎಂದು ಆದೇಶಿಸಿತು. ಇನ್ನು ಸಿಬಿಐ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪಶ್ಚಿಮ ಬಂಗಾಳ ಮುಖ್ಯ ಕಾರ್ಯದರ್ಶಿ, ಡಿಜಿಪಿ ಹಾಗೂ ರಾಜೀವ್ ವಿರುದ್ಧ ಸಿಬಿಐ ಅಧಿಕಾರಿಗಳು ಸಲ್ಲಿಸಿದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಮೂವರಿಗೂ ಫೆ. 18ರೊಳಗೆ ಪ್ರತಿಕ್ರಿಯೆ ಸಲ್ಲಿಸಲು ಸೂಚಿಸಿ, ಫೆ.20ರಂದು ವಿಚಾರಣೆ ನಡೆಸುವುದಾಗಿ ಹೇಳಿತು.

ನಾಳೆ ಹೈಕೋರ್ಟ್ ವಿಚಾರಣೆ: ರಾಜೀವ್ ಕುಮಾರ್ ವಿರುದ್ಧ ಸಿಬಿಐ ಕ್ರಮ ಪ್ರಶ್ನಿಸಿ ಕೋಲ್ಕತ ಪೊಲೀಸರು ಹೈಕೋರ್ಟ್ ಮೊರೆಹೋಗಿದ್ದಾರೆ. ತುರ್ತು ವಿಚಾರಣೆ ಒತ್ತಾಯವನ್ನು ಹೈಕೋರ್ಟ್ ಪರಿಗಣಿಸಿಲ್ಲ. ಫೆ.7ಕ್ಕೆ ವಿಚಾರಣೆ ನಡೆಸುವುದಾಗಿ ಹೇಳಿದೆ.

ಧರಣಿ ಅಂತ್ಯ: ಮಂಗಳವಾರ ಸಂಜೆ ವೇಳೆಗೆ ಧರಣಿ ಸ್ಥಳಕ್ಕೆ ಆಗಮಿಸಿದ ಚಂದ್ರಬಾಬು ನಾಯ್ಡು ಜತೆಗೆ ಸಮಾಲೋಚನೆ ಬಳಿಕ ಮೂರು ದಿನಗಳ ಧರಣಿ ಅಂತ್ಯಗೊಳಿಸುತ್ತಿರುವುದಾಗಿ ಮಮತಾ ಬ್ಯಾನರ್ಜಿ ಘೋಷಿಸಿದರು. ಶೀಘ್ರ ದೆಹಲಿಗೆ ತೆರಳಿ ಮಹಾಮೈತ್ರಿಯ ಮುಂದಿನ ರಣತಂತ್ರ ಬಗ್ಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು.

ಬಂಗಾಳ ಜನತೆಗೆ ಸಿಕ್ಕ ಜಯ

ವಿಚಾರಣೆಗೆ ಲಭ್ಯವಿಲ್ಲ ಎಂದು ರಾಜೀವ್ ಯಾವತ್ತೂ ಸಿಬಿಐಗೆ ಹೇಳಿಲ್ಲ. ಐದು ಪತ್ರ ಬರೆದಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ಬಂದಿಲ್ಲ. ಸುಪ್ರೀಂ ಆದೇಶದಿಂದ ಬಂಗಾಳದ ಜನತೆ ಜತೆಗೆ ವಿಪಕ್ಷ, ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಗೆಲುವು ಸಿಕ್ಕಂತಾಗಿದೆ.

| ಮಮತಾ ಬ್ಯಾನರ್ಜಿ ಪ.ಬಂಗಾಳ ಸಿಎಂ

ಸಿಬಿಐನ ಗೆಲುವು

ಮಮತಾ ಸರ್ಕಾರಕ್ಕೆ ಸುಪ್ರೀಂ ತಪರಾಕಿ ಕೊಟ್ಟಿದೆ. ಸಿಬಿಐಗೆ ಸಿಕ್ಕ ಜಯವಿದು. ಪೊಲೀಸ್ ಆಯುಕ್ತ ಸೇರಿದಂತೆ ಯಾರೂ ಕೂಡ ಕಾನೂನಿಗಿಂತ ದೊಡ್ಡವರಲ್ಲ ಎಂದು ಸಾಬೀತಾಗಿದೆ.

| ರವಿಶಂಕರ್ ಪ್ರಸಾದ್ ಕಾನೂನು ಸಚಿವ

ಸುಪ್ರೀಂ ಹೇಳಿದ್ದೇನು?

# ಸಿಬಿಐ ವಿಚಾರಣೆಗೆ ರಾಜೀವ್ ಪೂರ್ಣ ಸಹಕಾರ ನೀಡಬೇಕು. ಶಿಲ್ಲಾಂಗ್​ನಲ್ಲಿ ಹಾಜರಾಗಬೇಕು.

# ಸದ್ಯಕ್ಕೆ ಆಯುಕ್ತರ ಬಂಧನ ಬೇಡ, ನ್ಯಾಯಾಂಗ ನಿಂದನೆ ಕುರಿತು ಸಿಎಸ್, ಡಿಜಿಪಿ, ರಾಜೀವ್ ಪ್ರತಿಕ್ರಿಯಿಸಿದ ನಂತರ ಕ್ರಮದ ಚಿಂತನೆ

ಸಾಕ್ಷ್ಯ ನಾಶ ಬಗ್ಗೆ ದೂರು
ಟಿಎಂಸಿಗೆ ದೇಣಿಗೆ ನೀಡಿದ್ದ ಚಿಟ್​ಫಂಡ್ ಕಂಪನಿಗಳನ್ನು ಎಸ್​ಐಟಿ ರಕ್ಷಿಸಿದೆ. ಹೈಕೋರ್ಟ್ ನಿಗಾ ಇದ್ದರೂ ಪ್ರಕರಣದ ಸಾಕ್ಷ್ಯಗಳಿದ್ದ ಲ್ಯಾಪ್​ಟಾಪ್, ಮೊಬೈಲ್​ಗಳನ್ನು ಆರೋಪಿಗಳಿಗೆ ರಾಜೀವ್ ಹಿಂದಿರು ಗಿಸಿದ್ದಾರೆಂದು ಸಿಬಿಐ ಹೆಚ್ಚುವರಿ ದಾಖಲೆಗಳನ್ನು ಸುಪ್ರೀಂಗೆ ಸಲ್ಲಿಸಿದೆ.

ರಾಜೀವ್ ಕುಮಾರ್ ವಿರುದ್ಧ ಎಫ್​ಐಆರ್ ದಾಖಲಿಸಲಾಗಿಲ್ಲ. 4 ವರ್ಷಗಳಲ್ಲಿ 3 ಬಾರಿ ಸಿಬಿಐ ನೋಟಿಸ್ ಮಾತ್ರ ನೀಡಲಾಗಿದೆ.

| ಅಭಿಷೇಕ್ ಮನು ಸಿಂಘ್ವಿ ಪೊಲೀಸ್ ಪರ ವಕೀಲ

ಚಿಟ್ ಫಂಡ್ ಕಂಪನಿಗಳು ಚೆಕ್​ಗಳ ಮೂಲಕ ಟಿಎಂಸಿಗೆ ದೇಣಿಗೆ ನೀಡಿವೆ. ಮುಚ್ಚಿದ ಲಕೋಟೆಯಲ್ಲಿ ಸಾಕ್ಷ್ಯಗಳನ್ನು ಸಲ್ಲಿಸಲು ಅವಕಾಶ ನೀಡಿ.

| ಕೆ.ಕೆ. ವೇಣುಗೋಪಾಲ್ ಸಿಬಿಐ ಪರ ಎಜಿ